Saturday, October 12, 2024

ಕ್ರೀಡಾ ಕುಟುಂಬದಲ್ಲಿ ಬೆಳಗಿ, ರಾಜ್ಯಕ್ಕೆ ಕೀರ್ತಿ ತಂದ ವಿಶ್ವಂಭರ

ಸೋಮಶೇಖರ್‌ ಪಡುಕರೆ, ಬೆಂಗಳೂರು:

ತಂದೆಯ ಆದರ್ಶ ಮತ್ತು ಅಕ್ಕನ ಯಶಸ್ಸನ್ನು ತನ್ನ ಬದುಕಿಗೆ ಸ್ಫೂರ್ತಿಯಾಗಿಸಿಕೊಂಡು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಮಿಡ್ಲ್‌ ಡಿಸ್ಟೆನ್ಸ್‌ ರನ್ನರ್‌ ಬೆಳಗಾವಿಯ ವಿಶ್ವಂಭರ ಕೋಲೆಕರ್‌ ನೈಋತ್ಯ ರೈಲ್ವೆಯಲ್ಲಿ ಕಳೆದ 12 ವರ್ಷಗಳಿಂದ ನಿರಂತರ ಚಿನ್ನದ ಪದಕ ಗೆದ್ದು ಸಾಧನೆ ಮಾಡುತ್ತಿದ್ದಾರೆ.

ವಿಶ್ವವಿದ್ಯಾನಿಲಯ ಮತ್ತು ರಾಜ್ಯ ಮಟ್ಟದಲ್ಲಿ ದಾಖಲೆ ಬರೆದಿರುವ ವಿಶ್ವಂಭರ ಅವರ ಮನೆಯೇ ಕ್ರೀಡಾಪಟುಗಳಿಂದ ತುಂಬಿದೆ. ವಿಶ್ವಂಭರ ಅವರ ತಂದೆ ಲಕ್ಷ್ಮಣ್‌ ಮಾಜಿ ಕಬಡ್ಡಿ ಆಟಗಾರ ಹಾಗೂ ರಾಜ್ಯ ಕಂಡ ಅದ್ಭುತ ಖೋ ಖೋ ಕೋಚ್‌. ಅಕ್ಕ ಜ್ಯೋತಿ ಕೋಲೆಕರ್‌ ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕಕ್ಕೆ ಕೀರ್ತಿ ತಂದ ಓಟಗಾರ್ತಿ, ಇನ್ನೋರ್ವ ಸಹೋದರಿ ರಾಜ್ಯ ಮಟ್ಟದ ಖೋ ಖೋ ಆಟಗಾರ್ತಿ. ಹೀಗೆ ಇಡೀ ಕುಟುಂಬವೇ ಕ್ರೀಡಾಪಟುಗಳಿಂದ ತುಂಬಿದೆ.

ಅಕ್ಕನ ಓಟವೇ ಸ್ಫೂರ್ತಿ: ವಿಶ್ವಂಭರ ಅವರ ತಂದೆ ದೈಹಿಕ ಶಿಕ್ಷಕರು. ಮಕ್ಕಳ ಕ್ರೀಡಾಬದುಕಿಗಾಗಿ ಬೆಳಗಾವಿಯ ಖಾನಾಪುರದಿಂದ ನಗರದಲ್ಲಿ ಬಂದು ನೆಲೆಸಿದರು. ಜ್ಯೋತಿ ಅವರು ನಿತ್ಯವೂ ಅಭ್ಯಾಸ ಮಾಡುತ್ತಿರುವಾಗ ವಿಶ್ಬಂಭರ ಅಕ್ಕನ ಓಟವನ್ನು ನೋಡಿ ತಾನೂ ಓಡಲಾರಂಭಿಸಿದರು ಇದಿರಂದ 800 ಮತ್ತು 1500 ಮೀ. ಓಟದಲ್ಲಿ ಸೋಲರಿಯದ ಚಾಂಪಿಯನ್‌ ಸಜ್ಜಾದ. “ನಮ್ಮ ತಂದೆ ದೈಹಿಕ ಶಿಕ್ಷಕರು. ಅನೇಕ ಕ್ರೀಡಾಪಟುಗಳಿಗೆ ಸ್ಫೂರ್ತಿಯಾವರು. ಅದೇ ರೀತಿ ನನಗೂ ಪ್ರೇರಣೆಯಾದರು. ಅಕ್ಕ ಅಭ್ಯಾಸ ಮಾಡುವಾಗ ಚಿಕ್ಕಂದಿನಲ್ಲೇ ಅವಳೊಂದಿಗೆ ಓಡುತ್ತಿದ್ದೆ, ಅವಳಂತೆಯೇ 800 ಮತ್ತು 1500 ಮೀ. ಓಟದಲ್ಲಿ ತೊಡಗಿಕೊಂಡೆ. ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ದಾಖಲೆಯೊಂದಿಗೆ ಚಿನ್ನ ಗೆದ್ದೆ. ಪದವಿ ಮಾಡುತ್ತಿರುವಾಗಲೇ ರೇಲ್ಬೆಯಲ್ಲಿ ಉದ್ಯೋಗ ಸಿಕ್ಕ ಕಾರಣ, ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಹೆಚ್ಚು ಸ್ಪರ್ಧಿಸಲಾಗಲಿಲ್ಲ, 10ನೇ ವಯಸ್ಸಿನಲ್ಲಿ ಓಟ ಆರಂಭಿಸಿದೆ, ಈಗ ವರ್ಷ 30, ಈಗಲೂ ರಾಷ್ಟ್ರ ಮಟ್ಟದಲ್ಲಿ ಚಿನ್ನದ ಸಾಧನೆ ಮಾಡುತ್ತಿದ್ದೇನೆ,” ಎಂದು ವಿಶ್ವಂಭರ್‌ ಅತ್ಯಂತ ಹೆಮ್ಮೆಯಿಂದ ನುಡಿದರು.

ವಿಶ್ವಂಭರ ಅವರ ತಂದೆ ದೈಹಿಕ ಶಿಕ್ಷಕರಾಗಿದ್ದು, ಈಗ ನಿವೃತ್ತಿಹೊಂದಿದ್ದಾರೆ. ಅವರು ಇದಕ್ಕೂಮುನ್ನ ಕಬಡ್ಡಿ ಆಟಗಾರರಾಗಿದ್ದರು. ಅವರು ತರಬೇತಿ ನೀಡಿದ ಖೋ ಖೋ ತಂಡ 16 ವರ್ಷಗಳ ಕಾಲ ರಾಷ್ಟ್ರೀಯ ಚಾಂಪಿಯನ್‌ ಪಟ್ಟ ಗೆದ್ದಿರುವುದು ಕರ್ನಾಟಕದ ಕ್ರೀಡಾ ಇತಿಹಾಸದಲ್ಲೇ ದಾಖಲೆಯಾಗಿದೆ. ವಿಶ್ವಂಭರ ಅವರ ಅಕ್ಕ ಜ್ಯೋತಿ ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಪರ ಪದಕ ಗೆದ್ದು, ಈಗ ರೇಲ್ವೆಯಲ್ಲಿ ಉದ್ಯೋಗಿಯಾಗಿದ್ದಾರೆ. ವಿಶ್ವಂಭರ ಕೂಡ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಈಗ ನೈಋತ್ಯ ರೇಲ್ವೆಯಲ್ಲಿ ಡೆಪ್ಯೂಟಿ ಸಿಟಿಐ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಶ್ವಂಭರ ಅವರ ಇನ್ನೋರ್ವ ಸಹೋದರಿ ಮಿಲನ ರಾಜ್ಯ ಮಟ್ಟದ ಖೋ ಖೋ ಆಟಗಾರ್ತಿಯಾಗಿದ್ದರು.

50ಕ್ಕೂ ಪದಕಗಳಲ್ಲಿ ಚಿನ್ನವೇ ಅಧಿಕ:

10ನೇ ವಯಸ್ಸಿನಿಂದ 800 ಮತ್ತು 1500 ಮೀ. ಓಟ ಆರಂಭಿಸಿದ ವಿಶ್ವಂಭರ ಇದುವರೆಗೂ 50ಕ್ಕೂ ಹೆಚ್ಚು ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅವುಗಳಲ್ಲಿ ಬಹುಪಾಲು ಚಿನ್ನ. “ರೈಲ್ವೆಯಲ್ಲಿ ಉದ್ಯೋಗಕ್ಕೆ ಸೇರುವುದಕ್ಕೆ ಮೊದಲು ಕರ್ನಾಟಕದ ಪರ ಸಾಕಷ್ಟು ರಾಷ್ಟ್ರೀಯ ಪದಕಗಳನ್ನು ಗೆದ್ದಿರುವೆ. ರೇಲ್ವೆಯಲ್ಲಿ ವರ್ಷಕ್ಕೊಮ್ಮೆ ನಡೆಯುವ ಅಖಿಲ ಭಾರತ ಅಂತರ್‌ ರೇಲ್ವೆ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವುದು ಕಡ್ಡಾಯ. ಅದರ ಹೊರತಾಗಿ ಇತರ ಚಾಂಪಿಯನ್‌ಷಿಪ್‌ಗಳಲ್ಲಿ ಪಾಲ್ಗೊಳ್ಳುವಾಗ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದೇನೆ, ರಾಷ್ಟ್ರ ಮಟ್ಟದಲ್ಲಿ ಗೆದ್ದಿರುವ ಪದಕಗಳಲ್ಲಿ ಚಿನ್ನವೇ ಹೆಚ್ಚು,” ಎಂದು ವಿಶ್ವಂಭರ್‌ ಹೆಮ್ಮೆಯಿಂದ ಹೇಳಿದರು.

12 ವರ್ಷಗಳಿಂದ ಚಾಂಪಿಯನ್‌!:

2006ರಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಿದ್ದ ವಿಶ್ವಂಭರ್‌, ಮೊದಲ ಬಾರಿಗೆ ಚಿನ್ನಕ್ಕೆ ಕೊರಳೊಡ್ಡಿದ್ದು, 2008ರಲ್ಲಿ ವಾರಂಗಲ್‌ನಲ್ಲಿ ನಡೆದ ರಾಷ್ಟ್ರೀಯ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ. 2016, 2017 ಮತ್ತು 2018ರಲ್ಲಿ ಭಾರತ ರಾಷ್ಟ್ರೀಯ ಶಿಬಿರದಲ್ಲಿ ಪಾಲ್ಗೊಂಡು ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಿದ್ದರು. 2010ರಲ್ಲಿ ರೇಲ್ವೆಯಲ್ಲಿ ಉದ್ಯೋಗಕ್ಕೆ ಸೇರಿದ ವಿಶ್ವಂಭರ್‌ ಪ್ರತಿ ವರ್ಷ ಚಿನ್ನ ಗೆದ್ದು ದಾಖಲೆ ಬರೆದಿದ್ದಾರೆ. ಇದುವರೆಗೂ 12 ಕ್ರೀಡಾಕೂಟಗಳಲ್ಲಿ 12 ಚಿನ್ನದ ಸಾಧನೆ ಮಾಡಿದ್ದಾರೆ. ಇದು ಭಾರತೀಯ ರೇಲ್ವೆಯ ಕ್ರೀಡಾ ಇತಿಹಾಸದಲ್ಲಿ ಒಂದು ವಿಶೇಷ ಸಾಧನೆಯಾಗಿದೆ. ಇತ್ತೀಚಿಗೆ ನಡೆದ ರೇಲ್ವೆ ಚಾಂಪಿಯನ್‌ಷಿಪ್‌ನಲ್ಲಿ ಗಾಯದ ಸಮಸ್ಯೆಯ ಕಾರಣ ವಿಶ್ವಂಭರ್‌ ಬೆಳ್ಳಿಗೆ ತೃಪ್ತಿ ಪಡಬೇಕಾಯಿತು. ಇದಕ್ಕೂ ಮುನ್ನ ಕೋಲ್ಕೊತಾದಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಸಾಧನೆ ಮಾಡಿದ್ದರು.

ವಿಶ್ವ ರೇಲ್ವೆ ಕ್ರೀಡಾಕೂಟದಲ್ಲಿ ಚಿನ್ನ: ಚೆಕ್‌ಗಣರಾಜ್ಯದಲ್ಲಿ ನಡೆದ ವಿಶ್ವ ರೇಲ್ವೆ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ವಿಶ್ವಂಭರ್‌ ಒಂದು ಚಿನ್ನ ಮತ್ತು ಒಂದು ಬೆಳ್ಳಿಯ ಸಾಧನೆ ಮಾಡಿದ್ದರು. 800 ಮತ್ತು 1500 ಮೀಟರ್‌ ಓಟದಲ್ಲಿ ಅನುಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಗೆದ್ದು ದೇಶಕ್ಕೆ ಕೀರ್ತಿ ತಂದರು.

32 ವರ್ಷಗಳ ಹಿಂದಿನ ದಾಖಲೆ ಮುರಿದ ವಿಶ್ವಂಭರ್‌!:

ಕರ್ನಾಟಕದ ಹಿರಿಯ ಅಥ್ಲೀಟ್‌, ರಾಜ್ಯ ಅಥ್ಲೆಟಿಕ್ಸ್‌ ಸಂಸ್ಥೆಯ ಮಾಜಿ ಕಾರ್ಯದರ್ಶಿ, ಸದ್ಯ ಭಾರತೀಯ ಪ್ಯಾರಾಲಿಂಪಕ್ಸ್‌ ಕೋಚ್‌ ಆಗಿರುವ ಕೆ. ಸತ್ಯನಾರಾಯಣ ಅವರು 1985ರಲ್ಲಿ 1500 ಮೀ. ಓಟವನ್ನು 3 ನಿಮಿಷ, 50.05 ಸೆಕೆಂಡುಗಳಲ್ಲಿ ಗುರಿ ತಲುಪಿದ ನೂತನ ದಾಖಲೆ ಬರೆದಿದ್ದರು. ವಿಶ್ವಂಭರ ಅವರು ಈ ದಾಖಲೆಯಲ್ಲಿ 2017ರಲ್ಲಿ ನಡೆದ ರಾಜ್ಯ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಮುರಿದರು. 3 ನಿಮಿಷ 45. 03 ಸೆಕೆಂಡುಗಳಲ್ಲಿ ಗುರಿ ತಲುಪಿದ ವಿಶ್ವಂಭರ್‌ 32 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದು ಹೊಸ ದಾಖಲೆ ಬರೆದರು. 800 ಮೀ. ಓಟದಲ್ಲೂ ವಿಶ್ವಂಭರ್‌ ರಾಜ್ಯ ದಾಖಲೆ ಬರೆದಿದ್ದಾರೆ. 1  ನಿಮಿಷ 47.4 ಸೆಕೆಂಡುಗಳಲ್ಲಿ ಗುರಿ ತಲುಪಿ ನೂತನ ರಾಜ್ಯ ದಾಖಲೆ ಬರೆದಿದ್ದರು.

ಏಷ್ಯನ್‌ ಗೇಮ್ಸ್‌ಗೆ ಸಿದ್ಧತೆ: ಮುಂಬರುವ ಏಷ್ಯನ್‌ ಗೇಮ್ಸ್‌ನಲ್ಲಿ ಪಾಲ್ಗೊಳ್ಳುವುದಕ್ಕಾಗಿ ವಿಶ್ವಂಭರ್‌ ನಿರತಂತರ ಅಭ್ಯಾಸ ನಡೆಸುತ್ತಿದ್ದಾರೆ. “ಅಂತಾರಾಷ್ಟ್ರೀಯ ಮಾಜಿ ಅಥ್ಲೀಟ್‌, ಕೋಚ್‌ ಅಯ್ಯಪ್ಪ ಅವರಲ್ಲಿ ತರಬೇತಿ ಪಡೆಯುತ್ತಿದ್ದೇನೆ. ಮುಂಬರುವ ಏಷ್ಯನ್‌ ಗೇಮ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಿ ಪದಕ ಗೆಲ್ಲುವ ಗುರಿಹೊಂದಿದ್ದೇನೆ. ಪದಕ ಗೆಲ್ಲುತ್ತೇನೆಂಬ ಆತ್ಮವಿಶ್ವಾಸವಿದೆ,” ಎಂದು ವಿಶ್ವಂಭರ್‌ ಅತ್ಯಂತ ಆತ್ಮವಿಶ್ವಾಸದಲ್ಲಿ ಹೇಳಿದ್ದಾರೆ.

ಬೆಂಗಳೂರಿಗೆ ಅಗಮಿಸಿದಾಗ ಮೊದಲು ಪುರುಷೋತ್ತಮ ರೈ ಅವರಲ್ಲಿ ಪಳಗಿದ್ದ ವಿಶ್ವಂಭರ್‌ ನಂತರ ಮುರಳಿ ಅವರಲ್ಲಿ ತರಬೇತಿ ಪಡೆಯುತ್ತಿದ್ದರು. ಈಗ ಅಯ್ಯಪ್ಪ ಅವರಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. “ನನ್ನ ಕ್ರೀಡಾ ಯಶಸ್ಸಿಗೆ ಕರ್ನಾಟಕ ಸರಕಾರ, ನೈಋತ್ಯ ರೇಲ್ವೆ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡಿದೆ. ಅಂತಾರಾಷ್ಟ್ರೀಯ ಮಾಜಿ ಅಥ್ಲೀಟ್‌ಗಳು ಹಾಗೂ ತರಬೇತುದಾರರಾದ ನಾಗರಾಜ್‌ ಹಾಗೂ ಶಿವಾನಂದ್‌ ಅವರೂ ಪ್ರೋತ್ಸಾಹ ನೀಡಿದ್ದಾರೆ ಮುಂಬರುವ ಕ್ರೀಡಾಕೂಟಗಳಲ್ಲಿ ಉತ್ತಮ ಪ್ರದರ್ಶನ ತೋರುವೆ,” ಎಂದು ವಿಶ್ವಂಭರ್‌ ಹೇಳಿದರು.

Related Articles