Friday, April 19, 2024

ಎವರೆಸ್ಟ್ ಶಿಖರದ ಮೇಲೆ ಭರತನಾಟ್ಯದ ಹೆಜ್ಜೆ ಮೂಡಿಸಿ ಪ್ರಿಯಾಂಕ!

ಸೋಮಶೇಖರ್ ಪಡುಕರೆ ಸ್ಪೋರ್ಟ್ಸ್ ಮೇಲ್

ಜಗತ್ತಿಂದ ಅತ್ಯಂತ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಹಿಮದ ಮೇಲೆ ಭರತನಾಟ್ಯ ಕಲಾವಿದೆಯೊಬ್ಬರ ಹೆಜ್ಜೆ ಮೂಡಿತೆಂದರೆ ಅಚ್ಚರಿಯಾಗುವುದು ಸಹಜ. ಈ ಅಚ್ಚರಿಯ ನಡುವೆ ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಮಹಾರಾಷ್ಟ್ರ ಮೂಲದ ಭರತನಾಟ್ಯ ಕಲಾವಿದೆ ಪ್ರಿಯಾಂಕ ಮಂಗೇಶ್ ಮೋಹಿತೆ ಅವರ ಸಾಧನೆಯ ಹೆಜ್ಜೆಯ ಗೆಜ್ಜೆಯ ಸದ್ದನ್ನು ನೀವು ಕೇಳಲೇಬೇಕು.

20ನೇ ವಯಸ್ಸಿನಲ್ಲಿ ಮೌಂಟ್ ಎವರೆಸ್ಟ್ ಏರಿ ಅಚ್ಚರಿ ಮೂಡಿಸಿ, ಅನಂತರ ಮೌಂಟ್ ಲ್ಹೋಟ್ಸೆ, ಮೌಂಟ್ ಮಕಾಲು, ಮೌಂಟ್ ಕಿಲಿಮಂಜಾರೋ ಹಾಗೂ ಕಳೆದ ತಿಂಗಳು ಎತ್ತರದಲ್ಲಿ  ಜಗತ್ತಿನಲ್ಲೇ 10ನೇ ಸ್ಥಾನದಲ್ಲಿರುವ  ಮತ್ತು ಏರಲು ಎವರೆಸ್ಟ್ ಗಿಂತಲೂ ಅತ್ಯಂತ ಕಠಿಣ ಎನಿಸಿರುವ ಮೌಂಟ್ ಅನ್ನಪೂರ್ಣವನ್ನು ಏರಿ ಸಾಧನೆ ಮಾಡಿದ್ದಾರೆ. ಸದ್ಯ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನೆಲೆಸಿರುವ ಪ್ರಿಯಾಂಕ ಸೈನ್ಜೇನ್ ಇಂಟರ್ ನ್ಯಾಷನಲ್ ಲಿಮಿಟೆಡ್ (ಬಯೋಕಾನ್ ಗೆ ಸೇರಿದ್ದು) ಕಂಪೆನಿಯಲ್ಲಿ ರಿಸರ್ಚ್ ಮತ್ತು ಡೆವಲಪ್ ಮೆಂಟ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ.

ಶಿವಾಜಿಯ ಸಾಹಸ ಕತೆಗಳೇ ಸ್ಫೂರ್ತಿ!

ಸಹ್ಯಾದ್ರಿ ಪರ್ವತಶ್ರೇಣಿಯ ಹತ್ತಿರವಿರುವ ಸತಾರ ಮೂಲದವರಾದ ಪ್ರಿಯಾಂಕ ಅವರಿಗೆ ತಂದೆ ಮಂಗೇಶ್ ಮೋಹಿತೆ ಹಾಗೂ ತಾಯಿ ಶೋಭಾ ಚಿಕ್ಕಂದಿನಲ್ಲಿ ಶಿವಾಜಿ ಮಹಾರಾಜರ ಪರ್ವತಾರೋಹಣದ ಕತೆಗಳನ್ನು ಹೇಳುತ್ತಿದ್ದರು, ಇದು ಪ್ರಿಯಾಂಕ ಅವರಲ್ಲಿ ಪರ್ವತಗಳ ಬಗ್ಗೆ ಆಸಕ್ತಿ ಮತ್ತು ಅವುಗಳನ್ನು ಏರುವ ಛಲ ಹುಟ್ಟಿಕೊಂಡಿತು. ಇದರಿಂದಾಗಿ ಹದಿ ಹರೆಯದಲ್ಲೇ ಸಹ್ಯಾದ್ರಿ ಪರ್ವತಶ್ರೇಣಿಗಳನ್ನು ಏರಲಾರಂಭಿಸಿದರು. ಜತೆಯಲ್ಲಿ ಭರತನಾಟ್ಯವನ್ನೂ ಕಲಿಯುತ್ತಿದ್ದರು. 19ನೇ ವಯಸ್ಸಿನಲ್ಲಿ ಹಿಮಾಲಯ ಪರ್ವತಶ್ರೇಣಿಯಲ್ಲಿ ಬರುವ ಬಂದರ್ಪೂಂಚ್ ಶಿಖರವನ್ನೇರಿ ದಾಖಲೆ ಬರೆದರು. ಅಲ್ಲಿಂದ ಮತ್ತೆ ಹಿಂದಿರುಗಿ ನೋಡಲಿಲ್ಲ. ಅವರ ಭರತನಾಟ್ಯದ ಹೆಜ್ಜೆ, ಗೆಜ್ಜೆಗಳ ಧ್ವನಿಯಲ್ಲಿ ಪರ್ವತ ಉಸಿರಾಯಿತು.

ಭಾರತದ ಮೊದಲ ಮಹಿಳೆ

ಪ್ರಿಯಾಂಕ ಅವರಿಗೆ ಈಗ 28 ವಯಸ್ಸು. 20ನೇ ವಯಸ್ಸಿನಲ್ಲಿ ಸಮುದ್ರ ಮಟ್ಟದಿಂದ 8,849 ಮೀ. ಎತ್ತರದಲ್ಲಿರುವ ಮೌಂಟ್ ಎವರೆಸ್ಟ್ ಏರಿ ಎಲ್ಲರನ್ನೂ ನಿಬ್ಬೆರಗುಗೊಳಿಸಿದರು. ಮೌಂಟ್ ಅನ್ನಪೂರ್ಣ ಎತ್ತರದಲ್ಲಿ ಹಿಮಾಲಯಕ್ಕಿಂತ ಚಿಕ್ಕದು. ಸಮುದ್ರಮಟ್ಟಕ್ಕಿಂತ 8,000 ಮೀ. ಎತ್ತರದಲ್ಲಿದೆ. ಇದು ಹಿಮಾಲಕ್ಕಿಂತ ಕಡಿಮೆ ಎತ್ತರದಲ್ಲಿದ್ದರೂ ಜಗತ್ತಿನಲ್ಲೇ ಅತ್ಯಂತ ಅಪಾಯಕಾರಿ ಶಿಖರ. ಅನ್ನಪೂರ್ಣವನ್ನೇರಿ ಬೆಂಗಳೂರಿಗೆ ಆಗಮಿಸಿದ ನಂತರ ಸ್ಪೋರ್ಟ್ಸ್ ಮೇಲ್ ಜತೆ ಮಾತನಾಡಿದ ಪ್ರಿಯಾಂಕ, “ಎವರೆಸ್ಟ್ ಏರುವಾಗ ಬಹಳ ಕುತೂಹಲ ಕಾಡಿತ್ತು. ಜಗತ್ತಿನ ಅತ್ಯಂತ ಎತ್ತರದ ಶಿಖರದ ಮೇಲೆ ಹೆಜ್ಜೆ ಇಡುವ ಉತ್ಸಾಹ ನನ್ನಲ್ಲಿತ್ತು. ಆದರೆ ಅನ್ನಪೂರ್ಣ ಏರುವಾಗ ಆತಂಕ ಮನೆ ಮಾಡಿತ್ತು. ಏಕೆಂದರೆ ಇದು ಅತ್ಯಂತ ಇಳಿಜಾರು ಮತ್ತು ಇಕ್ಕಟ್ಟಿನ ಪರ್ವತ. ಸಾಮಾನ್ಯವಾಗಿ ಸಾಹಸಿಗರು ಇದಕ್ಕಿಂತ ಹಿಮಾಲಯವನ್ನೇ ಆಯ್ಕೆ ಮಾಡುತ್ತಾರೆ. ಇಲ್ಲಿ ಹಿಮಪಾತವಾಗುವುದೇ ಹೆಚ್ಚು. ಒಮ್ಮೆ ಆರೋಹಣವನ್ನು ಆರಂಭಿಸಿದ ನಾವು ಹಿಮಪಾತದ ಕಾರಣ ಹಿಂದೆ ಸರಿದು, ಮತ್ತೆ ಸಾಗಿದ್ದೆವು. ಕೊನೆಗೂ ಜತ್ತಿನ ಅತ್ಯಂತ ಕಠಿಣ ಪರ್ವತವನ್ನೇರಿದ ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಇದೆ,” ಎಂದರು. ಈ ಸಂದರ್ಭದಲ್ಲಿ ತಮ್ಮ ಸಾಧನೆಗೆ ನೆರವಾದ ಹೆತ್ತವರು, ಕೇರಳ ಮೂಲದ ಕೋಚ್ ರಾಹುಲ್, ಮುಂಬೈ ಪೊಲೀಸ್ ಇಲಾಖೆಯ ಆನಂದ್ ಶಿಂಧೆ ಮತ್ತು ತಂಡದ ಜತೆಗಿದ್ದ ಶೇರ್ಪಾಗಳನ್ನು ಪ್ರಿಯಾಂಕ ಸ್ಮರಿಸುತ್ತಾರೆ.

ಸಹೋದ್ಯೋಗಿಗಳೇ ಪ್ರಾಯೋಜಕರು!!

ಪರ್ವತಾರೋಹಣವೆಂದರೆ ಬಹಳ ದುಬಾರಿಯ ಸಾಹಸ ಕ್ರೀಡೆ, ಪ್ರಿಯಾಂಕ ಅವರಿಗೆ ಎಂಟು ವರ್ಷಗಳ ಹಿಂದೆ ಮೌಂಟ್ ಎವರೆಸ್ಟ್ ಏರಿದಾಗ 18 ಲಕ್ಷ ರೂ. ಖರ್ಚಾಗಿತ್ತಂತೆ. ಈಗ ಮೌಂಟ್ ಎವರೆಸ್ಟ್ ಏರಲು ತಗಲುವ ವೆಚ್ಚ 25 ಲಕ್ಷ ರೂ. ಮೌಂಟ್ ಎವರೆಸ್ಟ್ ಏರುವಾಗ ತಂದೆ ಮತ್ತು ಕೆಲವು ಪ್ರಾಯೋಕರ ನೆರವಿನಿಂದ ವೆಚ್ಚ ಭರಿಸಲು ಸಾಧ್ಯವಾಯಿತು. ಆದರೆ ಅನ್ನಪೂರ್ಣ ಶಿಖರ ಏರುವಾಗ ದೇಶವನ್ನು ಕೊರೋನಾ ಮಾರಿ ಆವರಿಸಿತ್ತು. ಕೆಲವು ಕಂಪೆನಿಗಳನ್ನು ಸಂಪರ್ಕಿಸಿದರೂ ಪ್ರಿಯಾಂಕಗೆ ಯಾರೂ ನೆರವಾಗಲಿಲ್ಲ. ಆಗ ಕೆಲಸ ಮಾಡುತ್ತಿದ್ದ ಕಂಪೆನಿಯ ಹಿರಿಯ ಸಹೋದ್ಯೋಗಿಗಳು ಪರ್ವತಾರೋಹಣಕ್ಕೆ ತಗಲುವ  ವೆಚ್ಚವನ್ನು ಭರಿಸಿದರು. ನರೇನ್ ತಿರುಮಲೆ ಹಾಗೂ ದಿಗ್ವಿಜಯ ಪಾಠಣ್ಕರ್ ನೆರವು ನೀಡಿ ಪ್ರೋತ್ಸಾಹಿಸಿದರು ಎಂದು ಪ್ರಿಯಾಂಕ ಸ್ಮರಿಸುತ್ತಾರೆ.

ಅಪೂರ್ವ ಸಾಧಕಿ!

ಸಾಮಾನ್ಯವಾಗಿ ಭರತನಾಟ್ಯ ಕಲಿತವರಲ್ಲಿ ಸಾಹಸ ಕ್ರೀಡೆಯಲ್ಲಿ ತೊಡಗಿಸಿಕೊಂಡವರು ವಿರಳ. ಭರತ ನಾಟ್ಯ ವಿಶಾರದೆಯಾಗಿರುವ ಪ್ರಿಯಾಂಕ ಮೋಹಿತೆ ಅವರ ಸಾಧನೆಯನ್ನು ಬಯೊಕಾನ್ ಕಂಪೆನಿಯ ಮಾಲಕಿ ಕಿರಣ್ ಮಜೂಂದಾರ್ ಶಾ ಗುಣಗಾನ ಮಾಡಿದ್ದಾರೆ. ಹೊಗಳುವುದಕ್ಕಿಂತ ಇಂಥ ಅಪೂರ್ವ ಸಾಧಕಿಗೆ ಮುಂದಿನ ದಿನಗಳಲ್ಲಿ ಪ್ರಾಯೋಜಕತ್ವ ನೀಡಿದರೆ ಉತ್ತಮವಾಗಿರುತ್ತಿತ್ತು. “ಮೌಂಟ್ ಎವರೆಸ್ಟ್ ಕೂಡ ಮಲೀನಗೊಳ್ಳುತ್ತಿದೆ. ಅನಾಥ ಶವಗಳು ಎಲ್ಲೆಂದರಲ್ಲಿ ಕಾಣಸಿಗುತ್ತದೆ. ಆಕ್ಸಿಜನ್ ಬಾಟಲಿಗಳನ್ನು ಎಸೆದು ಹೋಗುತ್ತಾರೆ,” ಎಂದು ಪ್ರಿಯಾಮಕ ಆತಂಕ ವ್ಯಕ್ತಪಡಿಸದ್ದಾರೆ. ಪ್ರಿಯಾಂಕ ಅವರೊಂದಿಗೆ ಇನ್ನೊಂದು ಮಾರ್ಚ್ 19 ರಂದು ಇನ್ನೊಂದು ತಂಡ ಅನ್ನಪೂರ್ಣ ಶಿಖರವನ್ನೇರಿತ್ತು. ಅದರಲ್ಲಿ ಡೆಹ್ರಾಡೂನ್ ನ 25 ವರ್ಷದ ಪರ್ವತಾರೋಹಿ ಶೀತಲ್ ಕೂಡಾ ಸೇರಿದ್ದರು. ಪ್ರಿಯಾಂಕ ಅವರ ತಂಡ ಮೊದಲು ತಲುಪಿದ ಕಾರಣ ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಶೀತಲ್ ಅನ್ನಪೂರ್ಣ ಪರ್ವತವೇರಿದ ಭಾರತದ ಎರಡನೇ ಮಹಿಳೆ ಹಾಗೂ ಅತ್ಯಂತ ಕಿರಿಯ ಪರ್ವತಾರೋಹಿ ಎನಿಸಿದರು.

Related Articles