Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಎಫ್‌ಸಿ ಬೆಂಗಳೂರು ಯುನೈಟೆಡ್‌ಗೆ ಆಡುವುದೇ ಹೆಮ್ಮೆ: ಜಿಪ್ಸನ್‌ ಜಸ್ಟಸ್‌

ಬೆಂಗಳೂರು:

ಸಂತೋಷ್‌ ಟ್ರೋಫಿ ಪ್ರಶಸ್ತಿ ಗೆದ್ದಿರುವ ಕೇರಳ ತಂಡದ ಮಿಡ್‌ಫೀಲ್ಡರ್‌ ಜಿಪ್ಸನ್‌ ಜಸ್ಟಸ್‌ ಇತ್ತೀಚಿಗೆ 2022-23 ಋತುವಿಗಾಗಿ ಎಫ್‌ಸಿ ಬೆಂಗಳೂರು ಯುನೈಟೆಡ್‌ ತಂಡವನ್ನು ಸೇರಿಕೊಂಡ ಆಟಗಾರ. ಈ ಪ್ರತಿಭಾವಂತ ಮಿಡ್‌ಫೀಲ್ಡರ್‌ ಸದ್ಯ ಬೆಂಗಳೂರು ಫುಟ್ಬಾಲ್‌ ಅಂಗಣದಲ್ಲಿ ನಡೆಯುತ್ತಿರುವ ಬಿಡಿಎಫ್‌ಎ ಸೂಪರ್‌ ಡಿವಿಜನ್‌ ಚಾಂಪಿಯನ್‌ಷಿಪ್‌ನಲ್ಲಿ ತನ್ನ ಹೊಸ ಕ್ಲಬ್‌ಗಾಗಿ ಉತ್ತಮ ಪ್ರದರ್ಶನ ನೀಡಲು ಉತ್ಸುಕರಾಗಿದ್ದಾರೆ.

2022ರ ಸಂತೋಷ್‌ ಟ್ರೋಫಿಯಲ್ಲಿ ಕೇರಳ ಪರ ಅದ್ಭುತ ಪ್ರದರ್ಶನ ತೋರುವ ಮೂಲಕ ಬೆಳಕಿಗೆ ಬಂದ ಮಿಡ್‌ಫೀಲ್ಡರ್‌ ಹೊಸ ಕ್ಲಬ್‌ನಲ್ಲಿ ಕಲಿತು ಮತ್ತು ಬೆಳೆಯಲು ಅವಕಾಶಕ್ಕಾಗಿ ಎದುರುನೋಡುತ್ತಿದ್ದೇನೆ ಎಂದು ಹೇಳಿದ್ದಾರೆ. “ದಕ್ಷಿಣ ಭಾರತದಲ್ಲಿ ಎಫ್‌ಸಿ ಬೆಂಗಳೂರು ಯುನೈಟೆಡ್‌ ಉತ್ತಮ ತಂಡ, ಇಂತರ ಉನ್ನತ ವೃತ್ತಿಪರತೆಯಿಂದ ಕೂಡಿರುವ ತಂಡದಲ್ಲಿ ಆಡುವ ಅವಕಾಶ ಸಿಕ್ಕಿರುವುದು ನನ್ನ ಪಾಲಿನ ಹೆಮ್ಮೆ. ವ್ಯವಸ್ಥಿತವಾದ ತರಬೇತಿ ಕ್ರಮ ಮತ್ತು ಪ್ರತಿದಿನ ಹೊಸತನ್ನು ಕಲಿಯಲು ಸಿಗುವ ಅವಕಾಶ ನನ್ನಲ್ಲಿ ಹೆಚ್ಚಿನ ಆತ್ಮವಿಶ್ವಾಸವನ್ನು ಮೂಡಿಸಿದೆ,” ಎಂದರು.

ಕ್ಲಬ್‌ನ ನೂತನ ಕೋಚ್‌ ಖಾಲಿದ್‌ ಜಮೀಲ್‌ ಅವರಿಂದ ತರಬೇತಿ ಪಡೆಯುವುದೆಂದರೆ “ಕನಸು ನನಸಾದಂತೆ” ಎಂದು ಎಫ್‌ಸಿ ಬೆಂಗಳೂರು ಯುನೈಟೆಡ್‌ನ ನಂ.6 ಆಟಗಾರ ಹೇಳಿದರು. “ಅವರು ಅತ್ಯುನ್ನತ ವೃತ್ತಿಪರ ಕೋಚ್‌” ಎಂದು ಜಿಪ್ಸನ್‌ ಹೇಳಿದ್ದಾರೆ. “ಅವರ ಸಲಹೆಯಿಂದ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿದೆ, ಮತ್ತು ನಾನು ದಿನದಿಂದ ದಿನಕ್ಕೆ ಸುಧಾರಣೆಗೊಳ್ಳುತ್ತಿದ್ದೇನೆ. ಬೇರೆ ಬೇರೆ ಆಟಗಾರರಿಂದ ನಾನು ಅನೇಕ ಹೊಸ ವಿಚಾರಗಳನ್ನು ಕಲಿಯುತ್ತಿದ್ದೇನೆ. ಇದು ನನ್ನ ಆಟವನ್ನು ಅಪಾರ ಪ್ರಮಾಣದಲ್ಲಿ ಉತ್ತಮಪಡಿಸಿಕೊಳ್ಳಲು ಸಹಾಯಕವಾಗಿದೆ,” ಎಂದರು.

ಸಂತೋಷ್‌ ಟ್ರೋಫಿಯಲ್ಲಿ ಕೇರಳ ತಂಡದ ಭಾಗವಾಗಿರುವುದ್ದುದು ಬಹಳ ಪರಿಣಾಮ ಬೀರಿದೆ ಎಂದೂ ಮಿಡ್‌ಫಿಲ್ಡರ್‌ ಹೇಳಿದ್ದಾರೆ. “ಸಂತೋಷ್‌ ಟ್ರೋಪಿಯು ಭಾರತದ ಅತ್ಯಂತ ಪ್ರತಿಷ್ಠಿತ ಟೂರ್ನಿ. ಸಂತೋಷ್‌ ಟ್ರೋಫಿ ಗೆದ್ದಿರುವ ತಂಡದ ಸದಸ್ಯನಾಗಿದ್ದುದು ನನ್ನ ಪಾಲಿಗೆ ಹೆಮ್ಮೆಯ ಸಂಗತಿ. ಮನೆಯಗಂಣದಲ್ಲಿ ಸಂತೋಷ್‌ ಟ್ರೋಫಿಯನ್ನು ಗೆದ್ದಿರುವುದು ನನಗೆ ಹೊಸ ಸಂಭ್ರಮನ್ನುಂಟುಮಾಡಿದೆ. ದೇಶೀಯ ಆಟಗಾರರಿಗೆ ಇತರ ಕಡೆಗಳಲ್ಲಿ ಆಡುವ ಅವಕಾಶವನ್ನು ಪಡೆಯುವುದಕ್ಕಾಗಿ ತಮ್ಮ ಸಾಮರ್ಥ್ಯವನ್ನು ತೋರಿಸಲು ಈ ಟೂರ್ನಿಯು ಉತ್ತಮ ವೇದಿಕೆಯಾಗಿದೆ,” ಎಂದರು.

ಸಂತೋಷ್‌ ಟ್ರೋಫಿಯಲ್ಲಿ “ಪ್ರಮುಖ ಪಾತ್ರ ನಿಭಾಯಿಸಿದಕ್ಕಾಗಿ” ಎಫ್‌ಸಿ ಬೆಂಗಳೂರು ಯುನೈಟೆಡ್‌ ತಂಡ ಸೇರಲು ಸಾಧ್ಯವಾಯಿತು ಎಂದು ಜಿಪ್ಸನ್‌ ನಂಬಿದ್ದಾರೆ. “ಈ ಋತುವಿನಲ್ಲಿ ಎಫ್‌ಸಿಬಿಯು ಐತಿಹಾಸಿಕ ಅಭಿಯಾನವನ್ನು ಗುರಿಯಾಗಿಸಿಕೊಂಡಿದೆ ಎಂದು ನಾನು ನಂಬಿರುವೆ. ಈ ಋತುವಿನಲ್ಲಿ ನಾವು ನಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳಬೇಕಾಗಿರುವುದರಿಂದ ಯಾವುದೇ ರೀತಿಯಲ್ಲಿ ತಂಡಕ್ಕೆ ನಾನು ನನ್ನದೇ ಆದ ಕೊಡುಗೆಯನ್ನು ನೀಡಲು ಸಿದ್ಧನಿರುವೆ,” ಎಂದರು.

ಸೆಪ್ಟೆಂಬರ್‌ 15ರಂದು ಎಫ್‌ಸಿ ಬೆಂಗಳೂರು ಯುನೈಟೆಡ್‌ ತಂಡ ಬಿಡಿಎಫ್‌ಎ ಚಾಂಪಿಯನ್‌ಷಿಪ್‌ನ ನಾಲ್ಕನೇ ಪಂದ್ಯದಲ್ಲಿ ರೋಟ್ಸ್‌ ಎಫ್‌ಸಿ ವಿರುದ್ಧ ಸೆಣಸಲಿದೆ.


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.