Saturday, July 27, 2024

ಎಲ್ಲ ಆಯ್ತು, ಈಗ ಕ್ರೀಡಾಂಗಣದ ಭಾಗಗಳು ಬಾಡಿಗೆಗೆ!

ಹೊಸದಿಲ್ಲಿ: ದೇಶದಲ್ಲಿರುವ ಸರಕಾರಿ ಸ್ವಾಮ್ಯದ ಕಂಪೆನಿಗಳನ್ನು ಖಾಸಗಿಯವರ ಅಧೀನಕ್ಕೆ ನೀಡುತ್ತಿರುವ ಕೇಂದ್ರ ಸರಕಾರ ಈಗ ದೆಹಲಿಯಲ್ಲಿರುವ ಮೇಜರ್‌ ಧ್ಯಾನ್‌ಚಂದ್‌ ಕ್ರೀಡಾಂಗಣದ ಮೇಲೆ ಕಣ್ಣು ಹಾಕಿದೆ. ಇಲ್ಲಿ ಉಪಯೋಗಿಸದೇ ಇರುವ ಸ್ಥಳಗಳನ್ನು ಖಾಸಗಿಯವರಿಗೆ ಬಾಡಿಗೆಗೆ ನೀಡಲು ತೀರ್ಮಾನಿಸಿದೆ. Sports Authority of India (SAI) giving the Major Dhyachand Stadium spaces on rent.

ಸದ್ಯದಲ್ಲೇ BIG BBQ ಔಟ್‌ಲೆಟ್‌ ಧ್ಯಾನಚಂದ್‌ ಕ್ರೀಡಾಂಗಣದಲ್ಲಿ ಕಾಣಿಸಿಕೊಳ್ಳಲಿದೆ. ಕ್ರೀಡಾಂಗಣದಲ್ಲಿ ಬಳಸದೇ ಇರುವ ಸ್ಥಳಗಳನ್ನು ಆದಾಯಕ್ಕಾಗಿ ವಿವಿಯೋಗಿಸಿಕೊಳ್ಳುವುದು ಎಂದು ಕೇಂದ್ರ ಕ್ರೀಡಾ ಸಚಿವ ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರದ ಆಡಳಿತ ಮಂಡಳಿಯ ಮುಖ್ಯಸ್ಥ ಅನುರಾಗ್‌ ಠಾಕೂರ್‌ ಹೇಳಿದ್ದಾರೆ. ಎಂದು “ದಿ ಟ್ರಿಬ್ಯೂನ್‌” ಪತ್ರಿಕೆ ವರದಿ ಮಾಡಿದೆ. ಯಾವುದನ್ನೇ ಬಾಡಿಗೆಗೆ ನೀಡಲಿ ಆದರೆ ಹೊರಗಿನ ಆಹಾರವನ್ನು ಕ್ರೀಡಾಪಟುಗಳು ಸೇವಿಸಬಾರದು ಎಂಬ ನಿಯಮವಿದೆ. ಸರಕಾರದ ಈ ಹಣ ಮಾಡುವ ಯೋಜನೆಯಿಂದಾಗಿ ಕ್ರೀಡಾಪಟುಗಳಿಗೆ ನಿಷೇಧಿತ ಔಷಧಗಳು ಸುಲಭವಾಗಿ ಸಿಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.  ಪಂದ್ಯಗಳು ನಡೆಯದೇ ಇರುವಾಗ ಎಷ್ಟೋ ತಿಂಗಳ ಕಾಲ ಕ್ರೀಡಾಂಗಣವೂ ಖಾಲಿ ಇರುತ್ತದೆ ಈ ಸಂದರ್ಭದಲ್ಲಿ ಅವುಗಳನ್ನು ಯಾವುದಾದರೂ ಬಟ್ಟೆ ವ್ಯಾಪಾರಿಗಳು, ಪೀಠೋಪಕರಣ ಕಂಪೆನಿಗೆ ಬಾಡಿಗೆಗೆ ನೀಡಬಹುದು ಏಕೆಂದರೆ ಹಣ ಸಿಗುತ್ತದೆ. ಮೇಜರ್‌ ಧ್ಯಾನ್‌ಚಂದ್‌ ಕ್ರೀಡಾಂಗಣದ ಗೇಟ್‌ ನಂ.5 ಮತ್ತು ಗೇಟ್‌ ನಂ.2 ಸಮೀಪವಿರುವ ಭಾಗವನ್ನು ಎಂಎಸ್‌ ಬಿಗ್‌ ಬಿಬಿಕ್ಯೂಗೆ 1.32 ಕೋಟಿ ರೂ. ಮೂಲ ಬೆಲೆಗೆ ನೀಡಲಾಗಿದೆ.

ಈಜು ಕೊಳವೂ ಬಾಡಿಗೆಗೆ: ಅತ್ಯಂತ ಶೋಚನೀಯ ಸ್ಥಿತಿ ಎಂದರೆ ಇಲ್ಲಿರುವ ಈಜು ಕೊಳಗಳನ್ನೂ ಖಾಸಗಿಯವರಿಗೆ ನಡೆಸಲು ನೀಡಲಾಗಿದೆ. ರಾಮಕೃಷ್ಣ ಎಂಟರ್‌ಪ್ರೈಸಸ್‌ ಎಂಬ ಸಂಸ್ಥೆಗೆ ತಿಂಗಳಿಗೆ 1.27ಲಕ್ಷ ರೂ.ಗಳ ಬಾಡಿಗೆಗೆ ನೀಡಲಾಗಿದೆ. ಇತಿಹಾಸ ಪ್ರಸಿದ್ಧ ಡಾ, ಶ್ಯಾಮ್‌ಪ್ರಸಾದ್‌ ಮುಖರ್ಜಿ ಈಜು ಸಂಕೀರ್ಣ, ಇದು ನ್ಯಾಷನಲ್‌ ಸೆಂಟರ್‌ ಫಾರ್‌ ಎಕ್ಸಲೆನ್ಸಿ (NCOE) ಯಾಗಿದ್ದು ಇನ್ನು ಮುಂದೆ ದೇವಾ ಸ್ಮಿಮಿಂಗ್‌ ಇನ್‌ಸ್ಟಿಟ್ಯೂಟ್‌ ನೋಡಿಕೊಳ್ಳಲಿದೆ. ತಿಂಗಳಿಗೆ 3.25 ಲಕ್ಷ ರೂ. ಬಾಡಿಗೆ ಸಿಗುತ್ತದೆ.

ಕ್ರೀಡಾಂಗಣದಲ್ಲಿ ಎಲ್ಲ ಭಾಗವೂ ನಿತ್ಯವೂ ಉಪಯೋಗಕ್ಕೆ ಬರುವುದಿಲ್ಲ ನಿಜ. ಹಾಗಂತ ಅಲ್ಲಿ ಉಪಯೋಗಕ್ಕೆ ಬಾರದ ಸ್ಥಳವನ್ನು ಬಾಡಿಗೆಗೆ ನೀಡುವ ಕ್ರಮವನ್ನು ಇದುವರೆಗೂ ಯಾವುದೇ ಸರಕಾರ ಅಥವಾ ಕ್ರೀಡಾ ಸಚಿವರು ಯೋಚಿಸಿಲ್ಲ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದ ಸುತ್ತಲೂ ಹಲವು ಕಡೆ ಖಾಲಿ ಸ್ಥಳವಿದೆ. ಕೇಂದ್ರ ಕ್ರೀಡಾ ಸಚಿವರು ಯೋಚಿಸಿದಂತೆ ಮಾಡುವುದಾದರೆ ಅಲ್ಲಿ ಅಂಗಡಿ ಕೋಣೆಗಳನ್ನು ಕಟ್ಟಿ ಬಾಡಿಗೆ ನೀಡುವುದೇ ಸೂಕ್ತ.

NCOE ಬೆಂಗಳೂರಿಗೆ ಶಿಫ್ಟ್‌!

ಮೇಜರ್‌ ಧ್ಯಾನ್‌ಚಂದ್‌ ಕ್ರೀಡಾಂಗಣದ ನಿರ್ವಹಣೆಗೆ ವರ್ಷಕ್ಕೆ ಅಂದಾಜು 75 ಕೋಟಿ ರೂ. ತಗಲುತ್ತದೆ. ಕಾಮನ್‌ವೆಲ್ತ್‌ ಕ್ರೀಡಾಕೂಟದ ವೇಳೆ 262 ಕೋಟಿ ರೂ. ವೆಚ್ಚದಲ್ಲಿ ನವೀಕರಣಗೊಂಡ ಕ್ರೀಡಾಂಗಣ. ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡದೆ ಅಲ್ಲಿಂದ ಕ್ರೀಡಾಪಟುಗಳನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗುತ್ತಿದೆ. ರಾಷ್ಟ್ರೀಯ ರಾಜಧಾನಿಗೆ ಮುಕುಟದಂತಿದ್ದ ಧ್ಯಾನ್‌ಚಂದ್‌ ಕ್ರೀಡಾಂಗಣದಲ್ಲಿ ಮುಂದಿನ ದಿನಗಳಲ್ಲಿ ಕ್ರೀಡಾಪಟುಗಳ ಇಲ್ಲದ ಕಾರಣ ಹೇಳಿ ಯಾವುದಾದರೂ ಬಿಲ್ಡರ್‌ಗಳಿಗೆ ಮಾರಿದರೆ ಅಚ್ಚರಿಪಡಬೇಕಾಗಿಲ್ಲ. ಇವೆಲ್ಲ ಪೀಠಿಕೆ ಅಷ್ಟೆ.

Related Articles