Friday, March 1, 2024

ಜರ್ಮನಿಯಲ್ಲಿ ಕ್ರಿಕೆಟ್ ಬೆಳಗಿದ ಕನ್ನಡತಿ ಡಾ. ಅನುರಾಧ!!!

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್

ಜರ್ಮನಿ ಎಂದಾಗ ನಮಗೆ ನೆನಪಾಗುವುದು ಫುಟ್ಬಾಲ್, ಹಾಕಿ  ಹೊರತು ಕ್ರಿಕೆಟ್ ಅಲ್ಲ. ಕ್ರಿಕೆಟ್ ಇಲ್ಲದ ದೇಶಕ್ಕೆ ಹೋಗಿ, ಅಲ್ಲಿಯವರಿಗೆ ಕ್ರಿಕೆಟ್ ಕಲಿಸಿ, ಕ್ಲಬ್ ಟೂರ್ನಿಗಳನ್ನು ನಡೆಸಿ, ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿ, ನಾಯಕಿಯಾಗಿ ಕಳೆದ ವಾರ ಟಿ20 ಪಂದ್ಯವೊಂದರಲ್ಲಿ  ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್ ಗಳಿಸಿ ವಿಶ್ವದಾಖಲೆ ಬರೆದ ಕರ್ನಾಟಕದ ಮಾಜಿ ಆಟಗಾರ್ತಿ, ಪ್ರಸಕ್ತ ಜರ್ಮನಿ ತಂಡದ ನಾಯಕಿ ಡಾ. ಅನುರಾಧ ದೊಡ್ಡಬಳ್ಳಾಪುರ ಅವರ ಬದುಕಿನ ಯಶಸ್ಸಿನ ಕತೆ ಇಲ್ಲಿದೆ.

ಉನ್ನತ ವ್ಯಾಸಂಗಕ್ಕಾಗಿ ಇಂಗ್ಲೆಂಡ್ ಹಾಗೂ ಜರ್ಮನಿಗೆ ತೆರಳಿದರೂ ಅಲ್ಲಿ ಕ್ರಿಕೆಟ್ ಜತೆ ಉಸಿರಾಡುತ್ತಿದ್ದ ಈ ಕನ್ನಡತಿ, ಕಳೆದವಾರ ಆಸ್ಟ್ರೀಯಾ ವಿರುದ್ಧದ ಪಂದ್ಯದಲ್ಲಿ ಸತತ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್ ಗಳಿಸಿ ವಿಶ್ವದಾಖಲೆ ಬರೆದರು. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಶ್ರೀಲಂಕಾದ ಲಸಿತ್ ಮಲಿಂಗ ಹಾಗೂ ಅಪಘಾನಿಸ್ತಾನದದ ರಶೀದ್ ಖಾನ್ ಈ ದಾಖಲೆಯನ್ನು ಮಾಡಿರುತ್ತಾರೆ. ಸೋಮವಾರ ಜರ್ಮನಿಯ ಫ್ರ್ಯಾಂಕ್ಫರ್ಟ್ ನಿಂದ http://www.wordpress-451521-1958220.cloudwaysapps.com/ ಜತೆ ಮಾತನಾಡಿದ ಅನುರಾಧಾ ತಮ್ಮ ಯಶಸ್ಸಿನ ಕತೆಯನ್ನು ಹಂಚಿಕೊಂಡರು.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮಹಿಳಾ ತಂಡದಲ್ಲಿ ಆಲ್ರೌಂಡರ್ ಆಗಿದ್ದ ಅನುರಾಧ ಹತ್ತು ವರ್ಷಗಳ ಕಾಲ ವಿವಿಧ ಲೀಗ್ ಪಂದ್ಯಗಳಲ್ಲಿ ಆಡಿದ್ದರು. ಕರ್ನಾಟಕ ಇನ್ಟಿಟ್ಯೂಟ್ ಆಫ್ ಕ್ರಿಕೆಟ್ (ಕೆಐಒಸಿ) ಪ್ರಧಾನ ಕೋಚ್ ಇರ್ಫಾನ್ ಸೇಟ್ ಅವರ ಗರಡಿಯಲ್ಲಿ ಪಳಗಿದ ಅನುರಾಧ ತಮ್ಮ ಯಶಸ್ಸಿನ ಹಿಂದೆ ಶಾಂತಾ ರಂಗಸ್ವಾಮಿ, ಕರುಣಾ ಜೈನ್, ಮಮತಾ ಮಬೇನ್ ಅವರ  ಪ್ರಭಾವವೂ ಇದೆ ಎಂದೂ ಹೇಳಿದ್ದಾರೆ. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಪದವಿ ವ್ಯಾಸಂಗವನ್ನು ಮುಗಿಸಿದ ಅನುರಾಧ ಅವರು ಬಸವನಗುಡಿಯಲ್ಲಿರುವ ತಮ್ಮ ಮನೆಯ ಸುತ್ತಮುತ್ತ ಹುಡುಗೊಂದಿಗೆ ಆಡುತ್ತಿದ್ದರು. ಆರಂಭದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ ಮಹಿಳಾ ಕ್ರಿಕೆಟ್ ತಂಡಕ್ಕೆ ಪ್ರತ್ಯೇಕವಾದ ತರಬೇತಿ ವ್ಯವಸ್ಥೆ ಇರಲಿಲ್ಲ. ಇರ್ಫಾನ್ ಸೇಟ್ ಅವರ ಅಕಾಡೆಮಿಯೇ ತರಬೇತಿ ಕೇಂದ್ರವಾಗಿತ್ತು. ಅನುರಾಧ ಅವರು ತಮ್ಮ ಮಾತಿನ ನಡುವೆ ಇರ್ಫಾನ್ ಸೇಟ್ ಅವರನ್ನು ಸ್ಮರಿಸುತ್ತಿದ್ದುದು ಇದಕ್ಕೆ ಸಾಕ್ಷಿಯಾಗಿತ್ತು.

ಜರ್ಮನಿಯಲ್ಲಿ ಕ್ರಿಕೆಟ್ ಕಲರವ:

ಕರ್ನಾಟಕದಲ್ಲಿ ವಿವಿಧ ಲೀಗ್ ನಲ್ಲಿ ಆಡಿದ ನಂತರ ಅನುರಾಧ ಅವರು ಇಂಗ್ಲೆಂಡ್ ನಲ್ಲಿ ಉನ್ನತ ಅಧ್ಯಯನ ಮಾಡುವಾಗ ನಾರ್ಥಂಬರ್ಲೆಂಡ್ ಪರ ಕೌಂಟಿಯನ್ನೂ ಆಡಿದ್ದರು. ಅಲ್ಲದೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಲೆವೆಲ್ 2 ಕೋಚಿಂಗ್ ಕೋರ್ಸನ್ನೂ ಪೂರ್ಣಗೊಳಿಸಿ ಕೋಚ್ ಆಗುವ ಅರ್ಹತೆಯನ್ನೂ ಗಳಿಸಿದ್ದರು. ಉನ್ನತ ಅಧ್ಯನಕ್ಕಾಗಿ ಜರ್ಮನಿಗೆ ಬಂದ ಅನುರಾಧ ಅವರಿಗೆ ಕ್ರಿಕೆಟ್ ಆಡುವ ಅವಕಾಶ ಸಿಗಲಿಲ್ಲ. ಪುರುಷರು ಮಾತ್ರ ಆಗಾಗ ಆಡುತ್ತಿದ್ದರು. ಪುರುಷರ ತಂಡದಲ್ಲೇ ಆಟಕ್ಕೆ ಸೇರಿಕೊಂಡರೂ, ಅನುರಾಧ ಫ್ರಾಂಕ್ಫರ್ಟ್ ನಲ್ಲಿ ಮಹಿಳಾ ಕ್ರಿಕೆಟ್ ನ ಪ್ರಚಾರ ಮಾಡಲಾರಂಭಿಸಿದರು, ಬಿಡುವಿನ ವೇಳೆಯಲ್ಲಿ ಕಾಲೇಜು ವಿದ್ಯಾರ್ಥಿನಿಯರು, ಶಿಕ್ಷಕಿಯರು ಮತ್ತು ಸಮಾಜದ ಬೇರೆ ಬೇರೆ ವಿಭಾಗದಿಂದ ಮಹಿಳೆಯರು  ತರಬೇತಿಯಲ್ಲಿ ಪಾಲ್ಗೊಳ್ಳಲಾರಂಭಿಸಿದರು. ಇದರಿಂದಾಗಿ ಫ್ರಾಂಕ್ಫರ್ಟ್ ನಲ್ಲಿ 1 ಜರ್ಮನಿಯಲ್ಲಿ ಒಟ್ಟು 10 ಮಹಿಳಾ ಕ್ರಿಕೆಟ್ ತಂಡಗಳು ಹುಟ್ಟಿಕೊಂಡವು, ಫ್ರಾಂಕ್ಫರ್ಟ್ ತಂಡದಲ್ಲಿ 20 ಮಂದಿ ಆಟಗಾರ್ತಿಯರಿದ್ದಾರೆ ಎಂದು ಅನುರಾಧ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಆರಂಭದಲ್ಲಿ ಅನುರಾಧ ಅವರಿಗೆ ಜರ್ಮನಿ ತಂಡದಲ್ಲಿ ಆಡುವ ಅವಕಾಶ ಸಿಗಲಿಲ್ಲ, ಏಕೆಂದರೆ ಅಲ್ಲಿಯ ರಾಷ್ಟ್ರೀಯ ತಂಡದಲ್ಲಿ ಆಡಬೇಕಾದರೆ ಕನಿಷ್ಠ ಒಂದೂವರೆ ವರ್ಷಗಳ ಕಾಲ ಜರ್ಮನಿಯಲ್ಲಿರಬೇಕು. ಅಲ್ಲಿಯೇ ಉದ್ಯೋಗ ಇದ್ದುದರಿಂದ ಅನುರಾಧ ಅವರಿಗೆ ಜರ್ಮನಿ ತಂಡದಲ್ಲಿ ಆಡುವ ಅವಕಾಶ ಸಿಕ್ಕಿತು. ತಂಡ ಹಲವಾರು ಪ್ರವಾಸಗಳನ್ನು ಕೈಗೊಂಡಿತು. ಮಹಿಳಾ ಕ್ರಿಕೆಟ್ ಗೆ ಹೆಚ್ಚಿನ ಉತ್ತೇಜನ ನೀಡುವ ಉದ್ದೇಶದಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಎರಡು ರಾಷ್ಟ್ರಗಳ ನಡುವಿನ ಪಂದ್ಯಗಳಿಗೆ ಅಂತಾರಾಷ್ಟ್ರೀಯ ಮಾನ್ಯತೆ ನೀಡಿತು. ಆ ಮೂಲಕ ಜರ್ಮನಿಯಲ್ಲಿ ಮಹಿಳಾ ಕ್ರಿಕೆಟ್ ಗೆ ಮತ್ತಷ್ಟು ಉತ್ತೇಜನ ಸಿಕ್ಕಿತು. ಡಾ. ಅನುರಾಧ ಅವರು ಜರ್ಮನಿ ಮಹಿಳಾ ಕ್ರಿಕೆಟ್ ತಂಡದ ನಾಯಕಿಯೂ ಆದರು. ಈಗ ವಿಶ್ವದಾಖಲೆ ಮೂಲಕ ಜರ್ಮನಿಯ ಕ್ರಿಕೆಟ್ ಆಭಿಮಾನಿಗಳು ಮಾತ್ರವಲ್ಲ ಆ ದೇಶದ ಇತರ ಕ್ರೀಡಾಸಕ್ತರ ಮೆಚ್ಚುಗೆಗೂ ಪಾತ್ರವಾಗಿದ್ದಾರೆ.

ತಂಡಕ್ಕೆ ಕನ್ನಡ ಕಲಿಕೆ!!

ಜರ್ಮನಿ ಮಹಿಳಾ ತಂಡದಲ್ಲಿ ಇನ್ನೂ ಇಬ್ಬರು ಭಾರತೀಯ ಮೂಲದ ಆಟಗಾರರಿದ್ದಾರೆ, ಆವರು ಕೂಡ ಕನ್ನಡಿಗರು, ಬೆಂಗಳೂರಿನ ಕಾರ್ತಿಕಾ ಮತ್ತು ಶರಣ್ಯ. ಇವರ ತಂಡದಲ್ಲಿ ಡಾಕ್ಟರ್ ಗಳು, ಶಿಕ್ಷಕಿಯರು ಕೂಡ ಆಡುತ್ತಿರುವುದು ವಿಶೇಷ. ಅನುರಾಧ ಜರ್ಮನ್ ತಂಡದ ನಾಯಕಿಯಾಗಿ ತಂಡದಲ್ಲಿರುವವರಿಗೆ ಕನ್ನಡದ ಪದಗಳನ್ನು ಹೇಣಿಕೊಟ್ಟಿದ್ದಾರೆ. ..ಆಗುತ್ತೆ….ಆಗೊಲ್ಲ….ಕಡ್ಡಿ ಮೇಲೆ ಹಾಕು…,…ಹೀಗೆ  ಹಲವು ಪದಗಳನ್ನು ಪರಿಚಯಿಸಿದ್ದಾರೆ. ಆಟದ ವೇಳೆ ಎದುರಾಳಿ ತಂಡಕ್ಕೆ ಅರ್ಥವಾಗದಿರಲಿ ಎಂಬ ಉದ್ದೇಶದಿಂದ ಕನ್ನಡ ಪದಗಳನ್ನು ಪರಿಚಯಿಸಲಾಗಿದೆ ಎಂದು ಅನುರಾಧ ಹೇಳಿದ್ದಾರೆ, ಕಾರ್ತಿಕಾ ಮತ್ತು ಶರಣ್ಯ ಜತೆ ಆಡುವಾಗ ಕನ್ನಡದಲ್ಲೇ ಮಾತನಾಡುತ್ತೇವೆ ಎಂದು ಅನುರಾಧ ಹೇಳಿದ್ದಾರೆ. ಅನುರಾಧ ಅವರು ವಿಶ್ವದಾಖಲೆ ಬರೆದಾಗ ಜರ್ಮನಿಯ ಮಹಿಳಾ ತಂಡದ ಟ್ವಿಟರ್ ಖಾತೆಯಲ್ಲಿ…..Agathe ….Agathe ..Aithu ಎಂದು ಬರೆದಿರುವುದು ತಂಡದಲ್ಲಿ ಕನ್ನಡ ಪದಗಳು ಯಾವ ರೀತಿಯಲ್ಲಿ ಪರಿಣಾಮ ಬೀರಿವೆ ಎಂಬುದನ್ನು ಗಮನಿಸಬಹುದು.

ಕ್ರಿಕೆಟ್ ಬದುಕಿಗೆ ಪ್ರೋತ್ಸಾಹ ನೀಡಿದ ತಂದೆ ವಾಸುದೇವ ಹಾಗೂ ಗೀತಾ ಮತ್ತು ನ್ಯೂಜಿಲೆಂಡ್ ನಲ್ಲಿರುವ ಸಹೋದರ ಜಯಂತ್ ಅವರನ್ನು  ಡಾ, ಅನುರಾಧ ಈ ಸಂದರ್ಭದಲ್ಲಿ ಸ್ಮರಿಸಿದ್ದಾರೆ.

Related Articles