Saturday, February 24, 2024

ಯಾರ್ಕ್‌ಶೈರ್‌ ಡೈಮಂಡ್ಸ್‌ಗೆ ಜೆಮಿಮಾ ರೊಡ್ರಿಗಸ್‌

ನವದೆಹಲಿ: ಭಾರತ ಮಹಿಳಾ  ಕ್ರಿಕೆಟ್‌ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್‌ವುಮೆನ್‌ ಜೆಮಿಮಾ ರೊಡ್ರಿಗಸ್‌ ಅವರು  ಇಂಗ್ಲೆಂಡ್‌ನ ಯಾರ್ಕ್‌ಶೈರ್‌ ಡೈಮಂಡ್ಸ್‌ 2019ರ ಆವೃತ್ತಿಗೆ ಸಹಿ ಮಾಡಿದ್ದು,  ಇದರೊಂದಿಗೆ ಆಂಗ್ಲರ ನಾಡಿನಲ್ಲಿ ಕಿಯಾ ಸೂಪರ್‌ ಲೀಗ್‌ ಆಡುತ್ತಿರುವ ಭಾರತದ ಮೂರನೇ  ಆಟಗಾರ್ತಿ ಎಂಬ ಕೀರ್ತಿಗೆ ಭಾಜನರಾದರು.

ಈಗಾಗಲೇ ಭಾರತ ತಂಡದ ಸ್ಮೃತಿ ಮಂಧಾನ ಹಾಗೂ  ಹರ್ಮನ್‌ಪ್ರೀತ್‌ ಕೌರ್‌ ಅವರು ಇಂಗ್ಲೆಂಡ್‌ನಲ್ಲಿ ನಡೆಯುವ ಟಿ-20 ಲೀಗ್‌ನಲ್ಲಿ  ಕಾಣಿಸಿಕೊಂಡಿದ್ದಾರೆ. ಇದೀಗ ಜೆಮಿಮಾ ರೊಡ್ರಿಗಸ್‌ ಅವರು ಮೂರನೇ ಭಾರತೀಯ  ಆಟಗಾರ್ತಿಯಾಗಿದ್ದಾರೆ. ಮುಂದಿನ ಆವೃತ್ತಿಗೆ ಯಾರ್ಕ್‌ಶೈರ್‌ ಡೈಮಂಡ್ಸ್‌ ಮಂಗಳವಾರ ತನ್ನ  ತಂಡದ 15 ಆಟಗಾರ್ತಿಯರನ್ನು ಪ್ರಕಟಿಸಿದೆ. ಇದರಲ್ಲಿ ಜೆಮಿಮಾ ರೊಡ್ರಿಗಸ್‌ ಸ್ಥಾನ  ಪಡೆದಿದ್ದಾರೆ.

2018ರ ಫೆಬ್ರವರಿಯಲ್ಲಿ ಜೆಮಿಮಾ ರೊಡ್ರಿಗಸ್‌  ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು. 25 ಟಿ-20 ಪಂದ್ಯಗಳಲ್ಲಿ ಅವರು 123.57  ಸರಾಸರಿಯಲ್ಲಿ ಅಮೋಘ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದಾರೆ. ಇತ್ತೀಚೆಗೆ ನ್ಯೂಜಿಲೆಂಡ್‌  ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ತನ್ನ ಅಮೋಘ ಬ್ಯಾಟಿಂಗ್‌ನಿಂದ ಎಲ್ಲರ ಗಮನ  ಸೆಳೆದಿದ್ದರು. ವೃತ್ತಿ ಜೀವನದ ಶ್ರೇಷ್ಠ ಇನಿಂಗ್ಸ್‌ ಆಡಿ 81 ರನ್‌ ಗಳಿಸಿದ್ದರು. ಈ  ಸರಣಿಯಲ್ಲಿ ಭಾರತ 2-1 ಅಂತರದಲ್ಲಿ ಸರಣಿ ಗೆದ್ದಿತ್ತು.

ಕಿಯಾ ಸೂಪರ್‌ ಲೀಗ್‌ನಲ್ಲಿ ಆರು ತಂಡಗಳು ಭಾಗವಹಿಸಲಿವೆ. ಆಗಸ್ಟ್‌ 6 ರಿಂದ ಈ ಟೂರ್ನಿ ಆರಂಭವಾಗಲಿದೆ.

Related Articles