Friday, October 4, 2024

ಏಕದಿನದಲ್ಲಿ 9, ಟೆಸ್ಟ್‌ನಲ್ಲಿ ಇಡೀ ತಂಡವೇ ಬೌಲಿಂಗ್‌ ಮಾಡಬಹುದು!

ಬೆಂಗಳೂರು: ನೆದರ್ಲೆಂಡ್ಸ್‌ನಲ್ಲಿ ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಶ್ವಕಪ್‌ನ ಕೊನೆಯ ಲೀಗ್‌ ಪಂದ್ಯಲ್ಲಿ ಭಾರತದ 9 ಆಟಗಾರರು ಬೌಲಿಂಗ್‌ ಮಾಡಿದ್ದಾರೆ. ಇದು ಅಚ್ಚರಿ ಏನಲ್ಲ. ಈ ಹಿಂದೆ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತದ 9 ಆಟಗಾರರು ಬೌಲಿಂಗ್‌ ಮಾಡಿರುವ ದಾಖಲೆ ಇದೆ. ಗರಿಷ್ಠ ಅವಕಾಶವೂ ಅಷ್ಟೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಎಲ್ಲ 11 ಆಟಗಾರರೂ ಬೌಲಿಂಗ್‌ ಮಾಡಬಹುದು. ನೆದರ್ಲೆಂಡ್ಸ್‌ ವಿರುದ್ಧ ರೋಹಿತ್‌ ಶರ್ಮಾ ಮತ್ತು ವಿರಾಟ್‌ ಕೊಹ್ಲಿ ವಿಕೆಟ್‌ ಗಳಿಸಿರುವುದು ವಿಶೇಷ. ಭಾರತ ತಂಡ 160 ರನ್‌ಗಳ ಅಂತರದಲ್ಲಿ ಗೆದ್ದು ಸೋಲರಿಯದ ಸರದಾರನಂತೆ ಸೆಮಿಫೈನಲ್‌ ಪ್ರವೇಶಿಸಿತು. In one day cricket 9 maximum 9 bowlers can bowl but in Test cricket 11 players can bowl

ಏಕದಿನ ಕ್ರಿಕೆಟ್‌ನಲ್ಲಿ ತಂಡದ ಗರಿಷ್ಠ 9 ಆಟಗಾರರು ಬೌಲಿಂಗ್‌ ಮಾಡಬಹುದು. ಟೆಸ್ಟ್‌ ಕ್ರಿಕೆಟ್‌ನಲ್ಲಿ ಎಲ್ಲ 11 ಆಟಗಾರರೂ ಬೌಲಿಂಗ್‌ ಮಾಡಬಹುದು. ಸಾಮಾನ್ಯವಾಗಿ ಮೊದಲು ಬ್ಯಾಟಿಂಗ್‌ ಮಾಡಿದ ತಂಡವು ಬೃಹತ್‌ ಮೊತ್ತವನ್ನು ಗಳಿಸಿ ಎದುರಾಳಿ ತಂಡವು ಸುರ್ಬಲವಾಗಿದ್ದು ಗೆಲ್ಲುವ ಲಕ್ಷಣ ಕಡಿಮೆ ಇದ್ದಾಗ ಇಂಥ ಪ್ರಯೋಗಗಳು ನಡೆಯುತ್ತವೆ. ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತ ಎಲ್ಲ ಪಂದ್ಯಗಳಲ್ಲೂ ಜಯ ಗಳಿಸಿ ಸೆಮಿಫೈನಲ್‌ ಪ್ರವೇಶಿಸಿದೆ, ನೆದರ್ಲೆಂಡ್ಸ್‌ಗೆ ಈ ಪಂದ್ಯ ಗೆಲ್ಲುವುದು ಅಸಾಧ್ಯ ಈ ಹಿನ್ನೆಲೆಯಲ್ಲಿ ರೋಹಿತ್‌ ಶರ್ಮಾ ಈ ಪ್ರಯೋಗ ಮಾಡಿದರು.

ಏಕದಿನ ಕ್ರಿಕೆಟ್‌ನಲ್ಲಿ ಹಲವು ಬಾರಿ ತಂಡಗಳು ಗರಿಷ್ಠ 9 ಆಟಗಾರರಿಗೆ ಬೌಲಿಂಗ್‌ ಮಾಡಲು ಅವಕಾಶ ನೀಡಿದೆ. ಭಾರತ ಮೂರು ಬಾರಿ 9 ಬೌಲರ್‌ಗಳಿಗೆ ಅವಕಾಶ ನೀಡಿದ್ದು ಮೂರು ಬಾರಿಯೂ ಸೋಲನುಭವಿಸಿದೆ. ಆಸ್ಟ್ರೇಲಿಯಾ, ವೆಸ್ಟ್‌ ಇಂಡೀಸ್‌ ಹಾಗೂ ಶ್ರೀಲಂಕಾ ತಂಡಗಳ ವಿರುದ್ಧದ ಏಕದಿನ ಪಂದ್ಯಗಳಲ್ಲಿ ಭಾರತ ಈ ಪ್ರಯೋಗ ಮಾಡಿತ್ತು. ಇಲ್ಲಿ ರನ್‌ ಹೆಚ್ಚು ಹೊಡೆದು ಪ್ರಯೋಗ ಮಾಡಿದ್ದಲ್ಲ ಬದಲಾಗಿ ಎದುರಾಳಿ ತಂಡವು ಹೆಚ್ಚು ರನ್‌ ಗಳಿಸುತ್ತಿರುವುದನ್ನು ನಿಯಂತ್ರಿಸಲು. 2002ರಲ್ಲಿ ವೆಸ್ಟ್‌ ಇಂಡೀಸ್‌ ತಂಡ ಭಾರತ ಪ್ರವಾಸವನ್ನು ಕೈಗೊಂಡಿದ್ದಾಗ ಭಾರತ ತಂಡ ವಡೋದರಲ್ಲಿ ನಡೆದ ಐದನೇ ಏಕದಿನ ಪಂದ್ಯದಲ್ಲಿ ಈ ಪ್ರಯೋಗ ಮಾಡಿತ್ತು. ಅದು ಏಳು ಪಂದ್ಯಗಳ ಸರಣಿ. ವಡೋದರದಲ್ಲಿ ನಡೆದ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟಿಂಗ್‌ ಮಾಡಿ 48 ಓವರ್‌ಗಳಲ್ಲಿ 8 ವಿಕೆಟ್‌ಗೆ 290 ರನ್‌ ಗಳಿಸಿತ್ತು. ವಿಂಡೀಸ್‌ ಪರ ಏಳು ಆಟಗಾರರು ಬೌಲಿಂಗ್‌ ಮಾಡಿದ್ದರು. ಕ್ರಿಸ್‌ ಗೇಲ್‌ ಶತಕದ ನೆರವಿನಿಂದ ವಿಂಡೀಸ್‌ ಜಯ  ಗಳಿಸಿ ಸರಣಿಯಲ್ಲಿ 3-2 ಅಂತರದಲ್ಲಿ ಮುನ್ನಡೆ ಕಂಡಿತು. ನಾಯಕ ಸೌರವ್‌ ಗಂಗೂಲಿ 9 ಆಟಗಾರರಿಗೆ ಬೌಲಿಂಗ್‌ ನೀಡಿದ್ದರು. ನಂತರ 2009ರಲ್ಲಿ ಶ್ರೀಲಂಕಾ ವಿರುದ್ಧ ಕೊಲಂಬೋದಲ್ಲಿ ನಡೆದ ಸರಣಿಯ ಕೊನೆಯ ಮತ್ತು ಐದನೇ ಪಂದ್ಯದಲ್ಲಿ ನಾಯಕ ಧೋನಿ 9 ಬೌಲರ್‌ಗಳನ್ನು ಬಳಿಸಿದರೂ ಪಂದ್ಯ ಗೆಲ್ಲಲಾಗಲಿಲ್ಲ. ಆದರೆ ಭಾರತ 4-1  ಅಂತರದಲ್ಲಿ ಸರಣಿ ಗೆದ್ದುಕೊಂಡಿತ್ತು. 2009ರಲ್ಲಿ ಆಸ್ಟ್ರೇಲಿಯಾ ತಂಡ ಭಾರತ ಪ್ರವಾಸ ಕೈಗೊಂಡಿದ್ದಾಗ ಗುವಾಹಟಿಯಲ್ಲಿ ನಡೆದ ಪಂದ್ಯದಲ್ಲಿ ಭಾರತ ಕೇವಲ 170 ರನ್‌ ಗಳಿಸಿದ್ದಾಗಲೂ ನಾಯಕ ಧೋನಿ 9 ಆಟಗಾರರಿಗೆ ಬೌಲಿಂಗ್‌ ಮಾಡುವ ಅವಕಾಶ ನೀಡಿದಾಗ ಪಂದ್ಯ ಸೋತಿತ್ತು. 7 ಪಂದ್ಯಗಳ ಸರಣಿಯಲ್ಲಿ ಆಸೀಸ್‌ 4-2ರಲ್ಲಿ ಮುನ್ನಡೆ ಕಂಡಿತ್ತು.

ಟೆಸ್ಟ್ ಕ್ರಿಕೆಟ್‌ನಲ್ಲಿ 11 ಆಟಗಾರರಿಂದಲೂ ಬೌಲಿಂಗ್‌! : ಟೆಸ್ಟ್‌ ಕ್ರಿಕೆಟ್‌ನಲ್ಲಿ ಇಡೀ ತಂಡಕ್ಕೆ ಬೌಲಿಂಗ್‌ ಮಾಡುವ ಅವಕಾಶ ಇದೆ. ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ಮೊದಲು ಈ ಪ್ರಯೋಗ ಮಾಡಿದ್ದು ಇಂಗ್ಲೆಂಡ್‌ ತಂಡ, ಅದೂ ಆಸ್ಟ್ರೇಲಿಯಾದ ವಿರುದ್ಧ.  1884ರಲ್ಲಿ. ಈ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತ್ತು.  1980ರಲ್ಲಿ ಆಸ್ಟ್ರೇಲಿಯಾ ತಂಡ ಪಾಕಿಸ್ತಾನದ ವಿರುದ್ಧ ಈ ಪ್ರಯೋಗ ಮಾಡಿ ಪಂದ್ಯ ಡ್ರಾಗೊಳಿಸಿತ್ತು. ಈ ಪ್ರಯೋಗ ಮಾಡಿದ ಮೂರನೇ ತಂಡವೇ ಭಾರತ. 2002ರಲ್ಲಿ ವೆಸ್ಟ್‌ಇಂಡೀಸ್‌ ಪ್ರವಾಸದಲ್ಲಿದ್ದ ಭಾರತ ತಂಡದ ನಾಯಕ ಸೌರವ್‌ ಗಂಗೂಲಿ ಈ ಪ್ರಯೋಗ ಮಾಡಿದ್ದರು. ವಿಕೆಟ್‌ ಕೀಪರ್‌ ಅಜಯ್‌ ರಾತ್ರ ಸೇರಿದಂತೆ ಇಡೀ ತಂಡವೇ ಬೌಲಿಂಗ್‌ ಮಾಡಿತ್ತು. ರಾಹುಲ್‌ ದ್ರಾವಿಡ್‌ 1 ವಿಕೆಟ್‌ ಗಳಿಸಿರುವುದು ವಿಶೇಷ. ಪಂದ್ಯ ಡ್ರಾ ಆಗಿತ್ತು. ನಂತರ 2005ರಲ್ಲಿ ದಕ್ಷಿಣ ಆಫ್ರಿಕಾ ತಂಡ ವೆಸ್ಟ್‌ಇಂಡೀಸ್‌ ವಿರುದ್ಧ ಈ ಪ್ರಯೋಗ ಮಾಡಿತ್ತು. ಪಂದ್ಯ ಡ್ರಾದಲ್ಲಿ ಕೊನೆಗೊಂಡಿತ್ತು.

Related Articles