Friday, April 19, 2024

ರೇನೀಗೆ ಶಾಕ್ ನೀಡಿದ ಕರ್ನಾಟಕದ ನೈಶಾ

ಸ್ಪೋರ್ಟ್ಸ್ ಮೇಲ್ ವರದಿ

ಶ್ರೇಯಾಂಕ ರಹಿತ ಆಟಗಾರ್ತಿ ಕರ್ನಾಟಕದ ನೈಶಾ ಶ್ರೀವಾತ್ಸವ್ ಎರಡನೇ ಶ್ರೇಯಾಂಕಿತ ಆಟಗಾರ್ತಿ ರಾಜಸ್ಥಾನದ ರೆನೀ ಸಿಂಗ್ ವಿರುದ್ಧ 6-4,6-2 ನೇರ ಸೆಟ್‌ಗಳಿಂದ ಜಯ ಗಳಿಸಿ ಸಿಸಿಐ 13ನೇ ರಮೇಶ್ ದೇಸಾಯಿ ಸ್ಮಾರಕ ಅಖಿಲ ಭಾರತ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.

ಕ್ರಿಕೆಟ್ ಕ್ಲಬ್ ಆಫ್  ಇಂಡಿಯಾ (ಸಿಸಿಐ) ಆಯೋಜಿಸಿದ್ದ  ಈ ಚಾಂಪಿಯನ್‌ಷಿಪ್ ಸಿಸಿಐನ ಟೆನಿಸ್ ಅಂಗಣದಲ್ಲಿ ನಡೆದಿತ್ತು. 16 ವರ್ಷ ವಯೋಮಿತಿಯ ಈ ಚಾಂಪಿಯನ್‌ಷಿಪ್‌ನಲ್ಲಿ ಎಐಟಿಎಯಲ್ಲಿ 65ನೇ ರಾಂಕ್ ಹೊಂದಿದ್ದ ನೈಶಾ, ಬಾಲಕಿಯರ ಸಿಂಗಲ್ಸ್ ವಿಭಾಗದಲ್ಲಿ ಅಂತಿಮ 16ರ ಸುತ್ತು ತಲುಪಿ ಅಚ್ಚರಿ ಮೂಡಿಸಿದರು.
ಉತ್ತಮ ಸರ್ವ್ ಹಾಗೂ ನಿಖರ ಹೊಡೆತಗಳ ಮೂಲಕ ರೆನೀಗೆ ಯಾವುದೇ ರೀತಿಯಲ್ಲಿ ಆಟಕ್ಕೆ ಹೊಂದಿಕೊಳ್ಳಲು ನೈಶಾ ಅವಕಾಶ ನೀಡಲಿಲ್ಲ. ಭಾರತದಲ್ಲಿ ಐದನೇ ರಾಂಕ್ ಹೊಂದಿದ್ದ ರೆನೀ ಉತ್ತಮ ರೀತಿಯಲ್ಲಿ ಪೈಪೋಟಿ ನೀಡುವಲ್ಲಿ ವಿಫಲರಾದರು.
ಇದೇ ವೇಳೆ ಅಗ್ರ ಶ್ರೇಯಾಂಕಿತ ತೆಲಂಗಾಣದ ಸಿರಿಮಲ್ಲಾ ಸಂಜನಾ  6-0,6-0 ಅಂತರದಲ್ಲಿ ರಾಜಸ್ಥಾನದ ಕನುಪ್ರಿಯಾ ರಜಾವತ್ ವಿರುದ್ಧ ಜಯ ಗಳಿಸಿ ಮುಂದಿನ ಸುತ್ತು ತಲುಪಿದರು.  ಪುರುಷರ ವಿಭಾಗದಲ್ಲಿ ಅಸ್ಸಾಂನ ಉದಿತ್ ಅಗ್ರ ಶ್ರೇಯಾಂಕಿತ ಆಟಗಾರ ಗೊಗಾಯ್, ಮೊದಲ ಸುತ್ತಿನಲ್ಲೇ ಮಧ್ಯಪ್ರದೇಶದ ಆಯುಶ್ಮಾನ್ ಅರ್ಜೇರಿಯಾ ವಿರುದ್ಧ 6-3,4-6,7-5 ಅಂತರದಲ್ಲಿ ಉತ್ತಮ ಪೈಪೋಟಿ ನೀಡಿ ಸೋಲನುಭವಿಸಿದರು.
ಬಾಲಕಿಯರ ಸಿಂಗಲ್ಸ್ ವಿಭಾಗದಲ್ಲಿ ಕರ್ನಾಟಕದ ರೇಶ್ಮಾ ಮುರಾರಿ 6-1,6-1 ಅಂತರದಲ್ಲಿ ಮಹಾರಾಷ್ಟ್ರದ ರುತುಜಾ ಚಾಲ್ಕರ್ ವಿರುದ್ಧ ಜಯ ಗಳಿಸಿದರು. ಕರ್ನಾಟಕದ ದೀಪ್ಷಿಕಾ ಶ್ರೀರಾಮ್ ಹರಿಯಾಣದ ಪಾರಿ ಸಿಂಗ್ ವಿರುದ್ಧ ಸೋಲನುಭವಿಸಿದರು. ಬಾಲಕರ ಸಿಂಗಲ್ಸ್‌ನ ಎರಡನೇ ಸುತ್ತಿನಲ್ಲಿ ಕರ್ನಾಟಕದ ಕಬೀರ್ ಛಬಾರಿಯಾ 6-0,6-2 ಅಂತರದಲ್ಲಿ ಮಹಾರಾಷ್ಟ್ರದ ಸಾಬೇಸ್ ಸೋಧಿ ವಿರುದ್ಧ ಸೋನುಭವಿಸಿದರು. ಕರ್ನಾಟಕದ ನಿಹಿಲಾನ್ ಎರಿಕ್ 7-5,6-3 ಅಂತರದಲ್ಲಿ ತಮಿಳುನಾಡಿನ ನಿತೀಶ್ ಬಾಲಾಜಿ ವಿರುದ್ಧ ಜಯ ಗಳಿಸಿದರು. ರಾಜ್ಯದ ನಿಖಿಲ್ ನಿರಂಜನ್ 6-4,6-2 ಅಂತರದಲ್ಲಿ ಹರಿಯಾಣದ ಚಿರಾಗ್ ದುಹಾನ್‌ಗೆ ಶರಣಾದರು.

Related Articles