ಸೋಮಶೇಖರ್ ಪಡುಕರೆ, ಬೆಂಗಳೂರು:
ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಮಾಜಿದ್ ಮಾಖ್ದೊಮಿ ಕಾರ್ಪೋರೇಟ್ ಕ್ರಿಕೆಟ್‌ನಲ್ಲಿ ಪರಿಚಿತರು. ಎಲ್ಲಿಯೇ ಪಂದ್ಯ ನಡೆದರೂ ತಮ್ಮ ಪುಟ್ಟ ಮಗನನ್ನು ತನ್ನೊಂದಿಗೆ ಕರೆದೊಯ್ಯುತ್ತಿದ್ದರು. ಆಸ್ಟ್ರೇಲಿಯಾದಲ್ಲಿ ಆಸೀಸ್ ಮತ್ತು ಇಂಗ್ಲೆಂಡ್ ನಡುವಿನ ಆಷಸ್ ಸರಣಿ ನಡೆಯುತ್ತಿರುವಾಗ ಬೆಳಿಗ್ಗೆ ಬೇಗನೆ ಎದ್ದ ಆ ಪುಟ್ಟ ಹುಡುಗ ತನ್ನ ತಂದೆಯೊಂದಿಗೆ ಕ್ರಿಕೆಟ್ ವೀಕ್ಷಿಸುತ್ತಿದ್ದ. ರಿಕಿ ಪಾಂಟಿಂಗ್, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಸೇರಿದಂತೆ ಜಗತ್ತಿನ ಶ್ರೇಷ್ಠ ಕ್ರಿಕೆಟಿಗರ ಆಟ ನೋಡಿ ಬೆಳೆದ ಬೆಳೆದ ಪರಿಣಾಮ ಚಿಕ್ಕ ವಯಸ್ಸಿನಲ್ಲೇ ಕ್ರಿಕೆಟ್ ಬಗ್ಗೆ ಅಪಾರ ಕಾಳಜಿ, ಪ್ರೀತಿ ಹುಟ್ಟಿತು. ಪರಿಣಾಮ ಕರ್ನಾಟಕಕ್ಕೆ ಒಬ್ಬ ಯುವ ಆಟಗಾರನ ಕೊಡುಗೆ ಸಿಕ್ಕಿತು. ಹೇಳ ಹೊರಟಿದ್ದು ಕರ್ನಾಟಕ 14 ವರ್ಷವಯೋಮಿತಿಯ ವಲಯ ಮಟ್ಟದ ಕ್ರಿಕೆಟ್‌ನಲ್ಲಿ ಪ್ರೆಸಿಡೆಂಟ್ ಇಲವೆನ್ ತಂಡದ ನಾಯಕತ್ವ ವಹಿಸಿರುವ ಭರವಸೆಯ ಆಟಗಾರ ಅಸಾದ್ ಎಂ. ಕುರಿತು.
ಐದನೇ ವಯಸ್ಸಿನಲ್ಲೇ ಬ್ಯಾಟಿಂಗ್ ಹುಚ್ಚು ಹೆಚ್ಚಿಸಿಕೊಂಡ ಅಸಾದ್‌ಗೆ ತರಬೇತಿಗೆ ಅವಕಾಶ ಸಿಕ್ಕಿದ್ದು ಮಹದೇವಪುರದ ಜೆ.ಕೆ. ಅಕಾಡೆಮಿಯಲ್ಲಿ. ಜಯಕುಮಾರ್ ಅವರಿಂದ. ಬಳಿಕ ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕ್ರಿಕೆಟ್ (Karnataka Institute of Cricket (KIOC)ನಲ್ಲಿ ಪ್ರಧಾನ ಕೋಚ್ ಇರ್ಫಾನ್ ಸೇಟ್ (Irfan Sait) ಅವರಲ್ಲಿ ಬ್ಯಾಟಿಂಗ್‌ನಲ್ಲಿ ತಾಂತ್ರಿಕ ಅಂಶಗಳನ್ನು ಕಲಿತು ಉತ್ತಮ ಲಯ ಕಂಡುಕೊಂಡ ಅಸಾದ್‌ಗೆ ಕ್ರಿಕೆಟ್‌ನಲ್ಲಿ ಮುಂದುವರಿಯುವ ಆತ್ಮವಿಶ್ವಾಸ ಸಿಕ್ಕಿತು. ಜೊತೆಯಲ್ಲಿ ತಂದೆಯಿಂದ ಮಗನ ಉತ್ಸಾಹಕ್ಕೆ ಪೂರಕವಾದ ಪ್ರೋತ್ಸಾಹ ನೀಡಿದರು.
“ಅಸಾದ್ ನಮ್ಮ ಅಕಾಡೆಮಿಗೆ ಸೇರಿದಾಗ ಖಿನ್ನತೆಯಿಂದಾಗಿ ಆತ್ಮವಿಶ್ವಾಸದ ಕೊರತೆ ಇದ್ದಿತ್ತು. ನಮ್ಮ ಮನಃಶಾಸ್ತ್ರ ತಜ್ಞರ ಮೂಲಕ ಅವನಲ್ಲಿ ಆತ್ಮವಿಶ್ವಾಸವನ್ನು ತುಂಬಿದೆವು. ಈಗ ಅವನು ಆಡುತ್ತಿರುವ ರೀತಿ ನೋಡಿದರೆ ಖುಷಿಯಾಗುತ್ತದೆ. ಪರಿಸ್ಥಿತಿಗೆ ತಕ್ಕಂತೆ ಆಡುವ ಸಾಮರ್ಥ್ಯ ಹೊಂದಿರುವ ಆಟಗಾರ ಅಸಾದ್. ಲೀಗ್‌ನಲ್ಲಿ ಒಂಟಿಯಾಗಿ ಹೋರಾಡಿ ನಮ್ಮ ತಂಡಕ್ಕೆ ಜಯ ತಂದುಕೊಟ್ಟ ಆಟಗಾರ. ಆತ ಭವಿಷ್ಯದ ಆಸ್ತಿ,” ಎಂದು ಕರ್ನಾಟಕ ಇನ್‌ಟ್ಟಿಟ್ಯೂಟ್ ಆಫ್ ಕ್ರಿಕೆಟ್ (KIOC)ನ ಪ್ರಧಾನ ಕೋಚ್ ಇರ್ಫಾನ್ ಸೇಟ್ ಹೇಳಿದ್ದಾರೆ.
“ನಾನೆಲ್ಲೇ ಕ್ರಿಕೆಟ್ ಆಡಲು ಹೋಗಲಿ ಅಲ್ಲಿಗೆ ನಾನು ಬರುತ್ತೇನೆ ಎನ್ನುತ್ತಿದ್ದ, ಬೆಳಿಗ್ಗೆ ಐದು ಗಂಟೆಗೆ ಎದ್ದು ಆಷಸ್ ಸರಣಿ ನೋಡಲು ಕುಳಿತರೆ ಅಲ್ಲಿಗೂ ಹಾಜರ್. ಚಿಕ್ಕ ಬ್ಯಾಟ್ ಹಿಡಿದು ಹಿರಿಯ ಆಟಗಾರರ ಶೈಲಿಯನ್ನು ಅನುಕರಣೆ ಮಾಡುತ್ತಿದ್ದ. ನನಗೆ ಕ್ರಿಕೆಟ್‌ನಲ್ಲಿ ಆಸಕ್ತಿ ಇದ್ದ ಕಾರಣ ನನ್ನ ಮಗನೂ ಕ್ರಿಕೆಟ್‌ನಲ್ಲಿ ಮುಂದುವರಿಯಲಿ ಎಂಬ ಸದುದ್ದೇಶದಿಂದ ಅಕಾಡೆಮಿಗೆ ಸೇರಿಸಿದೆ. ಇದುವರೆಗೂ ಆತ ನನ್ನನ್ನು ಎಲ್ಲಿಯೂ ನಿರಾಸೆಗೊಳಿಸಲಿಲ್ಲ. ಮುಂದೊಂದು ದಿನ ಉತ್ತಮ ಕ್ರಿಕೆಟಿಗನಾಗಲಿ ಎಂಬುದೇ ಹಾರೈಕೆ. ಮಕ್ಕಳು ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ಆರೋಗ್ಯವೂ ಉತ್ತಮವಾಗಿರುತ್ತದೆ. ನಾನೀಗಲೂ ಕಾರ್ಪೊರೇಟ್ ಕ್ರಿಕೆಟ್ ಆಡುತ್ತಿರುವೆ ಇದರಿಂದ ಫಿಟ್ನೆಸ್ ಉತ್ತಮವಾಗಿರುತ್ತದೆ,” ಎಂದು ಹೇಳುವ ಮಾಜಿದ್ ಅವರ ಮಾತಿನಲ್ಲಿ ಕ್ರೀಡೆಯ ಬಗ್ಗೆ ಇರುವ ನಿಜವಾದ ದೃಷ್ಟಿಕೋನ ಸ್ಪಷ್ಟವಾಗುತ್ತದೆ.
ಬೆಂಗಳೂರಿನ ಜನಪ್ರಿಯ ಕ್ರಿಕೆಟ್ ಕ್ಲಬ್ ಸ್ವಸ್ತಿಕ್ ಯೂನಿಯನ್ ಕ್ರಿಕೆಟ್ ಕ್ಲಬ್ 2 ಪರ ಆಡುತ್ತಿರುವ ಅಸಾದ್, ಈ ಋತುವಿನಲ್ಲಿ 365 ರನ್ ಗಳಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದರಲ್ಲಿ ಎರಡು ಶತಕ ಮತ್ತು 88 ರನ್ ಸೇರಿತ್ತು. ಈ ನಿರಂತರ ಸಾಧನೆ ಮತ್ತು ಬದ್ಧತೆ ಈ ಯುವ ಕ್ರಿಕೆಟಿಗನನ್ನು ಪ್ರೆಸಿಡೆಂಟ್ ಇಲೆವೆನ್‌ನ ನಾಯಕನನ್ನಾಗಿ ಮಾಡಿತು.
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಯ ಆಟವನ್ನು ಮಾದರಿಯಾಗಿಸಿಕೊಂಡಿರುವ ಅಸಾದ್, ಒಂದನೇ ಕ್ರಮಾಂಕದ ಭರವಸೆಯ ಆಟಗಾರ. ಪರಿಸ್ಥಿತಿ ನೋಡಿಕೊಂಡು, ಎದುರಾಳಿಯ ಬೌಲಿಂಗ್ ಸಾಮರ್ಥ್ಯವನ್ನು ಅರಿತುಕೊಂಡು, ಒತ್ತಡಕ್ಕೆ ಸಿಲುಕದೆ ಕ್ಲಾಸಿಕ್ ಆಟವಾಡುವ ಅಸಾದ್‌ನಲ್ಲಿ ಭವಿಷ್ಯದ ಕ್ರಿಕೆಟ್ ತಾರೆಯೊಂದನ್ನು ಕಂಡಂತಾಗುತ್ತದೆ.
ಪ್ರತಿಯೊಂದು ಕ್ರೀಡೆಯಲ್ಲೂ ಒತ್ತಡ ಇದ್ದೇ ಇರುತ್ತದೆ. ಆ ರೀತಿಯ ಒತ್ತಡವನ್ನು ಗೆಲ್ಲುವ ಆಟಗಾರ ಯಶಸ್ಸನ್ನು ಕಾಣುತ್ತಾನೆ. ಕ್ರೀಡೆಯ ಬಗ್ಗೆ ಅಪಾರ ಜ್ಞಾನ ಹೊಂದಿರುವ ಮಾಜಿದ್ ತಮ್ಮ ಮಗ ಅಸಾದ್ ಒತ್ತಡಕ್ಕೆ ಸಿಲುಕದಂತೆ ನೋಡಿಕೊಳ್ಳುತ್ತಾರೆ. “ಯಾವುದೇ ಕ್ರೀಡೆಯಲ್ಲಿ ಯಶಸ್ಸು ಕಾಣಬೇಕಾದರೆ ಮಕ್ಕಳು ಒತ್ತಡಕ್ಕೆ ಸಿಲುಕದಂತೆ ನೋಡಿಕೊಳ್ಳಬೇಕು. ತಪ್ಪುಗಳಿಂದ ಪಾಠ ಕಲಿಯಬೇಕೆ ಹೊರತು ಆ ತಪ್ಪುಗಳ ಬಗ್ಗೆ ಮತ್ತೆ ಮತ್ತೆ ಮಾತನಾಡುವುದು ಸೂಕ್ತವಲ್ಲ. ಒಂದು ಚೆಂಡಿಗೆ ಹೊಡೆಯಲಾಗಲಿಲ್ಲವೆಂದಾದಾಗ ಆ ಬಗ್ಗೆ ಯೋಚಿಸಬಾರದು. ಮುಂದಿನ ಚೆಂಡಿನ ಬಗ್ಗೆ ಗಮನ ಹರಿಸಬೇಕು. ಅಂಗಣದಲ್ಲಿ ಬ್ಯಾಟಿಂಗ್ ಮಾಡುವಾಗ ಹಿಂದಿನ ಶತಕ, ವೈಫಲ್ಯ ಯಾವುದೂ ತಲೆಯಲ್ಲಿರಬಾರದು. ನಿತ್ಯವೂ ಹೊಸತನ ಇರಬೇಕು, ಹಾಗಿದ್ದಲ್ಲಿ ಮಾತ್ರ ಯಶಸ್ಸು ಕಾಣಲು ಸಾಧ್ಯ,” ಎನ್ನುತ್ತಾರೆ ಮಾಜಿದ್.
“ಜಯಕುಮಾರ್ ಸರ್, ಕೆಐಒಸಿಯ ಇರ್ಫಾನ್ ಸೇಟ್ ಮತ್ತು ಡೆಲ್ಲಿ ಪಬ್ಲಿಕ್ ಸ್ಕೂಲ್‌ನ ವಿನಾಯಕ ಸರ್ ನನ್ನ ಮಗನ ಕ್ರಿಕೆಟ್ ಬದುಕಿನಲ್ಲಿ ಪ್ರಮುಖ ಪಾತ್ರವಹಿಸಿರುತ್ತಾರೆ. ಪ್ರತಿಯೊಂದು ಹಂತದಲ್ಲೂ ಅವರು ತಿದ್ದಿ ತೀಡಿ ಯಶಸ್ಸಿನ ಹಾದಿಯನ್ನು ತೋರಿಸಿದ್ದಾರೆ,” ಎಂದು ಮಾಜಿದ್ ಹೇಳಿದರು.
ಮ್ಯಾಂಚೆಸ್ಟರ್ ಸಿಟಿ ಅಭಿಮಾನಿ: ಕ್ರಿಕೆಟ್ ಆಡುವುದನ್ನೇ ಉಸಿರಾಗಿಸಿಕೊಂಡಿರುವ ಅಸಾದ್‌ಗೆ ಫುಟ್ಬಾಲ್ ಆಟದ ಬಗ್ಗೆ ಆಪಾರ ಪ್ರೀತಿ. ಇಂಗ್ಲಿಷ್ ಪ್ರೀಮಿಯರ್ ಲೀಗ್ ಪಂದ್ಯಗಳನ್ನು ಚಾಚೂ ತಪ್ಪದೆ ವೀಕ್ಷಿಸುವ ಅಸಾದ್ ಮಾಂಚೆಸ್ಟರ್ ಸಿಟಿ ತಂಡದ ಫ್ಯಾನ್. ಆ ತಂಡದ ಪ್ರತಿಯೊಬ್ಬ ಆಟಗಾರರನ್ನು ಗುರುತಿಸಿ ಹೆಸರು ಹೇಳುವ ಅಸಾದ್‌ಗೆ ಫುಟ್ಬಾಲ್ ಮೇಲೆ ಎಷ್ಟು ಪ್ರೀತಿ ಇದೆ ಎಂಬುದು ಸ್ಪಷ್ಟವಾಗುತ್ತದೆ.
ಬೆಂಗಳೂರಿನ ಹೊರಮಾವು ನಿವಾಸಿಯಾಗಿರುವ ಮಾಜಿದ್ ಮತ್ತು ಮಿಷೆಲ್ಲೆ ದಂಪತಿಯ ಏಕೈಕ ಪುತ್ರನಾಗಿರುವ ಅಸಾದ್, ಡೆಲ್ಲಿ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಯಾಗಿದ್ದು, ಕ್ರಿಕೆಟ್ ಜೊತೆಯಲ್ಲಿ ವಿದ್ಯಾಭ್ಯಾಸದಲ್ಲೂ ಅಗ್ರ ಕ್ರಮಾಂಕದಲ್ಲಿದ್ದಾನೆ.