Saturday, July 20, 2024

ಕಾರ್ಟಿಂಗ್ ಕಿಂಗ್ ಕನ್ನಡಿಗ ಮಿಹಿರ್ ಅವಲಕ್ಕಿ

ಸೋಮಶೇಖರ್ ಪಡುಕರೆ, ಬೆಂಗಳೂರು

ಫಾರ್ಮುಲಾ ಒನ್ ರೇಸ್ ನೋಡುವಾಗ ಪ್ರತಿಯೊಬ್ಬ ಯುವಕರಲ್ಲೂ ತಾನೊಂದು ದಿನ ಆ ಕಾರಿನಲ್ಲಿ ಸ್ಪರ್ಧಿಸಬೇಕು ಎಂಬ ಉತ್ಕಟ ಆಸೆ ಹುಟ್ಟಿಕೊಳ್ಳುವುದು ಸಹಜ. ಆದರೆ ಅದಕ್ಕೆ ಪೂರಕವಾಗಿ ಬೇಕಾಗಿರುವುದು ಕಾರ್ಟಿಂಗ್. ಅಂಥ ಕಾರ್ಟಿಂಗ್ ರೇಸ್‌ನಲ್ಲಿ ತನ್ನನ್ನು ತೊಡಗಿಸಿಕೊಂಡು ಮುಂದೊಂದು ದಿನ ಫಾರ್ಮುಲಾ ಒನ್ ರೇಸ್‌ನಲ್ಲಿ ಕಾಣಿಸಿಕೊಳ್ಳಬೇಕೆಂಬ ಹಂಬಲದೊಂದಿಗೆ ಸ್ಪರ್ಧಿಸುತ್ತಾನೆ 14ರ ಬಾಲಕ ಬೆಂಗಳೂರಿನ ಮಿಹಿರ್ ಎಸ್. ಅವಲಕ್ಕಿ.

ಬೆಂಗಳೂರಿನ ರಾಜಾಜಿನಗರದಲ್ಲಿರುವ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ ಒಂಬತ್ತನೇ ತರಗತಿ ವಿದ್ಯಾರ್ಥಿ ಮಿಹಿರ್ ಅವಲಕ್ಕಿ ಈಗಾಗಲೇ ರಾಷ್ಟ್ರೀಯ ಮಟ್ಟದ ಕಾರ್ಟಿಂಗ್‌ನಲ್ಲಿ ಜಯ ಗಳಿಸಿ ತನ್ನ ಕನಸನ್ನು ನಸಾಗಿಸಿಕೊಳ್ಳುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾನೆ.
ವೇಗದ ಟ್ರ್ಯಾಕ್‌ನಲ್ಲಿ ಈತ ಚಿಕ್ಕ ಪ್ರತಿಭೆ. ಆದರೆ ರಾಷ್ಟ್ರೀಯ ಕಾರ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಈ ವರ್ಷ ರನ್ನರ್ ಅಪ್ ಸಾಧನೆ ಮಾಡಿದ್ದಾನೆ. ಮುಂದೊಂದು ದಿನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುವ ಪ್ರತಿಯೊಂದು ಲಕ್ಷಣವೂ  ಈ ಪುಟ್ಟ ಬಾಲಕನಲ್ಲಿದೆ.
ಬೆಂಗಳೂರಿನ ಮಿಕೊ ಕಾರ್ಟೋಪಿಯಾದಲ್ಲಿ ನಡೆದ ಎಂಎಂಎಸ್ ಎಫ್ಎಂಎಸ್‌ಸಿಐ ರಾಟ್ಯಕ್ಸ್ ಮ್ಯಾಕ್ಸ್ ರಾಷ್ಟ್ರೀಯ ಕಾರ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಮಿಹಿರ್ ಬಿರೆಲ್ ಆರ್ಟ್ ಇಂಡಿಯಾ ಪರ ಕಾರ್ಟ್‌ಚಾಲನೆ ಮಾಡಿದರು. ತಂದೆ ಸುಮನ್ ಅವಲಕ್ಕಿ ಕೂಡ ಮಗನ ಉತ್ಸಾಹಕ್ಕೆ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದ್ದಾರೆ. ಅಲ್ಪ ಅಂತರದಲ್ಲಿ ಪ್ರಥಮ ಸ್ಥಾನದಿಂದ ವಂಚಿತರಾದರೂ ಮುಂದೊಂದು ದಿನ ರಾಷ್ಟ್ರೀಯ ಚಾಂಪಿಯನ್ ಪಟ್ಟ ಗೆಲ್ಲುವ ಆತ್ಮವಿಶ್ವಾಸ ಮಿಹಿರ್ ಅವರಲ್ಲದೆ. ಕೇವಲ ಎರಡು ವರ್ಷಗಳ ಅಂತರದಲ್ಲಿ ಮಿಹಿರ್ ರಾಷ್ಟ್ರೀಯ ಸ್ಪರ್ಧಿಗಳಿಗೆ ಸವಾಲೋಡ್ಡುವ ರೀತಿಯಲ್ಲಿ ಬೆಳೆದು ನಿಂತಿದ್ದಾರೆ.
ನವೆಂಬರ್ 3 ಮತ್ತು 4ರಂದು ನಡೆದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಮಿಹಿರ್ ಅತ್ಯಂತ ವೇಗದಲ್ಲಿ ಗುರಿ ತಲುಪಿದ ಸ್ಪರ್ಧಿ ಎನಿಸಿದರು. ಹೀಟ್ 1 ಮತ್ತು ಹೀಟ್ 2ರಲ್ಲಿ ಅಗ್ರ ಸ್ಥಾನ ಪಡೆದಿದ್ದರು. ಫೈನಲ್‌ನಲ್ಲಿ ಎರಡನೇ ಸ್ಥಾನದೊಂದಿಗೆ ಸ್ಪರ್ಧಿಸಿದ್ದ ಮಿಹಿರ್ ಉತ್ತಮ ಪೈಪೋಟಿಯೊಂದಿಗೆ ರೇಸ್‌ನಲ್ಲಿ ಎರಡನೇ ಸ್ಥಾನಿಯಾದರು. ಕೇವಲ 13 ಅಂಕಗಳ ಅಂತರದಲ್ಲಿ ಪ್ರಥಮ ಸ್ಥಾನದಿಂದ ವಂಚಿತರಾದರು.
ಎರಡು ವರ್ಷಗಳ ಹಿಂದೆ ವೃತ್ತಿಪರ ರೇಸ್‌ನಲ್ಲಿ ಕಾಣಿಸಿಕೊಂಡ ಮಿಹಿರ್, 2017ರ ಎಫ್ಎಂಎಸ್‌ಸಿಐನಲ್ಲಿ ಆರನೇ ಸ್ಥಾನ ಗಳಿಸಿದರು. ಆದರೆ ಎಲ್ಲಿಯೂ ಆತ್ಮವಿಶ್ವಾಸವನ್ನು ಕಳೆದುಕೊಳ್ಳದೆ ತಂದೆ ಸುಮನ್ ಅವಲಕ್ಕಿ ಅವರ ಪ್ರೋತ್ಸಾಹದಲ್ಲಿ ನಿರಂತರ ಶ್ರಮ ವಹಿಸಿ ಪ್ರತಿಯೊಂದು ಹಂತದಲ್ಲೂ ಮಂಚೂಣಿ ಸ್ಥಾನವನ್ನು ಕಾಯ್ದುಕೊಂಡರು. ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಅಲ್ಪ ಅಂತರದ ಹಿನ್ನಡೆಯ ಕಾರಣ ಅವರು ಅಗ್ರ ಸ್ಥಾನವನ್ನು ಕಳೆದುಕೊಳ್ಳಬೇಕಾಯಿತು. ಆದರೆ ಮುಂದಿನ ರೇಸ್‌ನಲ್ಲಿ ಅಗ್ರ ಸ್ಥಾನದ ಗುರಿ ಹೊಂದಿರುವುದಾಗಿ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ತರಬೇತಿ
ಕೇವಲ ಭಾರತದಲ್ಲಿರುವ ಟ್ರ್ಯಾಕ್ ಹಾಗೂ ರೇಸ್‌ಗಳಲ್ಲಿ ಮಿಂಚಿದರೆ ಸಾಲದು. ಅಂತಾರಾಷ್ಟ್ರೀಯ ಮಟ್ಟದ ಗುರಿ ಹೊಂದಿರುವವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತರಬೇತಿ ಹಾಗೂ ಸ್ಪರ್ಧೆಯ ಅಗತ್ಯವಿರುತ್ತದೆ. ತಂದೆ ಸುಮನ್ ಮಗನ ಉತ್ಸಾಹಕ್ಕೆ ಯಾವುದೇ ರೀತಿಯಲ್ಲಿ ಅಡ್ಡಿ ಮಾಡಲಿಲ್ಲ. ಯೂರೋಪ್‌ನಲ್ಲಿ ನಡೆದ ಈಸಿ ಕಾರ್ಟ್ ಚಾಂಪಿಯನ್‌ಷಿಪ್‌ಗೂ ಕಳುಹಿಸಿಕೊಟ್ಟರು. ಅಲ್ಲಿ ಮಿಹಿರ್ ಬಿರೆಲ್ ಆರ್ಟ್ ಇಂಡಿಯಾ ತಂಡವನ್ನು ಪ್ರತಿನಿಧಿಸಿದ್ದರು. ಇಟಲಿಯಲ್ಲಿ ಆರು ವಿಭಿನ್ನ ಅಂತಾರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಸ್ಪರ್ಧಿಸಿದ್ದ ಮಿಹಿರ್ 32 ಚಾಲಕರಲ್ಲಿ ಒಟ್ಟು 7ನೇ ಸ್ಥಾನ ಗಳಿಸಿದ್ದರು. ವಿದೇಶದಲ್ಲಿ ಪಡೆದ ಈ ಅನುಭವ ಭಾರತದ ರೇಸ್‌ಗಳಲ್ಲಿ ಸ್ಪರ್ಧಿಸಲು ಹೆಚ್ಚು ಅನುಕೂಲವಾಯಿತು. ಇದರ ಪರಿಣಾಮವೇ ಎಫ್ಎಮ್‌ಎಸ್‌ಸಿಐ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಮಿಹಿರ್ ರನ್ನರ್‌ಅಪ್ ಗೌರವಕ್ಕೆ ಪಾತ್ರರಾದರು. ಕಳೆದ ವರ್ಷ 4 ಸ್ಟ್ರೋಕ್ ಕಾರ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ರಾಷ್ಟ್ರೀಯ ಚಾಂಪಿಯನ್ ಪಟ್ಟ ಗೆಲ್ಲುವಲ್ಲಿ ಮಿರಿರ್ ಯಶಸ್ವಿಯಾಗಿದ್ದರು. ಇಲ್ಲಿನ ಯಶಸ್ಸೇ ಅವರನ್ನು ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿತು.
‘ಮಿಹಿರ್ ಅನುಭವಿ ಚಾಲಕನಂತೆ ಕಾರ್ಟ್ ಚಲಾಯಿಸಬಲ್ಲರು. ಒತ್ತಡಗಳನ್ನು ಉತ್ತಮ ರೀತಿಯಲ್ಲಿ ನಿಭಾಯಿಸಬಲ್ಲರು. ತಾಂತ್ರಿಕ ನೈಪುಣ್ಯತೆ, ವೇಗ, ಸ್ಥಿರತೆ ಹಾಗೂ ಪಳಗಿರುವುದು ಅವರ ವಯಸ್ಸಿನ ಚಾಲಕರಲ್ಲಿ ಕಂಡುಬರುವುದು ವಿರಳ. ಅವರು ಭಾರತದ ರಾಲಿ ಟ್ರ್ಯಾಕ್‌ನಲ್ಲಿ ಭವಿಷ್ಯದ ತಾರೆ ಎಂದು ಯಾವುದೇ ಸಂಶಯ ಇಲ್ಲದೆ ಹೇಳಬಹುದು,‘ ಎಂದು ಬಿರೆಲ್ ಆರ್ಟ್ ಇಂಡಿಯಾದ ಮಾಲಿಕ ಹಾಗೂ ಫಾರ್ಮುಲಾ 3 ರೇಸರ್ ಮಾರ್ಕೋ ಬಾರ್ತೋಲಿ ಹೇಳಿದ್ದಾರೆ.
‘ನಮ್ಮ ತಂಡವನ್ನು ಪ್ರತಿನಿಧಿಸುತ್ತಿರುವಾಗಿನಿಂದ ಮಿಹಿರ್ ಅವರನ್ನು ಗಮನಿಸುತ್ತಿದ್ದೇನೆ. ಅವರಲ್ಲಿ ಚಾಂಪಿಯನ್ ಲಕ್ಷಣ ದಟ್ಟವಾಗಿದೆ. ಹೈದರಾಬಾದ್‌ನಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಅವರು ತಾನೊಬ್ಬ ಭವಿಷ್ಯದ ಚಾಂಪಿಯನ್ ಎಂಬುದನ್ನು ಸಾಬೀತುಪಡಿಸಿದ್ದಾರೆ. ಅವರು ರೇಸ್ ಬದುಕಿಗೆ ಇದು ಉತ್ತಮ ಆರಂಭವಾಗಿದೆ,‘ಎಂದು ಬಿರೆಲ್ ಆರ್ಟ್‌ ಇಂಡಿಯಾದ ಸಹ ಮಾಲೀಕ ಹಾಗೂ ಏಷ್ಯಾ ಕಾರ್ಟಿಂಗ್‌ನ ಮಾಜಿ ಚಾಂಪಿಯನ್ ಪ್ರೀತಮ್ ಮುನಿಯಪ್ಪ ಮಿಹಿರ್ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.
ಸುಶ್ಮಿತಾ ನಾರಾಯಣ ಹಾಗೂ ಸುಮನ್ ಅವಲಕ್ಕಿ ಅವರ ಮುದ್ದಿನ ಮಗನಾಗಿರುವ ಮಿಹಿರ್, ಮುಂದೊಂದು ದಿನ ಅಂತಾರಾಷ್ಟ್ರೀಯ ಸರ್ಕಿಟ್‌ನಲ್ಲಿ ತಮ್ಮ ಮಗ ದೇಶಕ್ಕೆ ಕೀರ್ತಿ ತರುತ್ತಾನೆಂಬುದು ಹೆತ್ತವರರ ಹಾರೈಕೆ. ‘ಮಿಹಿರ್ ಅತ್ಯಂತ ಬದ್ಧತೆಯಿಂದ ಕೂಡಿದ ಚಾಲಕ, ಚಿಕ್ಕವಯಸ್ಸಿನಲ್ಲಿ ಆತ ತೋರುತ್ತಿರುವ ಕಾಳಜಿ ಹಾಗೂ ಬದ್ಧತೆಯನ್ನು ಗಮನಿಸಿದಾಗ ಮುಂದೊಂದು ದಿನ ಅಂತಾರಾಷ್ಟ್ರೀಯ ರಾಲಿಯಲ್ಲಿ ದೇಶಕ್ಕೆ ಕೀರ್ತಿ ತರುತ್ತಾನೆಂಬ ನಂಬಿಕೆ ಇದೆ,‘ ಎಂದು ಸುಮನ್ ಅವಲಕ್ಕಿ ಅಭಿಪ್ರಾಯಪಟ್ಟಿದ್ದಾರೆ.

Related Articles