Tuesday, September 10, 2024

ಶತಕದೊಂದಿಗೆ ಮಿಂಚಿದ ಕೋಟದ ಪ್ರಣಾಮ್ ಆಚಾರ್ಯ

ಸೋಮಶೇಖರ್ ಪಡುಕರೆ ಬೆಂಗಳೂರು 

ಬೆಳೆವ ಸಿರಿ ಮೊಳಕೆಯಲ್ಲೇ ಎಂಬಂತೆ ಕೋಟದ ಪ್ರಣಾಮ್ ಎಸ್. ಆಚಾರ್ಯ ರಾಜ್ಯದ ಕ್ರಿಕೆಟ್‌ಗೆ ದಿಟ್ಟ ಹೆಜ್ಜೆ ಇಡಲು ಸಜ್ಜಾಗಿದ್ದಾರೆ. ಈಗಾಗಲೇ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಆಯೋಜಿಸಿರುವಮಂಗಳೂರು ವಲಯ  14 ಮತ್ತು 16 ವರ್ಷ ವಯೋಮಿತಿಯ ಕ್ರಿಕೆಟ್‌ನಲ್ಲಿ ಮಿಂಚಿರುವ ಪ್ರಣಾಮ್ ಆಚಾರ್ಯ ಹಿರಿಯ ಕ್ರಿಕೆಟಿಗರ ಪ್ರೀತಿಗೆ ಪಾತ್ರರಾಗಿದ್ದಾರೆ. ಇತ್ತೀಚಿಗೆ ಕೆಎಸ್‌ಸಿಎ ಆಯೋಜಿತ ಮಂಗಳೂರು ವಲಯ ಅಂಡರ್  16 ಕ್ರಿಕೆಟ್ ಟೂರ್ನಿಯಲ್ಲಿ 122 ಎಸೆತಗಳಲ್ಲಿ 120  ರನ್‌ಸಿಡಿಸಿ ತಾನೊಬ್ಬ ಭವಿಷ್ಯದ ಉತ್ತಮ ಕ್ರಿಕೆಟಿಗ ಎಂಬುದನ್ನು ಸಾಬೀತುಪಡಿಸಿದ್ದಾರೆ. ಬ್ಯಾಟಿಂಗ್‌ನಲ್ಲಿ ಮಾತ್ರವಲ್ಲದೆ ಬೌಲಿಂಗ್‌ನಲ್ಲೂ ಮಿಂಚಿರುವ ಪ್ರಣಾಮ್ ಉತ್ತಮ ಯುವ ಆಲ್ರೌಂಡರ್ ಎಂಬುದನ್ನೂ ಸ್ಪಷ್ಟಪಡಿಸಿದ್ದಾರೆ.

ಪ್ರಣಾಮ್ ಹಾಗೂ ಕ್ರಿಕೆಟ್‌ಗೆ ನಡುವೆ ಆತ್ಮೀಯ ಬಂಧವಿದೆ. ಅವರ ತಂದೆ ಸೀತಾರಾಮ ಆಚಾರ್ಯ ಅವರು ಕೂಡ ಕೋಟದ ಇಲೆವೆನ್ ಅಪ್ ಸೇರಿದಂತೆ ಇತರ ತಂಡಗಳಲ್ಲಿ ಟೆನಿಸ್ ಬಾಲ್ ಕ್ರಿಕೆಟ್‌ನಲ್ಲಿ ಮಿಂಚಿದವರು. ಅಲ್ಲದೆ ಕ್ರಿಕೆಟ್ ಟೂರ್ನಿಗಳಿಗೆ ತಮ್ಮದೇ ಆದ ಪ್ರೋತ್ಸಾಹ ನೀಡುತ್ತ ಬಂದವರು. ಉತ್ತಮ ಬೌಲರ್ ಆಗಿದ್ದ ಸೀತಾರಾಮ್ ಆಚಾರ್ಯ ಅವರು ಹಲವು ಟೂರ್ನಿಗಳಲ್ಲಿ ಇಲೆವೆನ್‌ಅಪ್ ತಂಡದ ಜಯದ ರೂವಾರಿ ಎನಿಸಿದ್ದರು. ಸೀತಾರಾಮ್ ಆಚಾರ್ಯ ಅವರಲ್ಲಿದ್ದ  ಈ ಕ್ರಿಕೆಟ್ ಕಾಳಜಿ ಮಗ ಪ್ರಣಾಮ್‌ ಅವರಲ್ಲೂ ಮುಂದುವರಿದುಕೊಂಡು ಬಂತು. ಅಪ್ಪನಂತೆ ಟೆನಿಸ್‌ಬಾಲ್ ಕ್ರಿಕೆಟ್‌ಗೆ ಮಾತ್ರ ಸೀಮಿತವಾಗಿರದೆ ಲೆದರ್‌ಬಾರ್ ಕ್ರಿಕೆಟ್‌ನಲ್ಲೂ ಮಿಂಚತೊಡಗಿದರು.
ಭವಿಷ್ಯವಿದೆ, ಕಲಿಯುವುದು ಬಹಳವಿದೆ…
ಕೋಟದ ವಿವೇಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ 9ನೇ ತರಗತಿ ಓದುತ್ತಿರುವ ಪ್ರಣಾಮ್, ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿರುವ ಬೆಳ್ಳಿಪ್ಪಾಡಿ ಆಳ್ವಾಸ್ ಕ್ರಿಕೆಟ್ ಅಕಾಡೆಮಿ (ಬಿಎಸಿಎ)ಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಪ್ರಣಾಮ್‌ಗೆ ತರಬೇತಿ ನೀಡುತ್ತಿರುವುದು ಮಂಗಳೂರು ವಿಶ್ವವಿದ್ಯಾನಿಲಯ ಕ್ರಿಕೆಟ್ ತಂಡದ ಮಾಜಿ ನಾಯಕ  ವಿಜಯ ಆಳ್ವಾ. ಇಲ್ಲಿನ ಎಸ್‌ಎಂಎಸ್ ಕಾಲೇಜಿನಲ್ಲಿ ಸಮಾಜಶಾಸ್ತ್ರ ಉಪನ್ಯಾಸಕರಾಗಿರುವ ವಿಜಯ್‌ ಆಳ್ವಾ, ಅವರಲ್ಲಿ ಅನೇಕ ಪ್ರತಿಭಾವಂತ ಯುವ ಕ್ರಿಕೆಟಿಗರು ತರಬೇತಿ ಪಡೆಯುತ್ತಿದ್ದಾರೆ. ಹಲವು ಮಹಿಳಾ ಕ್ರಿಕೆಟಿಗರೂ ಇಲ್ಲಿ ಪಳಗುತಿದ್ದಾರೆ. ಪ್ರಣಾಮ್ ಅವರ ಕ್ರಿಕೆಟ್ ಆಟದ ಬಗ್ಗೆ ಸ್ಪೋರ್ಟ್ಸ್‌ಮೇಲ್ ಜತೆ ಮಾತನಾಡಿದ ವಿಜಯ್, ‘ಪ್ರಣಾಮ್‌ ಅವರಲ್ಲಿ ಉತ್ತಮ ಕ್ರಿಕೆಟಿಗನಾಗುವ ಲಕ್ಷಣ ಇದೆ. ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್‌ನಲ್ಲಿ ಆತ ಉತ್ತಮ ಆಸಕ್ತಿ ತೋರುತ್ತಿದ್ದಾನೆ. ಸರಿಯಾಗಿ ಪಳಗಬೇಕಾದರೆ ಇನ್ನೂ ಒಂದು ವರ್ಷ ಕಾದು ನೋಡಬೇಕಾಗಿದೆ. ಆಟದಲ್ಲಿ ಸ್ಥಿರತೆ ಪ್ರಮುಖವಾದುದು. ಆತನನ್ನು ವಿಕೆಟ್‌ಕೀಪರ್ ಹಾಗೂ ಬ್ಯಾಟ್ಸಮನ್ ಮಾಡಬೇಕೆಂದು ನಮ್ಮ ಗುರಿ, ಆತನಿಗೆ ಪ್ರೋತ್ಸಾಹದ ಅಗತ್ಯವಿದೆ. ನಮ್ಮ ಅಕಾಡೆಮಿಯಿಂದ ಎಲ್ಲ ರೀತಿಯ ಪ್ರೋತ್ಸಾಹ ನೀಡಲಾಗುವುದು,‘ ಎಂದರು.
ಪೆಟ್‌ಲ್ಯಾಂಡ್ ಪೇಟ್ ಸ್ಪೋರ್ಟ್ಸ್ ಅಸೋಯೇಷನ್‌ನ ಕ್ಲಬ್  ಪರ ಆಡುತ್ತಿರುವ ಪ್ರಣಾಮ್, 14 ವರ್ಷ ವಯೋಮಿತಿಯ ಕ್ರಿಕೆಟ್ ಪಂದ್ಯಗಳಲ್ಲಿ 150 ರನ್ ಗಳಿಸಿದ್ದು, 16 ವರ್ಷ ವಯೋಮಿತಿಯ ಕ್ರಿಕೆಟ್‌ನಲ್ಲಿ 160 ರನ್ ಹಾಗೂ ಎರಡು ಪಂದ್ಯಗಳಲ್ಲಿ 7 ವಿಕೆಟ್ ಗಳಿಕೆಯ ಸಾಧನೆ ಮಾಡಿದ್ದಾರೆ. ವಿರಾಟ್ ಕೊಹ್ಲಿ ಪ್ರಣಾಮ್‌ ಅವರ ನೆಚ್ಚಿನ ಆಟಗಾರ. ಓದಿನ ಜತೆಗೆ ಕ್ರಿಕೆಟ್‌ನಲ್ಲೂ ಉತ್ತಮ ಸಾಧನೆ ಮಾಡಬೇಕೆಂಬುದು ಅವರ ಆಶಯ. ಕ್ರಿಕೆಟ್‌ನಲ್ಲಿ ತೊಡಗಿಕೊಳ್ಳಲು ತಂದೆ ಸೀತಾರಾಮ ಆಚಾರ್ಯ  ಅವರೇ ಸ್ಫೂರ್ತಿ ಎನ್ನುತ್ತಾರೆ ಪ್ರಣಾಮ್.
ಭಾರತ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಕೆ.ಎಲ್.ರಾಹುಲ್ ಅವರೊಂದಿಗೆ ಪ್ರಣಾಮ್ ಅವರ ಕೋಚ್ ವಿಜಯ್ ಆಳ್ವ

Related Articles