Saturday, October 5, 2024

ಅವನತಿ ಕಂಡ ಕ್ರೀಡಾಂಗಣಕ್ಕೆ ಜೀವತುಂಬಿದ ಪೊಲೀಸ್ ಸಿಬ್ಬಂದಿ!!!

ಸೋಮಶೇಖರ್ ಪಡುಕರೆ, ಬೆಂಗಳೂರು

ದಕ್ಷಿಣ ಭಾರತದ ನಂ.1 ಕಾರ್ಪೊರೇಷನ್ ಕ್ರೀಡಾಂಗಣವೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಬೆಂಗಳೂರಿನ ಹನುಮಂತ ನಗರದ ರಾಜೀವ್ ಗಾಂಧಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಅವನತಿ ಕಂಡಿತ್ತು. ಆದರೆ ಇಬ್ಬರು ಪೊಲೀಸ್ ಸಿಬ್ಬಂದಿ ತಮ್ಮ ಬಿಡುವಿನ ವೇಳೆಯಲ್ಲಿ ಆ ಕ್ರೀಡಾಂಗಣಕ್ಕೆ ಹೊಸ ಜೀವ ತುಂಬಿ ಕ್ರೀಡಾಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ.

ಹನುಂತನಗರದ ಜಿಂಕೆ ಪಾರ್ಕ್ ಸಮೀಪ ಇರುವ ಎಲ್ಲಾ ಸೌಲಭ್ಯಗಳಿರುವ, ಅಂತಾರಾಷ್ಟ್ರೀಯ ಗುಣಮಟ್ಟದಿಂದ ಕೂಡಿದ  20 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಕ್ರೀಡಾಂಗಣವನ್ನು 2004ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್,ಎಂ, ಕೃಷ್ಣ ಅವರು ಉದ್ಘಾಟಿಸಿದ್ದರು. ಹೆಸರು ರಾಜೀವ್ ಗಾಂಧಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್.  ಆ ನಂತರ 18 ವರ್ಷದೊಳಗಿನ ಏಷ್ಯನ್ ಬಾಸ್ಕೆಟ್ ಬಾಲ್ ಚಾಂಪಿಯನ್ಷಿಪ್ ಕೂಡ ಅಲ್ಲಿ ನಡೆಯಿತು. ಆದರೆ ಆ ಬಳಿಕ ನಿರ್ವಹಣೆ ಮಾಡದೆ ಅದು ಪಡ್ಡೆ ಹುಡುಗರ ಕೇಂದ್ರವಾಯಿತು. ಅಲ್ಲಿಯ ಉಪಕರಣವನ್ನೆಲ್ಲ ಜನ ಕದ್ದೊಯ್ದರು. ಹಗಲಿಗೆ ಗಾಂಜ ಸೇವಿಸುವವರು, ರಾತ್ರಿ ಅನೈತಿಕ ದಂಧೆ ನಡೆಸುವವರ ಕೇಂದ್ರವಾಯಿತು. ಕೊನೆಗೆ ಕೊಂಡೊಯ್ಯಲು ಏನೂ ಇಲ್ಲದಾಗ ಕಬ್ಬಿಣದ ಸರಳುಗಳನ್ನೇ ಮುರಿಯತೊಡಗಿದರು. ಅಲ್ಲಿಗೆ ಯಾರು ಹೋಗದ ಸ್ಥಿತಿ ನಿರ್ಮಾಣವಾಗಿ ಅದೊಂದು ಪಾಳುಬಿದ್ದ ಕೇಂದ್ರವಾಗಿತ್ತು.

ಆದರೆ….ಈಗ….

ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ್ತಿ, ಏಷ್ಯನ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಉಷರಾಣಿ ಹಾಗೂ ವೇಗದ ಓಟಗಾರ ಜಗದೀಶ್ ಅವರು ಇಲ್ಲಿ ಈಗ ನೂರು ಮಕ್ಕಳು ಕ್ರೀಡಾ ತರಬೇತಿ ಪಡೆಯುವಂತೆ ಮಾಡಿದ್ದಾರೆ. ಯೂನಿಕ್ ಸ್ಪೋರ್ಟ್ಸ್ ಅಕಾಡೆಮಿ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ಕ್ರೀಡಾಂಗಣಕ್ಕೆ ಮರುಜೀವ ತುಂಬಿದ್ದಾರೆ. ಇಬ್ಬರೂ ಪೊಲೀಸ್ ಹುದ್ದೆಯಲ್ಲಿದ್ದು, ತಮ್ಮ ಬಿಡುವಿನ ವೇಳೆಯಲ್ಲಿ ಮಕ್ಕಳಿಗೆ ತರಬೇತಿ ನೀಡಲಾರಂಭಿಸಿದರು. ಕ್ರೀಡೆ ಬಗ್ಗೆ ಸ್ಥಳೀಯ ಯುವಕರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಮಾಡಿದರು. ತಮ್ಮದೇ ವೆಚ್ಚದಲ್ಲಿ ಕ್ರೀಡಾ ಸಾಮಗ್ರಿಗಳನ್ನು ತಂದು ಯುವಕರಿಗೆ ತರಬೇತಿ ನೀಡುವ ಮೂಲಕ ರಾಜೀವ್ ಗಾಂಧೀ ಕ್ರೀಡಾಂಗಣಕ್ಕೆ ಹೊಸ ಜೀವ ತುಂಬಿದ್ದಾರೆ. ಕ್ರೀಡಾಂಗಣಕ್ಕೆ ಬರಲು ಹೆದರುತ್ತಿದ್ದ ಜನ ಈಗ ಕ್ರೀಡಾಂಗಣದ ಕಡೆಗೆ ಮುಖ ಮಾಡಿದ್ದಾರೆ. ತಮ್ಮ ಮಕ್ಕಳನ್ನು ಖುಷಿಯಲ್ಲಿ ಕ್ರೀಡಾಂಗಣಕ್ಕೆ ಕಳುಹಿಸಿತ್ತಿದ್ದಾರೆ. 40 ಯುವಕರು ಇಲ್ಲಿ ಕಬಡ್ಡಿ ತರಬೇತಿ ಪಡೆಯುತ್ತಿದ್ದಾರೆ. ಕಾಂಗ್ರೆಸ್ ಎಂಎಲ್ಸಿ ಯುಬಿ ವೆಂಕಟೇಶ್ ಸದನದಲ್ಲಿ ಸರಕಾರದ ಗಮನ ಸೆಳೆದಿದ್ದಾರೆ, ಅದೇ ರೀತಿ ಸ್ಥಳೀಯ ಶಾಸಕ ರವಿ ಸುಬ್ರಹ್ಮಣ್ಯ ಅವರು ಕೂಡ ಮುತುವರ್ಜಿ ವಹಿಸಿ, ಕ್ರೀಡಾಂಗಣಕ್ಕೆ ಹೊಸ ರೂಪ ನೀಡಲು ಶ್ರಮಿಸುತ್ತಿರುವ ಜಗದೀಶ್ ಮತ್ತು ಉಷಾರಾಣಿಗೆ ಬೆಂಬಲ ನೀಡಿದ್ದಾರೆ. ದುರಸ್ತಿ ಕಾರ್ಯಗಳು ಆರಂಭಗೊಂಡಿದ್ದು ಅಲ್ಲಿ ಮತ್ತಷ್ಟು ಕ್ರೀಡಾಚಟುವಟಿಕೆಗಳು ನಡೆಯುವ ಲಕ್ಷಣ ತೋರಿದೆ.

 

ಹೊಸ ರೂಪು ನೀಡಿದ ಖುಷಿ: ಜಗದೀಶ್

ಸ್ಪೋರ್ಟ್ಸ್ ಮೇಲ್ ಜತೆ ಮಾತನಾಡಿದ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಹಾಗೂ ಮಾಜಿ ಅಥ್ಲೀಟ್ ಜಗದೀಶ್, “ಮೂರು ವರ್ಷಗಳ ಹಿಂದೆ ಇಲ್ಲಿಗೆ ಬಂದಾಗ ಕಣ್ಣೀರು ಬಂದಿತ್ತು. ಒಬ್ಬ ಕ್ರೀಡಾಪಟುವಾಗಿ ಇಂಥ ಕ್ರೀಡಾಂಗಣಕ್ಕೆ ಹೊಸ ಜೀವ ನೀಡಬೇಕೆಂದಿನಿಸಿತು. ಇಲ್ಲಿಯ ಮನೆ ಮನೆಗಳಿಗೆ ತೆರಳಿ ಯುವಕರಲ್ಲಿ ಉತ್ಸಾಹ ತುಂಬಿದೆವು. ಕ್ರೀಡೆಯಿಂದಾಗುವ ಪ್ರಯೋಜನಗಳ ಬಗ್ಗೆ ತಿಳಿಸಿ ಅವರಲ್ಲಿ ಅರಿವು ಮೂಡಿಸಿದೆವು. ಅನಗತ್ಯವಾಗಿ ಕ್ರೀಡಾಂಗಣದ ಒಳಗೆ ಬರುವವರಿಗೆ ತಡೆ ಹಾಕಲಾಯಿತು. ಇಬ್ಬರು ಕ್ರೀಡಾಪಟುಗಳಿಂದ ಆರಂಭಗೊಂಡ ನಮ್ಮ ತರಬೇತಿ ಈಗ, ನೂರಕ್ಕೂ ಹೆಚ್ಚು ಕ್ರೀಡಾಪಟುಗಳಿಂದ ಕೂಡಿದೆ. ಕಬಡ್ಡಿ ಮ್ಯಾಟ್ ತರಿಸಿ ಆಸಕ್ತರಿಗೆ ಕಬಡ್ಡಿ ತರಬೇತಿ ನೀಡಲಾಗುತ್ತಿದೆ. ಏಷ್ಯನ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ವಿಜೇತೆ ಉಷಾರಾಣಿಯೂ ನಮ್ಮೊಂದಿಗೆ ಕೈಜೋಡಿಸಿದಾಗಿನಿಂದ ಕಬಡ್ಡಿಯಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಹೆಚ್ಚಾಯಿತು. ಈಗ ಕ್ರೀಡಾಂಗಣದ ದುರಸ್ತಿ ಕಾರ್ಯ ನಡೆಯುತ್ತಿದೆ. ಈ ಕ್ರೀಡಾಂಗಣ ಹೊಸ ರೂಪು ಪಡೆದ ನಂತರ ಸಿನಿಮಾ ಶೂಟಿಂಗ್ ಮತ್ತು ಇತರ ಕಾರ್ಯಕ್ರಮಗಳಿಗೆ ನೀಡದೆ ಕೇವಲ ಕ್ರೀಡಾ ಚಟುವಟಿಕೆಗೆ ಅವಕಾಶ ನೀಡಬೇಕೆಂಬುದು ನಮ್ಮ ವಿನಂತಿ,” ಎಂದರು.

Related Articles