Tuesday, March 19, 2024

ಥಾಯ್ಲೆಂಡ್ ನಲ್ಲಿ ಸದ್ದು ಮಾಡಿದ ಕಟ್ಕೆರೆಯ ಅನೀಶ್ ಶೆಟ್ಟಿಯ ಕಿಕ್!

ಥಾಯ್ಲೆಂಡ್ ನಲ್ಲಿ ಸದ್ದು ಮಾಡಿದ ಕಟ್ಕೆರೆಯ ಅನೀಶ್ ಶೆಟ್ಟಿಯ ಕಿಕ್!

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್

ಕಳೆದ ಅರು ವರ್ಷಗಳಿಂದ ವೃತ್ತಿಪರ ಮೊಯ್ ಥಾಯ್ ಕಿಕ್ ಬಾಕ್ಸಿಂಗ್ ಚಾಂಪಿಯನ್ಷಿಪ್ ನಲ್ಲಿ ತೊಡಗಿಕೊಂಡಿದ್ದ ವೃತ್ತಿಪರ ಕಿಕ್ ಬಾಕ್ಸರ್ ನನ್ನು ಕೆಲವು ಸೆಕೆಂಡುಗಳಲ್ಲೇ ನೆಲಕ್ಕುರುಳಿಸಬೇಕೆಂದರೆ ಆತನಲ್ಲಿ ಎಂಥಾ ಅದ್ಭುತ ತಾಕತ್ತಿರಬೇಕು?….ಎಂಥಾ ಬದ್ಧತೆ ಇರಬೇಕು?….ಎಷ್ಟು ವರ್ಷ ಪಳಗಿರಬೇಕು? …..ಅವರ ಕೋಚ್ ಇನ್ನೆಷ್ಟು ಅನುಭವಿಯಾಗಿರಬಹುದು ಎಂದೆಲ್ಲಾ ಯೋಚನೆ ಮಾಡುವುದು ಸಹಜ. ಆದರೆ ಚಾಂಪಿಯನ್ ಅನೀಶ್ ಶೆಟ್ಟಿಗೆ ಜಸ್ಟ್ ….ಕುಂದಾಪುರದವರಾಗಿದ್ದರೆ ಸಾಕಂತೆ!!!!

ಫೆಬ್ರವರಿ 4 ಮಂಗಳವಾರ ರಾತ್ರಿ ಥಾಯ್ಲೆಂಡಿನ ಫುಕೆಟ್ ನರಗದಲ್ಲಿ ನಡೆದ ಅಂತಾರಾಷ್ಟ್ರೀಯ ಮೊಯ್ ಥಾಯ್  ಕಿಕ್ ಬಾಕ್ಸಿಂಗ್ ಚಾಂಪಿಯನ್ಷಿಪ್ ನಲ್ಲಿ ಇದುವರೆಗೂ ಎಲ್ಲಿಯೂ ಸದ್ದು ಮಾಡಿರದ ಸಾಫ್ಟವೇರ್ ಎಂಜಿನಿಯರ್ ಅನೀಶ್ ಶೆಟ್ಟಿ ನಿತ್ಯವೂ ಮೊಯ್ ಥಾಯ್ ಕಿಕ್ ಬಾಕ್ಸಿಂಗ್ ನಲ್ಲೇ ಮುಳುಗೇಳುತ್ತಿದ್ದ ಥಾಯ್ಲೆಂಡ್ ನ ವೃತ್ತಿಪರ ಬಾಕ್ಸರ್ ನ್ಯುವ್ಲಿಕಿಟ್ ಗೆ ಒಂದೇ ಒಂದು ನಿಮಿಷದಲ್ಲೇ ಒಂದೇ ಒಂದು ಕಿಕ್ ಮೂಲಕ ನೆಲಕ್ಕುರುಳುವಂತೆ ಮಾಡಿ. ಭಾರತದ ಕ್ರೀಡಾ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದರು.

ಕಟ್ಕೆರೆಯ ಕಿಕ್!!!

ಅನೀಶ್ ಶೆಟ್ಟಿ ಮೊಯ್ ಥಾಯ್ ಕ್ರೀಡೆಯನ್ನು ತನ್ನ ಹವ್ಯಾಸಕ್ಕಾಗಿ ಬಳಸಿಕೊಂಡವರು. ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಖಾಸಗಿ ಕಂಪೆನಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರಾಗಿರುವ ಅನೀಶ್ ಶೆಟ್ಟಿ ಕಾಲೇಜು ದಿನಗಳಲ್ಲಿ ಉತ್ತಮ ವಾಲಿಬಾಲ್ ಆಟಗಾರ. ಕಾಲೇಜು ತಂಡದ ನಾಯಕರೂ ಆಗಿದ್ದರು. ಕೋಟೇಶ್ವರದ ಕಟ್ಕೆರೆಯ ಶಂಕರ ಶೆಟ್ಟಿ ಹಾಗೂ ಉಷಾ ಶೆಟ್ಟಿ ದಂಪತಿಯ ಮಗ, ಪ್ರಾಥಮಿಕ ಶಿಕ್ಷಣ ಕುಂದಾಪುರದ ಸೇಂಟ್ ಮೆರೀಸ್ ಶಾಲೆಯಲ್ಲಿ, ನಂತರ ಕೋಟ ವಿವೇಕ ಹೈಸ್ಕೂಲ್ ನಲ್ಲಿ ಪ್ರೌಢ ಶಿಕ್ಷಣ. ಮೂಡಬಿದಿರೆಯ ಆಳ್ವಾಸ್ ನಲ್ಲಿ ಪಿಯುಸಿ, ನಂತರ ಮೂಡ್ಳಕಟ್ಟೆಯಲ್ಲಿ ತಾಂತ್ರಿಕ ಪದವಿ ಪಡೆದವರು.

ವಾಲಿಬಾಲ್ ಆಟವೇ ಸ್ಫೂರ್ತಿ…

ಗುರುವಾರ ಥಾಯ್ಲೆಂಡ್ ನಿಂದ ಸ್ಪೋರ್ಟ್ಸ್ ಮೇಲ್ ಜತೆ ಮಾತಾನಾಡಿ ಅನೀಶ್ ಶೆಟ್ಟಿ ಅವರು ನಡೆದು ಬಂದ ಹಾದಿಯನ್ನು ನೋಡಿದಾಗ ಅಚ್ಚರಿಯಾಗುತ್ತದೆ. ಅವರ ಮಾತಿನಲ್ಲಿ ವಿನಯ ಮನೆಮಾಡಿತ್ತೇ ಹೊರತು, ಗೆದ್ದ ಅಹಂ, ಅಥವಾ ಅವೇಶವೂ ಇರಲಿಲ್ಲ. ‘’ಸರ್, ಫಿಟ್ನೆಸ್ ಗೆ ಅಂಥ ಜಿಮ್ ಸೇರಿಕೊಂಡೆ, ಗೋವಿಂದ್ ಸಿಂಗ್ ಎಂಬುವರು ಈ ಮೊಯ್ ಥಾಯ್ ಬಗ್ಗೆ ಪರಿಚಯ ಮಾಡಿ, ತರಬೇತಿ ಪಡೆಯಲು ಪ್ರೋತ್ಸಾಹಿಸಿದರು. ಕಳೆದ ಎರಡು ವರ್ಷಗಳಿಂದ ಈ ಅಪಾಯದ ಕ್ರೀಡೆಯಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದೆ, ಕಳೆದ ನವೆಂಬರ್ ನಲ್ಲಿ ಥಾಯ್ಲೆಂಡ್ ಗೆ ಬಂದು ಸಾಕಷ್ಟು ತರಬೇತಿ ಪಡೆದಿದ್ದೆ. ಈಗ ಕಳೆದ ಒಂದು ತಿಂಗಳಿಂದ ಥಾಯ್ನೆಂಡ್ ನ ಟ್ರೈನರ್ ಸಿಡ್ ಅವರಿಂದ ತರಬೇತಿ ಪಡೆಯುತ್ತಿದ್ದೆ. ದೈಹಿಕ ಕ್ಷಮತೆ, ಏಕಾಗ್ರತೆ ಈ ಕ್ರೀಡೆಗೆ ಪ್ರಮುಖವಾಗಿ ಬೇಕು. ಈ ಬಾಕ್ಸಿಂಗ್ ಗೆ….ನಿಮ್ಮಲ್ಲಿ ಧೈರ್ಯ ಮತ್ತು ಆಕ್ರಮಣಶೀಲ ಪ್ರವ್ರತ್ತಿ ಅಗತ್ಯ,…..ಮತ್ತ್ ನಾವ್ ಕುಂದಾಪುರ್ದರ್ ಅಲ್ದೆ,’’ ಎಂದಾಗ ಅಲ್ಲಿ ನಗು ಮನೆ ಮಾಡಿತ್ತು.

77 ಕೆಜಿ ಯಿಂದ 65 ಕೆಜಿಗೆ

ದೇಹದ ತೂಕಕ್ಕೆ ಹೊಂದಿಕೊಂಡು ಎದುರಾಳಿಗಳೊಂದಿಗೆ ಸ್ಪರ್ಧಿಸಬೇಕಾಗುತ್ತದೆ. ಬಾಕ್ಸರ್ ನ್ಯುವ್ಲಿಕಿಟ್ 65 ಕೆಜಿ ತೂಕದವ. ಆತನೊಂದಿಗೆ ಸ್ಪರ್ಧಿಸಬೇಕಾದರೆ ಅನೀಶ್ ಕೂಡ 65 ಕೆಜಿ ತೂಕ ಹೊಂದಿರಬೇಕು. ಒಂದು ತಿಂಗಳ ಕಾಲ ದಿನಂಪ್ರತಿ ಆರು ಗಂಟೆಗಳ ಕಾಲ ಕಠಿಣ ಅಭ್ಯಾಸ ಮಾಡಿದ ಅನೀಶ್ ತಮ್ಮ ತೂಕವನ್ನು 65ಕೆಜಿ ಗೆ ಇಳಿಸಿಕೊಂಡರು. ‘’ನಮ್ಮೂರಲ್ಲಿ ಎಲ್ಲೆಂದರಲ್ಲಿ ಕ್ರಿಕೆಟ್ ಆಡುವಂತೆ ಇಲ್ಲಿ ಎಲ್ಲೆಂದರಲ್ಲಿ ಮೊಯ್ ಥಾಯ್ ಅಭ್ಯಾಸ ಮಾಡುತ್ತಿರುತ್ತಾರೆ. ಎಲ್ಲಿ ನೋಡಿದರಲ್ಲಿ ಅಂತಾರಾಷ್ಟ್ರೀಯ ಸ್ಪರ್ಧಿಗಳೇ ಇರುತ್ತಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಥಾಯ್ಲೆಂಡ್ ಎಂಎಂಎ ಯಲ್ಲಿ ಎತ್ತಿದ ಕೈ. ಈ ಕಾರಣಕ್ಕಾಗಿಯೇ ಒಂದು ತಿಂಗಳ ಕಾಲ ಇಲ್ಲಿ ಅಭ್ಯಾಸ ನಡೆಸಿದೆ,’’ ಎನ್ನುತ್ತಾರೆ ಅನೀಶ್.

ಆರು ಸುತ್ತುಗಳ ಫೈಟ್ ಒಂದೇ ಸುತ್ತಿಗೆ  ಫಿನಿಶ್

ಅನೀಶ್ ಹಾಗೂ ನ್ಯುವ್ಲಿಕಿಟ್ ನಡುವಿನ ಸ್ಪರ್ಧೆಗೆ ಸಾಕಷ್ಟು ಪ್ರಮಾಣದಲ್ಲಿ ಪ್ರಚಾರ ನೀಡಲಾಗಿತ್ತು. ಸಂಜೆ ಯಕ್ಷಗಾನ ಇದ್ದರೆ ಬೆಳಿಗ್ಗೆ ಮೈಕ್ ನಲ್ಲಿ ಪ್ರಚಾರ ಮಾಡುವಂತೆ ಅಲ್ಲಿಯೂ ಬ್ಯಾನರ್ ಕಟ್ಟಿಕೊಂಡು ಪ್ರಚಾರ ಮಾಡುತ್ತಾರೆ. ಅಲ್ಲಿಯ ಜನ ಹಣ ಕೊಟ್ಟು ಇಂಥ ಫೈಟ್ ಗಳನ್ನು ನೋಡುತ್ತಾರೆ. ಅನೀಶ್ ಅವರ ಫೈಟ್ ನೋಡಲು ಒಬ್ಬರಿಗೆ 3,500 ರೂ, ಟಿಕೆಟ್ ಬೆಲೆಯಾಗಿತ್ತು. ಈ ಫೈಟ್ ಗೆ ಸುಮಾರು 1,000ಕ್ಕೂ ಹೆಷ್ಷು ಪ್ರೇಕ್ಷಕರು ನೆರೆದಿದ್ದರು. ನ್ಯುವ್ಲಿಕಿಟ್ ಗೆಲ್ಲುತ್ತಾರೆಂಬುದು ಎಲ್ಲರ ನಿರೀಕ್ಷೆಯಾಗಿತ್ತು. ಅದಕ್ಕೆ ಕಾರಣವೂ ಇದ್ದಿತ್ತು. ಈಗಾಗಲೇ ಆರು ಫೈಟ್ ಗಳನ್ನು ಮಾಡಿರುವ  ಥಾಯ್ಲೆಂಡಿನ ಸ್ಪರ್ಧಿ ಗೆಲ್ಲುವುದು ಖಚಿತವಾಗಿತ್ತು. ಆದರೆ ಎದುರುಗಡೆ ನಿಂತಿದ್ದು ನಮ್ಮ ಕುಂದಾಪುರದ ಸ್ಪರ್ಧಿ…ಬಂಟ್ಸ್ ಪ್ರತಿಭೆ…ಅಂದರೆ ಆತ್ಮವಿಶ್ವಾಸದ ಕನ್ನಡಿಗ ಅನೀಶ್ ಶೆಟ್ಟಿ. ಸೆಕೆಂಡುಗಳಲ್ಲೆ  ‘ಫ್ಲಾಯಿಂಗ್ ನೀ’ ಕಿಕ್ ನೀಡುತ್ತಿದ್ದಂತೆ  ನ್ಯುವ್ಲಿಕಿಟ್ ನೆಲಕ್ಕುರುಳಿದ. ಆತ ಮತ್ತೆ ಆರು ತಿಂಗಳು ಏಳುವಂತಿಲ್ಲ. ಗಾಯಗೊಂಡರೆ ವೃತ್ತಿಪರ ಸ್ಪರ್ಧೆಗಳಲ್ಲಿ ಮತ್ತೆ ಪಾಲ್ಗೊಳ್ಳಲು ಆರು ತಿಂಗಳ ಬಿಡುವು ಅಗತ್ಯವಿರುತ್ತದೆ.

ಅರಿವಿಲ್ಲದಿರೆ ಅಪಾಯ

ಮೊಯ್ ಥಾಯ್ ಕಿಕ್ ಬಾಕ್ಸಿಂಗ್ ನಲ್ಲಿ  ಕಳೆದ ಮೂರು ವರ್ಷಗಳಲ್ಲಿ  12 ಸಾವಿನ ಪ್ರಕರಣ ದಾಖಲಾಗಿದೆ. ಇದರಿಂದಾಗಿ ನಿಯಮಗಳನ್ನು ಬಲ್ಲವರು, ದೈಹಿಕವಾಗಿ ಸಮರ್ಥರೆನಿಸಿಕೊಂಡವರನ್ನು ಮಾತ್ರ ಆಯ್ಕೆ ಮಾಡುತ್ತಾರೆ. ಈ ಕಾರಣಕ್ಕಾಗಿಯೇ ಸ್ಪರ್ಧಿಗಳು ಸಾಮಾನ್ಯವಾಗಿ ಥಾಯ್ಲೆಂಡ್ ನ  ಟ್ರೈನರ್ ಗಳನ್ನು ಆಯ್ಕೆಮಾಡಿಕೊಳ್ಳುತ್ತಾರೆ. ‘’ಇದು ಅತ್ಯಂತ ಅಪಾಯಕಾರಿ ಕ್ರೀಡೆ ನಿಜ. ಆದರೆ ದೈಹಿಕ ಸಾಮರ್ಥ್ಯ ಇದ್ದರೆ ಅಪಾಯದಿಂದ ತಪ್ಪಿಸಿಕೊಳ್ಳಬಹುದು,’’ ಎನ್ನುತ್ತಾರೆ ಅನೀಶ್.

ಗುರುವಿಗೆ ಬಹುಮಾನದ ಉಡುಗೊರೆ ನೀಡಿದ ಅನೀಶ್!!

ಅನನುಭವಿ ಅನೀಶ್ ಶೆಟ್ಟಿ ಮೊನ್ನೆಯ ಪಂದ್ಯ ಗೆಲ್ಲುವ ಫೇವರಿಟ್ ಆಗಿರಲಿಲ್ಲ. ಇದಕ್ಕೆ ಎದುರಾಳಿಯ ಹಿಂದಿನ ಸಾಧನೆಯೇ ಕಾರಣ ಹೊರತು ಅನೀಶ್ ಅವರ ಸಾಮರ್ಥ್ಯವಾಗಿರಲಿಲ್ಲ. ಆದರೆ ಸ್ಥಳೀಯ ಟ್ರೈನರ್ ಕಳೆದ ಒಂದು ತಿಂಗಳಿಂದ ನೀಡಿದ ತರಬೇತಿ ಅನೀಶ್ ಶೆಟ್ಟಿ ಅವರೊಳಗೊಬ್ಬ ಚಾಂಪಿಯನ್ ನನ್ನು ನಿರ್ಮಿಸಿತ್ತು.  ಮೊದಲ ಸುತ್ತಿನಲ್ಲೇ ಎದುರಾಳಿಯನ್ನು ನಾಕೌಟ್ ಮಾಡಿದ ಅನೀಶ್ ಗೆ 25,000 ರೂ, ಬಹುಮಾನ ಕೂಡ ಬಂದಿತ್ತು. ಅನೀಶ್ ಶೆಟ್ಟಿ ಆ ನಗದು ಬಹುಮಾನವನ್ನು ತರಬೇತುದಾರರಿಗೆ ಗುರುಕಾಣಿಕೆಯಾಗಿ ನೀಡಿ ಎಲ್ಲರ ಪ್ರೀತಿಗೆ ಪಾತ್ರರಾದರು. ಅಂದ ಹಾಗೆ ಅನೀಶ್ ಶೆಟ್ಟಿ ಅವರಿಗೆ ಒಂದು ತಿಂಗಳ ಕಾಲ ತರಬೇತಿ ನೀಡಿದ್ದು, ಥಾಯ್ನೆಂಡ್ ನ ಮಾಜಿ ಚಾಂಪಿಯನ್ ಸಿಡ್.

Related Articles