Thursday, December 12, 2024

ಲಯನ್ಸನ್ನೇ ನುಂಗಿದ ಟೈಗರ್ಸ್

ಸ್ಪೋರ್ಟ್ಸ್ ಮೇಲ್ ವರದಿ ಹುಬ್ಬಳ್ಳಿ 

ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಹುಬ್ಬಳ್ಳಿಗೆ ಆಗಮಿಸಿದೆ. ಇಲ್ಲಿನ ರಾಜಾನಗರ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ಆತಿಥೇಯ ಹುಬ್ಬಳ್ಳಿ ಟೈಗರ್ಸ್ ಶಿವಮೊಗ್ಗ ಲಯನ್ಸ್ ವಿರುದ್ಧ 25 ರನ್‌ಗಳ ಜಯ ಗಳಿಸಿದೆ.

ಟೈಗರ್ಸ್ ನೀಡಿದ 161 ರನ್‌ಗಳ ಗುರಿ ಹೊತ್ತ ಶಿವಮೊಗ್ಗ ಲಯನ್ಸ್ 9 ವಿಕೆಟ್ ನಷ್ಟಕ್ಕೆ ಕೇವಲ 125 ರನ್ ಗಳಿಸಿ ಸೋಲೋಪ್ಪಿಕೊಂಡಿತು. ಆರ್. ಜೊನಾಥನ್ (26) ಅವರನ್ನು ಹೊರತುಪಡಿಸಿದರೆ ಇತರ ಆಟಗಾರರು ವಿನಯ್ ಪಡೆಯ ದಾಳಿಯನ್ನು ಎದುರಿಸುವಲ್ಲಿ ವಿಫಲರಾದರು.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಶಿವಮೊಗ್ಗ ಲಯನ್ಸ್ ಬಲಿಷ್ಠ ಹುಬ್ಬಳ್ಳಿ ಟೈಗರ್ಸ್ ತಂಡವನ್ನು 160 ರನ್‌ಗೆ ಕಟ್ಟಿ ಹಾಕಿತು. ಆರಂಭದಲ್ಲಿ ವಿನಯ್ ಪಡೆ ರನ್‌ಗಳಿಸಲು ಪರದಾಡಿತು. 12.3 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಕೇವಲ 68  ರನ್ ಗಳಿಸಿತ್ತು. ಆದರೆ ವಿನಯ್ ಕುಮಾರ್ ಹಾಗೂ ಪ್ರವೀಣ್ ದುಬೆ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಟೈಗರ್ಸ್ ಸವಾಲಿನ ಮೊತ್ತ ಗಳಿಸಿತು.
ಪ್ರಥ್ವಿರಾಜ್ ಶೆಕಾವತ್ 4 ಓವರ್‌ಗಳಲ್ಲಿ 18 ರನ್ ನೀಡಿ 2 ಅಮೂಲ್ಯ ವಿಕೆಟ್ ಗಳಿಸಿ ಟೈಗರ್ಸ್‌ಗೆ ಆಘಾತ ನೀಡಿದ್ದರು. ಆದರೆ ವಿನಯ್ ಕುಮಾರ13 ಎಸೆತಗಳಲ್ಲಿ 6 ಸಿಕ್ಸರ್ ನೆರವಿನಿಂದ 35 ರನ್ ಗಳಿಸಿದರೆ, ದುಬೆ 32 ಎಸೆತಗಳಲ್ಲಿ  1 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 43 ರನ್‌ಗಳಿಸಿದರು. ಐದನೇ ವಿಕೆಟ್ ಜತೆಯಾಟದಲ್ಲಿ ಈ ಇಬ್ಬರೂ ಆಟಗಾರರು 26 ಎಸೆತಗಳಲ್ಲಿ 46 ರನ್ ಗಳಿಸಿ ಟೈಗರ್ಸ್ ಮೊತ್ತವನ್ನು ಉತ್ತಮಗೊಳಿಸಿದರು. ಅಂತಿಮವಾಗಿ ಹುಬ್ಬಳ್ಳಿ ಟೈಗರ್ಸ್ 7 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತು.

Related Articles