Wednesday, July 24, 2024

ಮಂಗಳೂರು ಸಾಧಕನ ಸ್ವಚ್ಛ ಭಾರತ ಅಭಿಯಾನ

ಸೋಮಶೇಖರ್ ಪಡುಕರೆ ಬೆಂಗಳೂರು
 

ಶ್ರವಣ ಕುಮಾರ್. ಮಂಗಳೂರಿನ ವಾಮಂಜೂರು ನಿವಾಸಿ. ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಅಭಿಯಾನಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಲು ಶ್ರೀನಗರದಿಂದ ಕನ್ಯಾಕುಮಾರಿ ವರೆಗೆ ಡಸ್ಟ್‌ಬಿನ್ ಅಭಿಯಾನವನ್ನು ಕೈಗೊಂಡು ಸೈಕಲ್ ಸವಾರಿ ಮಾಡತೊಡಗಿದ್ದಾರೆ. ಈಗ ಪಶ್ಚಿಮ ಬಂಗಾಳದ ಸಿಲಿಗುರಿಯನ್ನು ತಲುಪಿದ್ದಾರೆ. ದೇಶಕ್ಕಾಗಿ ತನ್ನದೇ ಕೊಡುಗೆ ನೀಡುತ್ತಿರುವ ಈತನನ್ನು ಗೆಳೆಯರು ಹುಚ್ಚ ಎಂದರು. ಆದರೆ ಆತನಿಗೆ ಹೆತ್ತವರ ಪ್ರೋತ್ಸಾಹವಿದ್ದಿತ್ತು, ತನ್ನ ಗುರಿಯನ್ನೇ ಮುಂದಾಗಿಟ್ಟುಕೊಂಡು ಉತ್ತರ ಭಾರತದಲ್ಲೆಲ್ಲ ಅಭಿಯಾನ ಪೂರ್ಣಗೊಳಿಸಿ ಈಗ ಸಿಲಿಗುರಿ ತಲುಪಿದ್ದಾರೆ.

ಅಲ್ಲಿಲ್ಲಿ ಕೆಲಸ

ಶ್ರವಣ್ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್  ಎಂಜಿನಿಯರಿಂಗ್ ಕಾಲೇಜಿನಿಂದ ಡ್ರಾಪ್ ಔಟ್. ತಂದೆ ರಾಜೇಂದ್ರ ಬಟ್ಟೆ ಅಂಗಡಿಯಲ್ಲಿ ದುಡಿದು ನಿವೃತ್ತರು. ತಾಯಿ ಕಲಾವತಿಗೆ ಮನೆವಾರ್ತೆ. ಸಾಮಾಜಿಕ ಕಾಳಜಿ ಹೊಂದಿರುವ ಶ್ರವಣ್ ಕುಮಾರ್ ಸಮಾಜದಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಶ್ರೀನಗರದಿಂದ ಕನ್ಯಾಕುಮಾರಿವರೆಗೂ ರಸ್ತೆಯಲ್ಲಿರುವ ಅಂಗಡಿಗಳಿಗೆ ಭೇಟಿ ನೀಡಿ ಅವರಲ್ಲಿ ಕಸದ ತೊಟ್ಟಿ ಇರಿಸುವಂತೆ ಮನವಿ ಮಾಡುತ್ತಾರೆ. ಹೆಚ್ಚಿನ ಅಂಗಡಿಗಳಲ್ಲಿ ಕಸ ಹಾಕಲು ತೊಟ್ಟಿಯನ್ನೇ ಇಟ್ಟಿರುವುದಿಲ್ಲ. ಜನ ತಮಗೆ ಇಷ್ಟ ಬಂದಂತೆ ಎಸೆದು ಹೋಗುತ್ತಾರೆ. ಕಸವನ್ನು ಒಂದು ನಿರ್ಧಿಷ್ಟ ಜಾಗದಲ್ಲಿ ಹಾಕಿದರೆ ಪರಿಸರ ಸ್ಪಚ್ಛವಾಗಿರುತ್ತದೆ. ಈ ಅರಿವು ಮೂಡಿಸುವುದೇ ನನ್ನ ಉದ್ದೇಶ. ಇದಕ್ಕೆ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ ಎಂದು ಶ್ರವಣ್ ಕುಮಾರ್ ಸಿಲಿಗುರಿಯಿಂದ ಸ್ಪೋರ್ಟ್ಸ್ ಮೇಲ್‌ಗೆ ತಿಳಿಸಿದ್ದಾರೆ.

ಹೊಟೇಲ್, ಫ಼ಾರ್ಮ್‌ಗಳಲ್ಲಿ ಕೆಲಸ

ಆರಂಭದಲ್ಲಿ ಗೇರ್ ಇಲ್ಲದ ಸೈಕಲ್‌ನಲ್ಲಿ ಅಭಿಯಾನ ಆರಂಭಿಸಿದ ಶ್ರವಣ್ ಅವರ ಸಾಧನೆಯನ್ನು ವಿದೇಶಿ ಯಾತ್ರಿಕರೂ ಮೆಚ್ಚಿದ್ದಾರೆ. ಏಕೆಂದರೆ ಗುಡ್ಡಗಾಡು  ಪ್ರದೇಶದಲ್ಲಿ ಗೇರ್ ಇಲ್ಲದ ಸೈಕಲ್ ಸವಾರಿ ಮಾಡುವುದು ಕಷ್ಟ. ೨೩ ವರ್ಷದ ಶ್ರವಣ್ ಅವರಲ್ಲಿ ಹಣ ಇರಲಿಲ್ಲ. ಸಂಗ್ರಹಿಸಿದ್ದ ಹಣವೆಲ್ಲ ಖಾಲಿಯಾದಾಗ ಹೆದ್ದಾರಿಯಲ್ಲಿ ಸಿಗುವ ಹೊಟೇಲ್‌ಗಳಲ್ಲಿ ಒಂದೆರಡು ದಿನ ಕೆಲಸ ಮಾಡಿ ಅವರು ನೀಡುವ ಆಹಾರ ಪುಡಿಗಾಸನ್ನು  ಪಡೆದು ಪ್ರಯಾಣ ಮುಂದುವರಿಸುವರು. ಪಂಜಾಬ್‌ನಲ್ಲಿ ಯಾನ ಕೈಗೊಳ್ಳುತ್ತಿರುವಾಗ ಅಲ್ಲಿನ ಗುರುದ್ವಾರಗಳಲ್ಲಿ ಉಚಿತ ತಿಂಡಿ ಹಾಗೂ ಊಟ ಸಿಗುತ್ತಿತ್ತು ಇದರಿಂದ ಹೆಚ್ಚು ಖರ್ಚಾಗಲಿಲ್ಲ ಎನ್ನುತ್ತಾರೆ ಶ್ರವಣ್. ಕೆಲವು ದಿನ ಫಾರ್ಮ್‌ಗಳಲ್ಲಿ ಕೆಲಸ ಮಾಡಿಯೂ ಅವರು ಕೊಟ್ಟ ಹಣದೊಂದಿಗೆ ಪ್ರಯಾಣ ಮುಂದುವರಿಸಿದ್ದೇನೆ ಎಂದರು.

ಕರ್ನಾಟಕದ ಧ್ವಜ ನೆರವಿಗೆ ಬಂತು

ಹಿಮಾಚಲ ಪ್ರದೇಶದಲ್ಲಿ ಪ್ರಯಾಣಿಸುತ್ತಿರುವಾಗ ಶ್ರವಣ್ ಸೈಕಲ್‌ನಲ್ಲಿ ಕರ್ನಾಟಕದ ಧ್ವಜ ಇದ್ದಿತ್ತು. ಆದರೆ ಗಾಳಿಗೆ ಸಿಲುಕಿ ಧ್ವಜ ಕಂದಕದಲ್ಲಿ ಹಾರಿಹೋದ ನಂತರ ರಾಷ್ಟ್ರ ಧ್ವಜವನ್ನು ಮುಂದಿಟ್ಟುಕೊಂಡು ಸೈಕ್ಲಿಂಗ್‌ನಲ್ಲಿ ಮುಂದುವರಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಸಾಗುತ್ತಿರುವಾಗ ಕರ್ನಾಟಕದ ಧ್ವಜ ನೋಡಿ ಜುಬೇದ್ ಅಖ್ತರ್ ಖಾನ್ ಎಂಬುವರು ಶ್ರವಣ್ ಅವರನ್ನು ಕರೆದು ಗುರು ನಮಸ್ಕಾರ ಎಂದರಂತೆ, ಶ್ರವಣ್‌ಗೆ ಅಚ್ಚರಿ ಹಾಗೂ ಖುಷಿ. ಅಖ್ತರ್ ಅವರ ತಂದೆ  ಬೆಂಗಳೂರಿನಲ್ಲಿ ಸೇನೆಯಲ್ಲಿ ಕೆಲಸ ಮಾಡಿದವರು. ಅಖ್ತರ್ ಬಹಳ ಕಾಲ ಬೆಂಗಳೂರಿನಲ್ಲಿದ್ದು ಕನ್ನಡವನ್ನು ಕಲಿತವರು. ಈಗ ತಮ್ಮೂರಿನಲ್ಲಿ ಟ್ರಾವೆಲ್ ಏಜೆನ್ಸಿಯನ್ನು ಹೊಂದಿದ್ದಾರೆ. ದೇಶದ ಯಾವುದೇ ಭಾಗಕ್ಕೆ ಹೋದರೂ ಕರ್ನಾಟಕದಲ್ಲಿ ಸಿಗುವ ಖುಷಿ ಹಾಗೂ ನೆಮ್ಮದಿ ಎಲ್ಲಿಯೂ ಇಲ್ಲ. ಬೆಂಗಳೂರಿನ ಬೀದಿ ಬೀದಿಗಳಲ್ಲಿ ಈ ಧ್ವಜವನ್ನು ನೋಡಿದ್ದೇನೆ. ನಿಮ್ಮ ಸೈಕಲ್‌ನಲ್ಲಿ ಇರುವುದನ್ನು ನೋಡಿ ನೀವು ಕನ್ನಡಿಗರೇ ಎಂಬುದು ಖಚಿತವಾಗಿ ಕರೆದೆ, ಎಂದು ಅಖ್ತರ್ ಕನ್ನಡದಲ್ಲೇ ಮಾತನಾಡಿದ್ದು ಶ್ರವಣ್ ಅವರ ಸಂಭ್ರಮವನ್ನು ಇಮ್ಮಡಿಗೊಳಿಸಿತು. ಶ್ರವಣ್‌ಗೆ ಅಗತ್ಯವಿರುವ ಎಲ್ಲ ನೆರವನ್ನು ನೀಡಿ, ಉಳಿದುಕೊಳ್ಳಲು ಅನುಕೂಲ ಮಾಡಿಕೊಟ್ಟರು.

ಪ್ರಾಯೋಜಕರ ಅಗತ್ಯವಿದೆ

ಇಂಥ ಸಾಧಕರಿಗೆ ಪ್ರಾಯೋಜಕರ ಅಗತ್ಯವಿದೆ. ಗೇರ್ ಇಲ್ಲದ ಹೀರೋ ಸ್ಪ್ರಿಂಟ್ ಸೈಕಲ್‌ನಲ್ಲಿ ಪ್ರಯಾಣಿಸುತ್ತಿರುವಾಗ ಬಿದ್ದು ಕೈ ಗಾಯಗೊಂಡರೂ ಯಾನವನ್ನು ನಿಲ್ಲಿಸದ ಶ್ರವಣ್, ಗೆಳೆಯರ ನೆರವಿನಿಂದ ಮತ್ತೊಂದು ಸೈಕಲ್ ಖರೀದಿಸಿ ಪ್ರಯಾಣ ಮುಂದುವರಿಸಿದ್ದಾರೆ. ಹಳೆಯ ಸೈಕಲನ್ನು ೫೦೦ ರೂ.ಗೆ ಮಾರಾಟ ಮಾಡಿದ್ದಾರೆ. ಶ್ರವಣ್ ಕುಮಾರ್‌ಗೆ ನೆರವು ನೀಡುವವರು 8881472918 ದೂರವಾಣಿಯನ್ನು ಸಂಪರ್ಕಿಸಬಹುದು, ಇನ್‌ಸ್ಟಾಗ್ರಾಮ್‌ನಲ್ಲಿ  travel_rangerofficial ಸಂಪರ್ಕಿಸಬಹುದು.

Related Articles