ಮೆಲ್ಬೋರ್ನ್
ಭಾರತದ ಸ್ಪಿನ್ ಹಾಗೂ ವೇಗದ ಬೌಲಿಂಗ್ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ತಂಡ 399 ರನ್ ಜಯದ ಗುರಿಯಲ್ಲಿ 258 ರನ್ ಗಳಿಸುವಷ್ಟರಲ್ಲಿ 8 ವಿಕೆಟ್ ಕಳೆದುಕೊಂಡು ಸೋಲಿನ ಅಂಚಿಗೆ ಸಿಲುಕಿದೆ.
ದ್ವಿತೀಯ ಇನಿಂಗ್ಸ್‌ನಲ್ಲಿ ಭಾರತ ತಂಡ 106 ರನ್‌ಗೆ 6 ವಿಕೆಟ್ ಕಳೆದುಕೊಂಡು ಡಿಕ್ಲೇರ್ ಘೋಷಿಸಿತ್ತು. ಇದರಿಂದ ಆಸ್ಟ್ರೇಲಿಯಾಕ್ಕೆ 399 ರನ್‌ಗಳ ಜಯದ ಗುರಿ ನೀಡಿತು. ಮೊದಲ ಇನಿಂಗ್ಸ್‌ನಲ್ಲಿ 6 ವಿಕೆಟ್ ಗಳಿಸಿದ್ದ ಜಸ್‌ಪ್ರೀತ್ ಬುಮ್ರಾ ಆರಂಭಿಕ ಆಟಗಾರ ಆರೋನ್ ಫಿಂಚ್ ಅವರ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ನಂತರ ಜಡೇಜಾ (82ಕ್ಕೆ 3) ಹಾಗೂ ಮೊಹಮ್ಮದ್ ಶಮಿ (71ಕ್ಕೆ2) ಉತ್ತಮ ಬೌಲಿಂಗ್ ಪ್ರದರ್ಶಿಸಿ ಆಸ್ಟ್ರೇಲಿಯಾವನ್ನು ಸೋಲಿನ ಅಂಚಿಗೆ ನೂಕಿದರು. ಬುಮ್ರಾ 53 ರನ್‌ಗೆ 2 ವಿಕೆಟ್ ಗಳಿಸಿ ಮತ್ತೊಮ್ಮೆ ಆಸೀಸ್ ರನ್ ಗಳಿಕೆಗೆ ಮುಳುವಾದರು.
ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಈಗಾಗಲೇ 1-1ರಲ್ಲಿ ಸಮಬಲಗೊಂಡಿದ್ದು, ಭಾರತ ಅಂತಿಮ ದಿನದಲ್ಲಿ ಜಯ ಗಳಿಸಿದರೆ 2-1ರ ಅಂತರದಲ್ಲಿ ಮೇಲುಗೈ ಸಾಧಿಸಲಿದೆ. ಆದರೆ ಪ್ಯಾಟ್ ಕಮಿನ್ಸ್ ಅಜೇಯ 61 ರನ್ ಗಳಿಸಿ ಭಾರತದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. 103 ಎಸೆತಗಳನ್ನೆದುರಿಸಿದ 5 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 61 ರನ್ ಗಳಿಸಿ ಜಯದ ಆಸೆಯನ್ನು ಜೀವಂತವಾಗಿರಿಸಲು ಯತ್ನಿಸಿದರು. ಆದರೆ ಆಸ್ಟ್ರೇಲಿಯಾ ಈ ಪಂದ್ಯ ಗೆಲ್ಲಬೇಕಾದರೆ ಮೆಲ್ಬೋರ್ನ್ ಅಂಗಣದಲ್ಲಿ ಪವಾಡವೇ ನಡೆಯಬೇಕು.