Wednesday, October 23, 2024

ಚಿನ್ನದ ರಾಣಿಗೆ ಬೆಳ್ಳಿಯ ಕಿರೀಟ; ಪೇದೆ ಸಾಕು, ಸಬ್ ಇನ್‌ಸ್ಪೆಕ್ಟರ್ ಆಗಲಿ

ಸೋಮಶೇಖರ್ ಪಡುಕರೆ ಬೆಂಗಳೂರು

ಕರ್ನಾಟಕ ಪೊಲೀಸ್ ಇಲಾಖೆಯ ಕ್ರೀಡಾ ಉತ್ತೇಜನ ಮಂಡಳಿಯಲ್ಲಿ ಪೇದೆಯಲ್ಲಿ ಕಳೆದ 10 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಕಂಡ ಉತ್ತಮ ಆಟಗಾರ್ತಿ ಉಷಾ ರಾಣಿ ಜಕಾರ್ತದಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ  ಬೆಳ್ಳಿ ಗೆದ್ದಿರುವ ಭಾರತ ಕಬಡ್ಡಿ ತಂಡದ ಸದಸ್ಯೆ ಆಗಿರುವುದು ಹೆಮ್ಮೆಯ ಸಂಗತಿ. ಆದರೆ ಇನ್ನು ಮುಂದೆಯೂ ಅವರು ಪೇದೆಯಾಗಿಯೇ ಮುಂದುವರಿದರೆ ಅದು ಬೆಸರದ ವಿಚಾರ.

ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಮಿಂಚಿರುವ ಉಷಾರಾಣಿ, ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಚಿನ್ನ, ಅಖಿಲ ಭಾರತ ಪೊಲೀಸ್ ಕ್ರೀಡಾಕೂಟದಲ್ಲಿ ಎರಡು ಬಾರಿ ಚಿನ್ನ  ಹಾಗೂ ರಾಜ್ಯಮಟ್ಟದಲ್ಲಿ ಹಲವಾರು ಬಾರಿ ಪದಕ ಗೆದ್ದಿರುವ ಉಷಾರಾಣಿ ಅವರಿಗೆ ಇದುವರೆಗೂ ಭಡ್ತಿ ಸಿಗದಿರುವುದು ಬೇಸರದ ಸಂಗತಿ.ಇದಕ್ಕೆ ಸರಕಾರದ ನೀತಿಯೇ ಕಾರಣ ಹೊರತು ಯಾವುದೇ ಅಧಿಕಾರಿಯ ತಪ್ಪಲ್ಲ. ಪೊಲೀಸ್ ಇಲಾಖೆಯಲ್ಲಿ ಕ್ರೀಡಾ ಕೋಟಾ ನಿಂತು ಹೋಗಿ ಹಲವು ವರ್ಷಗಳೇ ಸಂದಿವೆ. ಇದರಿಂದ ಪೊಲೀಸ್ ಕಬಡ್ಡಿ, ಫುಟ್ಬಾಲ್ ಹಾಗೂ ವಾಲಿಬಾಲ್ ತಂಡಗಳು ದುರ್ಬಲಗೊಂಡಿವೆ. ಎರವಲು ಆಟಗಾರರನ್ನು ಕರೆಸಿ ಪಂದ್ಯಗಳಲ್ಲಿ ಪಾಲ್ಗೊಳ್ಳಲಾಗುತ್ತಿದೆ.
ಉಷಾರಾಣಿ ಅವರ ಸಾಧನೆಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು, ಕೆಎಸ್‌ಆರ್‌ಪಿ ಹಾಗೂ ಕರ್ನಾಟಕ ಪೊಲೀಸ್ ಕ್ರೀಡಾಭಿವೃದ್ಧಿ ಮಂಡಳಿಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಭಾಸ್ಕರ್ ರಾವ್ ಅಭಿನಂದನೆ ಸಲ್ಲಿಸಿದ್ದಾರೆ.

ಇಲ್ಲಿದೆ ಸಿಹಿ ಸುದ್ದಿ

ಹಲವು ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಕ್ರೀಡಾ ಸಾಧಕರಿಗೆ ಅವಕಾಸ ಸಿಗುತ್ತಿರಲಿಲ್ಲ. ಕ್ರೀಡಾಕೋಟದಡಿ ಕ್ರೀಡಾ ಸಾಧಕರು ಉದ್ಯೋಗ ಗಳಿಸುವ ಅವಕಾಶ ತಪ್ಪಿಹೋಗಿತ್ತು. ಆದರೆ ಪೊಲೀಸ್ ಇಲಾಖೆಯ ಪ್ರಮುಖ ಅಧಿಕಾರಿಗಳು ಈ ಬಗ್ಗೆ ಮುತುವರ್ಜಿ ವಹಿಸಿ ಕ್ರೀಡಾ ಸಾಧಕರನ್ನು ಪೊಲೀಸ್ ಇಲಾಖೆಗೆ ಸೇರಿಸಿಕೊಂಡು ತಮ್ಮ ತಂಡವನ್ನು ಬಲಿಷ್ಠಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಇನ್ನು ಕೆಲವು ದಿನಗಳಲ್ಲಿ ರಾಜ್ಯದಲ್ಲಿ ಕ್ರೀಡಾ ಸಾಧನೆ ಮಾಡಿರುವವರು ಪೊಲೀಸ್ ಇಲಾಖೆಗೆ ಸೇರುವ ಅವಕಾಶ ಕೂಡಿಬರಲಿದೆ.

ಉಷಾ ರಾಣಿಗೆ ಇನ್ನು ಸಬ್ ಇನ್‌ಸ್ಪೆಕ್ಟರ್?

ಮೊದಲು ಕ್ರೀಡಾ ಸಾಧನೆ ಮಾಡಿದವರಿಗೆ ಕಾನ್‌ಸ್ಪೇಟಬಲ್ ಹುದ್ದೆ ಬಿಟ್ಟರೆ ಉನ್ನತ ಹುದ್ದೆ ಸಿಗುವುದು ವಿರಳವಾಗಿತ್ತು. ಆದರೆ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದವರಿಗೆ ಉನ್ನತ ಹುದ್ದೆ ಸಿಗುವ ಸಾಧ್ಯತೆ ಇದೆ ಎಂದು ಪೊಲೀಸ್ ಇಲಾಖೆಯ ಕ್ರೀಡಾಭಿವೃದ್ಧಿ ಮಂಡಳಿಯ ಅಧಿಕಾರಿ ಸಮಂತ್ ಹೇಳಿದ್ದಾರೆ. ಈಗ ಕಾನ್‌ಸ್ಟೇಬಲ್ ಆಗಿರುವ ಉಷಾರಾಣಿಗೆ ಹುದ್ದೆಯಲ್ಲಿ ಭಡ್ತಿ ಸಿಕ್ಕರೆ ಅವರು ಸಬ್  ಇನ್‌ಸ್ಪೆಕ್ಟರ್ ಆಗುವುದು ಸಹಜ. ಭಾರತದ ಬೇರೆ ಯಾವುದೇ ರಾಜ್ಯದ ಕ್ರೀಡಾಪಟುಗಳು ಏಷ್ಯನ್ ಗೇಮ್ಸ್ ಹಾಗೂ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದರೆ ಅವರಿಗೆ ಡಿಎಸ್‌ಪಿ ಹಂತದ ಹುದ್ದೆಯನ್ನು ನೀಡಲಾಗುತ್ತದೆ.ಭಾರತ ಹಾಕಿ ತಂಡ, ಕುಸ್ತಿಪಟುಗಳು ಇಂಥ ಹುದ್ದೆಯಲ್ಲಿದ್ದಾರೆ. ಆದರೆ ಕರ್ನಾಟಕದಲ್ಲಿ ಪದಕ ಗೆದ್ದವರಿಗೆ ರೈಲ್ವೆ ಇಲಾಖೆ ಬಿಟ್ಟರೆ ಬೇರೆ ಗತಿಯೇ ಇಲ್ಲ. ಈಗ ಪೊಲೀಸ್ ಇಲಾಖೆ ಆಸಕ್ತಿ ತೋರಿರುವುದು ಸಂತಸದ ವಿಚಾರ.

Related Articles