Thursday, March 28, 2024

Women’s Kabaddi League ಮಷಾಲ್‌ ಸ್ಪೋರ್ಟ್ಸ್‌ನಿಂದ ಮಹಿಳಾ ಕಬಡ್ಡಿ ಲೀಗ್‌

ಮುಂಬೈ: ಕ್ರಿಕೆಟ್‌ನಲ್ಲಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL)ನಿಂದ ಸ್ಫೂರ್ತಿ ಪಡೆದು ಬಿಸಿಸಿಐ ಮಹಿಳಾ ಪ್ರೀಮಿಯರ್‌ ಲೀಗ್‌ (WPL) ಹುಟ್ಟು ಹಾಕಿರುವಂತೆ ಪ್ರೋ ಕಬಡ್ಡಿ ಲೀಗ್‌ (Pro Kabaddi League) ಸಂಘಟಕರಾದ ಮಷಾಲ್‌ ಸ್ಪೋರ್ಟ್ಸ್‌ ಮಹಿಳಾ ಕಬಡ್ಡಿ ಲೀಗ್‌ (Women’s Kabaddi League) ಆರಂಭಿಸಲು ತೀರ್ಮಾನಿಸಿದೆ.

“ಪುರುಷರ ಪ್ರೋ ಕಬಡ್ಡಿ ಲೀಗ್‌ (Pro Kabaddi League) ಯಶಸ್ವಿ ಹತ್ತು ವರ್ಷಗಳನ್ನು ಪೂರೈಸಿದೆ. ಇದರಿಂದಾಗಿ ಕ್ರೀಡಾ ಜಗತ್ತಿಗೆ ಭಾರತದಿಂದ ಮತ್ತೊಂದು ಲೀಗ್‌ ನೀಡಬೇಕೆಂಬ ಉದ್ದೇಶದಿಂದ ನಾವು ಮಹಿಳಾ ಕಬಡ್ಡಿ ಲೀಗ್‌ ಆರಂಭಿಸಲು ತೀರ್ಮಾನಿಸಿದ್ದೇವೆ. ಇದಕ್ಕಾಗಿ ಅಮೆಚೂರ್‌ ಕಬಡ್ಡಿ ಫೆಡರೇಷನ್‌ ಆಫ್‌ ಇಂಡಿಯಾ (Amateur Kabaddi Federation of India (AKFI) ಜೊತೆ ಮಾತುಕತೆ ನಡೆಸಲಿದ್ದೇವೆ,” ಎಂದು ಮಷಾಲ್‌ ಸ್ಪೋರ್ಟ್ಸ್‌ನ ಸಿಇಒ ಮತ್ತು ಪ್ರೋ ಕಬಡ್ಡಿ ಲೀಗ್‌ನ ಲೀಗ್‌ ಕಮಿಷನರ್‌ ಅನುಪಮ್‌ ಗೋಸ್ವಾಮಿ ಹೇಳಿದ್ದಾರೆ.

2016ರಲ್ಲಿ ಮಹಿಳಾ ಕಬಡ್ಡಿ ಲೀಗ್‌ (Women’s Kabaddi League) ನಡೆಸಲು ಸಾಧ್ಯವಿದೆಯೇ ಎಂಬುದನ್ನು ಮನಗಾಣಲು ಎಕೆಎಫ್‌ಐ ನೆರವಿನಿಂದ ಮೂರು ತಂಡಗಳ ಟೆಸ್ಟ್‌ ನಡೆಸಲಾಗಿತ್ತು. ಅಲ್ಲಿ ಉತ್ತಮ ರೀತಿಯ ಬೆಂಬಲ ಸಿಕ್ಕಿತ್ತು. ಫೈರ್‌ಬರ್ಡ್ಸ್‌, ಐಸ್‌ದಿವಾಸ್‌ ಮತ್ತು ಸ್ಟಾರ್ಮ್‌ ಕ್ವೀನ್ಸ್‌ ತಂಡಗಳು ಈ ಪರೀಕ್ಷಾ ಪಂದ್ಯಗಳಲ್ಲಿ ಪಾಲ್ಗೊಂಡಿದ್ದವು. ಮಹಿಳಾ ಕಬಡ್ಡಿಯಲ್ಲಿಯೂ ಉತ್ತಮ ಗುಣಮಟ್ಟದ ಕಬಡ್ಡಿಯನ್ನು ನಿರೀಕ್ಷಬಹುದು ಎಂಬುದು ಅಂದು ಸ್ಪಷ್ಟವಾಗಿತ್ತು.

“2014ರಲ್ಲಿ ಪ್ರೋ ಕಬಡ್ಡಿ ಲೀಗ್‌ ಆರಂಭವಾದಾಗಿನಿಂದ ಭಾರತದಲ್ಲಿರುವ ಮಹಿಳಾ ಕಬಡ್ಡಿ ಆಟಗಾರ್ತಿಯರು ತಮ್ಮದೇ ಆದ ಲೀಗ್‌ ಹೊಂದುವ ಕನಸು ಕಂಡಿದ್ದರು. ಈಗ ಮಹಿಳಾ ಕಬಡ್ಡಿ ಲೀಗ್‌ ಆರಂಭಿಸಲು ತೀರ್ಮಾನಿಸಿರುವುದು ಸ್ವಾಗತಾರ್ಹ, ಇದರಿಂದ  ಭಾರತದಲ್ಲಿರುವ ಮಹಿಳಾ ಕಬಡ್ಡಿ ಆಟಗಾರ್ತಿಯರಿಗೆ ಮತ್ತು ವಿದೇಶದಲ್ಲಿರುವ ಆಟಗಾರ್ತಿಯವರಿಗೆ ಉತ್ತಮ ಅವಕಾಶ ಸಿಕ್ಕಂತಾಗುತ್ತದೆ,” ಎಂದು ಭಾರತ ಕಬಡ್ಡಿ ತಂಡದ ಮಾಜಿ ಆಟಗಾರ್ತಿ ವಿ. ತೇಜಸ್ವಿನಿ ಬಾಯಿ ಹೇಳಿದ್ದಾರೆ.

ಭಾರತದಲ್ಲಿ ಪುರುಷರ ಕಬಡ್ಡಿಗೆ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ಸಿಕ್ಕಿದೆ. ಪುರುಷರ ಕಬಡ್ಡಿ ಲೀಗ್‌ಗೆ ಅಪಾರ ಪ್ರಮಾಣದಲ್ಲಿ ಪ್ರೇಕ್ಷಕರಿದ್ದಾರೆ. ಅದೇ ರೀತಿ ಮಹಿಳಾ ಕಬಡ್ಡಿಗೂ ಪ್ರೇಕ್ಷಕರಿದ್ದಾರೆ. “ಪ್ರೋ ಕಬಡ್ಡಿ ಲೀಗ್‌ನಿಂದಾಗಿ ಭಾರತದಲ್ಲಿರುವ ಅನೇಕ ಕಬಡ್ಡಿ ಆಟಗಾರರ ಬದುಕು ಹಾಗೂ ವ್ಯಕ್ತಿತ್ವಕ್ಕೆ ಉತ್ತಮ ಗೌರವ ಸಿಕ್ಕಿದೆ. ಮಷಾಲ್‌ ಸ್ಪೋರ್ಟ್ಸ್‌ ಮಹಿಳಾ ಲೀಗ್‌ ಆರಂಭಿಸಿದರೆ ಇಲ್ಲಿರುವ ಮಹಿಳಾ ಆಟಗಾರ್ತಿಯರ ಬದುಕಿಗೂ ಹೊಸ ರೂಪು ಸಿಕ್ಕಂತಾಗುತ್ತದೆ,” ಎಂದು ಭಾರತ ಕಬಡ್ಡಿ ತಂಡದ ಮಾಜಿ ನಾಯಕ ಅಜಯ್‌ ಠಾಕೂರ್‌ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: Santosh Trophy Football ಸೌದಿ ಅರೇಬಿಯಾದಲ್ಲೇಕೆ ಸಂತೋಷ್ ಟ್ರೋಫಿ ಫುಟ್ಬಾಲ್‌ ?

ಇದನ್ನೂ ಓದಿ: Tulunadu Cricket League: ಅನಿವಾಸಿ ಕನ್ನಡಿಗರ ಕ್ರಿಕೆಟ್‌ ಹಬ್ಬ: ತುಳುನಾಡು ಕ್ರಿಕೆಟ್‌ ಲೀಗ್‌

 2014ರಲ್ಲಿ ಪ್ರೋ ಕಬಡ್ಡಿ ಲೀಗ್‌ ಆರಂಭವಾದಾಗಿನಿಂದ ಸಾಂಪ್ರದಾಯಿಕ ಕ್ರೀಡೆಯಾಗಿರುವ ಕಬಡ್ಡಿಗೆ ಇತ್ತೀಚಿನ ವರ್ಷಗಳಲ್ಲಿ ವೃತ್ತಿಪರತೆಯ ಸ್ಪರ್ಷ ಸಿಕ್ಕಿದೆ. ಪ್ರೋ ಕಬಡ್ಡಿ ಲೀಗ್‌ 9ನೇ ಆವೃತ್ತಿಯನ್ನು 222 ದಶಲಕ್ಷ ವೀಕ್ಷಕರು ವೀಕ್ಷಿಸಿರುವುದೇ ಇದಕ್ಕೆ ಸಾಕ್ಷಿಯಾಗಿದೆ.

Related Articles