Friday, October 4, 2024

ಆ ಲ್ವಾರಿಯಗ್‌ ನಿಂತ್ಕಂಡೇ ಬಂದದ್ದ್‌, ಅವ್ರೆಲ್ಲ ಬಸ್ಸಲ್ ಬಂದ್ರ್‌ ಅಲ್ದಾ?

ಎಲ್ಲರೂ ನಾಳೆ ಬೆಂಗಳೂರಿನಲ್ಲಿ ನಡೆಯುವ ಕಂಬಳದ ಬಗ್ಗೆ ಚರ್ಚಿಸುತ್ತಿದ್ದಾರೆ. ಕಂಬಳಕ್ಕಾಗಿ ಕುಂದಾಪುರದಿಂದ  ಬೆಂಗಳೂರಿಗೆ ಬಂದ ಕೋಣದ (ಹೋರಿಯ) ಸ್ವಗತ ಕೇಳಿ. Bengaluru Kambala: Monologue of a Buffalo in Kundapura Kannada.

ಕಳದ್‌ ಒಂದ್‌ ತಿಂಗಳಾಯ್ತ್‌ ಏನ್‌ ಉಪಚಾರ, ಏನ್‌ ಆರೈಕೆ, ಯಬಾ ಯಬಾ ಯಬಾ. ಕಾಂಬುಕೇ  ಯಡಿಯ. ನಾನೆಲ್ಲೋ ಊರ್‌ ಮನಿ ಕಂಬಳ ಅಂದೆಳಿ ಖುಷಿಯಾಗಿದ್ದಿ. ನಿನ್ನೆ ಲಾರಿ ತಕಬಂದ್‌ ಹತ್ತ್‌ ಅಂತ್ರ್‌. ಎಲ್ಲಿಗ್‌ ಅಂದೆಳಿ ನಮ್ಗ್‌ ಕೇಂಬಕಾತ್ತಾ? ಹಿಂದೆ ಮುಂದೆ ಕಾಂಬುದ್ರೊಳ್ಗೆ ಕುಂಡಿಗ್‌ ಬಾರ್‌ಗೋಲಲ್ಲ್‌ ಎರಡ್‌ ಬಿದ್ದ್‌ ಆಯ್ತ್‌. ಸಿಟ್ಟ್‌ ಬಂತ್‌ ಅಂದೆಳಿ ಗುದ್ದುಕಾತ್ತಾ? ಯಜಮಾನ್ರ್‌ ಎದ್ರೇ ನಿಂತಿರ್‌. ಹಾಂಗೂ ಹೀಂಗೂ ಮಾಡಿ ಲ್ವಾರಿಗ್‌ ಹರ್ಸಿದ್ರ್‌.

ಯಜಮಾನ್ರ್‌ ಹತ್ರಾ ಕಂಡಿ. ಇಲ್ಲ? ಕಡೂಕ್‌ ಗಿಡೂಕ್‌ ತಕಂಡ್‌ ಹ್ವಾತ್ರಾ ಅಂದೆಳಿ ಒಂದ್‌ ಬದಿಯಗ್‌ ಹೆದ್ರಿಕಿ. “ನಾವ್‌ ನಾಳಿಗ್‌ ಬತತ್‌, ಜಾಗ್ರತಿ ನೀವ್‌,ʼ ಅಂದೆಳಿ ಯಜಮಾನ್ರ್‌ ನಮ್‌ ಜ್ವತಿ ಬಪ್ಪರಿಗ್‌ ಹೇಳಿದ್‌ ಕೇಂತ್‌. ಹುಲ್‌, ಅಕಚ್ಚ್‌, ಬೂಸ ಎಲ್ಲ ತುಂಬಿರ್‌. ಮಣೂರ್‌ ಕಂಬಳ ಮನ್ನೆ ಆದ್‌. ನಮ್ಮನ್‌ ಕರ್ಕೊಂಡ್‌ ಹ್ವಾಯ್ಲಿಲ್ಲ. ಮತ್ತ್‌ ಇದೆಲ್ಲಿಗ್‌ ಮರಯಾ ಅಂದೆಳಿ ಯದಿ ಬಾಯಗ್‌ ನೀರಿಲ್ಲ. ಲ್ವಾರಿ ಹೊಯಿಡ್ತ್‌. ನಮ್‌ ಜ್ವತಿಗ್‌ ಇದ್ದರಿಗೆಲ್ಲ ಬಾರೀ ಖುಷಿ. ನಮ್ಗ್‌ ಮಾತ್ರ ಹೆದ್ರಿಕಿ ಮರ್ರೆ. ಒಳ್‌ ದಾರಿ ಬಿಟ್ಟ್‌ ಹೈವಿ ಹಿಡ್ದಾಗಳಿಕ್‌ ನಂಗ್‌ ಒಂಚೂರ್‌ ಸಂಶಯ. ಇವ್ನ್‌ ಹ್ವಂಡಕ್‌ ಹಾಕತ್‌ ಎಲ್ಲಿಗ್‌ ಕರ್ಕಂಡ್‌ ಹ್ವಾತ್ರ್‌ ಮರ್ರೆ ಅಂಬಂಗ್‌ ಆಯ್ತ್‌. ದಾರಿ ಮ್ಯಾಲ್‌ ಬಪ್ಪತಿಗ್‌ ನಮ್‌ ಪೈಕೆವೆಲ್ಲ ಮುಖ ಮುಖ ಕಾಂತಿದ್ದು. ಅಲ್ಲೇ ಒಂಚೂರ್‌ ಸಂಶಯ ನಂಗ್‌. ಯಂತ ಮೈನ್‌ ರೋಡಿಗ್‌ ಬಂದದ್ದೇ ಸಮ, ರಾಯಿಂಕ್‌ ಸ್ವಾಯಿಂಕ್‌ ಬಸ್ಸ್‌ ಮರ್ರೆ. ಆಬದಿ ಈ ಬದಿ ಎಯ್ಡು ಬದಿಯಗ್‌ ಕೆಮಿ ಬೆಚ್ಚಿ ಕೂಕಂಬಕ್‌ ಯಡಿಯಾ. ಹಾಂಗಂದೆಳಿ ಕೂಗುಕಿತ್ತಾ?, ಇಳ್ಕ ಹ್ವಾಪಕ್‌ ಇತ್ತಾ?. ಯಂತಕೂ ನಮ್ಗ್‌ ಕಂಬಳದ್‌ ಡ್ರಸ್ಸೇ ಮಾಡಿಲ್ಲ. ಅದದ ಒಂದ್‌ ಬದಿಯಗ್‌ ಹೆದ್ರಿಕಿ.

ನಮ್‌ ಜ್ವತಿಗ್‌ ಬಂದರ್‌ ಇದ್ರಲ್‌ ಅವ್ರೆಲ್ಲ ದಾರಿ ಮಧ್ಯದಗ್‌ ಚಾ ಕುಡೂಕ್‌ ಇಳ್ಸ್ರ್‌. ಅಷ್ಟೊತ್ತಿಗ್‌ ಗುತ್ತಾಯ್ತ್‌, ಬೆಂಗಳೂರ್‌, ಬೆಂಗಳೂರ್‌ ಅಂತತ್‌ ಕೇಂತ್‌. ಅಲ್ಲ ಮರ್ರೆ ಬೆಂಗಳೂರ್‌ಗ್‌ ನಮ್ಗೆಂತ್‌ ಕೆಲ್ಸ ಕೇಂತಿ. ಅವ್ಜೆಕ್ಕ ಭಾರೀ ಖುಷಿಯೇ. ನಮ್ಗ್‌ ಮಾತ್ರ ಯದಿ ಬಾಯಗ್‌ ನೀರಿಲ್ಲ. ಅಲ್ಲ ಯಜಮಾನ್ರ್‌‌ ಹೀಂಗ್‌ ಮಾಡುದಾ ಕೇಂತಿ, ಓಡುದ್‌ ನಾವ್‌. ನೋಡುದ್‌ ಅವ್ರ್‌. ಅವ್ರ್‌ ಬಸ್ಸಗೋ, ಕಾರಗೋ ಬಪ್ಪುದ್‌, ನಮ್ಮನ್‌ ಈ ಲಾರಿಗ್‌ ತುಂಬುದಾ? ಅದೂ ಸರಿಯೇ ನಮ್ಗ್‌ ಬಸ್ಸ್‌, ಕಾರಗಲ್ಲ ಹ್ವಾಪಕ್‌ ಆತ್ತಾ? ಸೈಜ್‌ ಕಾಣಿ ಹ್ಯಾಂಗಿತ್ತ್‌.

ಅಲ್ಲ ಮರ್ರೆ ಮಧ್ಯೆ ಎಲ್ಲಾರೂ ನಿದ್ದಿ ಮಾಡುಕಿತ್ತಾ? ಲಾರಿ ನೆಗ್ದ್‌ ನೆಗ್ದ್‌‌ ಬಿಸಾಕತ್ತೆ. ಈ ನಮ್‌ ಬೆಳ್ಳು ಮಾತಾಡುದಿಲ್ಲ. ಅವ್ನಿಗ್‌ ಲಾರೆಗೆಲ್ಲ ಹೋಯಿ ಅಭ್ಯಾಸೂ ಇಲ್ಲ. ಹೆದ್ರಿ ಹಿಲುವಾಯ್ದ. ಕಣ್ಣೊಂದ್‌ ಪಿಳಿ ಪಿಳಿ ಬಿಡ್ತ. ಗುಡ್ಡಿ ದಾಟಿ ಹಾಸನ ಪಪ್ಪೊತ್ತಿಗ್‌ ರಸ್ತಿ ಬದಿಗೆಲ್ಲ ಬರೀ ಯಮ್ಮಿ ಮರ್ರೆ. ಅಲ್ಲೇ ಹಾರ್ಕಂಬಗಾಯ್ತ್‌. ಯಂತಕೂ ಕಟ್ಟ್‌‌ ಹಾಕಿರ್‌. ನಮ್ಮ್‌ ಬೆಳಿಯ ಮೂಗ್‌ ಬಾಯಿ ಅಗ್ಲ ಮಾಡ್ಕಂಡ್‌ ಕಾಂತಿದ್ದ. ಮುಚ್ಕಂಡ್‌ ಇರ್‌, ಇದ್‌ ಗೌಡ್ರ್‌ ಕೇರಿ, ಶೀಲ ಮಾಡುಕಿದ್ರ್‌ ಅಂದಿ. ಅಲ್ಲೆ ಹೈತ್ಕಂಡ.  ಬಾನ್‌ ಬೆಳ್ಗತ್ತ್‌ ಲಾರಿ ಹತ್ತದ್‌ ನಾವ್‌ ಬಂದ್‌‌ ಮುಟ್ಟೊತ್ತಿಗ್‌ ಸಾಂಯ್ಕಾಲ ಮೈಕಪ್‌ ಮೈಕಪ್‌ ಆಯಿತ್.‌ ಎಂಥ ಜನ ಮರ್ರೆ, ಹೋರಿ ಪೈರ್‌ ಕಂಡಂಗಿತ್ತ್‌.

ಅಯ್ಯೋ ದೇವ್ರೆ ಎಲ್ಲಾರೂ ಹುಲ್‌ ಮೆಯ್ಕಂಡ್‌ ಇರ್ತಿದ್ದಿ, ಈ ಕಂಬಳ್ಕ್‌ ಸೇರಿ ಹೀಂಗಾಯ್ತಲ್ಲ ದೇವ್ರೇ ಎಂದ್‌ ಯಮನನ್ನೇ ಬೇಡ್ಕಂಡಿ. ಯಮ್ಮಿ ಗಿಮ್ಮಿ ಆಯಿ ಹುಟ್ಟೀರೂ ಹಾಲ್‌ ಕೊಡ್ಕಂಡ್‌ ನೆಮ್ಮದ್ಯಗ್‌ ಇರ್ಲಕಿದ್ದೀತ್‌. ಇದ್‌ ಬೇಕಾ ಅಂಬಂಗಾಯ್ತ್‌. ನಮ್ಗ್‌ ಕಂಬಳ ಬಿಟ್ರೆ ಬಾಕಿ ದಿನ ಮುಟ್ಟಿ ಮೂಸ್ವರಿಲ್ಲ. ಯಣ್ಣಿ ಗಿಣ್ಣಿ ಹಾಕಿ ಸ್ನಾನ ಮಾಡುಸ್ಸುದೆಲ್ಲ ಸಾಪ್‌. ಆರೂ ರಗ್ಳಿ ಮರ್ರೆ. ಒಂದ್‌ ಮೇವುಕ್‌ ಬಿಡುದಿಲ್ಲ. ಒಂದ್‌ ಯಮ್ಮಿ ಹತ್ರ ಹ್ವಾಪಕ್‌ ಬಿಡುದಿಲ್ಲ. ಆರ್‌ ನಮ್‌ ಯಜಮಾನ್ರ್‌ ಹಳಿಯರಾದ್ರೂ ಹೆಂಡ್ತಿ ಜ್ವತಿಗೇ ಮಲ್ಕಂತ್ರ್‌.

ಬೆಂಗ್ಳೂರಿಗ್‌ ಬಂದ್‌ ಇಳ್ಕಂಡ್‌ ಕಾಂತಿ ಯಂತ? ಬರೀ ಬಿಲ್ಡಿಂಗೆ. ಒಂದ್‌ ಹಸಿ ಹುಲ್ಲ್‌ ಕಾಂಬುಕಿಲ್ಲ. ಎಲ್ಕಂಡ್ರೂ ರಸ್ತಿ. ದಾರಿ ಇತ್ತಂದೆಳಿ ಕಿತ್ತ್‌ ಓಡುಕಾತ್ತಾ? ಇಲ್ಲ. ಬರೀ ಅಡ್ಡಡ್ಡ ದಾರಿ. ಒಂದಿಷ್ಟ್‌ ನೀರ್‌ ತುಂಬ್ಸಿ ಗೆದ್ದಿ ಕಂಡಗ್‌ ಮಾಡಿರ್‌. ಅದ್ರಗೇ ಓಡುದ್‌ ಅಂದೆಳಿ ಅಂದಾಜ್‌ ಮಾಡ್ಕಂಡಿ. ನಂಗ್‌ ಒಂದ್‌ ಹೆದ್ರಿಕಿ ಇದ್ದಿತ್‌, ಪುಣ್ಯಾತ್ಮ ಬ್ರಿಜ್‌ ಭೂಷಣ್‌ ಸಿಂಗ್‌ ಅಂಬನ್‌ ಬತ್ತ ಅಂದೆಳಿ, ಕಡಿಕ್‌ ಕಾಂಬತಿಗ್‌ ಅಂವ ಬತ್ತಿಲ್ಲಂಬ್ರ್‌. ಅಂವ ಬಂದಿರ್‌ ರಗ್ಳಿಯೇ ಸೈ. ಕರ್ಕಬಂದರಾದ್ರೂ ಕರ್ಕಬಂದ್ರ್‌ ಜ್ವತಿಗ್‌ ನಾಕ್‌ ಯಮ್ಮಿನ್‌ ತಕ ಬಂದಿರೂ ಇಲ್ಲ್‌ ಬೇಜಾರ್‌ ಕಳುಕ್‌ ಆತಿತ್ತ್‌.

ಆ ಬಸುನಿಗ್‌ ಒಂದ್‌ ಮಾತ್‌ ಹೇಳ್ಕ್‌ ಮರ್ರೆ, ನಾವ್‌ ಓಡುವಷ್ಟ್‌ ಓಡತ್ತ್‌, ಬಾರ್‌ಗೋಲಗ್‌ ಹ್ವಡದ್‌ ಒಂಚು ಕಮ್ಮಿ ಮಾಡ್‌ ಅಂದೆಳಿ. ಅದ್‌ ದೊಡ್ಡ ಒಡು. ಕೊಟ್ಟ ಅಂದ್ರೆ ಚರ್ಮ್‌ವೇ ಕಿತ್ತ್‌ ಬತತ್ತ್‌.

ಮೊದಲಿನ್‌ ಕಾಲು ಅಲ್ಲ, ವಂಡಾರ್‌ ಕಂಬ್ಳು ಅಲ್ಲ, ಈ ಕಂಬಳದ್‌ ಹೆಸ್ರಲ್ಲ, ನಮ್ಗೂ ಬೆಂಗಳೂರ್‌ ಕಂಡಂಗಾಯ್ತ್‌. ನಮ್‌ ಬದಿಯರ್‌ ತುಂಬ ಜನ ಇಲ್ಲ್‌ ಹೊಟ್ಲ್‌, ಮನಿ, ಆಪೀಸ್‌ ಎಲ್ಲ ಕಟ್ಕಂಡ್‌ ಇದ್ರಂಬ್ರೆ. ನಾವು ಹುಟ್ಟದ್ದೇ ಓಡುಕ್‌ ಅಂದೆಳಿ ಬರ್ದಿಪ್ಪತಿಗ್‌ ಬೆಂಗಳೂರ್‌ ಆದ್ರೇನ್‌, ಮಂಗಳೂರ್‌ ಆದ್ರೇನ್‌. ಹ್ವರ್ಗಿನ್‌ ಊರಾಗ್, ಹ್ವರ್ಗಿನ್‌ ದೇಸ್ದಾಗ್‌ ನಮ್ಕಂಡಗೆ ನಮ್‌ ಜಾತ್ಯವ್‌ ಓಡ್ತು ಅಂಬ್ರೆ. ಅದೇ ಖುಷಿ.

ನಾವ್‌ ಯಾರನ್ನೂ ಆಡ್ಸುದಿಲ್ಲ. ಓಡ್ಸುದಿಲ್ಲ, ಈ ಮನ್ಸರ್‌ ಮಾತ್ರ ಪಿರಾಣಿ, ಪಕ್ಸಿ ಎಲ್ಲಾನೂ ಮೊದ್ಲಿನಿಂದಲೂ ಆಡ್ಸಕಂಡ್‌ ಬಂದಿದ್ದ. ಪಾಪ, ನಮ್ಮ್‌ ಕಂಬಳಕ್ಕೆ ಆ ಕೊರಗ ಸಮುದಾಯದವರೆಲ್ಲ ಬಪ್ಪುದ್‌ ಅವ್ರನ್ನ ಇಲ್ಲಿಗೂ ಕರ್ಸಿರ್‌ ಒಳ್ಳೆದಾದಿತ್ತ್‌. ಈಗ ಅವ್ರೆಲ್ಲ ಕಂಬಳಕ್‌ ಬಪ್ಪುದ್‌ ಕಡ್ಮಿ ಅಯ್ತ್‌. ಅವ್ರೆಲ್ಲ ಬರುಸರ ಓದಿ ಹುಸಾರ್‌ ಆಯ್ರೆ. ನಮ್ಗ್‌ ಬೇರೆ ದಾರಿ ಇಲ್ಲ. ನಾವೆಲ್ಲ ಸತ್ರ್‌ ಮ್ಯಾಲ್‌ ಈ ಮನ್ಸ್‌ರೇ ಓಡ್ಕ್‌ ಕಂಬಳ ಗ್ಯದ್ಯಾಗ್‌. ಯಂತಕೂ ನಮ್‌ ಡೋಲ್‌ ಬಡುವರ್ನ್‌ ಒಂಚೂರ್‌ ಕಾಣ್ಕ್‌. ಮತ್ತ್‌ ಗ್ಯದ್ಯಗ್‌ ಸಿಕ್ವ ಅಕ್ಕೇ.

Related Articles