Thursday, April 25, 2024

ರಾಷ್ಟ್ರೀಯ ಸ್ಪೋರ್ಟ್‌ ಕ್ಲೈಮಿಂಗ್‌ಗೆ ಭವ್ಯ ಚಾಲನೆ

ಉತ್ತರಕಾಶಿ:

26ನೇ ರಾಷ್ಟ್ರೀಯ ಸ್ಪೋರ್ಟ್‌ ಕ್ಲೈಮಿಂಗ್‌ ಚಾಂಪಿಯನ್‌ಷಿಪ್‌ಗೆ ಉತ್ತರಾಖಂಡ್‌ ಕ್ರೀಡಾ ಸಚಿವೆ ರೇಖಾ ಆರ್ಯ ಅವರು ಇಲ್ಲಿನ ನೆಹರು ಇನ್‌ಸ್ಟಿಟ್ಯೂಟ್‌ ಆಫ್‌ ಮೌಂಟೆನೇರಿಂಗ್‌ನಲ್ಲಿ ಸಂಭ್ರದಮದ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಭಾರತೀಯ ಪರ್ವತಾರೋಹಣ ಸಂಸ್ಥೆಯ ಮೊದಲ ಮಹಿಳಾ ಅಧ್ಯಕ್ಷೆ ಪ್ರೊ. ಹರ್ಷವಂತಿ ಬಿಸ್ಟ್‌ ಹಾಗೂ ಭಾರತದ ಮೊದಲ ಮಹಿಳಾ ಎವರೆಸ್ಟ್‌ ಆರೋಹಿ ಬಚೇಂದ್ರಿ ಪಾಲ್‌ ಅವರ ಸಾಧನೆಯನ್ನು ಗುಣಗಾನ ಮಾಡಿದರು.

ಸ್ವಾಗತ ಭಾಷಣ ಮಾಡಿದ ಹರ್ಷವಂತಿ ಬಿಸ್ಟ್‌, ಉತ್ತರಾಖಂಡ್‌ನಲ್ಲಿ ಕ್ರೀಡಾ ಬೆಳವಣಿಗೆಗೆ ಹಾಗೂ ಸ್ಪೋರ್ಟ್‌ ಕ್ಲೈಮಿಂಗ್‌ ಕ್ರೀಡೆಗೆ ಪ್ರೋತ್ಸಾಹಿಸಿದ ಕ್ರೀಡಾ ಸಚಿವರಿಗೆ ಧನ್ಯವಾದ ಹೇಳಿದರು.

ರಾಷ್ಟ್ರೀಯ ಸ್ಪೋರ್ಟ್‌ ಕ್ಲೈಮಿಂಗ್‌ ಸಮಿತಿಯ ಅಧ್ಯಕ್ಷರಾದ ಕರ್ನಾಟಕದ ಕೀರ್ತಿ ಪಾಯ್ಸ್‌ ಅವರು ಮಾತನಾಡಿ, ಕ್ರೀಡಾ ಸಚಿವರ ನೆರವನ್ನು ಶ್ಲಾಘಿಸಿದರು, ಮತ್ತು ಮುಂದಿನ ಒಂದು ವರ್ಷದ ಅವಧಿಯಲ್ಲಿ ಭಾರತೀಯ ಮೌಂಟನೇರಿಂಗ್‌ ಸಂಸ್ಥೆ ಕನಿಷ್ಟಪಕ್ಷ ಹತ್ತು ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳನ್ನು ನಡೆಸುವುದಾಗಿ ಭರವಸೆ ನೀಡಿದರು. ಪ್ರಧಾನಿ ನರೇಂದ್ರ ಮೋದಿಯವರ ಆತ್ಮನಿರ್ಭರ ಭಾರತ ಯೋಜನೆಯಿಂದ ಸ್ಫೂರ್ತಿ ಪಡೆದು, 26ನೇ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನ್ನು ಸರಕಾರದ ನೆರವು ಪಡೆಯದೆ ಐಎಂಎಫ್‌ ತನ್ನ ಸ್ವಂತ ವೆಚ್ಚದಲ್ಲಿ ಆಯೋಜಿಸುತ್ತಿದ್ದು, ಇದಕ್ಕೆ ನೆರವು ನೀಡಿದ ನೆಹರು ಇನ್‌ಸ್ಟಿಟ್ಯೂಟ್‌ ಆಫ್‌ ಮೌಂಟೆನೇರಿಂಗ್‌ ಧನ್ಯವಾದ ತಿಳಿಸಿದರು.

ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ಸ್ಪರ್ಧೆಗಳನ್ನು ನಡೆಸಲಾಗುತ್ತಿದ್ದು, ಫಲಿತಾಂಶಗಳು ಆನ್‌ಲೈನ್‌ನಲ್ಲೂ ಪ್ರಸಾರ ಮಾಡಲಾಗುತ್ತಿದೆ ಎಂದರು.

Related Articles