Sunday, September 8, 2024

15 ವರ್ಷ….60 ಶತಕ….ಈತ ನಜಾಫ್ಘಡದ ಚೋಟಾ ನವಾಬ!

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್

ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಅವರನ್ನು “ನಜಾಫ್ಘಡದ ನವಾಬ” ಎಂದೇ ಕರೆಯುತ್ತಾರೆ. ನೈಋತ್ಯ ದಿಲ್ಲಿಯ ನಜಾಫ್ಘಡ ವೀರೇಂದ್ರ ಸೆಹ್ವಾಗ್ ಅವರ ಹುಟ್ಟೂರು. ಕ್ರಿಕೆಟ್ ನಲ್ಲಿ ತನ್ನ ಪ್ರಭುತ್ವ ತೋರಿಸಿದುದಕ್ಕಾಗಿ ಅವರನ್ನು “ನಜಾಫ್ಘಡದ ನವಾಬ” ಎಂದೇ ಕರೆಯಲಾಯಿತು. ಈಗ ಅದೇ ಊರಿನಿಂದ ಬಂದ ಯುವ ಕ್ರಿಕೆಟಿಗನೊಬ್ಬ ತನ್ನ 15ನೇ ವಯಸ್ಸಿನಲ್ಲಿ ಕರ್ನಾಟಕ ರಾಜ್ಯ ಲೀಗ್ ಕ್ರಿಕೆಟ್ ನಲ್ಲಿ 60 ಶತಕಗಳನ್ನು ಸಿಡಿಸಿ “ನಜಾಫ್ಘಡದ ಮರಿ ನವಾಬ” ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆ ಪ್ರತಿಭಾವಂತ ಕ್ರಿಕೆಟಿಗ ಬೇರೆ ಯಾರೂ ಅಲ್ಲ, 51 ಶತಕ, 8 ದ್ವಿಶತಕ ಮತ್ತು 1 ತ್ರಿಶತಕ ಗಳಿಸಿರುವ ಶಿವಂ ಎಂ.ಬಿ.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ನಡೆಸುವ ಲೀಗ್ ಪಂದ್ಯಗಳಲ್ಲಿ ಶಿವಂ ಈ ದಾಖಲೆಯ ಸಾಧನೆಯನ್ನು ಮಾಡಿದ್ದು, ಸದ್ಯ ಶ್ರೇಷ್ಠ ಕ್ಲಬ್ ಎನಿಸಿರುವ ಸ್ವಸ್ತಿಕ್ ಯೂನಿಯನ್ (2) ತಂಡದಲ್ಲಿ ಎರಡನೇ ಡಿವಿಜನ್ ಲೀಗ್ ನಲ್ಲಿ ಆಡುತ್ತಿದ್ದಾರೆ. ರಾಹುಲ್ ದ್ರಾವಿಡ್, ಸಯ್ಯದ್ ಕಿರ್ಮಾನಿ ಮತ್ತು ವಿಜಯ ಭಾರಧ್ಬಾಜ್ ಅವರಂಥ ಹಿರಿಯ ಆಟಗಾರರು ಶಿವಂ ಅವರನ್ನು ಭವಿಷ್ಯದಲ್ಲಿ ಭಾರತದ ಆಟಗಾರ ಎಂದು ಭವಿಷ್ಯ ನುಡಿದಿದ್ದು, ಶಿವಂ ಅದಕ್ಕೆ ತಕ್ಕಂತೆ ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ. ಮಾರ್ಚ್ 27ರಂದು ಶಿವಂ 16ನೇ ವರ್ಷಕ್ಕೆ ಕಾಲಿಡುತ್ತಿದ್ದು, ಕೆಎಸ್ ಸಿಎ ಅಂಡರ್ 16 ಪಂದ್ಯದಲ್ಲಿ ತಂಡ ಫೈನಲ್ ತಲಪುವಲ್ಲಿ ಶಿವಂ ಅವರ ಪಾತ್ರ ಪ್ರಮುಖವಾಗಿತ್ತು. ನಾಳೆ (ಮಾರ್ಚ್ 27) ತಂಡ ಪ್ರಶಸ್ತಿ ಗೆದ್ದರೆ ಶಿವಂ ಅವರ ಹುಟ್ಟುಹಬ್ಬಕ್ಕೆ ಉಡುಗೊರೆ ನೀಡಿದಂತಾಗುತ್ತದೆ. ಶಿವಂ ಅವರ ಬ್ಯಾಟಿಂಗ್ ಯಶಸ್ಸಿನಲ್ಲಿ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕ್ರಿಕೆಟ್ ನ ಪ್ರಧಾನ ಕೋಚ್ ಇರ್ಫಾನ್ ಸೇಠ್ ಅವರ ಪಾತ್ರ ಪ್ರಮುಖವಾಗಿದೆ.

ಶಿವಂ ಅವರ ತಂದೆ ಮದನ್ ಭಾರತೀಯ ವಾಯು ಸೇನೆಯಲ್ಲಿ ಅಧಿಕಾರಿಯಾಗಿದ್ದು, ಬೆಂಗಳೂರಿನಲ್ಲೇ ನೆಲೆಸಿದ್ದಾರೆ. ಪ್ಲಾಸ್ಟಿಕ್ ಬ್ಯಾಟ್ ಮತ್ತು ಬಾಲ್ ನಲ್ಲಿ ಕ್ರಿಕೆಟ್ ಆಡಲು ಆರಂಭಿಸಿದ ಶಿವಂ ಬೆಂಗಳೂರಿಗೆ ಆಗಮಿಸಿ ಕೆಐಒಸಿಯಲ್ಲಿ ಪಳಗಿ ಭರವಸೆಯ ಕ್ರಿಕೆಟಿಗನೆನಿಸಿದರು. ಐದನೇ ಡಿವಿಜನ್ ಲೀಗ್ ನಲ್ಲಿ 350 ರನ್ ಸಿಡಿಸುವ ಮೂಲಕ ಬಾಲಕ ಶಿವಂ ಎಲ್ಲರನ್ನು ಅಚ್ಚರಿಗೊಳಿಸಿದರು. ಮಧ್ಯಮಕ್ರಮಾಂಕದ ಆಟಗಾರನಾಗಿರುವ ಶಿವಂ ನನ್ನು ಕಡಿಮೆ ಸ್ಕೋರ್ ಇರುವಾಗ ಕೋಚ್ ಬ್ಯಾಟಿಂಗ್ ಗೆ ಕಳುಹಿಸುತ್ತಿರಲಿಲ್ಲ,

ಇತರರಿಗೆ ಆಡುವ ಅವಕಾಶ ಸಿಗಲಿ ಎಂಬ ಉದ್ದೇಶದಿಂದ ಹೀಗೆ ಮಾಡುತ್ತಿದ್ದರು. ಮತ್ತು ಕೆಲವೊಮ್ಮೆ ನಿಧಾನವಾಗಿ ಆಡು ಎಂದು ಶಿವಂಗೆ ಸಲಹೆ ನೀಡುತ್ತಿದ್ದರು. ಇದರಿಂದ ಶಿವಂ ಅವರಲ್ಲಿ ಯಾವ ರೀತಿಯ ಬ್ಯಾಟಿಂಗ್ ಶಕ್ತಿ ಇದೆ ಎಂಬುದು ಸ್ಪಷ್ಟವಾಗುತ್ತದೆ.  14, 16 ಮತ್ತು 19 ವರ್ಷ ವಯೋಮಿತಿಯ ಕ್ರಿಕೆಟ್ ನಲ್ಲಿ ಶತಕಗಳ ಸುರಿಮಳೆಗರೆದ ಶಿವಂ ಕರ್ನಾಟಕ ಮಾತ್ರವಲ್ಲಿ ಭವಿಷ್ಯದಲ್ಲಿ ಭಾರತ ಕ್ರಿಕೆಟ್ ತಂಡದ ಭರವಸೆಯ ಆಟಗಾರರೆನಿಸಿದ್ದಾರೆ.

ಶಿವಂ ಅವರ ಸಾಧನೆಗೆ ಕೆಐಒಸಿ ಪ್ರಧಾನ ಕೋಚ್ ಇರ್ಫಾನ್ ಸೇಠ್ ಕೂಡ ಅಚ್ಚರಿ ಮತ್ತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಶಿವಂ ನಿಜವಾಗಿಯೂ ನನ್ನಲ್ಲಿ ಅಚ್ಚರಿಯನ್ನು ಮೂಡಿಸಿದ್ದಾರೆ. ನಮ್ಮ ಅಕಾಡೆಮಿಯಲ್ಲಿ ಇದುವರೆಗೂ ಅನೇಕ ಪ್ರತಿಭಾವಂತ ಕ್ರಿಕೆಟಿಗರು ಬೆಳೆದು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದಾರೆ, ಆದರೆ ಈ ಶಿವಂ ಎಲ್ಲರನ್ನೂ ಮಿರಿಸುವ ಲಕ್ಷಣ ತೋರಿದ್ದಾನೆ. ನಿಜವಾಗಿಯೂ ವೀರೇಂದ್ರ ಸೆಹ್ವಾಗ್ ಅವರ ಊರಿನಿಂದ ಬಂದ ಈತ ಮುಂದೊಂದು ದಿನ “ನಜಾಫ್ಘಡದ ನವಾಬ” ಎಂದು ಕರೆಯಲ್ಪಟ್ಟರೆ ಅಚ್ಚರಿ ಇಲ್ಲ. ಈಗಂತೂ ಶಿವಂ “ನಜಾಫ್ಘಡದ ಮರಿ ನವಾಬ” ಎಂದು ಇರ್ಫಾನ್ ಹೇಳಿದ್ದಾರೆ.

Related Articles