Saturday, October 12, 2024

21 ವರ್ಷಗಳ ನಂತರ ವೇಟ್ ಲಿಫ್ಟಿಂಗ್ ಪದಕ

ಟೋಕಿಯೋ:

21 ವರ್ಷಗಳ ಹಿಂದೆ ಕರಣಂ ಮಲ್ಲೇಶ್ವರಿ ಸಿಡ್ನಿ ಒಲಿಂಪಿಕ್ಸ್ ನಲ್ಲಿ ವೇಟ್ ಲಿಫ್ಟಿಂಗ್ ನಲ್ಲಿ ಪದಕ ಗೆದ್ದ ನಂತರ ಇದೇ ಮೊದಲ ಬಾರಿಗೆ ಭಾರತ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದಿದೆ. ಮೀರಾಬಾಯಿ ಚಾನು 49 ಕೆಜಿ ವಿಭಾಗದಲ್ಲಿ ಬೆಳ್ಳಿ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ.

ಮೀರಾಬಾಯಿ ಸ್ಯಾಚ್ ನಲ್ಲಿ 87 ಕೆಜಿ ಮತ್ತು ಕ್ಲೀನ್ ಹಾಗೂ ಜೆರ್ಕ್ ನಲ್ಲಿ 115 ಕೆಜಿ ಸೇರಿ ಒಟ್ಟು 202 ಕೆಜಿ ಭಾರವೆತ್ತಿ ದೇಶಕ್ಕೆ ಮೊದಲ ದಿನಲ್ಲಿ ಗೌರವ ತಂದರು.  ಚೀನಾದ ಝಿಹುಯ್ ಹೌ 210 ಕೆಜಿ ಭಾರವೆತ್ತಿ ಚಿನ್ನ ಗೆದ್ದರು. 194 ಕೆಜಿ ಭಾರವೆತ್ತಿದ ಇಂಡೋನೇಷ್ಯಾದ ಕಾಂತಿಕ ಐಸ್ಹಾ ಕಂಚಿನ ಪದಕ ಗಳಿಸಿದರು.

2014ರ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ, 2017ರ ವಿಶ್ವ ಚಾಂಪಿಯನ್ಷಿಪ್ ನಲ್ಲಿ ಚಿನ್ನ, 2018ರ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಚಿನ್ನ ಮತ್ತು 2020ರ ಏಷ್ಯನ್ ಚಾಂಪಿಯನ್ಷಿಪ್ ನಲ್ಲಿ ಚಿನ್ನದ ಪದಕ ಗೆದ್ದಿರುವ ಮೀರಾಬಾಯಿ ಮಡಿಲಿಗೆ ಈಗ ಒಲಿಂಪಿಕ್ಸ್ ಪದಕದ ಕಿರೀಟ.

ಪದಕ ಗೆಲ್ಲುವ ಫೇವರಿಟ್ ಎನಿಸಿದ್ದ ಸೌರಭ್ ಚೌಧರಿ 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ 7ನೇ ಸ್ಥಾನ ಪಡೆದು ನಿರಾಸೆ ಮೂಡಿಸಿದರು.

ಪುರುಷರ ಹಾಕಿಯಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ 3-2 ಗೋಲುಗಳಿಂದ ಜಯ ಗಳಿಸಿ ಶುಭಾರಂಭ ಕಂಡಿದೆ. ಮಹಿಳಾ ಹಾಕಿಯಲ್ಲಿ ಭಾರತ ತಂಡ ನೆದರ್ಲೆಂಡ್ಸ್ ವಿರುದ್ಧ 1-5 ಗೋಲುಗಳ ಅಂತರದಲ್ಲಿ ಸೋಲನುಭವಿಸಿದೆ.

ಚಿಕ್ಕಂದಿನಲ್ಲಿ ಸೌದೆ ಹೊರುತ್ತಿದ್ದ ಮೀರಾಬಾಯಿ

 ಮಣಿಪುರ ರಾಜ್ಯದ ಇಂಪಾಲ ಜಿಲ್ಲೆಯ ನಾನ್ಪೊಕ್ ಕಾಕ್ಚಿಂಗಾ ಗ್ರಾಮದಲ್ಲಿ ಈಗ ಸಂಭ್ರಮ ಮನೆ ಮಾಡಿದೆ. ಊರಿನ ಮಗಳು ಮಿರಾಬಾಯಿ ಚಾನು ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿರುವುದು ಆ ಊರಿನ ಜನರಿಗೆ ಎಲ್ಲಿಲ್ಲದ ಸಂಘ್ರಮ. ಮೈಟಿ ಕುಟುಂಬದಲ್ಲೀಗ ಸಡಗರ ಮನೆ ಮಾಡಿದೆ. ಕಾಮನ್ವೆಲ್ತ್, ಏಷ್ಯನ್ ಚಾಂಪಿನ್ಷಿಪ್ ಮತ್ತು ವಿಶ್ವಚಾಂಪಿಯ್ಷಿಪ್ ಗೆದ್ದಾಗಲೂ ಅಲ್ಲಿ ಇದೇ ರೀತಿಯ ಸಂಭ್ರಮ ಮನೆ ಮಾಡಿತ್ತು. ಆದರೆ ಇದು ಒಲಿಂಪಿಕ್ಸ್ ಪದಕ. ಪದ್ಮಶ್ರೀ ಮತ್ತು ರಾಜೀವ್ ಗಾಂಧಿ ಖೇಲ್ ರತ್ನ ಗೌರವಕ್ಕೆ ಪಾತ್ರರಾಗಿರುವ ಮೀರಾಬಾಯಿ ಬದುಕು ನಾವು ನೀವು ತಿಳಿದುಕೊಂಡಷ್ಟು ಸುಲಭವಾಗಿಲ್ಲ. ಬೆಡ್ಡ ಗುಡ್ಡ, ಕಾಡು ಮೇಡುಗಳ ನಡುವೆ ಬದುಕು ಕಟ್ಟಿಕೊಂಡ ಮೀರಾಬಾಯಿ ವೇಟ್ ಲಿಫ್ಟಿಂಗ್ ಕ್ರೀಡೆಗೆ ಬರಲು ಪ್ರಮುಖ ಕಾರಣ ಆಕೆಯ ತೋಳ್ಬಲ. ಚಿಕ್ಕಂದಿನಲ್ಲಿಯೇ ಅಣ್ಣವ ಜೊತೆ ಸೌದೆ ತರಲು ಕಾಡಿಗೆ ಹೋಗುತ್ತಿದ್ದ ಮೀರಾಬಾಯಿ ತನ್ನ ವಯಸ್ಸಿಗೆ ಮೀರಿದ ಭಾರವನ್ನು ಎತ್ತಿ ಅಣ್ಣನನ್ನು ಅಚ್ಚರಿಪಡಿಸುತ್ತಿದ್ದಳು. ಇದರಿಂದಾಗಿ ಭಾರಎತ್ತುವ ಸ್ಪರ್ಧೆ ಮೀರಾಬಾಯಿಗೆ ಸುಲಭವಾಯಿತು.

Related Articles