Saturday, October 12, 2024

ಇಂದಿನಿಂದ ಮಹಿಳಾ ಫುಟ್ಬಾಲ್ ಲೀಗ್ ಆರಂಭ

ಸ್ಪೋರ್ಟ್ಸ್ ಮೇಲ್ ವರದಿ

ನಾಲ್ಕನೇ ಆವೃತ್ತಿಯ ಹೀರೋ ಇಂಡಿಯನ್ ಮಹಿಳಾ ಫುಟ್ಬಾಲ್ ಲೀಗ್ ಬೆಂಗಳೂರಿನಲ್ಲಿ ಶುಕ್ರವಾರದಿಂದ ನಡೆಯಲಿದ್ದು, 10 ರಾಜ್ಯಗಳ 12 ತಂಡಗಳು ಈ ಚಾಂಪಿಯನ್ಷಿಪ್ ನಲ್ಲಿ ಪಾಲ್ಗೊಳ್ಳಲಿವೆ.

 21 ದಿನಗಳ ಕಾಲ ನಡೆಯುವ ಲೀಗ್ ನ ಫೈನಲ್ ಪಂದ್ಯ ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ಫೆಬ್ರವರಿ 14ರಂದು ನಡೆಯಲಿದೆ, ಬುಧವಾರ ನಡೆದ ರಂಗುರಂಗಿನ ಕಾರ್ಯಕ್ರಮದಲ್ಲಿ ಮೊದಲ ರೋಲಿಂಗ್ ಟ್ರೋಫಿಯನ್ನು ಅನಾವರಣ ಮಾಡಲಾಯಿತು. ಈ ಸಂದರ್ಭದಲ್ಲಿ ಎ.ಐ.ಎಫ್.ಎಫ್. ಲೀಗ್ ನ ಸಿಇಒ  ಸುನಂದೋ ಧಾರ್, ಕೆ.ಎಸ್.ಎಫ್.ಎ. ಕಾರ್ಯದರ್ಶಿ ಸತ್ಯನಾರಾಯಣ ಹಾಗೂ ಭಾರತ ಮಹಿಳಾ ಫುಟ್ಬಾಲ್ ತಂಡದ ಕೋಚ್ ಮಿಮೋಲ್ ರಾಕಿ ಹಾಜರಿದ್ದರು.

ಲೀಗ್ ನ ಮೊದಲ ಪಂದ್ಯದಲ್ಲಿ ಕ್ರಿಪ್ಷಾ ಎಫ್,ಸಿ ಹಾಗೂ ಕಿಕ್ ಸ್ಟಾರ್ಟ್ ಎಫ್.ಸಿ ತಂಡಗಳು ಮುಖಾಮುಖಿಯಾಗಲಿವೆ. 12 ತಂಡಗಳನ್ನು ಎ ಮತ್ತು ಬಿ ಎಂದು ಎರಡು ಗುಂಪುಗಳನ್ನಾಗಿ ಮಾಡಲಾಗಿದೆ.

ಎ ಗುಂಪಿನಲ್ಲಿ ಕಿಕ್ ಸ್ಟಾರ್ಟ್ ಎಫ್.ಸಿ (ಕರ್ನಾಟಕ), ಎಫ್.ಸಿ, ಕೊಲ್ಹಾಪುರ (ಮಹಾರಾಷ್ಟ್ರ0, ಕ್ರಿಪ್ಷಾ ಎಫ್ ಸಿ (ಮಣಿಪುರ), ಬಿಬಿಕೆ ಡಿಎವಿ ಎಫ್ ಸಿ (ಪಂಜಾಬ್), ಸೇಥು ಎಫ್ ಸಿ (ತಮಿಳುನಾಡು) ಮತ್ತು ಬರೋಡಾ ಎಫ್ ಎ (ಗುಜರಾತ್) ಸೇರಿವೆ. ಬಿ ಗುಂಪಿನಲ್ಲಿ  ಕೆಂಕ್ರೆ ಎಫ್ ಸಿ (ಮಹಾರಾಷ್ಟ್ರ),  ಗೋಕುಲಂ (ಕೇರಳ), ಒಡಿಶಾ ಪೊಲೀಸ್ ಎಫ್ ಸಿ (ಒಡಿಶಾ), ಬೆಂಗಳೂರು ಯುನೈಟೆಡ್ ಎಫ್ ಸಿ (ಕರ್ನಾಟಕ), ಶ್ರೀಭೂಮಿ ಎಫ್ ಸಿ (ಪಶ್ಚಿಮ ಬಂಗಾಳ), ಬಿದೇಶ್ ಇಲೆವೆನ್ ಎಫ್ ಸಿ (ಗೋವಾ) ಸೇರಿವೆ. ಪ್ರತಿದಿನ ಎರಡು ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯ ಮಧ್ಯಾಹ್ನ 12 ಗಂಟೆ ಹಾಗೂ ಎರಡನೇ ಪಂದ್ಯ ಸಂಜೆ 3 ಗಂಟೆಗೆ ನಡೆಯಲಿದೆ.

ಒಟ್ಟು 20 ಲಕ್ಷ ರೂ. ನಗದು ಬಹುಮಾನವಿರುತ್ತದೆ. ವಿಜೇತ ತಂಡವು ಪರ್ಯಾಯ ಫಲಕದೊಂದಿಗೆ 10 ಲಕ್ಷ ರೂ, ನಗದು ಬಹುಮಾನ ಗೆಲ್ಲಲಿದೆ. ರನ್ನರ್ ಅಪ್ ತಂಡಕ್ಕೆ 5 ಲಕ್ಷ ರೂ ನಗದು ಬಹುಮಾನ. ಟೂರ್ನಿಯ ಅತ್ಯಂತ ಮೌಲ್ಯಯುತ ಆಟಗಾರ್ತಿಗೆ 1.25 ಲಕ್ಷ ರೂ. ಬಹುಮಾನ ನೀಡಲಾಗುವುದು. ಉತ್ತಮ ಗೋಲ್ ಕೀಪರ್ ಗೆ 1 ಲಕ್ಷ ರೂ. ನಗದು ಬಹುಮಾನವಿರುತ್ತದೆ. ಉದಯೋನ್ಮುಖ ಆಟಗಾರ್ತಿಗೆ 75,000 ರೂ. ನಗದು ಬಹುಮಾನ ಹಾಗೂ ಪ್ರತಿಪಂದ್ಯಲ್ಲೂ ಮಿಂಚಿದವರಿಗೆ 5000 ರೂ. ನಗದು ಬಹುಮಾನ ನೀಡಲಾಗುವುದು.

Related Articles