Thursday, September 12, 2024

ನಾರಿ ಶಕ್ತಿ ಪುರಸ್ಕಾರ ಗೆದ್ದ ವಿಶ್ವ ಚಾಂಪಿಯನ್ ಈಗಲೂ ತೋಟಗಾರಿಕೆ ಇಲಾಖೆಯಲ್ಲಿ ಟೈಪಿಸ್ಟ್!

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್ 

ಈ ಸಾಧಕಿಯ ಕತೆಯನ್ನು ಓದಿ ಕನ್ನಡಿಗರಾದ ನಾವು ಹೆಮ್ಮೆಯಿಂದ ಬೀಗಬೇಕೋ, ನಾಚಿಕೆಯಿಂದ ತಲೆ ತಗ್ಗಿಸಬೇಕೋ ಆಮೇಲೆ ಯೋಚಿಸಿ!

ಬಿಲಿಯರ್ಡ್ಸ್‌ನಲ್ಲಿ ವಿಶ್ವ ಚಾಂಪಿಯನ್, ಮತ್ತೊಮ್ಮೆ ರನ್ನರ್ ಅಪ್, ಆರು ಬಾರಿ ರಾಷ್ಟ್ರೀಯ ಚಾಂಪಿಯನ್, 2018ರ ಪ್ರತಿಷ್ಠಿತ ನಾರಿ ಶಕ್ತಿ ಸನ್ಮಾನ, ಹಲವಾರು ಬಾರಿ ಜಾಗತಿಕ ಮಟ್ಟದಲ್ಲಿ ಸ್ಪರ್ಧೆ, ಏಕಲವ್ಯ ಹಾಗೂ ಕೆಂಪೇಗೌಡ ಪ್ರಶಸ್ತಿ. ಇಂಗ್ಲೆಂಡ್ ಹಾಗೂ ಚೀನಾದ ಕ್ರೀಡಾ ಉತ್ಪನ್ನಗಳ ಕಂಪೆನಿಗಳು ತಮ್ಮ ಜಾಹೀರಾತಿನಲ್ಲಿ ತೊಡಗಿಸಿಕೊಂಡಿವೆ. ಆದರೆ ನಾವು ಮಾತ್ರ ಆಕೆಯನ್ನು ಗುರುತಿಸದೆ ಕೇವಲ ಟೈಪಿಸ್ಟ್ ಹುದ್ದೆಯಲ್ಲೇ ಮುಂದುವರಿಸಿ ಸಣ್ಣ ತನವನ್ನು ತೊರಿಸಿದ್ದೇವೆ. ನಾನು ಹೇಳ ಹೊರಟಿದ್ದು, ಕಳೆದ 22 ವರ್ಷಗಳಿಂದ ಬಿಲಿಯರ್ಡ್ಸ್ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ, ಭಾರತ ಕಂಡ ಶ್ರೇಷ್ಠ ಬಿಲಿಯರ್ಡ್ಸ್ ಹಾಗೂ ಸ್ನೂಕರ್ ಆಟಗಾರರಲ್ಲಿ ಒಬ್ಬರಾದ, ತೋಟಗಾರಿಕಾ ಇಲಾಖೆಯಲ್ಲಿ ಟೈಪಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಚಾಂಪಿಯನ್ ರೇವಣ್ಣ ಉಮಾದೇವಿ ನಾಗರಾಜ್ ಕುರಿತು. ನಮಗೆ ನಾಚಿಕೆಯಾಗಬೇಕು
ರಾಜ್ಯದ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರ ಸ್ವಾಮಿ, ಕ್ರೀಡಾ ಸಚಿವ ಹಾಗೂ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಕರ್ನಾಟಕ ತೋಟಗಾರಿಕಾ ಸಚಿವ ಎಂ.ಸಿ. ಮನಗೂಳಿ  ಹಾಗೂ ಇತರ ಅಧಿಕಾರಿಗಳು ಈ ಸಾಧಕಿಯ ಬದುಕಿನ ಕಡೆಗೆ ಗಮನ ಹರಿಸಬೇಕಾದ ಅಗತ್ಯವಿದೆ. ದೇಶದ ಇತರ ರಾಜ್ಯಗಳಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಸಾಧನೆ ಮಾಡಿದವರಿಗೆ ಉನ್ನತ ಶ್ರೇಣಿಯ ಹುದ್ದೆ ನೀಡಲಾಗುತ್ತದೆ. ಆದರೆ ಉಮಾದೇವಿ ಅವರು 29 ವರ್ಷಗಳಿಂದ ತೋಟಗಾರಿಕಾ ಇಲಾಖೆಯಲ್ಲಿ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಇದು ನಮ್ಮ ರಾಜ್ಯದ ದುರಂತವೆಂದರೆ ತಪ್ಪಾಗಲಾರದು.
ನಾರಿ ಶಕ್ತಿ ಪುರಸ್ಕಾರ
ಕೇಂದ್ರ ಸರಕಾರ ನೀಡುವ ನಾರಿ ಶಕ್ತಿ ಪುರಸ್ಕಾರಕ್ಕೆ ದೇಶದಾತ್ಯಂತ ಸಮೀಕ್ಷೆ ನಡೆಸಲಾಗುತ್ತದೆ. 22 ವರ್ಷಗಳಿಂದ ಸ್ನೂಕರ್ ಹಾಗೂ ಬಿಲಿಯರ್ಡ್ಸ್‌ನಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಉಮಾದೇವಿ ಅವರನ್ನು ಕೇಂದ್ರ ಸಚಿವೆ ಮನೇಕಾ ಗಾಂಧಿ ಅವರ ಅಧ್ಯಕ್ಷತೆಯಲ್ಲಿನ ಸಮಿತಿಯು ದೇಶದ ಪ್ರತಿಷ್ಠಿತ ನಾರಿ ಶಕ್ತಿ ಪುರಸ್ಕಾರ ಗೌರವಕ್ಕೆ ಆಯ್ಕೆ ಮಾಡುತ್ತದೆ. ಮಾರ್ಚ್ 8, 2018ರಂದು ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಮಾದೇವಿ ಅವರಿಗೆ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ ಅವರು ನಾರಿ ಶಕ್ತಿ ಪುರಸ್ಕಾರವನ್ನು ನೀಡಿದರು. ಮಾರ್ಚ್ 9ರಂದು ಪ್ರಧನಿ ನರೇಂದ್ರ ಮೋದಿ ಅವರನ್ನು ಉಮಾದೇವಿ ಭೇಟಿ ಮಾಡಿದಾಗ ಪ್ರಧಾನಿಯವರು ಕರ್ನಾಟಕದ ಸಾಧಕಿಯ ಗುಣಗಾನ ಮಾಡಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ನಾರಿ ಶಕ್ತಿ ಪುರಸ್ಕಾರ ಗೌರವಕ್ಕೆ ಪಾತ್ರರಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೂ ಉಮಾದೇವಿ ಪಾತ್ರರಾಗಿದ್ದಾರೆ.
ಪ್ರಭಾವ ಇಲ್ಲದ ಸಾಧಕಿ
 ಈ ರಾಜ್ಯದಲ್ಲಿ ಪ್ರತಿಯೊಂದಕ್ಕೂ ಪ್ರಭಾವ ಬೇಕು. ಉದ್ಯೋಗದಲ್ಲಿ ಭಡ್ತಿ ಪಡೆಯಲು ಹಿರಿಯ ಅಧಿಕಾರಿಗಳಿಗೆ ಬಕೆಟ್ ಹಿಡಿಯಬೇಕಾದ ಅನಿವಾರ್ಯತೆ ಇಂದು ಸಹಜವಾಗಿದೆ. ಆದರೆ ಉಮಾದೇವಿ ಎಲ್ಲಿಯೂ ತನಗೆ ಭಡ್ತಿ ನೀಡಿ ಎಂದು ಕೇಳಿಕೊಂಡವರಲ್ಲ. ಸಾಧನೆಯನ್ನೇ ಮುಂದಿಟ್ಟುಕೊಂಡು ಬದುಕು ಸಾಗಿಸುತ್ತಿದ್ದಾರೆ.
ಉದ್ಯೋಗದಲ್ಲಿ ಭಡ್ತಿಗೆ ಇನ್ನೇನು ಮಾಡಬೇಕು?
 1996ರಲ್ಲಿ ಸ್ನೂಕರ್ ಹಾಗೂ ಬಿಲಿಯರ್ಡ್ಸ್ ಟೇಬಲ್‌ನಲ್ಲಿ ಕಾಣಿಸಿಕೊಂಡ ಉಮಾದೇವಿ ರಾಜ್ಯಮಟ್ಟದ ಬಿಲಿಯರ್ಡ್ಸ್‌ನಲ್ಲಿ  11 ಬಾರಿ ಚಾಂಪಿಯನ್ ಪಟ್ಟ ಗೆದ್ದಿದ್ದಾರೆ. 7 ಬಾರಿ ರನ್ನರ್ ಅಪ್ ಗೌರವಕ್ಕೆ ಪಾತ್ರರಾಗಿದ್ದಾರೆ. 4 ಬಾರಿ ಸ್ನೂಕರ್ ಚಾಂಪಿಯನ್ ಪಟ್ಟ ಹಾಗೂ 8 ಬಾರಿ ರನ್ನರ್ ಅಪ್ ಎನಿಸಿಕೊಂಡಿದ್ದಾರೆ. 22 ವರ್ಷಗಳಲ್ಲಿ 20 ವರ್ಷ ನಿರಂತರರವಾಗಿ ಬಿಲಿಯರ್ಡ್ಸ್ ಹಾಗೂ ಸ್ನೂಕರ್ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿರುವ ಉಮಾದೇವಿ ಆರು ಬಾರಿ ರಾಷ್ಟ್ರೀಯ ಚಾಂಪಿಯನ್ ಪಟ್ಟ ಗೆದ್ದುಕೊಂಡಿದ್ದಾರೆ. ಈ ಬಾರಿಯೂ ಚಾಂಪಿಯನ್ ಪಟ್ಟ ಉಮಾದೇವಿ ಅವರ ಹೆಸರಿನಲ್ಲಿದೆ. 19 ಬಾರಿ  ವಿಶ್ವ ಹಾಗೂ ಅಂತಾರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಸ್ಪರ್ಧಿಸಿದ್ದು, 2012ರಲ್ಲಿ ಇಂಗ್ಲೆಂಡ್‌ನ ಕೇಂಬ್ರಿಡ್ಜ್‌ನಲ್ಲಿ ನಡೆದ ವಿಶ್ವಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದರು. 2015ರಲ್ಲಿ ಐಬಿಎಸ್‌ಎಫ್  ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ರನ್ನರ್ ಅಪ್ ಗೌರವಕ್ಕೆ ಪಾತ್ರರಾದರು. ಅಲ್ಲದೆ ಭಾರತದಲ್ಲಿ ನಡೆದ ಇತರ 12 ವಿವಿಧ  ವೃತ್ತಿಪರ ಸ್ನೂಕರ್ ಹಾಗೂ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌ಗಳಲ್ಲಿ ಪಾಲ್ಗೊಂಡು ಪದಕ ಗೆದ್ದಿರುತ್ತಾರೆ.
ಇಂಗ್ಲೆಂಡಲ್ಲಿ ಮೆಚ್ಚುಗೆ
ಹಿತ್ತಲಗಿಡ ಮದ್ದಲ್ಲ, ನಮಗೆ ಯಾವುದೂ ಮುಖ್ಯವಲ್ಲ. ಆದರೆ ಇಂಗ್ಲೆಂಡ್ ನಲ್ಲಿ  ಉಮಾದೇವಿ ಅವರ ಸಾಧನೆಯನ್ನು ಗುಣಗಾನ ಮಾಡಲಾಗಿದೆ. ಇಂಗ್ಲೆಂಡ್‌ನ ಬಿಎಚ್‌ಟಿ ಬ್ರಾಂಡ್ ಕಂಪೆನಿಯು ತನ್ನ ಉತ್ಪನ್ನಗಳ ಮಾಹಿತಿ ಪಟ್ಟಿಯಲ್ಲಿ ಉಮಾದೇವಿ ಅವರ ಸಾಧನೆಯನ್ನು ಜಗತ್ತಿಗೇ ಪರಿಚಯಿಸಿದೆ. ರಾಷ್ಟ್ರೀಯ ಸ್ನೂಕರ್ ಎಕ್ಸ್‌ಪೋನಲ್ಲೂ ಉಮಾದೇವಿಯ ಅವರ ಸಾಧನೆಯನ್ನು ಪ್ರಕಟಿಸಲಾಗಿದೆ.
22 ವರ್ಷಗಳ ಶ್ರೇಷ್ಠ ಸಾಧನೆ!
ಒಂದು ಕ್ರೀಡೆಯಲ್ಲಿ ನಿರಂತರ 22 ವರ್ಷಗಳ ಕಾಲ ತೊಡಗಿಸಿಕೊಳ್ಳುವುದೆಂದರೆ ಅದು ಅಷ್ಟು ಸುಲಭವಾದುದಲ್ಲ. ಸಾಕಷ್ಟು ಹಣ, ಸಮಯ ಹಾಗೂ ತ್ಯಾಗ ಅಲ್ಲಿ ಅಗತ್ಯವಿರುತ್ತದೆ. ಸಚಿನ್ ತೆಂಡೂಲ್ಕರ್ ಅವರ ದೀರ್ಘಕಾಲದ ಕ್ರಿಕೆಟ್ ಆಟವನ್ನು ಕೊಂಡಾಡುವ ನಾವು ಇತರ ಕ್ರೀಡೆಗಳ ಸಾಧಕರ ಬಗ್ಗೆ ಹೆಚ್ಚು ಗಮನಹರಿಸುವುದಿಲ್ಲ. ಉಮಾದೇವಿ ಅವರ ಸಾಧನೆಗೆ ರಾಜ್ಯ ಸರಕಾರ ಇನ್ನಾದರೂ ಪ್ರೋತ್ಸಾಹ ನೀಡಬೇಕಾಗುತ್ತದೆ. ಒಬ್ಬ ವಿಶ್ವಚಾಂಪಿಯನ್ ಕ್ರೀಡಾಪಟು ಅಲ್ಪ ವೇತನ ಗಳಿಸುವ ಟೈಪಿಸ್ಟ್ ಹುದ್ದೆಯಲ್ಲಿರುವುದು ಈ ರಾಜ್ಯದ ಘನತೆಗೆ ತಕ್ಕುದಾದು ಎಂದೆನಿಸುತ್ತಿಲ್ಲ.

Related Articles