Saturday, February 24, 2024

ಮಹಾಜಾಜ ಟ್ರೋಫಿಯಲ್ಲಿ ಶತಕ ಸಿಡಿಸಿದ ಮಾದರಿ ಕ್ರಿಕೆಟಿಗ ರೋಹನ್‌ ಪಾಟೀಲ್‌

ಸೋಮಶೇಖರ್‌ ಪಡುಕರೆ, ಬೆಂಗಳೂರು

ಮೈಸೂರಿನಲ್ಲಿ ನಡೆಯುತ್ತಿರುವ ಮಹಾರಾಜ ಟ್ರೋಫಿಯಲ್ಲಿ ಯುವ ಆಟಗಾರ ರೋಹನ್‌ ಪಾಟೀಲ್‌ ಮೊದಲ ಶತಕ ಸಿಡಿದಿ ಪಂದ್ಯ ಗೆಲ್ಲಿಸಿಕೊಡುವುದರ ಜೊತೆಯಲ್ಲಿ ಕೋಟ್ಯಂತರ ಕ್ರಿಕೆಟ್‌ ಅಭಿಮಾನಿಗಳ ಹೃದಯ ಗೆದ್ದರು. ಈಗಾಗಲೇ ಜೂನಿಯರ್‌ ಕ್ರಿಕೆಟ್‌ನಲ್ಲಿ 60ಕ್ಕೂ ಹೆಚ್ಚು ಶತಕ ಸಿಡಿಸಿರುವ ಈ ಯುವ ಆಟಗಾರ ಒಬ್ಬ ಮಾದರಿ ಕ್ರಿಕೆಟಿಗ, ಹಿತಮಿತ ಮೃದು ವಚನದ ಈ ಆಟಗಾರ ಯುವ ಆಟಗಾರರಿಗೆ ಮಾದರಿ ಎನಿಸಿದ್ದಾರೆ.

ಕ್ರೀಡೆಗೋಸ್ಕರ ಓದಲಾಗಲಿಲ್ಲ, ಓದಿನಿಂದಾಗಿ ಕ್ರೀಡೆಯಲ್ಲಿ ಮುಂದುವರಿಯಲಾಗಲಿಲ್ಲ ಎಂದು ಹೇಳುವವರಿಗೆ ರೋಹನ್‌ ಆದರ್ಶ. ಎಡಗೈ ಆಟಗಾರ ರೋಹನ್‌ ಪಾಟೀಲ್‌ ತಂದೆ ಆನಂದ್‌ ಮೂಲತಃ ಹಾವೇರಿ ಜಿಲ್ಲೆಯ ಹಿರೆಕೆರೂರಿನವರು. ತಾಯಿ ಚಂದ್ರಕಲಾ ಪಾಟೀಲ್‌ ದಾವಣಗೆರೆಯವರು. ತಂದೆ ಈ ಹಿಂದೆ ಅಂಪೈರ್‌ ಆಗಿದ್ದ ಕಾರಣ ಕ್ರಿಕೆಟ್‌ನಲ್ಲಿ ತೊಡಗಿಸಿಕೊಳ್ಳುವಂತಾಯಿತು ಎನ್ನುತ್ತಾರೆ ರೋಹನ್‌ ಪಾಟೀಲ್‌.

ಮೈಸೂರಿನಿಂದ sportsmail ಜತೆ ಮಾತನಾಡಿದ ರೋಹನ್‌ ಪಾಟೀಲ್‌ ಕ್ರಿಕೆಟ್‌ ಅಂಗಣದಲ್ಲಿ ಸಾಗಿ ಬಂದ ಹಾದಿಯನ್ನೊಮ್ಮೆ ಹಿಂದಿರುಗಿ ನೋಡಿದ್ದಾರೆ.

60 ಶತಕ, 2 ದ್ವಿಶತಕ: ಸರ್‌ ಸಯ್ಯದ್‌ ಕ್ರಿಕೆಟ್‌ ತಂಡದಲ್ಲಿ ಲೀಗ್‌ ಪಂದ್ಯಗಳು ಹಾಗೂ ದೇಶೀಯ ಕ್ರಿಕೆಟ್‌ನಲ್ಲಿ ನಡೆಯುವ ಇತರ ಟೂರ್ನಿಗಳಲ್ಲಿ ವಿವಿಧ ಹಂತದ ವಯೋಮಿತಿಗಳಲ್ಲಿ ಆಡಿರುವ ರೋಹನ್‌ ಇದುವರೆಗೂ 60ಕ್ಕೂ ಹೆಚ್ಚು ಶತಕ ಹಾಗೂ 2 ದ್ವಿಶತಕ ಗಳಿಸಿದ್ದಾರೆ. “ಸರ್‌ ಸಯ್ಯದ್‌ ಕ್ರಿಕೆಟ್‌ ಕ್ಲಬ್‌ನಲ್ಲಿ ರಾಹುಲ್‌ ಮೆನನ್‌ ಕೋಚ್‌ ಹಾಗೂ ನಾಯಕರಾಗಿ ಕಾರ್ಯನಿರ್ವಹಿದುತ್ತಿದ್ದಾರೆ. ಅವರು ಉತ್ತಮ ರೀತಿಯಲ್ಲಿ ತರಬೇತಿ ನೀಡುತ್ತಾರೆ ಮಾತ್ರವಲ್ಲ, ಅವರು ಹೇಗೆ ಆಡಬೇಕೆಂದು ಒಬ್ಬ ಆಟಗಾರನಾಗಿ ಲೀಗ್‌ ಪಂದ್ಯಗಳಲ್ಲಿ ಆಡಿ ತೋರಿಸುತ್ತಾರೆ. ಈ ರೀತಿಯ ತರಬೇತಿ ನನಗೆ ಒಬ್ಬ ಕ್ರಿಕೆಟಗಿನಾಗಿ ಬೆಳೆಯಲು ನೆರವಾಯಿತು,” ಎಂದು ರೋಹನ್‌ ತಮ್ಮ ಗುರುವನ್ನು ಸ್ಮರಿಸಿದ್ದಾರೆ.

ಮಾದರಿ ಕ್ರಿಕೆಟಿಗ: ರೋಹನ್‌ ಈಗ ದಾವಣಗೆರೆಯಲ್ಲಿರುವ ಕುವೆಂಪು ವಿಶ್ವವಿದ್ಯಾನಿಲಯದ ಅಧ್ಯಯನ ಕೇಂದ್ರದಲ್ಲಿ ಬಿಕಾಂ ಪದವಿ ಅಧ್ಯಯನ ಮಾಡುತ್ತಿದ್ದಾರೆ. ಕಾಲೇಜಿಗೆ ಯಾಕೆ ಹೋಗಿಲ್ಲ ಎಂದು ಕೇಳಿದ ಪ್ರಶ್ನೆಗೆ ಅವರು ನೀಡಿದ ಉತ್ತರ ಅವರಲ್ಲಿ ಕ್ರಿಕೆಟ್‌ ಆಟದ ಬಗ್ಗೆ ಇರುವ ಅದಮ್ಯ ಕಾಳಜಿಯನ್ನು ತಿಳಿಸುತ್ತದೆ, “ಎಸ್‌ಎಸ್‌ಎಲ್‌ಸಿ ವರೆಗೆ ಶಾಲೆಗೆ ಹೋಗುತ್ತಿದ್ದೆ. ಆ ನಂತರ ಕಾಲೇಜಿಗೆ ಹೋದರೆ ಕ್ರಿಕೆಟ್‌ನಲ್ಲಿ ಮುಂದುವರಿಯಲು ಕಷ್ಟವಾಗುತ್ತದೆ ಎಂದು ತಿಳಿದು ತಂದೆಯವರಲ್ಲಿ ಕರೆಸ್ಪಾಂಡೆಂಟ್‌ ಶಿಕ್ಷಣವನ್ನು ಮಾಡುವುದಾಗಿ ಕೇಳಿಕೊಂಡೆ. ಅದಕ್ಕೆ ಅವರು ಒಪ್ಪಿದರು. ನನ್ನ ಕ್ರಿಕೆಟ್‌ ಆಟದ ಬಗ್ಗೆ ಅವರಿಗೆ ನಂಬಿಕೆ ಇದ್ದಿತ್ತು. ಈ ಕ್ಷೇತ್ರದಲ್ಲಿ ಏನಾದರೂ ಸಾಧಿಸಿಯಾನು ಎಂಬ ನಂಬಿಕೆಯೊಂದಿಗೆ ದೂರದ ಶಿಕ್ಷಣ ಮಾಡಲು ಒಪ್ಪಿದರು. ಇದರಿಂದ ನನಗೆ ಕ್ರಿಕೆಟ್‌ ಮೇಲೆ ಹೆಚ್ಚಿನ ಗಮನ ಹರಿಸಲು ಸಾಧ್ಯವಾಯಿತು. ಆ ನಿರಂತರ ಶ್ರಮವೇ ಶತಕವಾಗಿ ರೂಪುಗೊಂಡಿತು. ಮುಂದಿನ ದಿನಗಳಲ್ಲಿ ಇನ್ನೂ ಉತ್ತಮವಾಗಿ ಆಡುತ್ತೇನೆಂಬ ಆತ್ಮವಿಶ್ವಾಸ ಹೆಚ್ಚಿದೆ,” ಎಂದರು.

ತಂದೆಯೇ ಸ್ಫೂರ್ತಿ:

ರೊಹನ್‌ ಪಾಟೀಲ್‌ ಅವರ ತಂದೆ ಆನಂದ್‌ ಪಾಟೀಲ್‌ ಅವರು ಕ್ರಿಕೆಟಿಗರಲ್ಲ. ಆದರೆ ರಾಜ್ಯದ ಲೀಗ್‌ ಪಂದ್ಯಗಳಲ್ಲಿ ಅಂಪೈರ್‌ ಆಗಿ ಕೆಲಸ ಮಾಡಿದ್ದರು. ತಂದೆಯ ಕ್ರಿಕೆಟ್‌ ಪ್ರೀತಿಯೇ ತನಗೆ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳಲು ಕಾರಣವಾಯಿತು, ಅವರೇ ಸ್ಫೂರ್ತಿ ಎನ್ನುತ್ತಾರೆ. ರೋಹನ್‌. “ಅಪ್ಪ ಅಂಪೈರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಒಂದೆರಡು ಬಾರಿ ಅವರೊಂದಿಗೆ ಕ್ರಿಕೆಟ್‌ ಅಂಗಣಕ್ಕೆ ಹೋಗಿದ್ದೇ ಆ ಭೇಟಿಯೇ ನನಗೆ ಕ್ರಿಕೆಟ್‌ ಬಗ್ಗೆ ಆಸಕ್ತಿ ಬರಲು ಕಾರಣವಾಯಿತು. ನನ್ನೆಲ್ಲ ಯಶಸ್ಸಿನ ಹಿಂದೆ ಅವರ ಅಪಾರ ತ್ಯಾಗವಿದೆ,” ಎನ್ನುತ್ತಾರೆ ರೋಹನ್‌.

ಆರಂಭಿಕ ಆಟಗಾರ: ಮೈಸೂರು ವಾರಿಯರ್ಸ್‌ ವಿರುದ್ಧದ ಪಂದ್ಯದಲ್ಲಿ 112* ರನ್‌ ಸಿಡಿಸದ ರೋಹನ್‌ ಕ್ರಿಕೆಟ್‌ ಅಭಿಮಾನಿಗಳಲ್ಲಿ ಹೊದ ಭರವಸೆಯನ್ನು ಮೂಡಿಸಿದ್ದಾರೆ. “ನಾನು ಆರಂಭಿಕ ಆಟಗಾರ, ತಂಡದ ಇನ್ನೋರ್ವ ಆಟಗಾರ ದೇವದತ್ತ ಪಡಿಕ್ಕಲ್‌ ಅವರಿಗೆ ಹೊಟ್ಟೆನೋವು ಇದ್ದ ಕಾರಣ ನನ್ನನ್ನು ಓಪನರ್‌ ಆಗಿ ಕಳುಹಿಸಿದರು. ನಾಯಕ ಮನೀಶ್‌ ಪಾಂಡೆ ಜೊತೆ ನಾನು ಇದುವರೆಗೂ ಆಡಿರಲಿಲ್ಲ. ಅವರು ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡಿದ್ದಾರೆ. ಒಬ್ಬ ನಾಯಕನಲ್ಲಿ ಇರಬೇಕಾದ ಅದ್ಭುತ ಗುಣಗಳು ಅವರಲ್ಲಿದೆ. ಹಿತಮಿತ ಮೃದು ವಚನ. ಎರಡನೇ ಪಂದ್ಯದಲ್ಲಿ ಮನೀಶ್‌ ಪಾಂಡೆ ಅವರೊಂದಿಗೆ ಆಡುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ,” ಎಂದು ನಾಯಕನ ಬಗ್ಗೆ ನುಡಿದರು.

ಎರಡು ವಿಭಿನ್ನ ಇನ್ನಿಂಗ್ಸ್‌: ಮೊದಲ ಪಂದ್ಯದಲ್ಲಿ ಶತಕ ಸಿಡಿಸದ ರೋಹನ್‌ ಪಾಟೀಲ್‌ ಎರಡನೇ ಇನ್ನಿಂಗ್ಸ್‌ನಲ್ಲಿ ತಾಳ್ಮೆಯ ಅರ್ಧ ಶತಕ ಗಳಿಸಿದರು. ಅವರೇ ಹೇಳುವಂತೆ ಎರಡೂ ಇನ್ನಿಂಗ್ಸ್‌ಗಳ ಬ್ಯಾಟಿಂಗ್‌ ಕಂಡಿಷನ್‌ ವಿಭಿನ್ನವಾಗಿತ್ತು. “ಎರಡೂ ಇನ್ನಿಂಗ್ಸ್‌ ಬ್ಯಾಟಿಂಗ್‌ ದೃಷ್ಟಿಯಿಂದ ಭಿನ್ನವಾಗಿದೆ. ಶತಕ ಸಿಡಿಸಿದ ಇನ್ನಿಂಗ್ಸ್‌ನಲ್ಲಿ ಬಂದ ಎಸೆತಗಳನ್ನೆಲ್ಲ ಹೊಡೆಯಲು ಮನಸ್ಸು ಮಾಡುತ್ತಿದ್ದೆ, ಅವು ಹೊಡೆಯಲು ಅನುಕೂಲ ಕೂಡ ಆಗಿದ್ದವು. ಅರ್ಧ ಶತಕ ಸಿಡಿಸಿದ ಇನ್ನಿಂಗ್ಸ್‌ನಲ್ಲಿ ಸ್ಲೋ ಪಿಚ್‌. ಬ್ಯಾಟಿಂಗ್‌ ಸ್ನೇಹಿ ಪಿಚ್‌ ಆಗಿರಲಿಲ್ಲ. ಚೆಂಡಿಗೆ ತಕ್ಕಂತೆ ಆಡಬೇಕಾಗಿತ್ತು,” ಎಂದರು. ವಿದ್ಯಾಧರ ಪಾಟೀಲ್‌ ಅವರ ಒಂದೇ ಎಸೆತದಲ್ಲಿ 32 ರನ್‌ ಸಿಡಿಸಿದ ಬಗ್ಗೆ ಮಾತನಾಡಿದ ರೋಹನ್‌, “ಅದು ಆತ್ಮವಿಶ್ವಾಸದ ಹೊಡೆತ. ಮೊದಲ ಸಿಕ್ಸರ್‌ ಹೊಡೆದ ಕೂಡಲೇ ಆತ್ಮವಿಶ್ವಾಸ ಹೆಚ್ಚಿತು. ನೇರ ಪ್ರಸಾರವಾಗುತ್ತಿರುವ ಪಂದ್ಯದಲ್ಲಿ ನಾನಾಡುತ್ತಿರುವುದು ಎರಡನೇ ಪಂದ್ಯ, ನನ್ನ ಫೇವರಿಟ್‌ ಶಾಟ್‌ಗಳಿಗೆ ಪೂರಕವಾಗಿ ಅವರು ಬೌಲಿಂಗ್‌ ಮಾಡಿದರು, ಯಾವುದನ್ನೂ ತಪ್ಪಿಸಿಕೊಂಡಿಲ್ಲ ಹಾಗಾಗಿ ಸಿಕ್ಸರ್‌ ಮತ್ತು ಬೌಂಡರಿ ಸಿಡಿಸಿದೆ,” ಎಂದರು.

ನಾನು ಕ್ರಿಕೆಟ್‌ ಫಾಲೋ ಮಾಡೊಲ್ಲ!!!:

ಕ್ರಿಕೆಟ್‌ ಆಟಗಾರರೆಲ್ಲ ಕ್ರಿಕೆಟ್‌ ಪಂದ್ಯಗಳನ್ನು ನೋಡೊಲ್ಲ. ಅವರಲ್ಲಿ ರೋಹನ್‌ ಪಾಟೀಲ್‌ ಕೂಡ ಒಬ್ಬರು.‌ ಅವರು ತಮ್ಮ ಫೇವರಿಟ್‌ ಆಟಗಾರರು ಆಡುತ್ತಿದ್ದರೆ, ಅದೂ ಆ ಸಮಯದಲ್ಲಿ ಮನೆಯಲ್ಲಿದ್ದರೆ ಮಾತ್ರ ಪಂದ್ಯ ವೀಕ್ಷಿಸುತ್ತಾರಂತೆ, “ನಾನು ಕ್ರಿಕೆಟ್‌ ಫಾಲೋವರ್‌ ಅಲ್ಲ. ಆದರೆ ನನ್ನ ಫೇವರಿಟ್‌ ಆಟಗಾರರು ಆಡುತ್ತಿದ್ದರೆ ನೋಡುತ್ತೇನೆ. ಅವರು ಔಟ್‌ ಆದ ಕೂಡಲೇ ಮತ್ತೆ ನನ್ನ ಕೆಲಸದ ಕಡೆ ಹೋಗುತ್ತೇನೆ. ಉದಾಹರಣೆಗೆ ಭಾರತ ಆಡುವಾಗ ರೋಹಿತ್‌ ಶರ್ಮಾ ಮತ್ತು ವಿರಾಟ್‌ ಕೊಹ್ಲಿಯ ಆಟ ನೋಡುತ್ತೇನೆ. ಇಂಗ್ಲೆಂಡ್‌ ತಂಡದಲ್ಲಿ ಜಾಯ್‌ ರೂಟ್‌, ನ್ಯೂಜಿಲೆಂಡ್‌ನ ಡಿವೋನ್‌ ಕಾನ್ವೆ, ಆಸ್ಟ್ರೇಲಿಯಾ ಸ್ಟೀವನ್‌ ಸ್ಮಿತ್‌ ಇವರ ಆಟಗಳನ್ನು ನೋಡುತ್ತೇನೆ, ನೇರಪ್ರಸಾರ ನೋಡಲಾಗದಿದ್ದರೂ ಹೈಲೈಟ್ಸ್‌ ಆದರೂ ನೋಡುತ್ತೇನೆ,” ಎಂದರು.

ರಣಜಿಗೆ?….ಗೊತ್ತಿಲ್ಲ!!!

ಜೂನಿಯರ್‌ ಕ್ರಿಕೆಟ್‌ನಲ್ಲಿ, ಲೀಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿರುವ ರೋಹನ್‌ ಪಾಟೀಲ್‌ ರಣಜಿಗೆ ಯಾವಾಗ ಪ್ರವೇಶಿಸಬಹುದು? ಎಂಬ ಪ್ರಶ್ನೆ ಕೇಳಿದರೆ ಒಂದೇ ಉತ್ತರ ಸಿಕ್ಕಿತು. …”ಗೊತ್ತಿಲ್ಲ ಸರ್‌…”.(ಮತ್ತು ನಗು) “ಇನ್ನೂ ಉತ್ತಮ ರೀತಿಯಲ್ಲಿ ಪ್ರದರ್ಶನ ತೋರಬೇಕು. ಕಠಿಣ ಶ್ರಮ ವಹಿಸಬೇಕು,” ಎಂದಷ್ಟೇ ರೋಹನ್‌ ಉತ್ತರಿಸಿದರು. “ಕಳೆದ ವರ್ಷ ವಿಜಯ ಹಜಾರೆ ಮತ್ತು ಮುಷ್ತಾಕ್‌ ಅಲಿ ಸಂಭಾವ್ಯರ ಪಟ್ಟಿಯಲ್ಲಿದ್ದೆ, ಮತ್ತೆ ನೋಡಬೇಕು..” ಎಂದು ಉತ್ತರಿಸಿದರು.

ರಾಖಿ ಕಳುಹಿಸಿದ ತಂಗಿಗೆ ಶತಕದ ಉಡುಗೊರೆ:

ರೋಹನ್‌ ಪಾಟೀಲ್‌ ಮೈಸೂರು ವಾರಿಯರ್ಸ್‌ ವಿರುದ್ಧ ಶತಕ ಗಳಿಸಿದ ನಂತರ ಕೈಗೆ ಕಟ್ಟಿದ್ದ ರಾಖಿಯನ್ನು ಪ್ರೇಕ್ಷಕರೆಡೆಗೆ ತೋರಿಸುತ್ತಾರೆ. ನಿಜವಾಗಿಯೂ ಇದೊಂದು ಅಪೂರ್ವ, ಮರೆಯಲಾಗದ ಕ್ಷಣ. ಅಂದು ರಕ್ಷಾ ಬಂಧನವಾಗಿತ್ತು. ತಂಗಿ ನೇಹ ಪಾಟೀಲ್‌ ಬೆಂಗಳೂರಿನಿಂದ ಅಣ್ಣನಿಗೆ ರಾಖಿ ಕಳುಹಿಸಿದ್ದಳು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರೋಹನ್‌, “ಅದೊಂದು ಮರೆಯಲಾಗದ ಕ್ಷಣ. ನನ್ನ ತಂಗಿ ಬೆಂಗಳೂರಿನಿಂದ ರಾಖಿ ಕಳುಹಿಸಿದ್ದಳು, ಇದನ್ನು ಕಟ್ಟಿಕೊಂಡು ಆಡು ಎಂದು ಹೇಳಿ ಕಳುಹಿಸಿದ್ದಳು. ಅವಳಿಗೆ ಧನ್ಯವಾದ ಹೇಳು ಆ ರೀತಿಯಲ್ಲಿ ಮಾಡಿದೆ, ಬಹಳ ಖುಷಿಕೊಟ್ಟ ಕ್ಷಣ,” ಎಂದರು.

Related Articles