Tuesday, March 19, 2024

ಏಷ್ಯನ್ ಸ್ನೂಕರ್ ಗೆದ್ದು ಐತಿಹಾಸಿಕ ಸಾಧನೆಗೈದ ಅಡ್ವಾನಿ

ಏಜೆನ್ಸಿಸ್ ಹೊಸದಿಲ್ಲಿ

ವಿಶ್ವ ಚಾಂಪಿಯನ್ ಕರ್ನಾಟಕದ ಪಂಕಜ್ ಅಡ್ವಾನಿ ಅವರು ಚೀನಾದ ಜಿನನ್ ನಲ್ಲಿ ನಡದ ಏಷ್ಯನ್ ಸ್ನೂಕರ್ ಟೂರ್‍ನ ಫೈನಲ್ ಹಣಾಹಣಿಯಲ್ಲಿ ಸ್ಥಳೀಯ ಜು ರೆತಿ ಅವರನ್ನು 6-1 ಅಂತರದಲ್ಲಿ ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡರು. ಇದರೊಂದಿಗೆ ಏಷ್ಯನ್ ಸ್ನೂಕರ್ ಟೂರ್ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಅಡ್ವಾನಿ ಭಾಜನರಾದರು.

ಪ್ರಸ್ತುತ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಪಂಕಜ್ ಅಡ್ವಾನಿ ಲೀಗ್ ಹಾಗೂ ನಾಕೌಟ್ ಹಂತದ ಪಂದ್ಯಗಳಲ್ಲಿ ಒಂದು ಕಡೆಯ ಜಯ ಸಾಧಿಸಿದ್ದರು. ಜತೆಗೆ, ಚೀನಾದ ಜು ರೆತಿ ವಿರುದ್ಧ ಫೈನಲ್ ಪಂದ್ಯದ ಎರಡು ಫ್ರೇಮ್‍ಗಳಲ್ಲಿ 2-0 ಅಂತರದಲ್ಲಿ ಜಯ ಸಾಧಿಸಿದರು. ಬಳಿಕ, ಮೂರನೇ ಫ್ರೇಮ್ ನಲ್ಲಿ ಎಚ್ಚೆತ್ತುಕೊಂಡ ಚೀನಾ ಆಟಗಾರ 24-69(60) ಅಂತರದಲ್ಲಿ ಭಾರತದ ಆಟಗಾರನನ್ನು ಸೋಲಿಸಿದರು. ನಂತರ, ಗೆಲುವಿನ ಲಯಕ್ಕೆ ಮರಳಿದ ಅಡ್ವಾನಿ, ಇನ್ನುಳಿದ ನಾಲ್ಕು ಫ್ರೇಮ್ ಗಳಲ್ಲಿ ಕ್ರಮವಾಗಿ 63-33, 100(49,59)-0 47-19 ಹಾಗೂ 94(94)-0 ಅಂತರದಲ್ಲಿ ಜು ರೆತಿ ಅವರನ್ನು ಮಣಿಸುವಲ್ಲಿ ಯಶಸ್ವಿಯಾದರು. ಆ ಮೂಲಕ ಭಾರತದ ಆಟಗಾರ ಇದೇ 12 ರಿಂದ  ಮಯಾನ್ಮರ್ ನಲ್ಲಿ ಆರಂಭವಾಗುವ ವಿಶ್ವ ಚಾಂಪಿಯನ್ ಶಿಪ್ ಗೆ ಬಲವಾದ ಸಂದೇಶ ರವಾನಿಸಿದರು.

Related Articles