Thursday, September 12, 2024

ಚಿನ್ನದ ಗಣಿಯಿಂದ ಚಿನ್ನಸ್ವಾಮಿಗೆ ಕ್ರಿಕೆಟಿಗ ಶಿವ ರಾಜಣ್ಣ

ಸೋಮಶೇಖರ್‌ ಪಡುಕರೆ, ಬೆಂಗಳೂರು:

ಚಿಕ್ಕಂದಿನಲ್ಲೇ ಬೇರೆಯವರು ಆಡುವುದ ನೋಡಿ ಕ್ರಿಕೆಟ್‌ ಕಲಿತು, ಹೆತ್ತವರಲ್ಲಿ ಕ್ರಿಕೆಟಿಗನಾಗಬೇಕೆಂಬ ಆಶಯವನ್ನು ವ್ಯಕ್ತಪಡಿಸಿ ಶಿಸ್ತಿನಲ್ಲಿ ಕ್ರಿಕೆಟ್‌ ಕಲಿತು. ಅದಕ್ಕೆ ಪೂರಕವಾದ ಪ್ರದರ್ಶನವನ್ನು ತೋರಿ ಈಗ ರಾಜ್ಯ ಕ್ರಿಕೆಟ್‌ ತಂಡದ ಕದ ತಟ್ಟಿರುವ ಕೋಲಾರದ ಕ್ಯಾಲನೂರಿನ ಶಿವ ರಾಜಣ್ಣ ಭವಿಷ್ಯದಲ್ಲಿ ಉತ್ತಮ ಕ್ರಿಕೆಟಿಗನಾಗುವ ಎಲ್ಲ ಲಕ್ಷಣ ಹೊಂದಿದ್ದಾರೆ.

ಕೋಲಾರದ ಕ್ಯಾಲನೂರಿನ ರಾಜಣ್ಣ ಮತ್ತು ವರಲಕ್ಷ್ಮೀ ಅವರ ಮಗನಾಗಿರುವ ಶಿವ ಐದನೇ ವಯಸ್ಸಿನಲ್ಲಿ ಬೇರೆಯವರು ಕ್ರಿಕೆಟ್‌ ಆಡುವುದನ್ನು ನೋಡಿ ಮನೆಗೆ ಬಂದು ಅದೇ ರೀತಿಯಲ್ಲಿ ಅಭ್ಯಾಸ ಮಾಡುತ್ತಿದ್ದ. ಆರಂಭದಲ್ಲಿ ಯಾವುದೇ ಅಕಾಡೆಮಿಯಲ್ಲಿ ತರಬೇತಿ ಪಡೆದ ಆಟಗಾರನಲ್ಲ. ನಂತರ ಕರ್ನಾಟಕ ಇನ್‌ಸ್ಟಿಟ್ಯೂಟ್‌ ಆಫ್‌ ಕ್ರಿಕೆಟ್‌ನಲ್ಲಿ ತರಬೇತಿ ನೀಡುತ್ತಾರೆ ಎಂಬ ವಿಷಯ ಗೆಳೆಯರಿಂದ ತಿಳಿದು ಅಲ್ಲಿಗೆ ಸೇರಿಸುವಂತೆ ತಂದೆಯಲ್ಲಿ ವಿನಂತಿಸಿಕೊಂಡ. ಶಿವನಲ್ಲಿದ್ದ ಕ್ರಿಕೆಟ್‌ ಪ್ರತಿಭೆಯನ್ನು ಕಂಡ ಕೆಐಒಸಿ ಪ್ರಧಾನ ಕೋಚ್‌ ಹಾಗೂ ನಿರ್ದೇಶಕರಾದ ಇರ್ಫಾನ್‌ ಸೇಟ್‌ ಅವರ ಉಚಿತವಾಗಿ ತರಬೇತಿ ನೀಡಿದರು. ಕೋವಿಡ್‌ ಕಾಲದಲ್ಲಿ ಶಿವ ಕ್ರಿಕೆಟ್‌ ತರಬೇತಿಯನ್ನು ಬಿಟ್ಟಿದ್ದರು. ಆದರೆ ಅವರಲ್ಲಿರುವ ಕ್ರಿಕೆಟ್‌ ಪ್ರತಿಭೆಯ ಮೇಲೆ ಕೋವಿಡ್‌ ಯಾವುದೇ ರೀತಿಯ ಪರಿಣಾಮ ಬೀರಲಿಲ್ಲ.

22 ಶತಕ, 121 ಅರ್ಧ ಶತಕ!: ವಿವಿಧ ಹಂತದ ಕ್ರಿಕೆಟ್‌ ಪಂದ್ಯಗಳಲ್ಲಿ ಶಿವ ಇದುವರೆಗೂ ಒಟ್ಟು 22 ಶತಕಗಳನ್ನು ಗಳಿಸಿ ಅದ್ಭುತ ಪ್ರದರ್ಶನ ತೋರಿದ್ದಾರೆ. 125ಕ್ಕೂ ಹೆಚ್ಚು ಅರ್ಧ ಶತಕ ಗಳಿಸಿರುವ ಶಿವ ಇದುವರೆಗೂ ಗಳಿಸಿದ ಒಟ್ಟು ರನ್‌ 11,509 ದಾಟಿದೆ. U14 ಲೀಗ್‌ನಲ್ಲಿ 365 ರನ್‌, U16 ಲೀಗ್‌ನಲ್ಲಿ 247, U16 ವಲಯ ಮಟ್ಟದಲ್ಲಿ 318 ರನ್‌ ಇದು ಕಳೆದ ಹಾಗೂ ಈ ಋತುವಿನಲ್ಲಿ ಶಿವ ಮಾಡಿರು ಸಾಧನೆಯಾಗಿದೆ. ಟೀನ್‌ ಸಂಕಷ್ಟದಲ್ಲಿದ್ದಾಗಿ ಜವಾಬ್ದಾರಿಯುತ ಬ್ಯಾಟಿಂಗ್‌ ಪ್ರದರ್ಶಿಸಿ 114 ರನ್‌ ಗಳಿಸಿ ತಂಡಕ್ಕೆ ನೆರವಾದ ಶಿವ ಭವಿಷ್ಯದಲ್ಲಿ ತಾನೊಬ್ಬ ಅತ್ಯಂತ ಬದ್ಧತೆಯ ಆಟಗಾರ ಎಂಬುದನ್ನು ಸಾಬೀತುಪಡಿಸಿದ್ದಾನೆ.

ಯಾವುದೇ ಕ್ರಮಾಂಕದಲ್ಲಿ ಆಡಬಲ್ಲ ಆಟಗಾರ: ಇರ್ಫಾನ್‌ ಸೇಟ್‌

“ಶಿವ ಯಾವುದೇ ಕ್ರಮಾಂಕದಲ್ಲಿ ಆಡಬಲ್ಲ ಆಟಗಾರ. ಇನ್ನಿಂಗ್ಸ್‌ ಆರಂಭಿಸುವುದರಿಂದ ಹಿಡಿದು ಆರನೇ ಕ್ರಮಾಂಕದ ವರೆಗೂ ಆಡಬಲ್ಲ ಉತ್ತಮ ಸಾಮರ್ಥ್ಯ ಹೊಂದಿರುವ ಆಟಗಾರ. ಆತನ ಆಟ ನೋಡಿ ನಾನು ನನ್ನಿಂದಾದ ಪುಟ್ಟ ಸಹಾಯವನ್ನು ಮಾಡಿರುವೆ. ಅದು ಆತನ ಬದ್ಧತೆಗೆ ನೀಡಿದ ಪ್ರೋತ್ಸಾಹ. ಆತ ಉತ್ತಮ ಭವಿಷ್ಯ ಹೊಂದಿರುವ ಆಟಗಾರ. ಮೈಸೂರಿನಲ್ಲಿ ನಡೆದ ಐದು ಪಂದ್ಯಗಳಲ್ಲಿ ನಾಲ್ಕು ಶತಕ ಗಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರನಾದ. ಆಯ್ಕೆ ಟ್ರಯಲ್ಸ್‌ ಅಂದಾಗ ಸ್ವಲ್ಪ ಒತ್ತಡಕ್ಕೆ ಸಿಲುಕುತ್ತಾನೆ. ಬೌಲಿಂಗ್‌ ಕಡೆಗೆ ಇನ್ನಷ್ಟು ಗಮನಹರಿಸಿದರೆ ಉತ್ತಮ ಆಲ್ರೌಂಡರ್‌ ಆಗುವ ಸಾಮರ್ಥ್ಯ ಶಿವನಲ್ಲಿದೆ. ಆತನನ್ನು ಉತ್ತಮ ಕ್ರಿಕೆಟಿಗನನ್ನಾಗಿ ಮಾಡುವುದು ನನ್ನ ಜವಾಬ್ದಾರಿ. ಬ್ಯಾಟಿಂಗ್‌ನಲ್ಲಿ ತಾಂತ್ರಿಕವಾಗಿ ಬಲಿಷ್ಠವಾಗಿರುವ ಆಟಗಾರ,” ಎಂದು ಕೆಐಒಸಿ ಪ್ರಧಾನ ಕೋಚ್‌ ಇರ್ಫಾನ್‌ ಸೇಟ್‌ ಹೇಳಿದ್ದಾರೆ.

“ಕ್ರಿಕೆಟ್‌ ನಮ್ಮ ಪಾಲಿನ ಕ್ರೀಡೆಯಾಗಿರಲಿಲ್ಲ. ಆತನನ್ನು ಅಕಾಡೆಮಿಗೆ ಸೇರಿಸಬೇಕೆಂಬ ಆಶಯವೂ ಇದ್ದಿರಲಿಲ್ಲ. ಉತ್ತಮ ರೀತಿಯಲ್ಲಿ ಓದಿ ಎಲ್ಲಿಯಾದರೂ ಒಂದು ಉದ್ಯೋಗಕ್ಕೆ ಸೇರಿದರೆ ಸಾಕೆಂಬುದು ನಮ್ಮ ಗುರಿಯಾಗಿತ್ತು. ಆದರೆ ಶಿವ, ಚಿಕ್ಕಂದಿನಿಂದಲೂ ಬೇರೆಯವರು ಆಡುತ್ತಿರುವುದನ್ನು ನೋಡಿ ಅವರನ್ನು ಅನುಕರಣೆ ಮಾಡುತ್ತಿದ್ದ. ಕೊನೆಗೆ ಅವನಾಗಿಯೇ ನನ್ನನ್ನು ಅಕಾಡೆಮಿಗೆ ಸೇರಿಸಿ, ಕಲಿಯುತ್ತೇನೆ ಎಂದಾಗ ಕೆಐಒಸಿ ಅಕಾಡೆಮಿಗೆ ಸೇರಿಸಿದೆವು. ಆತ ಎಲ್ಲಿಯೂ ನನ್ನ ನಿರೀಕ್ಷೆಯನ್ನು ಹುಸಿಗೊಳಿಸಿಲ್ಲ. ಉತ್ತಮವಾಗಿಯೇ ಆಡುತ್ತಿದ್ದಾರೆ.” ಎನ್ನುತ್ತಾರೆ ಶಿವು ಅವರ ತಂದೆ ರಾಜಣ್ಣ.

ಓದಿನಲ್ಲೂ ಟಾಪ್‌!

ಸಾಮಾನ್ಯವಾಗಿ ಕ್ರೀಡೆಯಲ್ಲಿ ತೊಡಗಿಸಿಕೊಂಡ ಮಕ್ಕಳು ಓದಿನಲ್ಲಿ ಹಿಂದೆ ಬೀಳುತ್ತಾರೆಂಬ ತಪ್ಪು ನಂಬಿಕೆ ಅನೇಕ ಹೆತ್ತವರಲ್ಲಿದೆ. ಆದರೆ ಇದು ಸತ್ಯಕ್ಕೆ ದೂರವಾದುದು. ಶಿವು ಕ್ರಿಕೆಟ್‌ಗಾಗಿ ಹೆಚ್ಚಿನ ಸಮಯವನ್ನು ವಿನಿಯೋಗಿಸಿದರೂ ಓದಿಗಾಗಿ ಸಮಯವನ್ನು ಸರಿದೂಗಿಸಿಕೊಂಡು ಓದಿನಲ್ಲಿ ಅಗ್ರ ಸ್ಥಾನದಲ್ಲಿದ್ದಾನೆ. ಬೆಂಗಳೂರಿನ ಸೇಂಟ್‌ ಜೋಸೆಫ್‌ ಬಾಯ್ಸ್‌ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಶಿವು ಕರ್ನಾಟಕ ಕ್ರಿಕೆಟ್‌ನ ಭವಿಷ್ಯದ ಆಸ್ತಿ ಎಂದರೆ ಅತಿಶಯೋಕ್ತಿಯಾಗಲಾರು.

“ನಾವು ಶಿವನಿಗೆ ಕ್ರಿಕೆಟ್‌ ಅಥವಾ ಓದಿನ ಬಗ್ಗೆ ಯಾವುದೇ ರೀತಿಯ ಒತ್ತಡ ಹೇರುವುದಿಲ್ಲ. ಓದು ಅತ್ಯಂತ ಮುಖ್ಯವಾದುದು. ಕ್ರಿಕೆಟ್‌ ಎಂಬುದು ಒಂದು ಅವಕಾಶದ ಆಟ. ಅದನ್ನು ನಂಬಿಕೊಂಡು ಓದು ನಿಲ್ಲಬಾರದು ಎಂದು ಶಿವನಿಗೆ ಯಾವಾಗಲೂ ಹೇಳುತ್ತಿರುತ್ತೇನೆ. ಆತನಿಗೂ ಆ ಬಗ್ಗೆ ಚೆನ್ನಾಗಿ ಗೊತ್ತಿದೆ. ಕರ್ನಾಟಕದಲ್ಲಿ ಸಾಕಷ್ಟು ಪ್ರತಿಭಾವಂತ ಆಟಗಾರರಿದ್ದಾರೆ. ತಂಡಕ್ಕೆ ಬೇಕಾಗಿರುವುದು ಕೇವಲ 11  ಆಟಗಾರರು ಆದ್ದರಿಂದ ಕ್ರಿಕೆ  ಟ್‌ನಲ್ಲೇ ಬದುಕು ಕಟ್ಟಿಕೊಳ್ಳುತ್ತೇನೆಂದು ಹೇಳಲಾಗದು. ಆದ್ದರಿಂದ ಓದಿನ ಕಡೆಗೂ ಹೆಚ್ಚಿನ ಮಗನ ಹರಿಸು ಎಂದು ಹೇಳಿದ್ದೇವೆ. ಶಿವ ಅದೇ ರೀತಿಯಲ್ಲಿ ಸಾಗುತ್ತಿರುವುದು ಖುಷಿಯ ವಿಚಾರ,” ಎಂದು ಶಿವ ಅವರ ತಂದೆ ರಾಜಣ್ಣ ಹೇಳಿದ್ದಾರೆ.

“ನನ್ನ ಮಗನ ಕ್ರಿಕೆಟ್‌ ಬದುಕಿನ ವಿಷಯದಲ್ಲಿ ಕರ್ನಾಟಕ ಇನ್‌ಸ್ಟಿಟ್ಯೂಟ್‌ ಆಫ್‌ ಕ್ರಿಕೆಟ್‌ನ ಪ್ರಧಾನ ಕೋಚ್‌ ಹಾಗೂ ನಿರ್ದೇಶಕರಾದ ಇರ್ಫಾನ್‌ ಸೇಟ್‌ ಅವರನ್ನು ಸ್ಮರಿಸಲೇಬೇಕು. ಅವನಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದ ಅವರು ತಿಂಗಳ ಶುಲ್ಕವನ್ನೂ ತೆಗೆದುಕೊಳ್ಳದೆ ಉಚಿತವಾಗಿ ತರಬೇತಿ ನೀಡುತ್ತಿದ್ದಾರೆ. ಎಲ್ಲೇ ಟೂರ್ನಿಯಿದ್ದರೂ ಅವರೇ ವೆಚ್ಚಭರಿಸಿ ಕರೆದೊಯ್ಯುತ್ತಾರೆ. ಅವರ ಈ ಉಪಕಾರವನ್ನು ನನ್ನ ಬದುಕಿನುದ್ದಕ್ಕೂ ಮರೆಯಲಾರೆ,” ಎನ್ನುತ್ತಾರೆ ರಾಜಣ್ಣ.

ರಾಜಣ್ಣ ಅವರು ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.

ಅಣ್ಣ ಆಡುವುದ ನೋಡಿ ಕಲಿತ ತಮ್ಮ ಯಶ್‌:

ಶಿವು ಬೇರೆಯವರ ಆಟ ನೋಡಿ ಕಲಿತ. ಅದೇ ರೀತಿಯ ಶಿವ ಆಡುವುದನ್ನು ನೋಡಿ ಆತನ ತಮ್ಮ ಯಶ್‌ ಕೂಡ ಕ್ರಿಕೆಟ್‌ನಲ್ಲಿ ಆಸಕ್ತಿ ತೋರಿದ. U14 ರಾಜ್ಯ ತಂಡದಲ್ಲಿ ಸಂಭಾವ್ಯರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಯಶ್‌ ಅಣ್ಣನಂತೆ ಉತ್ತಮ ಕ್ರಿಕೆಟಿಗನಾಗು ಲಕ್ಷಣ ತೋರಿದ್ದಾರೆ.

ಕೋಲಾರದ ಪುಟ್ಟ ಹಳ್ಳಿಯಿಂದ ಬಂದು ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಳ್ಳುತ್ತಿರುವ ರಾಜಣ್ಣ ಹಾಗೂ ವರಲಕ್ಷ್ಮೀ ಅವರ ಮಕ್ಕಳಾದ ಶಿವ ಹಾಗೂ ಯಶ್‌ ಮುಂದಿನ ದಿನ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮಿಂಚಲಿ ಎಂಬುದೇ ಹಾರೈಕೆ.

Related Articles