ಬೆಂಗಳೂರು: ಮದ್ರಾಸ್ ಇಂಟರ್‌ನ್ಯಾಷನಲ್ ಸರ್ಕಿಟ್‌ನಲ್ಲಿ ಇಂದು ಅಚ್ಚರಿಯೇ ನಡೆಯಿತು. ಬೆಂಗಳೂರಿನ ಸಹಕಾರ ನಗರದ 12 ವರ್ಷ ಪ್ರಾಯದ ಶಾಲಾ ಬಾಲಕ ಶ್ರೇಯಸ್ ಹರೀಶ್ ಎಂಆರ್‌ಎಫ್, ಎಂಎಂಎಸ್‌ಸಿ ಭಾರತೀಯ ರಾಷ್ಟ್ರೀಯ ರೇಸಿಂಗ್ ಚಾಂಪಿಯನ್‌ಷಿಪ್‌ನ ನಾಲ್ಕನೇ ಸುತ್ತಿನಲ್ಲಿ ತನಗಿಂತ ಎರಡು ಪಟ್ಟು ಹೆಚ್ಚು ವಯಸ್ಸಿನ ರೇಸರ್‌ಗಳಿರುವ ಚಾಂಪಿಯನ್‌ಷಿಪ್‌ನಲ್ಲಿ ಜಯ ಗಳಿಸಿ ಅಚ್ಚರಿ ಮೂಡಿಸಿದ್ದಾನೆ.
ಬೆಂಗಳೂರಿನ ಕೆನ್ಸರಿ ಶಾಲೆಯ 6ನೇ ತರಗತಿಯ ವಿದ್ಯಾರ್ಥಿ ಶ್ರೇಯಸ್ ಹರೀಶ್ ಈಗಾಗಲೇ ಸ್ಪೇನ್‌ನಲ್ಲಿ ನಡೆಯಲಿರುವ ಮಿನಿ ಮೋಟೋ ಜಿಪಿ ಫೈನಲ್‌ಗೆ ಆಯ್ಕೆಯಾಗಿದ್ದು, ಶನಿವಾರ ನಡೆದ ರೇಸ್‌ನಲ್ಲಿ ನೊವೈಸ್ (165ಸಿಸಿ ಸ್ಕೋಕ್) ವಿಭಾಗದಲ್ಲಿ ಅಗ್ರ ಸ್ಥಾನ ಗಳಿಸಿದರು. ಗ್ರಿಡ್‌ನಲ್ಲಿ ಪಿ3 ಸ್ಥಾನದಲ್ಲಿ ಸ್ಪರ್ಧೆಗಿಳಿದ ಶ್ರೇಯಸ್, ಮೊದಲ ಟರ್ನ್‌ನಿಂದಲೂ ಅಗ್ರ ಸ್ಥಾನ ಕಾಯ್ದುಕೊಂಡಿರುವುದು ವಿಶೇಷ, ಎಲ್ಲಿಯೂ ಇತರ ರೇಸರ್‌ಗಳ ಮುನ್ನಡೆಗೆ ಅವಕಾಶ ನೀಡದ ಶ್ರೇಯಸ್, ಮೊದಲ ಬಾರಿಗೆ ತನ್ನ ವಿಭಾಗದಲ್ಲಿ ಜಯ ಗಳಿಸಿದರು. ಮೊದಲ ಬಾರಿಗೆ ನೊವೈಸ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಶ್ರೇಯಸ್ ಹಿಂದಿನ ಮೂರು ಸುತ್ತುಗಳಲ್ಲಿ ಭಾಗಿಯಾಗಿರಲಿಲ್ಲ. ಮಿನಿ ಮೋಟೋ ಜಿಪಿಯಲ್ಲಿ ಸ್ಪರ್ಧಿಸುತ್ತಿದ್ದ ಕಾರಣ ಇಲ್ಲಿ ಸ್ಪರ್ಧಿಸಲು ಸಾಧ್ಯವಾಗಿರಲಿಲ್ಲ.
ಮಗನ ಸಾಧನೆಗಾಗಿ ಉದ್ಯೋಗ ತೊರೆದ ತಂದೆ: ರೇಸ್‌ಗಳಲ್ಲಿ ಪಾಲ್ಗೊಳ್ಳುವುದೆಂದರೆ ಅದರ ಹಿಂದೆ ಬಹಳ ಶ್ರಮವಿರುತ್ತದೆ. ಶ್ರೇಯಸ್ ಇನ್ನೂ ಶಾಲಾ ಬಾಲಕನಾದ ಕಾರಣ ಒಬ್ಬರು ಅವನೊಂದಿಗೆ ಸದಾ ಜೊತೆಯಲ್ಲಿ ಇರಬೇಕಾಗುತ್ತದೆ. ಶ್ರೇಯಸ್ ಅವರ ತಂದೆ, ಹರೀಶ್ ಪರಂದಾಮನ್ ತಮ್ಮ ಉದ್ಯೋಗವನ್ನು ತೊರೆದು ಮನನೊಂದಿಗೆ ರೇಸ್ ನಡೆಯುವಲ್ಲಿಗೆ ಪ್ರಯಾಣಿಸುತ್ತಿದ್ದಾರೆ. Sportsmail ಜೊತೆ ಮಾತನಾಡಿದ ಹರೀಶ್, “ರೇಸ್‌ಗಳಲ್ಲಿ ಪಾಲ್ಗೊಳ್ಳುವುದೆಂದರೆ ಬಹಳ ಶ್ರಮವಹಿಸಬೇಕಾಗುತ್ತದೆ. ಲುಪಿನ್ ಫಾರ್ಮಾದಲ್ಲಿ ಕೆಲಸ ಮಾಡುತ್ತಿದ್ದ ನಾನು ಮಗನ ಯಶಸ್ಸಿಗಾಗಿ ಉದ್ಯೋಗವನ್ನು ತೊರೆದೆ. ಅವನಿನ್ನೂ ಚಿಕ್ಕ ಬಾಲಕ. ಬೈಕ್‌ನಲ್ಲಿ ಬಿದ್ದರೆ ಆರೈಕೆ ಮಾಡಬೇಕು. ಫಿಟ್ನೆಸ್ ಬಗ್ಗೆ ಗಮನ ಹರಿಸಬೇಕು. ರೇಸ್‌ಗಳಿಗೆ ಬೈಕ್ ಸಿದ್ಧಗೊಳಿಸಬೇಕು. ದಿನದ ಪೂರ್ಣ ಸಮಯವನ್ನು ಅವನಿಗಾಗಿ ವಿನಿಯೋಗಿಸಬೇಕಾಗುತ್ತದೆ. ಜಾಗತಿಕ ಮೋಟೋ ಜಿಪಿಯಲ್ಲಿ ಭಾರತದ ರಾಷ್ಟ್ರಗೀತೆ ಮೊಳಗುವುದನ್ನು ನೋಡಬೇಕು, ಕೇಳಬೇಕು, ಇದೇ ನನ್ನ ಬದುಕಿನ ಗುರಿ, ಅದಕ್ಕಾಗಿ ಮಗನನ್ನು ಸಜ್ಜುಗೊಳಿಸುವೆ,” ಎಂದರು.
ಚಾಂಪಿಯನ್‌ಷಿಪ್‌ನಲ್ಲಿ ಅಗ್ರ ಸ್ಥಾನದಲ್ಲಿರುವ ಅಕ್ಸರ್ ಸ್ಪಾರ್ಕ್ಸ್ ರೇಸಿಂಗ್‌ನ ಹುಬ್ಬಳ್ಳಿಯ ಸರ್ವೇಶ್ ಬಾಲಪ್ಪ ನಾಲ್ಕನೇ ಸ್ಥಾನ ಗಳಿಸಿ ಚಾಂಪಿಯನ್ ಪಟ್ಟ ಸ್ಥಾನವನ್ನು ಮತ್ತೊಮ್ಮೆ ಖಚಿತಪಡಿಸಿಕೊಂಡರು.
ಪ್ರೋ ಸ್ಟೋಕ್ 301-400ಸಿಸಿ ಓಪನ್ ವಿಭಾಗದಲ್ಲಿ ಪೆಟ್ರೊನಾಸ್ ಟಿವಿಎಸ್ ರೇಸಿಂಗ್‌ನ ಕೆ.ವೈ. ಅಹಮದ್, ತಮ್ಮ ತಂಡಕ್ಕೆ 1-2-3ನೇ ಸ್ಥಾನವನ್ನು ಗಳಿಸುವಂತೆ ಮಾಡಿದರು. ಯಮಹಾ ತಂಡದ ಪ್ರಭು ಅರುಣಗಿರಿ ಅಗ್ರ ಸ್ಥಾನ ಗಳಿಸಿದರೆ, ತಂಡದ ಇನ್ನೋರ್ವ ರೇಸರ್ ಮಥನ ಕುಮಾರ್ ಮೂರನೇ ಸ್ಥಾನ ತಮ್ಮದಾಗಿಸಿಕೊಂಡರು. ರಾಜೀವ್ ಸೇತು ಎರಡನೇ ಸ್ಥಾನ ಗಳಿಸಿದರು.