Saturday, July 27, 2024

ಏಷ್ಯನ್‌ ಪ್ಯಾರಾ ಗೇಮ್ಸ್‌ನಲ್ಲಿ ಮಿಂಚಿದ ಕನ್ನಡಿಗ ಜಿಲ್ಲಾಧಿಕಾರಿ

ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್‌ ಪ್ಯಾರಾ ಗೇಮ್ಸ್‌ನಲ್ಲಿ ಕನ್ನಡಿಗ ಜಿಲ್ಲಾಧಿಕಾರಿ ಸುಹಾಸ್‌ ಲಾಲಿನಕೆರೆ ಯತಿರಾಜ್‌ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. Indian IAS officer won the Gold medal at Asian Para Games

ಉತ್ತರ ಪ್ರದೇಶದಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಸುಹಾಸ್‌ ಶುಕ್ರವಾರ ನಡೆದ ಬ್ಯಾಡ್ಮಿಂಟನ್‌ ಫೈನಲ್‌ ಪಂದ್ಯದಲ್ಲಿ ಜಯ ಗಳಿಸಿ ಚಿನ್ನದ ಸಾಧನೆ ಮಾಡುವ ಮೂಲಕ ಭಾರತಕ್ಕೆ ಕೀರ್ತಿ ತಂದಿದ್ದಾರೆ. ಏಷ್ಯನ್‌ ಪ್ಯಾರಾ ಬ್ಯಾಡ್ಮಿಂಟನ್‌ನಲ್ಲಿ ಚಿನ್ನದ ಪದಕ ಗೆದ್ದಿರುವ ಸುಹಾಸ್‌‌ ನಂತರ ಜಕಾರ್ತದಲ್ಲಿ ನಡೆದ ಏಷ್ಯನ್‌ ಪ್ಯಾರಾ ಗೇಮ್ಸ್‌ನಲ್ಲಿ ಕಂಚಿನ ಪದಕದ ಸಾಧನೆ ಮಾಡಿದ್ದರು. ಟೋಕಿಯೋದಲ್ಲಿ ನಡೆದ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕದಿಂದ ವಂಚಿತರಾಗಿ ಬೆಳ್ಳಿಗೆ ತೃಪ್ತಿಪಟ್ಟಿದ್ದರು.

ಮೂಲತಃ ಹಾಸನ ಜಿಲ್ಲೆಯ ಲಾಲಿನಕೆರೆಯವರಾದ ಸುಹಾಸ್‌ ಸುರತ್ಕಲ್‌ನ ರಾಷ್ಟ್ರೀಯ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಪದವಿ ಮುಗಿಸಿದ ನಂತರ ಕೆಲವು ವರ್ಷಗಳ ಕಾಲ ಬೆಂಗಳೂರಿನ ಸ್ಯಾಪ್‌ಲ್ಯಾಬ್ಸ್‌ ಕಂಪೆನಿಯಲ್ಲಿ ಕೆಲಸ ಮಾಡಿದ್ದರು. ನಂತರ 2007ರ ಐಎಎಸ್‌ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಜಿಲ್ಲಾಧಿಕಾರಿಯಾಗಿ ನೇಮಕಗೊಂಡರು.ಸುಹಾಸ್‌ ಹಾಸನ ಜಿಲ್ಲೆಯ ವಿನೋಬ ನಗರದ ನಿವಾಸಿಯಾಗಿದ್ದು, ಮೂಲತಃ ಅಲ್ಲಿಯ ಲಾಲಿನಕೆರೆಯವರು. ಚಿಕ್ಕಂದಿನಲ್ಲಿ ಸಾಮಾನ್ಯರೊಂದಿಗೆ ಬ್ಯಾಡ್ಮಿಂಟನ್‌ ಆಡುತ್ತಿದ್ದರು. ನಂತರ ವಿಶೇಷ ಚೇತನ ವಿಭಾದಲ್ಲಿ ಸ್ಪರ್ಧಿಸಿ ಈಗ ಜತ್ತಿನಲ್ಲಿ 2ನೇ ರಾಂಕ್‌ ಆಟಗಾರರೆನಿಸಿದ್ದಾರೆ. ಸದ್ಯ ಉತ್ತರ ಪ್ರದೇಶದ ಗೌತಮಬುದ್ಧ ನಗರದಲ್ಲಿ ಜಿಲ್ಲಾಧಿಕಾರಿಯಾಗಿದ್ದಾರೆ.

ಸುಹಾಸ್‌ ಅವರ ಪತ್ನಿ ರಿತು ಅವರು ಕೂಡ ಉತ್ತರ ಪ್ರದೇಶದ ಸರಕಾರದಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಒಬ್ಬ ಐಎಎಸ್‌ ಅಧಿಕಾರಿಯಾಗಿ ಜಾಗತಿಕ ಕ್ರೀಡೆಯಲ್ಲಿ ಯಶಸ್ಸು ಕಾಣುವುದು ಅಪೂರ್ವ. ಈ ಸಾಧನೆಗಾಗಿ ಕೇಂದ್ರ ಸರಕಾರ ಸುಹಾಸ್‌ ಅವರಿಗೆ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಿದೆ. ಉತ್ತರ ಪ್ರದೇಶ ಸರಕಾರದ ಉನ್ನತ ಪ್ರಶಸ್ತಿಗಳು ಸುಹಾಸ್‌ ಅವರಿಗೆ ಸಂದಿವೆ.

Related Articles