ಜರ್ಮನಿಯ ಕ್ರಿಕೆಟ್ ಗೆ ಕನ್ನಡದ ಶಿಕ್ಷಕಿಯ ಪಾಠ!

0
188

ಸೋಮಶೇಖರ್ ಪಡುಕರೆ ಸ್ಪೋರ್ಟ್ಸ್ ಮೇಲ್

ಆಕೆ ಜರ್ಮನಿಯ ಶಾಲೆಯೊಂದರಲ್ಲಿ ಶಿಕ್ಷಕಿ, ಜರ್ಮನಿಯ ಕ್ರಿಕೆಟಿಗನನ್ನೇ ಮದುವೆಯಾದ ಕನ್ನಡತಿ, ಜರ್ಮನಿಯಲ್ಲಿ ಯೂರೋಪಿಯನ್ ಕ್ರಿಕೆಟ್ ಸಿರೀಸ್ ನಲ್ಲಿ ಆಡಿದ ಮೊದಲ ಮಹಿಳಾ ಆಟಗಾರ್ತಿ, ಜರ್ಮನಿ ರಾಷ್ಟ್ರೀಯ ಮಹಿಳಾ ತಂಡದ ವಿಕೆಟ್ ಕೀಪರ್ ….ಆಕೆ ಬೇರೆ ಯಾರೂ ಅಲ್ಲ ಅಂಡರ್ 19 ಕ್ರಿಕೆಟ್ ನಲ್ಲಿ ಕರ್ನಾಟಕ ಪರ ಆಡಿ ಈಗ ಜರ್ಮನಿಯಲ್ಲಿ ಕ್ರಿಕೆಟ್ ಬೆಳಗುತ್ತಿರುವ ಹಾಸನ ಮೂಲದ ಶರಣ್ಯ ಸದರಂಗಾನಿ.

ಕೆಲ ದಿನಗಳ ಹಿಂದೆ ಜರ್ಮನಿ ಕ್ರಿಕೆಟ್ ತಂಡದ ನಾಯಕಿ, ಕನ್ನಡತಿ ಡಾ, ಅನುರಾಧ ಅವರೊಂದಿಗೆ ಮಾತನಾಡುವಾಗ ಬೆಂಗಳೂರಿನ ಇನ್ನಿಬ್ಬರು ಕ್ರಿಕೆಟ್ ಆಟಗಾರ್ತಿಯರು ಜರ್ಮನಿಯಲ್ಲಿ ಕ್ರಿಕೆಟ್ ಬೆಳಗಲು ಶ್ರಮಿಸುತ್ತಿರುವ ಅಂಶ ಬೆಳಕಿಗೆ ಬಂತು. ಅವರಲ್ಲಿ ಹಾಸನ ಮೂಲದ, ಬೆಂಗಳೂರಿನಲ್ಲಿ ಪದವಿಪೂರ್ವ ಶಿಕ್ಷಣ ಮುಗಿಸಿ ರಾಜ್ಯ ಕ್ರಿಕೆಟ್ ನಲ್ಲಿ ಹಲವಾರು ಪಂದ್ಯಗಳನ್ನು ಆಡಿರುವ ಆಟಟಗಾರ್ತಿ ಶರಣ್ಯ ಸದರಂಗಾನಿ. ಈಗ ಜರ್ಮನಿಯ ಹ್ಯಾಂಬರ್ಗ್ ನಿವಾಸಿ.

ಬೆಂಗಳೂರಿನ ಜೈನ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ ಶರಣ್ಯ ಇಂಗ್ಲೆಂಡಿನ ಎಸೆಕ್ಸ್ ವಿಶ್ವವಿದ್ಯಾನಿಲಯದಲ್ಲಿ ಪದವಿ ಹಾಗೂ ಬಿಎಡ್ ಪದವಿಯನ್ನು ಗಳಿಸಿರುತ್ತಾರೆ, ನಂತರ ಜರ್ಮನಿಯ ಎರಿಕ್ ಕಾಸ್ಟ್ನರ್ ಸ್ಕೂಲ್ ನಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಶುಕ್ರವಾರ ಹ್ಯಾಂಬರ್ಗ್ ನಿಂದ ಸ್ಪೋರ್ಟ್ಸ್ ಮೇಲ್ ಜತೆ ಮಾತನಾಡಿದ ಶರಣ್ಯ, “ನಮ್ಮ ಮನೆ ಬೆಂಗಲೂರಿನ ಬಾಣಸವಾಡಿ, ಇರ್ಫಾನ್ ಶೇಠ್ ಅವರ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕ್ರಿಕೆಟ್ ನಲ್ಲಿ trbಏತಿ ಪಡೆದು ನಂತರ ರಾಜ್ಯದ ಪರ ಆಡಿದೆ. ವೇದಾಕೃಷ್ಣಮೂರ್ತಿ, ರಾಜೇಶ್ವರಿ ಗಾಯಕ್ವಾಡ್ ಅವರೊಂದಿಗೆ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದೆ. ಬಳಿಕ ಉನ್ನತ ಶಿಕ್ಷಣಕ್ಕಾಗಿ ಇಂಗ್ಲೆಂಡ್ ಗೆ ಹೋದಾಗ ಅಲ್ಲಿ ಕೌಂಟಿ ತಂಡ ಸಸೆಕ್ಸ್ ಪರ ಆಡುವ ಅವಕಾಶ ಸಿಕ್ಕಿತು. ಶಿಕ್ಷಕಿಯಾಗಿ ಜರ್ಮನಿ ಸೇರಿಕೊಂಡಾಗ ಅಲ್ಲಿ ಎಲ್ಲವೂ ಹೊಸದಾಗಿತ್ತು. ಎರಿಕ್ ಕಾಸ್ಟ್ನರ್ ಶಾಲೆಯಲ್ಲಿ 7, 8 ಮತ್ತು 9ನೇ ತರಗತಿಗೆ ಪಾಠ ಮಾಡುವ ಅವಕಾಶ ಸಿಕ್ಕಿತು. ಈ ನಡುವೆ ಅಲ್ಲಿ ಕ್ರಿಕೆಟ್ ಆಡುವ ಅವಕಾಶ ಸಿಕ್ಕಿತು. ಈಗ ಕೆಎಸ್ ವಿ ಕ್ಲಬ್ ನಲ್ಲಿ ಜರ್ಮನಿಯ ಯುವತಿಯರಿಗೆ ಕ್ರಿಕೆಟ್ ತರಬೇತಿ ನೀಡುತ್ತಿರುವೆ,” ಎಂದು ಹೇಳಿದರು.

ಇತ್ತೀಚೆಗೆ ಆಸ್ಟ್ರಿಯಾ ಮತ್ತು ಜರ್ಮನಿ ಮಹಿಳಾ ತಂಡಗಳ ನಡುವೆ ಟಿ20 ಅಂತಾರಾಷ್ಟ್ರೀಯ ಸರಣಿ ನಡೆದಿತ್ತು, ಈ ಸಂದರ್ಭದಲ್ಲಿ ಒಟ್ಟು 4 ಲಕ್ಷ ಮಂದಿ ಕ್ರಿಕೆಟ್ ಅಭಿಮಾನಿಗಳು ಪಂದ್ಯವನ್ನು ವೀಕ್ಷಿಸಿದ್ದಾರೆ, ಇದರಿಂದ ಜರ್ಮನಿಯಲ್ಲಿ ಕ್ರಿಕೆಟ್ ಜನಪ್ರಿಯಗೊಳ್ಳುವುದು ಸ್ಪಷ್ಟ ಎನ್ನುತ್ತಾರೆ ಶರಣ್ಯ.

ಕರ್ನಾಟಕ ಪ್ರೀಮಿಯರ್ ಲೀಗ್ ಆಟಗಾರ ಅಭಿನವ್ ಮನೋಹರ್ ಅವರ ಸೋದರ ಸಂಬಂಧಿಯಾಗಿರುವ ಶರಣ್ಯ ಚಿಕ್ಕಂದಿನಲ್ಲಿ ಹುಡುಗರೊಂದಿಗೆ ಗಲ್ಲಿ ಕ್ರಿಕೆಟ್ ಆಡಿದ್ದು ಕ್ರಿಕೆಟ್ ನಲ್ಲಿ ತೊಡಗಿಸಿಕೊಳ್ಳಲು ಕಾರಣವಾಯಿತು ಎನ್ನುತ್ತಾರೆ.

ಜರ್ಮನ್ ಕ್ರಿಕೆಟಿಗನೊಂದಿಗೆ ಮದುವೆ

ಜರ್ಮನಿ ಕ್ರಿಕೆಟ್ ನಲ್ಲಿ ಜನಪ್ರಿಯತೆ ಹೆಚ್ಚಿದಂತೆ ಶರಣ್ಯ ಅವರಿಗೆ ಅಲ್ಲಿಯ  ಯೂರೋಪಿಯನ್ ಲೀಗ್ ನಲ್ಲೂ ಆಡುವ ಮೂಲಕ ದಾಖಲೆ ಬರೆದರು. ಪುರುಷರ ಕ್ರಿಕೆಟ್ ನಲ್ಲಿ ವಿಕೆಟ್ ಕೀಪಿಂಗ್ ಮಾಡಿದ ಮೊದಲ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಎಲ್ಲರಿಂದ ‘ಶಾರು’ ಎಂದೇ ಕರೆಯಲ್ಪಡುವ 25 ವರ್ಷ ಪ್ರಾಯದ ಶರಣ್ಯ ಮದುವೆಯಾದದ್ದು ಜರ್ಮನಿ ಕ್ರಿಕೆಟಿಗನನ್ನು, ಮಧ್ಯಮ ವೇಗದ ಬೌಲರ್  ಸಿನ್ ಅವರನ್ನು ಮದುವೆಯಾಗಿದ್ದಾರೆ. “ನಮ್ಮ ಮದುವೆ ಭಾರತೀಯ ಸಂಪ್ರದಾಯದಂತೆ ನಡೆಯಿತು. ನಮ್ಮ ಬಂಧುಗಳು ಜರ್ಮನಿಗೆ ಆಗಮಿಸಿ ಆಶೀರ್ವಾದ ಮಾಡಿದ್ದಾರೆ. ಇಲ್ಲಿಯ ಸಂಸ್ಕೃತಿ ಭಾರತೀಯ ಸಂಸ್ಕೃತಿಯನ್ನು ಹೋಲುತ್ತದೆ, ಮಹಿಳೆಯರನ್ನು ಅಪಾರ ಗೌರವದಿಂದ ನೋಡುತ್ತಾರೆ, ಕ್ರಿಕೆಟ್ ಇಲ್ಲಿ ನನಗೆ ಹೊಸ ಬದುಕು ನೀಡಿದೆ, ಜತೆಯಲ್ಲಿ ಶಿಕ್ಷಕ ವೃತ್ತಿ ಇದೆ,’’ ಎಂದು ಶರಣ್ಯ ಹೇಳಿದರು.