Friday, April 19, 2024

“ಕಲಿವೀರ”ನಾದ ಏಕಲವ್ಯನೆಂಬ ಚಾಂಪಿಯನ್

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್

ಏಕಲವ್ಯ…ನೀನಾಸಂ ಚಂದ್ರು….ಕಲಿವೀರನ ಜತೆ ಮಾತನಾಡಿ ತಿಂಗಳೊಂದು ಕಳೆಯಿತು.

ಒಬ್ಬ ಹೀರೋ ಬಗ್ಗೆ ಬರೆಯಲೋ, ಒಬ್ಬ ಕ್ರೀಡಾ ಸಾಧಕನ ಬಗ್ಗೆ ಬರೆಯಲೋ, ಒಬ್ಬ ನಟನ ಬಗ್ಗೆ ಬರೆಯಲೋ, ಒಬ್ಬ ಕರಾಟೆ ಚಾಂಪಿಯನ್ ಬಗ್ಗೆ ಬರೆಯಲೋ, ಒಬ್ಬ ಕಳರಿಪಯಟ್ ಪಟುವಿನ ಬಗ್ಗೆ ಬರೆಯಲೋ, ಒಬ್ಬ ಅಪ್ಪಟ ರಂಗಕರ್ಮಿಯ ಬಗ್ಗೆ ಬರೆಯಲೋ,  ಒಬ್ಬ ಡಾನ್ಸರ್ ಬಗ್ಗೆ ಬರೆಯಲೋ, ಒಬ್ಬ ಯೋಗ ಪಟುವಿನ ಬಗ್ಗೆ ಬರೆಯಲೋ,

ಒಬ್ಬ ಯಕ್ಷಗಾನ ಕಲಾವಿದನ ಬಗ್ಗೆ ಬರೆಯಲೋ,  ಒಬ್ಬ ಸಾಮಾಜಿಕ ಹೋರಾಟಗಾರನ ಬಗ್ಗೆ ಬರೆಯಲೋ, ಒಬ್ಬ ರಿಕ್ಷಾ ಚಾಲಕನ ಬದುಕಿನ ಬಗ್ಗೆ ಬರೆಯಲೋ ಎಲ್ಲಕ್ಕಿಂತ ಮಿಗಿಲಾಗಿ ಬದುಕನ್ನು ಆಪ್ತವಾಗಿ ಪ್ರೀತಿಸುವ ಚಾಂಪಿಯನ್ ಬಗ್ಗೆ ಬರೆಯಲೋ ಎಂಬ ಗೊಂದಲದಲ್ಲಿದ್ದೆ, ಏಕೆಂದರೆ ಒಬ್ಬ ವ್ಯಕ್ತಿಯಲ್ಲಿಯೇ ಈ ಎಲ್ಲ ಅಂಶಗಳು ಮನೆಮಾಡಿವೆ. ಆತ ಬೇರೆ ಯಾರೂ ಅಲ್ಲ ಸದ್ಯದಲ್ಲೇ ತೆರೆಕಾಣಲಿರುವ ಕನ್ನಡದ ವಿಶಿಷ್ಟ ಚಿತ್ರ ‘ಕಲಿವೀರ’  ಸಿನಿಮಾದ ಹೀರೋ ರಾಷ್ಟ್ರೀಯ ಕರಾಟೆ ಚಾಂಪಿಯನ್, ನೀನಾಸಂ ಚಂದ್ರು ಯಾನೆ ಏಕಲವ್ಯ.

ಸಿನಿಮಾದಲ್ಲಿ ನಟಿಸಿದವರನ್ನೆಲ್ಲ ಹೀರೊ ಎಂದು ಒಪ್ಪಿಕೊಳ್ಳಲಾಗದು. ಅವರು ಆ ಸಿನಿಮಾಕ್ಕೆ ಮಾತ್ರ ಹೀರೋ. ಆದರೆ ವಾಸ್ತವ ಬದುಕಿನಲ್ಲಿ ಹೀರೋ ಎನಿಸಿಕೊಂಡು, ನಂತರ ಸಿನಿಮಾದಲ್ಲಿ ಹೀರೋ ಎನಿಸಿಕೊಂಡವರು ವಿರಳ. ಅಂಥ ವಿರಳ ಪಂಕ್ತಿಯಲ್ಲಿ ಸೇರುತ್ತಾರೆ ನೀನಾಸಂ  ಚಂದ್ರು ಯಾನೆ ಎಲ್ಲರ ಪ್ರೀತಿಯ ಏಕಲವ್ಯ. ಬಹಳ ಅನುಕೂಲದಲ್ಲಿ ಬೆಳೆದವರು ಯಾವಾಗಲೂ ಕಂಫರ್ಟ್ ವಲಯವನ್ನು ಹುಡುಕುತ್ತಿರುತ್ತಾರೆ, ಸಂಕಷ್ಟದಲ್ಲಿ ಬೆಳೆದವರು ಬೇರೆಯವರ ಸಂಕಷ್ಟವನ್ನು ಅರಿತು ಬದುಕಲು ಯತ್ನಿಸುತ್ತಾರೆ. ಚಿಕ್ಕಂದಿನಲ್ಲೇ ತಾಯಿಯನ್ನು ಕಳೆದುಕೊಂಡ ಏಕಲವ್ಯ ಇದುವರೆಗೂ ಬದುಕಿನ ಸಮರದಲ್ಲಿ ಸಾಗಿ ಬಂದವರು. ಕಷ್ಟಗಳೆಂಬ ಅಲೆಗಳಿಗೆ ಎದೆಕೊಟ್ಟು ನಿಂದವರು. ಅವಮಾನಕ್ಕೆ ಸಹಸ್ರಾರು ಪಂಚ್ ನೀಡಿದವರು.

ಚಾಂಪಿಯನ್ ಕಲಾವಿದ!

ನೀನಾಸಂ ಚಂದ್ರು ಅವರು ಕಲಿವೀರ ಸಿನಿಮಾದ ನಾಯಕ ನಟ. ಆದರೆ ಅವರ ಬದುಕಿನ ಹಾದಿಯಲ್ಲಿ ಸ್ವಲ್ಪ ಹೊತ್ತು ನಾವು ಹೆಜ್ಜೆ ಹಾಕಿದರೆ ಅವರ ಬದುಕೇ ಒಂದು ಸಿನಿಮಾ ಕತೆಯಂತಿದೆ. ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದು ಕರೆಯಲ್ಪಡುವ ರಾಣೆ ಬೆನ್ನೂರು ಮೂಲದವರು ಚಂದ್ರು. ಚಿತ್ರದುರ್ಗದ ಮಲ್ಲಾಡಿಹಳ್ಳಿಯ ಗುರುಕುಲದಲ್ಲಿ ಬೆಳೆದವರು. ಆದ್ದರಿಂದ ಆಧ್ಯಾತ್ಮ, ಭಕ್ತಿ ಮತ್ತು ಗುರುಹಿರಿಯರಿಗೆ ಗೌರವ ನೀಡುವ ಗುಣ ಚಂದ್ರು ಅವರಲ್ಲಿ ಮನೆಮಾಡಿತ್ತು. ನೀನಾಸಂ ನಲ್ಲಿ ಸೇರಿಕೊಳ್ಳುವುದಕ್ಕೆ ಮುನ್ನ ಚಿತ್ರದುರ್ಗದಲ್ಲಿ ತಿರುಕ ರಂಗ ತಿಯೇಟರ್ ನಲ್ಲಿ ಬಾಲನಟನಾಗಿ ಕಾರ್ಯನಿರ್ವಹಿಸಿದ್ದರು. ನಂತರ ನೀನಾಸಂನಲ್ಲಿ ಪಳಗಿ ರಂಗಭೂಮಿಯಲ್ಲಿ ಮಿಂಚಿದರು. ಸಿನಿಮಾ ಸೇರಬೇಕೆಂದು 110 ಬಾರಿ ಅಡಿಷನ್ ನೀಡಿದ್ದರು. ಫೋಟೋ ಆಲ್ಬಂ ಮಾಡಿಕೊಂಡು ಇದ್ದ ಇದ್ದವರಿಗೆಲ್ಲ ಫೋಟೋ ಕಳಿಸಿ ಕೊನೆಗೆ ಆಲ್ಬಂ ಖಾಲಿಯಾಯಿತೇ ವಿನಃ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಗಲಿಲ್ಲ. ಕನ್ನಡದ ಅನೇಕ ಹೀರೋಗಳ ಜತೆ ಕುಣಿದರೂ ಅಲ್ಲಿ ಯಾರೂ ಗುರತಿಸಲಿಲ್ಲ.

ಡಾನ್ಸ್ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದರು. ಬಡ ಮಕ್ಕಳಿಗೆ ಡಾನ್ಸ್ ತರಬೇತಿ ನೀಡುವ ಮೂಲಕ ಗಮನ ಸೆಳೆದರು. ಈಗ ಈ ಏಕಲವ್ಯನಲ್ಲಿ ಐದು ಸಾವಿರಕ್ಕೂ ಹೆಚ್ಚು ಯುವಕರು ತರಬೇತಿ ಪಡೆಯುತ್ತಿದ್ದಾರೆ.

ಮಾರ್ಷಲ್ ಆರ್ಟ್ಸ್ ನ ಮಾಸ್ಟರ್:

ನೀನಾಸಂ ಚಂದ್ರು ಅವರ ಹಲವಾರು ಫೋಟೋಗಳನ್ನು ವೀಕ್ಷಿಸಿದೆ. ಅವರ ಒಂದೊಂದು ಭಾವ ಮತ್ತು ಭಂಗಿ ಕ್ರೀಡೆಯೊಂದನ್ನು ಪರಿಚಯಿಸುತ್ತದೆ, ಕರಾಟೆಯಲ್ಲಿ ಚಾಂಪಿಯನ್ ಪಟ್ಟ ಗೆದ್ದಿರುವ ಏಕಲವ್ಯ ಕೇರಳದ ಕಳರಿಪಯಟ್ ನಲ್ಲಿ ಪಳಗಿದ್ದಾರೆ. ಎಲ್ಲ ಮಾರ್ಷಲ್ ಆರ್ಟ್ಸ್ ಗಳ ತಾಯಿ ಎಂದೇ ಕರೆಯಲ್ಪಡುವ ಕಳರಿಪಯಟ್ ನಲ್ಲಿ ಏಕಲವ್ಯ ಎರಡು ವರ್ಷಗಳ ಕಾಲ ಕೇರಳದಲ್ಲಿ ತರಬೇತಿ ಪಡೆದು ಇಂದು ರಾಜ್ಯ ಶ್ರೇಷ್ಠ ಕಳರಿಪಯಟ್ ಪಟುಗಳಲ್ಲಿ ಒಬ್ಬರೆನಿಸಿದ್ದಾರೆ. ಯೋಗದಲ್ಲಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿರುವ ಏಕಲವ್ಯ ಕೇಂದ್ರ ಸರಕಾರದ ಅಧಿಕೃತ ಯೋಗ ತರಬೇತುದಾರರೆನಿಸಿದ್ದಾರೆ. ‘ಸರ್ಟಿಫಿಕೇಟ್ ಕೊಟ್ಟೋನು ಗುರು ಅಲ್ಲ, ಕಲಿತ ವಿಧ್ಯೆಯಲ್ಲಿ ಸೆಟಿಸ್ಫ್ಯಾಕ್ಷನ್ ಕೊಟ್ಟೋನು ಗುರು’ ಎನ್ನುತ್ತಾರೆ ನಿನಾಸಂ ಚಂದ್ರು.

ರಿಕ್ಷಾ ಚಾಲಕನಾದೆ:

 

ಬದುಕಿನ ಹಾದಿಯಲ್ಲಿ ನಿತ್ಯವೂ ಸಿಗುವ ಹರ್ಡಲ್ಸ್ ಹಸಿವೆ. ಅದನ್ನು ನೀಗಿಸಿಕೊಳ್ಳಲು ಸಿಕ್ಕ ಪಾತ್ರವನ್ನು ನಿಭಾಯಿಸಬೇಕಾಗುತ್ತದೆ. ಏಕಲವ್ಯ ಎಲ್ಲ ಕಲೆಗಳನ್ನೂ ತಿಳಿದಕೊಂಡಿದ್ದರೂ ಬದುಕಿಗಾಗಿ ಎರಡು ವರ್ಷಗಳ ಕಾಲ ರಿಕ್ಷಾ ಹಾಗೂ ಕಾರು ಚಾಲಕರಾಗಿ ದುಡಿದಿದ್ದಾರೆ. ಅದೆಲ್ಲವೂ ನನ್ನ ಬದುಕಿಗೆ ಆಶ್ರಯ ನೀಡಿದ ತಾಣ ಎನ್ನುತ್ತಾರೆ ಚಂದ್ರು. ಏನಾನುಂ ಮಾಡು ಕೈಗೆದೊರೆತುಜ್ಜುಗವ ….ಹೀನಮಾವುದುಮಿಲ್ಲ ಜಗದಗುಡಿಯೂಳಿಗದಿ …ಎಂಬ ಡಿವಿಜಿಯವರ ಮಾತನ್ನು ಚಂದ್ರು ಇಲ್ಲಿ ಸ್ಮರಿಸುತ್ತಾರೆ.

ಕಲಿವೀರ ಏಕಲವ್ಯ:

ನೀನಾಸಂ ಚಂದ್ರು ಅವರನ್ನು ಗೆಳೆಯರೆಲ್ಲ ಸೇರಿ ಏಕಲವ್ಯ ಎಂದು ಪ್ರೀತಿಯಿಂದ ಕರೆದರು. ಈಗ ಅವರು ಏಕಲವ್ಯನಾಗಿಯೇ ಚಿರಪರಿಚಿತರು. ಕಲಿವೀರ ಒಂದು ಕಮರ್ಷಿಯಲ್ ಚಿತ್ರ. ಬುಡಕಟ್ಟು ಜನಾಂಗದ ಯುವಕನೊಬ್ಬ ತನಗಾದ ಅವಮಾನದ ವಿರುದ್ಧ ಸೇಡು ತೀರಿಸಿಕೊಳ್ಳುವುದು ಕತೆಯ ವಸ್ತು. ಇದರಲ್ಲಿ ಒಂದು ನಗ್ನ ದೃಶ್ಯ ಇದೆ. ಇದನ್ನು ಮಾಡಬಹುದೇ ಎಂದು ನಿರ್ದೇಶಕರು ಕೇಳಿಕೊಂಡಾಗ, “ಇನ್ನೊಬ್ಬರ ಮನಸ್ಸನ್ನು ನೋಯಿಸದ, ನಂಬಿಕೆಗೆ ಘಾಸಿಯನ್ನುಂಟು ಮಾಡದ, ಸತ್ಯವನ್ನು ಕಾಯುವ, ನನಗೆ ನ್ಯಾಯಯುತವಾಗಿ ಅನ್ನ ನೀಡುವ ಯಾವುದೇ ದೃಶ್ಯಕ್ಕೂ ಸಿದ್ಧ,” ಎಂದು ಏಕಲವ್ಯ ಒಪ್ಪಿಕೊಳ್ಳುತ್ತಾರೆ. ಸಿನಿಮಾ ಹೊರತಾಗಿ ವಾಸ್ತವ ಬದುಕಿನ ಒಬ್ಬ ವ್ಯಕ್ತಿಯನ್ನು ಹೀರೋ ಅಥವಾ ಆದರ್ಶ ಎಂದು ಒಪ್ಪಿಕೊಳ್ಳುವುದಾದರೆ ಅದಕ್ಕೆ ಏಕಲವ್ಯರಂಥ ವ್ಯಕ್ತಿ ಸೂಕ್ತ. ಸಿನಿಮಾದ ಕತೆಗಿಂತ ಒಬ್ಬ ನೈಜ ಹೀರೋವನ್ನು ಬೆಳ್ಳಿ ಪರದೆಯ ಮೇಲೆ ಕಾಣಬೇಕೆಂಬ ಮನಸ್ಸಿದ್ದರೆ ಕಲಿವೀರ ಸಿನಿಮಾವನ್ನು ನೋಡಬೇಕು. ಬದುಕಿನಲ್ಲಿ ಹಲವು ವಿಧದ ಪಾತ್ರಗಳನ್ನು ನಿಭಾಯಿಸಿದ ಏಕಲವ್ಯ ಅವರ ಕಲಿವೀರನ ಪಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಲಿ. ಒಬ್ಬ ನೈಜ ಹೀರೋವನ್ನು ಈ ಸಮಾಜ ಗುರುತಿಸಿ ಗೌರವಿಸಲಿ. ಒಬ್ಬ ಚಾಂಪಿಯನ್ ಮತ್ತೆ ಗೆಲ್ಲಲಿ ಎಂಬುದೇ ಕನ್ನಡಿಗರ ಹಾರೈಕೆ.

 

Related Articles