Dream 11: ಪೋಲಿಸರಿಗೆ ಅನ್ವಯವಾಗುವ ಕಾನೂನು ಬಿಸಿಸಿಐಗೆ ಯಾಕೆ ಆಗುವುದಿಲ್ಲ?
ಡ್ರೀಮ್ ಇಲೆವೆನ್ Dream 11 ಆನ್‌ಲೈನ್ ಜೂಜಿನಲ್ಲಿ ಜಯ ಗಳಿಸಿ ಕೋಟ್ಯಧಿಪತಿಯಾದ ಪುಣೆ ಪೊಲೀಸ್ ಇಲಾಖೆಯ ಸಬ್ ಇನ್‌ಸ್ಪೆಕ್ಟರ್ ಸೋಮನಾಥ ಝಿಂಡೆ ಅವರನ್ನು ಅಲ್ಲಿಯ ಇಲಾಖೆ ಅಮಾನತು ಮಾಡಿದೆ. ಸರಿ, ಈ ಬೆಟ್ಟಿಂಗ್ ಆಪ್‌ನಿಂದ ಪ್ರಾಯೋಜಕತ್ವ ಪಡೆದ ಬಿಸಿಸಿಐ ಮೇಲೆ ಪೋಲಿಸ್ ಇಲಾಖೆ ಯಾಕೆ ಕ್ರಮ ಕೈಗೊಳ್ಳಬಾರದು? Why can’t police take action against BCCI for taking betting app sponsorship?
ಸೋಮನಾಥ್ ಆನ್‌ಲೈನ್ ಜೂಜಿನಲ್ಲಿ 1.5 ಕೋಟಿ ರೂ. ಗೆದ್ದಿದ್ದರು. ಪೋಲಿಸ್ ಇಲಾಖೆಯ ನಿಯಮವನ್ನು ಉಲ್ಲಂಘಿಸಿ ಆನ್‌ಲೈನ್ ಜೂಜು ಆಡಿದ ಕಾರಣ ಇಲಾಖೆಯಲ್ಲಿದ್ದುಕೊಂಡು ಅಸಭ್ಯವಾಗಿ ವರ್ತಿಸಿರುವುದು ಮತ್ತು ಇಲಾಖೆಯ ಘನತೆಗೆ ಚ್ಯುತಿ ತಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಗಳು ಹೇಳುತ್ತಿವೆ. ಇದು ಸ್ವಾಗತಾರ್ಹ. ಹಾಗಾದರೆ ಈ ನಿಯಮ ಪೋಲಿಸರಿಗೆ ಮಾತ್ರ ಅನ್ವಯವಾಗುವುದು ಮಾತ್ರವೇ? ಸಾರ್ವಜನಿಕರಿಗೆ ಯಾಕೆ ಅನ್ವಯವಾಗುವುದಿಲ್ಲ? ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಡ್ರೀಮ್ ಇಲೆವೆನ್ ಒಂದು ಆನ್‌ಲೈನ್ ಜೂಜು ಆಟ. ಈ ಬಗ್ಗೆ ಒಬ್ಬರು ಕೋರ್ಟ್ ಮೇಟ್ಟಿಲೇರಿ ಸೋತಿದ್ದಾರೆ. ಕಾರಣ ಡ್ರೀಮ್ ಇಲೆವೆನ್ ಅದು Fantasy sports ಅಂದರೆ ಊಹಿಸಿ ಆಡುವ ಕ್ರೀಡೆಯಂತೆ. ಅದಕ್ಕಾಗಿ ಈ ಡ್ರೀಮ್ ಇಲೆವೆನ್ ಭಾರತ ಕ್ರಿಕೆಟ್ ತಂಡಕ್ಕೆ 358 ಕೋಟಿ ನೀಡಿ ಪ್ರಾಯೋಜಕತ್ವ ಹೊಂದಿದೆ. ಭಾರತ ಕ್ರಿಕೆಟ್ ತಂಡದ ಆಟಗಾರರು ತಾವು ಧರಿಸುವ ಜರ್ಸಿಯಲ್ಲಿ Dream 11 ಲೋಗೋ ಧರಿಸಿರುತ್ತಾರೆ. ಟೀವಿ ಜಾಹೀರಾತುಗಳಲ್ಲಿ ಆಟಗಾರರು ಕಾಣಿಸಿಕೊಂಡು ..ಆಡಿ.. ಗೆಲ್ಲಿ ಎಂದು ಜನರಿಗೆ ಸಂದೇಶ ನೀಡುತ್ತಿದ್ದಾರೆ. ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರೇ ಯುವಕರಿಗೆ ಡ್ರೀಮ್ ಇಲೆವೆನ್‌ನಲ್ಲಿ ಆಡಿ ಎಂದು ಕರೆ ನೀಡುತ್ತಿದ್ದಾರೆ. ಈ ಬಗ್ಗೆ ಪೋಲಿಸರು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ? ಸರಿ ಊಹಿಸಿ ಆಡುವ ಕ್ರೀಡೆಯೇ ಎಂದು ಒಪ್ಪಿಕೊಳ್ಳೋಣ ಹಾಗಾದರೆ ಮಟ್ಕಾ ಯಾಕೆ ಕದ್ದು ಮುಚ್ಚಿ ಆಡುತ್ತಾರೆ? ಅದು ಕೂಡ ಊಹಿಸಿ ಆಡುವ ಕ್ರೀಡೆಯಲ್ಲವೇ? ಹಣ ಕಟ್ಟಿ ಆಡುವುದನ್ನು ಜೂಜು ಅನ್ನದೆ ಬೇರೆ ಏನು ಅನ್ನಬೇಕು? ಮಟ್ಕಾ ಆಡುವವರನ್ನು ಪೋಲಿಸರು ಯಾಕೆ ಬಂಧಿಸುತ್ತಾರೆ? ಮಟ್ಕಾ ಕೇಂದ್ರಗಳ ಮೇಲೆ ಏಕೆ ದಾಳಿ ಮಾಡುತ್ತಾರೆ. ಇಸ್ಬೀಟ್ ಅಡ್ಡೆಗಳ ಮೇಲೆ ಯಾಕೆ ದಾಳಿ ಮಾಡುತ್ತಾರೆ? ಮಟ್ಕಾ fantasy Game ಅಲ್ಲವೇ?
ಇಲ್ಲಿ ನಾವು ಗಮನಿಸಬೇಕಾದ ಮುಖ್ಯ ಅಂಶವೆಂದರೆ Dream 11 ನಲ್ಲಿ ಯಾರು ಹೂಡಿಕೆ ಮಾಡಿದ್ದಾರೆ ಎಂಬುದು. ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ಹರ್ಷ ಭೊಗ್ಲೆ ಹೀಗೆ ಅನೇಕ ಹಾಲಿ ಹಾಗೂ ಮಾಜಿ ಕ್ರಿಕೆಟ್ ತಾರೆಗಳು ಈ ಬೆಟ್ಟಿಂಗ್ ಉದ್ದಿಮೆಯಲ್ಲಿ ಹಣ ವಿನಿಯೋಗಿಸಿದ್ದಾರೆ. ಸೌರವ್ ಗಂಗೂಲಿ ಅವರ ಮೈ 11 ಸರ್ಕಲ್ ಕೂಡ ಬೆಟ್ಟಿಂಗ್ ಆಪ್. ಕ್ರಿಕೆಟ್ ಇಂಥ ಶ್ರೇಷ್ಠ ಕ್ರಿಕೆಟ್ ತಾರೆಗಳೇ ಹೂಡಿಕೆ ಮಾಡಿ, ತಮ್ಮ ಕ್ರಿಕೆಟ್ ಸಾಧನೆಯಿಂದ ಗಳಿಸಿದ ಜನಪ್ರಿಯತೆಯನ್ನು ಜೂಜು ಉದ್ದಿಮೆಗೆ ಬಳಸಿ ಹಣ ಮಾಡುತ್ತಿರುವುದು ಬೇಸರದ ಸಂಗತಿ. ಇಂಥ ಶ್ರೇಷ್ಠ ಕ್ರಿಕೆಟಿಗರು ಜೂಜು ಉದ್ದಿಮೆಯಲ್ಲಿ ಹೂಡಿಕೆ ಮಾಡಿರುವಾಗ ನ್ಯಾಯಾಲಯದಲ್ಲಿ ಜಯ ಗಳಿಸುವುದು ಸಹಜವೇ,
ಭಾರತದಲ್ಲಿ ಕುದುರೆ ರೇಸ್‌ನಲ್ಲಿ ಜೂಜಾಡುವುದು ಮತ್ರ ಅಧಿಕೃತ, ಬಾಕಿ ಎಲ್ಲವೂ ಅನಧಿಕೃತ. ಈ ಆನ್‌ಲೈನ್ ಬೆಟ್ಟಿಂಗ್ ಬಂದಾಗಿನಿಂದ ಈ ದಂಧೆ ಯಾರ ಹಿಡಿತದಲ್ಲೂ ಇಲ್ಲ. ಪುಣೆಯ ಸೋಮನಾಥ ಝಿಂಡೆ 1.5 ಕೋಟಿ ಗೆದ್ದ ಕಾರಣ ಇಂದು ಸುದ್ದಿಯಲ್ಲಿದ್ದು, ಅಮಾನತುಗೊಂಡಿದ್ದಾರೆ. ಇವರಂತೆಯೇ ಇನ್ನೆಷ್ಟು ಸೋಮನಾಥರು ಈ ರೀತಿ ಡ್ರೀಮ್ 11 ಜೂಜಿನಲ್ಲಿ ತಮ್ಮನ್ನು ತೊಡಗಿಸಿಕೊಂಡಿರಬಹುದು? ಕ್ರಿಕೆಟ್ ತಂಡಗಳಿಗೆ, ಇತರ ಕ್ರೀಡೆಗಳಿಗೆ ಡ್ರೀಮ್ ಇಲೆವೆನ್ ಸೇರಿದಂತೆ ಇತರ ಬೆಟ್ಟಿಂಗ್ ಆಪ್‌ಗಳ ಪ್ರಾಯೋಜಕತ್ವ ನಿಲ್ಲಿಸಬೇಕು. ಫ್ಯಾಂಟಸಿ ಸ್ಪೋರ್ಟ್ಸ್ ಹೆಸರಿನಲ್ಲಿ ಬೆಟ್ಟಿಂಗ್ ದಂಧೆ ಇಂದು ಎಲ್ಲೆಡೆ ದಟ್ಟವಾಗಿ ಚಾಚಿಕೊಂಡಿದೆ. ಇಂಥ ಆಪ್‌ಗಳ ಮೂಲಕವೇ ಬದುಕನ್ನು ನಡೆಸುವ ಯುವಕರ ಸಂಖ್ಯೆ ಹೆಚ್ಚಾಗಿದೆ. ಸರಕಾರ ಇದಕ್ಕೊಂದು ಪರಿಹಾರ ಮಾರ್ಗ ಕಂಡುಕೊಳ್ಳಬೇಕಿದೆ?