ಬ್ಲಾಸ್ಟರ್ಸ್, ಪ್ಯಾಂಥರ್ಸ್‌ಗೆ ಜಯ

0
212
ಸ್ಪೋರ್ಟ್ಸ್ ಮೇಲ್ ವರದಿ

ಮೈಸೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ  ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಬೆಳಗಾವಿ ಪ್ಯಾಂಥರ್ಸ್ ತಂಡಗಳು ಜಯ ಗಳಿಸಿವೆ.

ಶನಿವಾರ ನಡೆದ ದಿನದ ಮೊದಲ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಮಾಡಿದ ಬೆಳಗಾವಿ ಪ್ಯಾಂಥರ್ಸ್ ತಂಡ ೨೦ ಓವರ್‌ಗಳಲ್ಲಿ ೭ ವಿಕೆಟ್ ನಷ್ಟಕ್ಕೆ ೧೫೭ ರನ್ ಗಳಿಸಿತು. ಆಲ್ರೌಂಡರ್ ಸ್ಟಾಲಿನ್ ಹೂವ್ (೩೮) ಹಾಗೂ ಸ್ಟುವರ್ಟ್ ಬಿನ್ನಿ (೩೧) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ಸವಾಲಿನ ಮೊತ್ತ ಕಲೆಹಾಕಿತು. ಇದಕ್ಕೆ ಉತ್ತರವಾಗಿ ಬಳ್ಳಾರಿ ಟಸ್ಕರ್ಸ್ ೧೮.೫ ಓವರ್‌ಗಳಲ್ಲಿ  ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ ೧೩೫ ರನ್ ಗಳಿಸಿತು. ಪ್ಯಾಂಥರ್ಸ್ ಪಡೆ ೨೨ ರನ್‌ಗಳ ಜಯ ಗಳಿಸುವಲ್ಲಿ ಸ್ಟುವರ್ಟ್ ಬಿನ್ನಿ (೨೭ಕ್ಕೆ ೨) ಹಾಗೂ ಡಿ. ಅವಿನಾಶ್ (೨೦ಕ್ಕೆ ೩) ಅವರ ಪಾತ್ರ ಪ್ರಮುಖವಾಗಿತ್ತು. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮಿಂಚಿದ ಸ್ಟುವರ್ಟ್ ಬಿನ್ನಿ ಪಂದ್ಯಶ್ರೇಷ್ಠರೆನಿಸಿರು.

ಲಯನ್ಸ್ ಮತ್ತೆ ಸೋಲಿನ ಬೋನಿಗೆ

ಅಭಿಷೇಕ್ ಭಟ್ (ಅಜೇಯ ೪೦) ಹಾಗೂ ಭರತ್ ದೇವರಾಜ್ (೩೮) ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ಬೆಂಗಳೂರು ಬ್ಲಾಸ್ಟರ್ಸ್ ತಂಡ ಶಿವಮೊಗ್ಗ ಲಯನ್ಸ್ ವಿರುದ್ಧ ೨ ವಿಕೆಟ್‌ಗಳ ರೋಚಕ ಜಯ ಗಳಿಸಿ, ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿತು.
ಮೊದಲು ಬ್ಯಾಟಿಂಗ್ ಮಾಡಿದ ಶಿವಮೊಗ್ಗ ಲಯನ್ಸ್ ೬ ವಿಕೆಟ್ ನಷ್ಟಕ್ಕೆ ೧೪೬ ರನ್ ಗಳಿಸಿತು. ಸಾಧಾರಣ ಮೊತ್ತವನ್ನು ಬೆಂಬತ್ತಿದ ಬ್ಲಾಸ್ಟರ್ಸ್ ತಂಡದ ಆರಂಭ  ಉತ್ತಮವಾಗಿರಲಿಲ್ಲ. ೮೪ ರನ್ ಗಳಿಸುವಷ್ಟರಲ್ಲಿ ೬ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಅಭಿಷೇಕ್ ಭಟ್ ಅವರ ಸ್ಫೋಟಕ ೪೦ ರನ್ ನೆರವಿನಿಂದ ಇನ್ನೂ ೫ ಎಸೆತ ಬಾಕಿ ಇರುವಾಗಲೇ ೨ ವಿಕೆಟ್ ಅಂತರದಲ್ಲಿ ಜಯ ಗಳಿಸಿತು.