Saturday, July 27, 2024

ಕುಕ್, ರೂಟ್ ಶತಕ: ಭಾರತಕ್ಕೆ ಸೋಲುವ ಆತಂಕ

ಏಜೆನ್ಸೀಸ್ ಲಂಡನ್ 

ವಿದಾಯದ ಪಂದ್ಯದಲ್ಲಿ ಆಲಿಸ್ಟರ್ ಕುಕ್ (147) ಅಮೋಘ ಶತಕ, ಜತೆಯಲ್ಲಿ ಜಾಯ್ ರೂಟ್ (125) ಅವರ ಆಕರ್ಷಕ ಶತಕದ ನೆರವಿನಿಂದ ಇಂಗ್ಲೆಂಡ್ ತಂಡ ಭಾರತ ವಿರುದ್ಧದ ಐದನೇ ಹಾಗೂ ಅಂತಿಮ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಟೀ ವಿರಾಮಕ್ಕೆ  6 ವಿಕೆಟ್ ಕಳೆದುಕೊಂಡು 373 ರನ್‌ಗಳಿಸಿ 413 ರನ್‌ಗಳ ಬೃಹತ್ ಮುನ್ನಡೆ ಕಂಡಿದೆ.

ಕುಕ್ ಪಾಲಿಗೆ ಇದು ಕೊನೆಯ ಟೆಸ್ಟ್, ಕಳೆದ ವಾರ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಇಂಗ್ಲೆಂಡ್ ತಂಡ ಐದು ಪಂದ್ಯಗಳ ಸರಣಿಯಲ್ಲಿ ಈಗಾಗಲೇ 3-1 ಅಂತರದಲ್ಲಿ ಸರಣಿ ಗೆದ್ದುಕೊಂಡಿದ್ದು, 4-1 ಅಂತರದಲ್ಲಿ ಸರಣಿ ಗೆಲ್ಲಲು ವೇದಿಕೆ ಸಜ್ಜು ಮಾಡಿಕೊಂಡಿದೆ. ಮೂರನೇ ವಿಕೆಟ್ ಜತೆಯಾಟದಲ್ಲಿ ಕುಕ್ ಹಾಗೂ ರೂಟ್ 259 ರನ್ ಗಳಿಸಿದರು. ವಿದಾಯದ ಪಂದ್ಯದಲ್ಲಿ ಮಿಂಚಿದ ಕುಕ್, 286 ಎಸೆತಗಳನ್ನೆದುರಿಸಿ 14 ಬೌಂಡರಿಗಳ ನೆರವಿನಿಂದ 147 ರನ್ ಗಳಿಸಿ ತಂಡಕ್ಕೆ ನೆರವಾದರು. ರೂಟ್  190 ಎಸೆತಗಳನ್ನೆದುರಿಸಿ  12 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 125 ರನ್ ಗಳಿಸಿ ಬೃಹತ್ ಮೊತ್ತಕ್ಕೆ ನೆರವಾದರು.
ಮೊದಲ ಇನಿಂಗ್ಸ್‌ನಲ್ಲಿ ಕುಸಿದ ಭಾರತಕ್ಕೆ  ಬ್ಯಾಟಿಂಗ್‌ ನಲ್ಲಿ ನೆರವಾಗಿದ್ದ ರವೀಂದ್ರ ಜಡೇಜಾ ಬೌಲಿಂಗ್‌ನಲ್ಲಿ ಯಶಸ್ಸು ಕಾಣಲಿಲ್ಲ. 2 ವಿಕೆಟ್ ಗಳಿಸಿದರೂ 144 ರನ್  ನೀಡಿ ದುಬಾರಿ ಬೌಲರ್ ಎನಿಸಿದರು. ಚೊಚ್ಚಲ ಪಂದ್ಯವನ್ನಾಡುತ್ತಿರುವ ಹನುಮ ವಿಹಾರಿ ಬ್ಯಾಟಿಂಗ್‌ನಲ್ಲಿ ಅರ್ಧ  ಶತಕ ಗಳಿಸಿರುವುದಲ್ಲದೆ ಬೌಲಿಂಗ್‌ನಲ್ಲಿ  8 ಓವರ್‌ಗಳಲ್ಲಿ ಕೇವಲ 24 ರನ್ ನೀಡಿ 2 ವಿಕೆಟ್ ಗಳಿಸಿದರು.

Related Articles