Saturday, October 5, 2024

ಯುವರಾಜ್‌ಗೆ ವಿದಾಯದ ಪಂದ್ಯ ಆಡುವ ಅವಕಾಶ ನೀಡಬೇಕಿತ್ತು

ಸೋಮಶೇಖರ್ ಪಡುಕರೆ

ಪ್ರತಿಯೊಬ್ಬ ಕ್ರೀಡಾಪಟುವಿನ ಬದುಕಿನಲ್ಲಿ ಅಂಗಣಕ್ಕೆ ಕಾಲಿಟ್ಟ ಮೊದಲ ದಿನ ಹಾಗೂ ಅಂಗಣದಿಂದ ನಿರ್ಗಮಿಸಿದ ದಿನ ಅತ್ಯಂತ ಸ್ಮರಣೀಯ. ಇದು ಕ್ರಿಕೆಟ್‌ಗೆ ಮಾತ್ರ ಸೀಮಿತವಾದುದಲ್ಲ.

ಮೊದಲ ದಿನದ ಸಂಭ್ರಮದಂತೆ ವಿದಾಯದ ದಿನದ ‘ಭಾವುಕತೆ ನೋವು ಕೂಡಾ  ನೆನಪಿನಂಗಳದಲ್ಲಿ ಹಸಿರಾಗಿ ಉಳಿಯುವಂತದ್ದು. ಅನೇಕ ಕ್ರಿಕೆಟ್ ದಿಗ್ಗಜರು ಅತ್ಯಂತ ಸರಳವಾಗಿ ತಮ್ಮ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದರು. ತಾವು ಕ್ರಿಕೆಟ್ ಆರಂಭಿಸಿದ ಸಂಸ್ಥೆಯಲ್ಲಿ ವಿದಾಯ ಹೇಳಿದವರೇ ಹೆಚ್ಚು. ಸಚಿನ್ ತೆಂಡೂಲ್ಕರ್ ಅವರ ವಿದಾಯವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯೇ ನಡಿಸಿಕೊಟ್ಟಂತೆ ನಡೆದಿತ್ತು. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಅದಕ್ಕೆ ಅನುಕೂಲವಾಗುವಂತೆ ವೇಳಾಪಟ್ಟಿಯನ್ನೂ ಬಿಸಿಸಿಐ ನಿಗಧಿಪಡಿಸಿತ್ತು. ಇರಲಿ ಸಚಿನ್ ಕ್ರಿಕೆಟ್ ದೇವರು ಎಂದು ಜನ ಹೇಳುತ್ತಾರೆ.

ಯುವರಾಜ್ ಸಿಂಗ್ ಒಬ್ಬ ಸಾಮಾನ್ಯ ಕ್ರಿಕೆಟಿಗನಲ್ಲ. ಆರು ಎಸೆತಕ್ಕೆ ಆರು ಸಿಕ್ಸರ್ ಸಿಡಿಸಿದ್ದು ಸಾಧನೆಯೇ ಆದರೆ, ಕ್ಯಾನ್ಸರ್ ಗೆದ್ದು ಮತ್ತೆ ಅಂಗಣದಲ್ಲಿ ಕಾಣಿಸಿಕೊಂಡಿದ್ದು ಮರೆಯಲಾಗದು. ತಾನು ಯೋ ಯೋ ಟೆಸ್ಟ್ ಫೇಲಾದರೆ ಮತ್ತೆ ಆಡಲು ಅವಕಾಶ ಇಲ್ಲವೆಂಬುದು ಅವರಿಗೆ ಚೆನ್ನಾಗಿ ತಿಳಿದಿತ್ತು. ಒಂದು ವರ್ಷ ಮುಂಚಿತವಾಗಿಯೇ ಐಪಿಎಲ್‌ನಿಂದ ನಿರ್ಗಮಿಸುವ ಮನಸ್ಸು ಆಡಿದ್ದರು. ಆದರೂ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡರು. ಅಲ್ಲಿಯೂ ಅವಕಾಶ ಸಿಗಲಿಲ್ಲ. ಕ್ಯಾನ್ಸರ್ ಕಟ್ಟಿಕೊಂಡೇ ವಿಶ್ವಕಪ್‌ನಲ್ಲಿ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾದರು. ತನಗೊಂದು ವಿದಾಯದ ಪಂದ್ಯ ಸಿಗಬಹುದು ಎಂಬ ಹಂಬಲವು ಅವರಲ್ಲ ಇರಲಿಲ್ಲ ಎಂದು ಹೇಳಲಾಗದು. ಏಕೆಂದರೆ ಅವರು ಕ್ರೀಡಾ ಲೋಕದ ಒಂದು ಸ್ಫೂರ್ತಿ. ಅದೆಷ್ಟೋ ಮಂದಿ ಕ್ಯಾನ್ಸರ್ ಪೀಡಿತರಿಗೆ ತಾವು ಬದುಕಬಹುದು ಎಂಬುದನ್ನು ತೋರಿಸಿಕೊಟ್ಟವರು. ಸಾಧನೆಯ ಹಾದಿಯಲ್ಲಿ ಕಿರಿಯರ ವಿಶ್ವಕಪ್, 19 ವರ್ಷ ವಯೋಮಿತಿಯ ವಿಶ್ವಕಪ್, ಟಿ20 ವಿಶ್ವಕಪ್ ಹಾಗೂ ಐಸಿಸಿ 50 ಓವರ್‌ಗಳ ವಿಶ್ವಕಪ್ ನಮ್ಮೆದುರೇ ಇದೆ. ನಿವೃತ್ತಿಯ ನಂತರವೂ ತಾನು ಕ್ಯಾನ್ಸರ್ ಪೀಡಿತರಿಗಾಗಿ ದುಡಿಯುವೆ ಎಂದು ಯುವಿ ತನ್ನ ಜವಾಬ್ದಾರಿಯನ್ನು ಸ್ಪಷ್ಟಪಡಿಸಿದ್ದಾರೆ.

ಬಿಸಿಸಿಐ ಒಬ್ಬರಿಗೆ ಕಾಯಿ ಮತ್ತೊಬ್ಬರಿಗೆ ಗರಟೆ ನೀಡುವ ಕೆಲಸ ಮಾಡುತ್ತಿದೆ. ಸಚಿನ್ ತೆಂಡೂಲ್ಕರ್ ಬಿಸಿಸಿಐ ಪಾಲಿಗೆ ಮಾರಾಟದ ವಸ್ತು. ಅವರನ್ನು ಈಗಲೂ ಪಂದ್ಯ ವೀಕ್ಷಿಸಲು ಕೋಟ್ಯಂತರ ರೂ. ವ್ಯಯಮಾಡಿ ಕರೆಸಿಕೊಳ್ಳುತ್ತದೆ. ಸಚಿನ್ ಇಲ್ಲದಿದ್ದರೆ ಭಾರತ ತಂಡವೇ ಇಲ್ಲ ಎಂಬಂತೆ ಬಿಂಬಿಸಿದೆ. ಆ ಕಾರಣಕ್ಕಾಗಿಯೇ ಅತ್ಯಂತ ವೈಭವದಲ್ಲಿ ವಿದಾಯದ ಪಂದ್ಯವನ್ನು ಆಯೋಜಿಸಿತ್ತು. ಯುವರಾಜ್ ಸಿಂಗ್‌ಗೆ ವಿಶ್ವಕಪ್‌ನಲ್ಲಿ ಅಲ್ಲದಿದ್ದರೂ ಯಾವುದಾದರೂ ಸರಣಿಗೆ ಒಂದು ಪಂದ್ಯಕ್ಕೆ ಅವಕಾಶ ಕೊಟ್ಟು, ಸ್ಮರಣಿಕೆ ನೀಡುವ ಮೂಲಕ ಗೌರವ ಸೂಚಿಸಬಹುದಾಗಿತ್ತು. ಆದರೆ ಬಿಸಿಸಿಐ ಆ ಕೆಲಸಕ್ಕೆ ಹೋಗದೆ, ನಿವೃತ್ತಿಯ ನಂತರಧ‘ನ್ಯವಾದದ ಪತ್ರವನ್ನು ಮಾಧ್ಯಮಗಳಿಗೆ ರವಾನಿಸಿದೆ.

ಸೌರವ್ ಗಂಗೂಲಿ ಅವರು ಯುವರಾಜ್‌ಗೆ ವಿದಾಯದ ಪಂದ್ಯ ಸಿಗಬೇಕಿತ್ತು ಎಂದು ಅನಿಸುತ್ತಿಲ್ಲ ಎಂದಿದ್ದಾರೆ. ಗಂಗೂಲಿ ಕೂಡ ಒಂದು ವರ್ಷ ಹೊರಗೆ ಉಳಿದಿರುತ್ತಿದ್ದರೆ ಅವರ ಪಾಡು ಹೀಗೇಯೇ ಆಗಿರುತ್ತಿತ್ತು. ಬೆಂಗಳೂರಿನಲ್ಲಿ ಟೆಸ್ಟ್ ಪಂದ್ಯ ಆರಂ‘ವಾಗುವ ಮುಂಚಿನ ದಿನ ವಿದಾಯ ಘೋಷಿಸಿದ್ದರು. ಈಗ ಅವರು ಈ ರೀತಿಯಾಗಿ ಹೇಳಿಕೆ ನೀಡುವುದು ಸಹಜ.
ಪ್ರಸಕ್ತ ವಿಶ್ವಕಪ್ ಆಡುತ್ತಿರುವ ಭಾರತ ಕ್ರಿಕೆಟ್ ತಂಡದ ಉಪನಾಯಕ ರೋಹಿತ್ ಶರ್ಮಾ ಕೂಡ ಯುವರಾಜ್ ಸಿಂಗ್ ಅವರಿಗೆ ವಿದಾಯದ ಪಂದ್ಯ ಆಡಿಸಬೇಕಿತ್ತು ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಈ ರೀತಿಯಲ್ಲಿ ಅವರ ಕ್ರಿಕೆಟ್ ಬದುಕು ಕೊನೆಯಾಗಬಾರದಿತ್ತು ಎಂದಿದ್ದಾರೆ. ಅದಕ್ಕೆ ಯುವರಾಜ್, ನನ್ನೊಳಗಿನ ನೋವು ನಿನಗೆ ಗೊತ್ತು …. ಎಂದು ಟ್ವಿಟರ್‌ನಲ್ಲಿ ಬಿಸಿಸಿಐಗೆ ತಟ್ಟುವಂತೆ ಉತ್ತರಿಸಿದ್ದಾರೆ.
ಕ್ಯಾನ್ಸರ್‌ನಿಂದ ಚೇತರಿಸಿಕೊಂಡ ನಂತರ ಯುವರಾಜ್ ಸಿಂಗ್ ಒಮ್ಮೆ ಬೆಂಗಳೂರಿನಲ್ಲಿರುವ ಎನ್‌ಸಿಎನಲ್ಲಿ ಅಭ್ಯಾಸ ನಡೆಸುತ್ತಿದ್ದರು. ಅವರನ್ನು ಸಂದರ್ಶಿಸುವ ಅವಕಾಶವೂ ಸಿಕ್ಕಿತು. ಮೊದಲ ಪ್ರಶ್ನೆಯಾಗಿ, ಮತ್ತೆ ಅಂಗಣದಲ್ಲಿ ಮೊದಲಿನಂತೆಯೇ ಆಡುತ್ತೇನೆಂಬ ಆತ್ಮವಿಶ್ವಾಸ ನಿಮ್ಮಲ್ಲಿ ಇದೆಯೇ? ಎಂದು ಕೇಳಿದೆ. ಅದಕ್ಕೆ ಉತ್ತರಿಸಿದ ನಂತರ ಎರಡನೇ ಪ್ರಶ್ನೆ ಕೇಳಲು ಮುಂದಾದಾಗ, ‘ಪೆಹಲೇ ಜೊ ಬತಾಯ ವೋ ಲಿಖೋ, ಬಾದ್ ಮೇ ಕುಚ್ ನಾ ಕುಚ್ ಪ್ರಿಂಟ್ ಕರೋ ಮತ್, (ಮೊದಲು ಏನು ಹೇಳಿದೆನೋ ಅದನ್ನು ಬರೆದುಕೊಳ್ಳು, ಆಮೇಲೆ ಏನೇನೋ ಪ್ರಿಂಟ್ ಮಾಡಬೇಡಿ,‘ ಎಂದು ನಗುತ್ತ ಹೇಳಿದರು. ಅದಕ್ಕೆ, ಸಬ್ ರೆಕಾರ್ಡಿಂಗ್ ಹೋ ರಹಾ ಹೇ ಎಂದು ಹೇಳಿದಾಗ, ಗುಡ್ ಕ್ಯಾರಿ ಆನ್ ಎಂದು ನಗುತ್ತ ನುಡಿದರು. ತಂಡದಲ್ಲಿ ಹರ್ಭರ್ಜನ್ ಸಿಂಗ್ ಹೊರತುಪಡಿಸಿದರೆ ಸೋಲು ಗೆಲುವಿನ ನಡುವೆಯೂ ಹೆಚ್ಚು ತಮಾಷೆ ಮಾಡುತ್ತ, ಎಲ್ಲರನ್ನೂ ನಗಿಸುತ್ತಿರುವುದು ಯುವರಾಜ್ ಸಿಂಗ್. ವಿದಾಯದ ಪಂದ್ಯ ಇಲ್ಲದಿರೆ ಏನಂತೆ, ಯುವರಾಜ್ ನಮ್ಮ ನೆನಪಿನಂಗಳದಲ್ಲಿ ಆಡುತ್ತಲೇ ಇರುತ್ತಾರೆ.

Related Articles