Sunday, December 10, 2023

ಮಕ್ಕಳಿಗೆ ಆಡಲು ಬಿಡಿ, ಬರೇ ಅಂಕಗಳು ಬದುಕಲ್ಲ!

99.5% ಅಂಕ ಗಳಿಸಿದರೂ ಇನ್ನೂ ಅರ್ಧ ಪರ್ಸೆಂಟೇಜ್‌ ಯಾಕೆ ಸಿಕ್ಕಿಲ್ಲ ಎಂದು ಪ್ರಶ್ನಿಸುವ ಕಾಲ ಘಟ್ಟದಲ್ಲಿರುವ ನಮಗೆ  ಕ್ರೀಡೆಯ ಬಗ್ಗೆ ಮಾತನಾಡಲು, ಆ ಬಗ್ಗೆ ಯೋಚಿಸುವ ವ್ಯವದಾನ ಎಲ್ಲಿದೆ? ಕ್ರೀಡೆಯಿಂದ ಸಿಗುವ ಅನುಕೂಲಗಳ ಬಗ್ಗೆ ತಿಳಿಯುವ ಮನಸ್ಸು ಎಲ್ಲಿದೆ? ಇರುವ ಜನಸಂಖ್ಯೆಯನ್ನು ಚಿಕ್ಕ ರಾಷ್ಟ್ರಗಳಿಗೆ ಹೋಲಿಸಿ ಅವರು  ಅಷ್ಟು ಪದಕ ಗೆದ್ದಿದ್ದಾರೆ ನಾವು ನೋಡಿ ಎಂದು ಹೇಳುವುದೇ ನಮ್ಮ ಕೆಲಸವೇ? ಕ್ರೀಡೆ ಎಂಬುದು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆಲ್ಲಲು ಮಾತ್ರ ಸೀಮಿತವೇ? ಅದರ ಹೊರತಾಗಿ ಕ್ರೀಡೆಯಿಂದ ಪ್ರಯೋಜನವಿಲ್ಲವೇ? ಮಕ್ಕಳನ್ನು ಆಡಲು ಬಿಡಿ, ಬರೇ ಅಂಕಗಳೇ ಬದುಕಲ್ಲ Let’s Children play marks are not everything in life.

ಪುಟ್ಟ ಮಗು ದಿಟ್ಟ ಹೆಜ್ಜೆ ಇಟ್ಟು ನಡೆದಾಗಲೇ ಕ್ರೀಡೆ ಆರಂಭವಾಗುತ್ತದೆ. ಪ್ರತಿಯೊಂದು ಕ್ರೀಡೆಗೆ ಓಟವೇ ಮೂಲ. ಕುಳಿತು ಆಡುವ ಕ್ರೀಡೆಗೆ ಎಲ್ಲಿಯ ಓಟ ಎಂದು ಕೇಳಬಹುದು, ಅದಕ್ಕೆ ಮನಸ್ಸಿನ ಓಟ ಇದ್ದೇ ಇರುತ್ತದೆ. ಪ್ರತಿಯೊಂದು ಮಗುವಿನಲ್ಲಿಯೂ ಒಂದಲ್ಲ ಒಂದು ಕ್ರೀಡಾ ಪ್ರತಿಭೆ ಇದ್ದೇ ಇರುತ್ತದೆ. ಹೆತ್ತವರು ಅದನ್ನು ಗುರುತಿಸಿ ಬೆಳೆಸಬೇಕು. ಇದಕ್ಕೆ ಹೆತ್ತವರಿಗೆ ತಾಳ್ಮೆ ಬೇಕು. ಯಾರನ್ನೋ ನೋಡಿ ಅವರಂತೆಯೇ ಆಗಬೇಕೆನ್ನುವ ಬದಲು ತಮ್ಮ ಮಗುವಿನಲ್ಲಿ ಯಾವ ಪ್ರತಿಭೆ ಇದೆಯೋ ಅದನ್ನೇ ಬೆಳೆಸಲು ಯತ್ನಿಸಬೇಕು.

ಮಕ್ಕಳಿಗೆ ಪ್ರಯೋಜನವೇನು?:

ನಮ್ಮ ಸುತ್ತಲು ಹೆಚ್ಚಾಗಿ ಋಣಾತ್ಮಕ ಘಟನೆಗಳೇ ನಡೆಯುತ್ತಿರುವ ಇಂದಿನ ಕಾಲ ಘಟ್ಟದಲ್ಲಿ ಮಕ್ಕಳಲ್ಲಿ ಧನಾತ್ಮಕ ನಿಲುವುಗಳನ್ನು ಬೆಳೆಸಲು ಕ್ರೀಡೆ ಅತ್ಯಂತ ಪ್ರಮುಖವಾದುದು. ಯಾವುದೇ ಕ್ರೀಡೆಯಲ್ಲಿ ಮಗು ತೊಡಗಿಸಿಕೊಂಡರೆ ಅದಕ್ಕೆ ಪ್ರೋತ್ಸಾಹ ನೀಡಿ ಏಕೆಂದರೆ ಉತ್ತಮ ಗುಣ ಮತ್ತು ಮಕ್ಕಳಲ್ಲಿ ನೈತಿಕತೆ ಬೆಳೆಸಿಕೊಳ್ಳುವಲ್ಲಿ ಕ್ರೀಡೆ ಅತಿ ಮುಖ್ಯಪಾತ್ರವಹಿಸುತ್ತದೆ. ಕ್ರೀಡೆಯಲ್ಲಿ ಸಾಧನೆ ಮಾಡಿದ ಮಗುವಿಗೆ ಶಾಲೆಯಲ್ಲಿ ಯಾವ ರೀತಿಯ ಪ್ರೋತ್ಸಾಹ ಸಿಗುತ್ತದೆ ನೋಡಿ. ಎಲ್ಲಕ್ಕಿಂತ ಕ್ರೀಡೆಯಲ್ಲಿ ಪಾಲ್ಗೊಂಡ ಮಕ್ಕಳು ಎಷ್ಟು ಚುರುಕಾಗಿರುತ್ತವೆ ನೋಡಿ. ಕೀರ್ತಿಯ ಜೊತೆಯಲ್ಲಿ ಅವರ ಆರೋಗ್ಯವೂ ಚೆನ್ನಾಗಿರುತ್ತದೆ. ಬದುಕಲ್ಲಿ ಕೀರ್ತಿ ಬೇಕು ಆರೋಗ್ಯವೇ ಇಲ್ಲದ ಕೀರ್ತಿ ಇದ್ದರೇನು ಪ್ರಯೋಜನ? ಕ್ರೀಡೆ ಹುಟ್ಟಿಕೊಂಡಿದ್ದೇ ಜಗತ್ತಿನ ಎಲ್ಲ ಜನರೂ ಆರೋಗ್ಯಕರವಾಗಿರಬೇಕೆಂದು. ಈ ಕಾರಣಕ್ಕಾಗಿ ಒಲಿಂಪಿಕ್ಸ್‌ನಲ್ಲಿ ಮೊದಲು ನೀಡಿದ್ದು ಆಲಿವ್‌ ಎಲೆ (ಜೀವ ವೃಕ್ಷ)ಯನ್ನು ಬಹುಮಾನವಾಗಿ ನೀಡುತ್ತಿದ್ದರು. ಕ್ರಿಕೆಟ್‌ನಿಂದ ನಿವೃತ್ತಿಯಾದರೂ ಸಚಿನ್‌ ತೆಂಡೂಲ್ಕರ್‌ ಅವರ ಫಿಟ್ನೆಸ್‌ ನೋಡಿ. ಅವರು 12ನೇ ತರಗತಿ ಓದಿದ್ದರೂ ಅವರ ಪದವಿಯ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಜಗತ್ತಿನಾದ್ಯಂತ ಕೀರ್ತಿ, ಹಣ ಎಲ್ಲವನ್ನೂ ಅವರಿಗೆ ನೀಡಿದ್ದು ಕ್ರೀಡೆ. ರೋಹನ್‌ ಬೋಪಣ್ಣ 43 ವರ್ಷ ವಯಸ್ಸಾದರೂ ಇವತ್ತಿಗೂ ಟೆನಿಸ್‌ನಲ್ಲಿ ಪದಕ ಗೆಲ್ಲುತ್ತಿದ್ದಾರೆ. ಅಗ್ರ ಸ್ಥಾನದಲ್ಲಿರುವ ಡಬಲ್ಸ್‌ ಆಟಗಾರ.

ಶಿಕ್ಷಣಕ್ಕೆ ಅಡ್ಡಿಯಾಗದು:

ಹೆಚ್ಚಿನ ಹೆತ್ತವರಲ್ಲಿ ಒಂದು ಆತಂಕವಿದೆ. ಕ್ರೀಡೆಯಲ್ಲಿ ಪಾಲ್ಗೊಂಡರೆ ಓದಿನಲ್ಲಿ ಮಗು ಹಿಂದೆ ಬೀಳುತ್ತದೆ ಎಂದು. ಉತ್ತಮ ದೇಹ ಮತ್ತು ಮನಸ್ಸಿನಿಂದ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯ. ಗೋವಾದಲ್ಲಿ ಇತ್ತೀಚಿಗೆ ಮುಕ್ತಾಯಗೊಂಡ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕದ ಟೆನಿಸ್‌ ಆಟಗಾರ ನಿತಿನ್‌ ಎಡರು ಚಿನ್ನದ ಪದಕ ಗೆದ್ದರು. ಶಿವಮೊಗ್ಗದ ಈ ಆಟಗಾರನ ಶೈಕ್ಷಣಿಕ ಅರ್ಹತೆ ನೀಡಿದರೆ ನಿಮಗೂ ಅಚ್ಚರಿಯಾಗುತ್ತದೆ. ಮೆಕ್ಯಾನಿಕಲ್‌ ಎಂಜಿನಿಯರ್.‌ ಭಾರತದ ಪರ ಕ್ರಿಕೆಟ್‌ ಆಡಿ ಸಾಧನೆ ಮಾಡಿದ ಅನಿಲ್‌ ಕುಂಬ್ಳೆ, ಜಾವಗಲ್‌, ಶ್ರೀನಾಥ್‌, ಹಾಗೂ ರವಿಚಂದ್ರನ್‌ ಇವರೆಲ್ಲರೂ ಎಂಜಿನಿಯರಿಂಗ್‌ನಲ್ಲಿ ಪದವಿ ಗಳಿಸಿದವರು. ಇವತ್ತು ಅವರು ಆರೋಗ್ಯವೂ ಚೆನ್ನಾಗಿದೆ ಆರ್ಥಿಕವಾಗಿಯೂ ಉತ್ತಮವಾಗಿದ್ದಾರೆ ಜೊತೆಯಲ್ಲಿ ಅಂತಾರಾಷ್ಟ್ರೀಯ ಕೀರ್ತಿಯೂ ಇದೆ. ನಿಮ್ಮ ಮಗುವನ್ನು ಶಿಕ್ಷಣದ ಜೊತೆಯಲ್ಲಿ ಕ್ರೀಡೆಯಲ್ಲಿ ತೊಡಗಿಸಿಕೊಂಡು ನೋಡಿ, ಅವನು/ಅವಳು ಬದುಕಿನಲ್ಲಿ ಯಾವ ರೀತಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ ನೋಡಿ. ಶಾಲೆ ಮುಗಿದ ನಂತರ ಅವರು ಯಾವುದೋ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಅವರು ಇತರ ಕೆಟ್ಟ ಚಟುವಟಿಕೆಗಳಲ್ಲಿ ಮತ್ತು ಮೊಬೈಲ್‌ ನೋಡುವುರಲ್ಲಿ ಸಮಯ ತೊಡಗಿಸಿಕೊಳ್ಳುವುದು ತಪ್ಪುತ್ತದೆ.

ಸರಕಾರದ ನೆರವು:

ಆರೋಗ್ಯವೇ ಮುಖ್ಯ. ಆರೋಗ್ಯವೇ ಇಲ್ಲವೆಂದರೆ ಬದುಕಿನ ಸುಖಗಳನ್ನು ಅನುಭವಿಸುವುದಾದರೂ ಹೇಗೆ? ಆದರೂ ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ನಮಗೆ ಬದುಕಿಗೆ ಯಾವ ರೀತಿಯಲ್ಲಿ ನೆರವು ಸಿಗಬಹುದು ಎಂದು ಪ್ರಶ್ನಿಸುವವರಿಗೂ ಇಲ್ಲಿ ಉತ್ತರವಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದವರಿಗೆ ಲಭ್ಯತೆಯ ಆಧಾರದ ಮೇಲೆ ಉದ್ಯೋಗ ಸಿಗುತ್ತದೆ. ನೀವು ಕ್ರೀಡೆಯ ಜೊತೆಯಲ್ಲಿ ಶಿಕ್ಷಣ ಮುನ್ನಡೆಸುತ್ತಿದ್ದರೆ ಸರಕಾರ ನಿಮ್ಮ ಶಿಕ್ಷಣದ ಶುಲ್ಕವನ್ನು ಭರಿಸಲಿದೆ, ಗೆದ್ದ ಪ್ರತಿಯೊಂದು ಪದಕಗಳಿಗೂ (ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ) ನಗದು ಬಹುಮಾನ ನೀಡಲಿದೆ. ಇದರೊಂದಿಗೆ ಪ್ರಶಸ್ತಿಗಳೂ ಸಿಗಲಿವೆ. ನಿಮ್ಮ ಕ್ರೀಡಾ ಸಾಧನೆ ಮೆಡಿಕಲ್ ಮತ್ತು ಎಂಜಿನಿಯರಿಂಗ್‌ ಸೀಟು ಪಡೆಯಲೂ ನೆರವಾಗಲಿದೆ. ಇವೆಲ್ಲಕ್ಕಿಂತ ಜನರ ಪ್ರೀತಿ, ಅಭಿಮಾನ, ಸಮಾಜದಲ್ಲಿ ಗೌರವ ನಿಮ್ಮನ್ನು ಹುಡುಕಿ ಬರುತ್ತದೆ. ಕೆಲವರು ಕೋಟ್ಯಾಧಿಪತಿಗಳಿರುತ್ತಾರೆ ಆದರೆ ಅವರು ಇದ್ದಾರೆಂದು ಗೊತ್ತಾಗುವುದೇ ನಮ್ಮನ್ನು ಅಗಲಿದಾಗ.

ಕ್ರೀಡೆ ಉತ್ತಮ ಗೆಳೆಯರನ್ನು ಒದಗಿಸುತ್ತದೆ. ಅಲ್ಲಿ ಯಾವುದೇ ಜಾತಿ, ಧರ್ಮ, ಬಣ್ಣ ಇರುವುದಿಲ್ಲ. ಕ್ರೀಡೆಯೇ ಒಂದು ಧರ್ಮ. ಅಲ್ಲಿ ಶಿಸ್ತಿಗೆ ಮೊದಲ ಆದ್ಯತೆ. ಬೇರೆ ಬೇರೆ ತಂಡಗಳಲ್ಲಿ ಆಡಿದರೂ ಪಂದ್ಯ ಮುಗಿದ ನಂತರ ಅವರೆಲ್ಲರೂ ಒಂದಾಗಿಯೇ ಇರುತ್ತಾರೆ. ಪಾಕಿಸ್ತಾನ ಹಾಗೂ ಭಾರತ ನಡುವೆ ರಾಜಕೀಯ ದ್ವೇಷವಿದ್ದರೂ ಅಂಗಣದಲ್ಲಿ ಕ್ರೀಡಾಪಟುಗಳು ಒಂದಾಗಿ ಆಡುತ್ತಾರೆ. ಸಂತಸವನ್ನು ಹಂಚಿಕೊಳ್ಳುತ್ತಾರೆ. ಇದು ಕ್ರೀಡೆಯಂದ ಮಾತ್ರ ಸಾಧ್ಯ. ಅಮೆರಿದಕಲ್ಲಿ ಕರಿಯರನ್ನು ಹಿಂದೆ ಕೆಟ್ಟದಾಗಿ ನೋಡಿಕೊಳ್ಳುತ್ತಿದ್ದರು, ಆದರೆ ಇಂದು ಅವರಿಂದಲೇ ಕ್ರೀಡೆಯಲ್ಲಿ ಅಮೆರಿಕ ಪ್ರಭುತ್ವ ಸಾಧಿಸಿದೆ. ಆದ್ದರಿಂದ ಕ್ರೀಡೆ ಸಮಾಜದಲ್ಲಿರುವ ತಾರತಮ್ಯವನ್ನು ತೊಡೆದು ಹಾಕುತ್ತದೆ. ತಂಡವಾಗಿ ಕೆಲಸ ಮಾಡುವುದು, ನಾಯಕತ್ವದ ಗುಣ, ನಿಯಮಗಳನ್ನು ಪಾಲಿಸುವುದು, ಇತರರಿಗೆ ಗೌರವ ನೀಡುವುದು ಹೀಗೆ ಕ್ರೀಡೆಯಿಂದ ದೈಹಿಕ, ಮಾನಸಿಕ, ಆರ್ಥಿಕ ಸೇರಿದಂತೆ ಹಲವು ರೀತಿಯ ಪ್ರಯೋಜನ ಇದೆ. ಆದ್ದರಿಂದ ನಿಮ್ಮ ಮಕ್ಕಳು ಶಿಕ್ಷಣದಲ್ಲಿ ಹಿಂದೆ ಬೀಳುತ್ತಾರೆಂಬ ಆತಂಕ ಬಿಟ್ಟು ಅವರನ್ನು ಉತ್ತಮ ಆರೋಗ್ಯವಂತ ನಾಗರಕರನ್ನಾಗಿ ರೂಪಿಸಲು ಅವರಿಗೆ ಆಸಕ್ತಿ ಇರುವ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಬಿಡಿ. ಕಳೆದುಕೊಳ್ಳುವುದು ಏನೂ ಇಲ್ಲ.

Related Articles