Tuesday, April 16, 2024

ಪೋಸ್ಟಲ್, ಎ ಎಸ್ ಸಿ ತಂಡಕ್ಕೆ ವಾಜಪೇಯಿ ಕಪ್

ಬೆಂಗಳೂರು:

ರಾಜಾಜಿನಗರ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದಿಂದ ಆಯೋಜಿಸಿದ್ದ ರಾಜ್ಯಮಟ್ಟದ ಪುರುಷರು ಮತ್ತು ಮಹಿಳೆಯರ ಹೊನಲು ಬೆಳಕಿನ ’ವಾಜಪೇಯಿ ಕಪ್’ ವಾಲಿಬಾಲ್ ಟೂರ್ನಿ ನಗರದಲ್ಲಿಂದು ಅತ್ಯಂತ ಯಶಸ್ವಿಯಾಗಿ ಸಮಾಪನಗೊಂಡಿತು.

ಮಹಿಳೆಯರ ವಿಭಾಗದಲ್ಲಿ ಪೋಸ್ಟಲ್ಸ್ ತಂಡ ಪ್ರಶಸ್ತಿ ಗೆದ್ದುಕೊಂಡಿತು. ಪುರುಷರ ವಿಭಾಗದಲ್ಲಿ ಎ ಎಸ್ ಸಿ ತಂಡ ಪ್ರಶಸ್ತಿ ಗೆದ್ದುಕೊಂಡಿತು. ಗೆದ್ದ ತಂಡಕ್ಕೆ ವಿಧಾನಸಭೆ ಪ್ರತಿಪಕ್ಷ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ 25 ಸಾವಿರ ನಗದು ಮತ್ತು ಟ್ರೋಫಿ ವಿತರಸಿದರು. ಎರಡನೇ ಸ್ಥಾನವನ್ನು ಕೆವಿಎ, ಮೂರನೇ ಸ್ಥಾನವನ್ನು ಎಸ್.ಡಿ.ಎಂ ಉಜಿರೆ ಹಾಗೂ 4ನೇ ಸ್ಥಾನವನ್ನು ಭಾರತೀಯ ಕ್ರೀಡಾ ಪ್ರಾಧಿಕಾರ ತಂಡ ಗಳಿಸಿತು.
ಬಳಿಕ ಮಾತನಾಡಿದ ಯಡಿಯೂರಪ್ಪ, ತಾವು ಕೋಕೋ ಕ್ರೀಡೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದು, ದೇಸಿಯ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಅಗತ್ಯವಿದೆ. ವಾಲಿಬಾಲ್ ಆಟದ ವೈಭವ ಇತ್ತೀಚಿನ ದಿನಗಳಲ್ಲಿ ನಶಿಸುತ್ತಿದ್ದು, ಮತ್ತೆ ಆಟದ ಗತ ವೈಭವ ಮರಳಬೇಕಿದೆ. ಅದಕ್ಕಾಗಿ ಇಂತಹ ಕ್ರೀಡಾಕೂಟಗಳು ಹೆಚ್ಚೆಚ್ಚು ನಡೆಯಬೇಕು. ಯುವ ಸಮೂಹ ಕ್ರೀಡೆ ರಕ್ಷಣೆಗೆ ಮುಂದಾಗಬೇಕು ಎಂದರು.
ಒಬ್ಬ ಕ್ರೀಡಾಪಟುವಾಗಿ ಆರೋಗ್ಯ ದೃಷ್ಟಿಯಿಂದ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದು ಒಳ್ಳೆಯದು. ಮಕ್ಕಗಳನ್ನು ಕ್ರೀಡಾಂಗಣದತ್ತ ತರಲು ಪಾಲಕರು ಮುಂದಾಗಬೇಕು. ಕಳೆದ 17 ವರ್ಷಗಳಿಂದ ವಾಜಪೇಯಿ ಕಪ್ ನಡೆಸಿಕೊಂಡು ಬರುತ್ತಿರುವುದ ಒಳ್ಳೆಯ ಬೆಳವಣಿಗೆ. ವಾಜಪೇಯಿ ಅವರ ಜನ್ಮ ದಿನದ ಸಂದರ್ಭದಲ್ಲಿ ಈ ಟೂರ್ನಿ ಆಯೋಜಿಸಿರುವುದು ಮತ್ತು ಮಹಾನ್ ಪುರುಷನನ್ನು ಸ್ಮರಿಸುತ್ತಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ ಎಂದರು.
ಪುರುಷರ ಅಂತಿಮ ಹಣಾಹಣಿಗೆ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಚಾಲನೆ ನೀಡಿ ಮಾತನಾಡಿ, ಇದು ರಾಷ್ಟ್ರಮಟ್ಟದ ಕ್ರೀಡಾಕೂಟವಾಗಿದ್ದು, ಇಲ್ಲಿ ಆಡಿದ ಕ್ರೀಡಾ ಪಟುಗಳು ತಮ್ಮ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಭವಿಷ್ಯ ಕಂಡುಕೊಂಡಿದ್ದಾರೆ. ಕೇಂದ್ರದ ನರೇಂದ್ರ ಮೋದಿ ಸರ್ಕಾರ ಕ್ರೀಡೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ಖೇಲೋ ಇಂಡಿಯಾ ಕಾರ್ಯಕ್ರಮದ ಮೂಲಕ ಗ್ರಾಮೀಣ ಭಾಗದಲ್ಲಿ ಅವಕಾಶ ಸಿಗದೇ ವಂಚಿತರಾಗಿದ್ದ ಕ್ರೀಡಾ ಪಟುಗಳಿಗೆ ವೇದಿಕೆ ಒದಗಿಸಿದೆ. ಕ್ರೀಡಾ ಕ್ಷೇತ್ರದ ಸ್ವರೂಪವನ್ನೇ ಕೇಂದ್ರ ಸರ್ಕಾರ ಬದಲಿದ್ದು, ಕ್ರೀಡಾಪಟುಗಳನ್ನು ತಯಾರು ಮಾಡುವ ತರಬೇತುದಾರರಿಗೆ ಅತಿ ಹೆಚ್ಚಿನ ಮನ್ನಣೆ ನೀಡಿದೆ ಎಂದು ಹೇಳಿದರು.

ರಾಜ್ಯದ 10 ಪ್ರತಿಷ್ಠಿತ ತಂಡಗಳು ಟೂರ್ನಿಯಲ್ಲಿ ಪಾಲ್ಗೊಂಡಿದ್ದು, ಇದರಲ್ಲಿ 4 ಮಹಿಳೆಯರ ಹಾಗೂ 4 ಪುರುಷರ ತಂಡಗಳಾಗಿದ್ದವರು. ಪೋಸ್ಟಲ್ಸ್, ಜಿಂದಾಲ್ ಸ್ಟೀಲ್, ಬಿ.ಎಸ್.ಎನ್.ಎಲ್. ಸಿಐಎಲ್, ದಕ್ಷಿಣ ಕನ್ನಡ ಉಜಿರೆಯ  ಎಸ್ ಡಿ ಎಮ್ , ಭಾರತೀಯ ಕ್ರೀಡಾ ಪ್ರಾಧಿಕಾರದ ತಂಡಗಳು ತಮ್ಮ ಅಪ್ರತಿಮ ಕ್ರೀಡಾ ಸ್ಫೂರ್ತಿಯಿಂದ ಕ್ರೀಡಾ ಪ್ರೇಮಿಗಳ ಮನೆಗೆದ್ದವು.

Related Articles