ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆಗೆ ಮುತ್ತಪ್ಪ ರೈ ಅಧ್ಯಕ್ಷ

0
393
ಸ್ಪೋರ್ಟ್ಸ್ ಮೇಲ್ ವರದಿ 

ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಪುತ್ತೂರಿನ ಮುತ್ತಪ್ಪ ರೈ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಒಂದು ಕಾಲದಲ್ಲಿ ಭೂಗತ ಜಗತ್ತಿನ ದೊರೆಯಾಗಿದ್ದ ಮುತ್ತಪ್ಪ  ರೈ, ಸಾಮಾಜಿಕ ಸುಧಾರಣೆ ಕಾರ್ಯಗಳ ಮೂಲಕ  ಈಗ ಮುಖ್ಯವಾಹಿನಿಯಲ್ಲಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವ ಅವಧಿ ಮುಗಿದಿದ್ದು, ರೈ ಹೊರತಾಗಿ ಯಾರೂ ನಾಮಪತ್ರ ಸಲ್ಲಿಸಲಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಮಾಡವುನ ನೆಟ್ಟಳ ಮನೆತನದವರಾಗಿರುವ ಅವರು ಈಗ ಬೆಂಗಳೂರಿನ ಹೊರವಲಯ ಬಿಡದಿಯಲ್ಲಿ ನೆಲೆಸಿದ್ದಾರೆ. ರೈ ಅವರಿಗೆ ಸಹೋದರ ಚಂದ್ರಶೇಖರ್ ರೈ ವ್ಯವಹಾರದಲ್ಲಿ ನೆರವಾಗುತ್ತಿದ್ದಾರೆ.
ಎಂ.ಆರ್. ಸ್ಪೋರ್ಟ್ಸ್ ಫೌಂಡೇಷನ್ ಮೂಲಕ ಹಲವಾರು ಕ್ರೀಡಾಕೂಟಗಳಿಗೆ ನೆರವಾಗುತ್ತಿರುವ ರೈ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡಾಕೂಟಗಳಿಗೆ ಪತ್ನಿ ರೇಖಾ ರೈ ಹೆಸರಿನಲ್ಲಿ  ಬಹುಮಾನಗಳನ್ನು ನೀಡುತ್ತಿದ್ದರು. ರಾಮನಗರ ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆಯ ಅಧ್ಯಕ್ಷರಾಗುವ ಮೂಲಕ ರೈ, ಕ್ರೀಡಾ ಆಡಳಿತಕ್ಕೆ ಕಾಲಿಟ್ಟರು. ಜೂನಿಯರ್ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್ ಯಶಸ್ಸಿನಲ್ಲೂ ಮುತ್ತಪ್ಪ ರೈ ಪ್ರಮುಖ ಪಾತ್ರವಹಿಸಿದ್ದರು.
 ಜಯ ಕರ್ನಾಟಕ ಸಂಸ್ಥೆಯ ಮೂಲಕ ಸಾಮಾಜಿಕ ನೆರವಿನಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ರೈ, ಬಡವರಿಗೆ ನೆರವಾಗುವ ಕೆಲಸಗಳನ್ನು ಮಾಡುತ್ತಿದ್ದಾರೆ. ಬೆಂಗಳೂರು ಟರ್ಫ್  ಕ್ಲಬ್‌ನಲ್ಲಿ ಸದಸ್ಯರಾಗಿದ್ದು, 40ಕ್ಕೂ ಹೆಚ್ಚು ಕುದುರೆಗಳ ಮಾಲೀಕರೆನಿಸಿಕೊಂಡಿದ್ದಾರೆ.