ಸೋಮಶೇಖರ್ ಪಡುಕರೆ sportsmail
55 ವರ್ಷಗಳ ಇತಿಹಾಸ ಹೊಂದಿರುವ ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನ ಕ್ಯಾಂಪಸ್ ಪ್ರವೇಶಿಸಿದರೆ ಯಾವುದೋ ಧ್ಯಾನದ ಕೇಂದ್ರವನ್ನು ಹೊಕ್ಕಂತಾಗುತ್ತದೆ. ಅಲ್ಲಿ ಉಪನ್ಯಾಸಕರ ಪಾಠದ ಧ್ವನಿ ಹೊರತು ಮತ್ತೇನೂ ಕೇಳದು. ಇದಕ್ಕೆ ಮುಖ್ಯ ಕಾರಣ ಶಿಸ್ತು, ಆ ಶಿಸ್ತು ರೂಪುಗೊಂಡಿದ್ದು ಅಲ್ಲಿಯ ಚಟುವಟಿಕೆಗಳಿಂದ.
ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಪ್ರಾಂಶುಪಾಲರು, ಉತ್ತಮ ದೈಹಿಕ ಶಿಕ್ಷಕರು ಮತ್ತು ತಾವು ಕಲಿತ ಕಾಲೇಜು ಎಂದು ಸದಾ ಕಾಳಜಿಯಿಂದ ನೆರವು ನೀಡುವ ಹಳೆವಿದ್ಯಾರ್ಥಿಗಳು. ಹೀಗೆ ಮಿಲಾಗ್ರಿಸ್ ಕಾಲೇಜು ಮಂಗಳೂರು ವಿಶ್ವವಿದ್ಯಾನಿಲಯದ ಕಾಲೇಜುಗಳಲ್ಲೇ ಉತ್ತಮ ಕ್ರೀಡಾ ಸಾಧನೆ ಮಾಡಿದ ಕಾಲೇಜುಗಳಲ್ಲಿ ಒಂದೆನಿಸಿಕೊಂಡಿದೆ.
ಕಳೆದ ಐದು ವರ್ಷಗಳಿಂದ ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ವಿನ್ಸೆಂಟ್ ಆಳ್ವಾ ಅವರು ಕಾಲೇಜು ಬಿಟ್ಟ ನಂತರ ತಮ್ಮ ಕೆಲಸ ಮುಗಿಯಿತೆಂದು ಮನೆಗೆ ಹೋಗುವುದಿಲ್ಲ. ಸಂಜೆ ಏಳು ಗಂಟೆಯವರೆಗೂ ಕಾಲೇಜು ಕ್ರೀಡಾಂಗಣದಲ್ಲಿ ಕ್ರೀಡಾಪಟುಗಳೊಂದಿಗೆ ಬೆರೆತು ವಿವಿಧ ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ದೈಹಿಕ ಶಿಕ್ಷಣ ನಿರ್ದೇಶಕ ನಿಖಿಲ್ ಡಿʼ ಸೋಜಾ ಕಾಲೇಜಿನ ಕ್ರೀಡಾ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
“ಹೊಸ ಶಿಕ್ಷಣ ನೀತಿಯಲ್ಲಿ ಕ್ರೀಡೆಗೆ ಪ್ರೋತ್ಸಾಹ ನೀಡುವ ಹಲವಾರು ಅಂಶಗಳಿವೆ. ದಿನಕ್ಕೆ ಎರಡು ಗಂಟೆ ಕ್ರೀಡೆಗೆ, ಎರಡು ಗಂಟೆ ಯೋಗಕ್ಕೆ ಹಾಗೂ ಎರಡು ಗಂಟೆ ಆರೋಗ್ಯದ ಬಗ್ಗೆ ಮೀಸಲಿಡಲಾಗಿದೆ. ಇದರಿಂದಾಗಿ ನಾವು ಕ್ರೀಡೆಗೆ ಹೆಚ್ಚು ಒತ್ತು ನೀಡಲು ಸಹಕಾರಿಯಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಕಾಲೇಜಿನ ಹಳೆ ವಿದ್ಯಾರ್ಥಿಗಳು ಇಲ್ಲಿನ ಕ್ರೀಡಾ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಮಕ್ಕಳಲ್ಲಿನ ದೈಹಿಕ ಕ್ಷಮತೆ ಕಡಿಮೆಯಾಗುತ್ತಿದೆ. ಇದಕ್ಕೆ ಸುಲಭವಾಗಿ ಸಿಗುವ ತಾಂತ್ರಿಕ ಸೌಲಭ್ಯಗಳೂ ಕಾರಣವಾಗಿದೆ,” ಎಂದು ಡಾ. ವಿನ್ಸೆಂಟ್ ಆಳ್ವಾ ಹೇಳಿದ್ದಾರೆ.
ವಿಶ್ವವಿದ್ಯಾಲಯ ಚಾಂಪಿಯನ್ಸ್:
ಅರ್ಧ ಶತಮಾನವನ್ನು ದಾಟಿ ಮುನ್ನುಗ್ಗುತ್ತಿರುವ ಮಿಲಾಗ್ರಿಸ್ ಕಾಲೇಜು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಹಲವಾರು ಚಾಂಪಿಯನ್ ಪಟ್ಟಗೆದ್ದ ಇತಿಹಾಸವಿದೆ, ಈಗಲೂ ಅದೇ ಹೆಜ್ಜೆಯಲ್ಲಿ ಮುಂದುವರಿದಿದೆ. ಬೇಸ್ ಬಾಲ್ ಕ್ರೀಡೆಯನ್ನು ಹಿಂದೆಯೇ ಅನುಷ್ಠಾನಗೊಳಿಸಿದ ಕಾಲೇಜೆಂದರೆ ಅದು ಮಿಲಾಗ್ರಿಸ್. ಈಗ ಇತರ ಕ್ರೀಡೆಗಳು ಬೇಸ್‌ಬಾಲ್ ಕ್ರೀಡೆಯನ್ನು ಬದಿಗೆ ಸರಿಸುವಂತೆ ಮಾಡಿದೆ. ಅದರಲ್ಲಿ ಕ್ರಿಕೆಟ್ ಪ್ರಮುಖ ಪಾತ್ರವಹಿಸುತ್ತದೆ. ಕಳೆದ ವರ್ಷ ಉಡುಪಿ ಜೋನ್‌ನಲ್ಲಿ ಮಿಲಾಗ್ರಿಸ್ ಕಾಲೇಜು ಚಾಂಪಿಯನ್ ಪಟ್ಟ ಗೆದ್ದುಕೊಂಡಿತ್ತು.
ಟೇಬಲ್ ಟೆನಿಸ್‌ನಲ್ಲಿ ಮಿಲಾಗ್ರಿಸ್ ಕಾಲೇಜು ಸತತ ಮೂರು ವರ್ಷ ಚಾಂಪಿಯನ್ ಪಟ್ಟ ಗೆದ್ದುಕೊಂಡಿತ್ತು. ಆಲ್ ಇಂಡಿಯಾ ವಿಶ್ವವಿದ್ಯಾನಿಲಯದಲ್ಲಿ ಸ್ಪರ್ಧಿಸುವ ಮಂಗಳೂರು ವಿವಿ ತಂಡದ ನಾಯಕತ್ವ ಮಿಲಾಗ್ರಿಸ್ ಕಾಲೇಜಿನ ಆಟಗಾರರಿಗೆ ಸಿಕ್ಕಿದ್ದು ಗಮನಾರ್ಹ. ಚೆಸ್ ಮತ್ತು ಶೆಟಲ್ ಬ್ಯಾಡ್ಮಿಂಟನ್‌ನಲ್ಲೂ ಮಿಲಾಗ್ರಿಸ್ ತಂಡ ಪ್ರಭುತ್ವ ಸಾಧಿಸಿತ್ತು.
ಮಿಲಾಗ್ರಿಸ್ ಸ್ಪೋರ್ಟ್ಸ್ ಅಕಾಡೆಮಿ:
ಕ್ರೀಡೆಯಲ್ಲಿ ಆಸಕ್ತಿ ಇರುವವರು ಸಂಸ್ಥೆಯ ಜವಾಬ್ದಾರಿಯುತ ಹುದ್ದೆಯಲ್ಲಿದ್ದರೆ ಅಲ್ಲಿ ಯಾವ ರೀತಿಯಲ್ಲಿ ಕ್ರೀಡೆ ಏಳ್ಗೆಯನ್ನು ಕಾಣುತ್ತದೆ ಎಂಬುದಕ್ಕೆ ಮಿಲಾಗ್ರಿಸ್ ಕಾಲೇಜು ಉತ್ತಮ ಉದಾಹರಣೆ. ಸೈಕ್ಲಿಂಗ್ ಸೇರಿಂದತೆ ಹಲವಾರು ಕ್ರೀಡಾ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಡಾ, ವಿನ್ಸೆಂಟ್ ಆಳ್ವಾ ಕಾಲೇಜಿನ ಸುಮಾರು 2.5 ಎಕರೆ ವಿಸ್ತೀರ್ಣದ ಕ್ರೀಡಾಂಗಣದಲ್ಲಿ ವಿವಿಧ ಕ್ರೀಡೆಗಳಿಗೆ ತರಬೇತಿ ನೀಡುವ ಸಲುವಾಗಿ ಮಿಲಾಗ್ರಿಸ್ ಸ್ಪೋರ್ಟ್ಸ್ ಅಕಾಡೆಮಿಯನ್ನು ಹುಟ್ಟುಹಾಕಿದ್ದಾರೆ. ಕಾಲೇಜಿನ ಆಡಳಿತ ಮಂಡಳಿ, ದೈಹಿಕ ಶಿಕ್ಷಕರು, ಬೋಧಕ ಮತ್ತು ಬೋಧಕೇತರ ವರ್ಗ ಮತ್ತು ಕಾಲೇಜಿನ ಹಳೆ ವಿದ್ಯಾರ್ಥಿಗಳ ಪಾತ್ರ ಇಲ್ಲಿ ಪ್ರಮುಖವಾಗಿದೆ.
ಕ್ರೀಡಾಪಟುಗಳಲ್ಲಿ ಶಿಸ್ತು ಮನೆ ಮಾಡಿರುತ್ತದೆ. ಈ ಅಕಾಡೆಮಿಯಲ್ಲಿ ಸುಮಾರು 150ಕ್ಕೂ ಹೆಚ್ಚು ಕ್ರೀಡಾಪಟುಗಳು ವಿವಿಧ ಕ್ರೀಡೆಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ಬಂದ ನುರಿತ ತಜ್ಞರು ಇಲ್ಲಿ ತರಬೇತಿ ನೀಡುತ್ತಿದ್ದಾರೆ.
ಬೆಳಿಗ್ಗೆ 6 ಗಂಟೆಗೆ ತರಬೇತಿ ಆರಂಭಗೊಂಡು 9 ಗಂಟೆಯವರೆಗೆ ನಡೆಯುತ್ತದೆ. ಕ್ರೀಡೆಯಲ್ಲಿ ತೊಡಗಿಕೊಂಡಿರುವ ವಿದ್ಯಾರ್ಥಿಗಳಿಗೆ ಸಮಯದಲ್ಲಿ ಸ್ವಲ್ಪ ರಿಯಾಯಿತಿ ನೀಡಲಾಗಿದೆ. ಹಿರಿಯ ತರಬೇತುದಾರ ವಿಜಯ್ ಆಳ್ವಾ ಅವರು ಗೌರವದ ನೆಲೆಯಲ್ಲಿ ತಮ್ಮ ಬಿಡುವಿನ ವೇಳೆಯಲ್ಲಿ ಇಲ್ಲಿ ಕ್ರಿಕೆಟ್‌ನ ಬಗ್ಗೆ ಸಲಹೆ ನೀಡುತ್ತಾರೆ. ಆದರೆ ಕ್ರಿಕೆಟ್‌ಗೆ ಪ್ರತ್ಯೇಕ ಕೋಚ್ ಇದ್ದಾರೆ.
ಹಳೆ ವಿದ್ಯಾರ್ಥಿಗಳಿಂದ ಅಕಾಡೆಮಿ:
ಕಾಲೇಜಿನ ಕ್ರೀಡಾ ವಿಭಾಗ ಒಂದು ಅಕಾಡೆಮಿಯಾಗಿ ರೂಪುಗೊಳ್ಳುವಲ್ಲಿ ಇಲ್ಲಿನ ಹಳೆ ವಿದ್ಯಾರ್ಥಿಗಳ ಕೊಡುಗೆ ಅಪಾರ. ಕ್ರೀಡಾಭಿವೃದ್ಧಿಗಾಗಿ ವಿವಿಧ ರೀತಿಯಲ್ಲಿ ಕೊಡುಗೆ ನೀಡಿದವರ ಸಂಖ್ಯೆ ಅಪಾರವಾಗಿದ್ದು ಇಲ್ಲಿ ಕೆಲವರ ಹೆಸರನ್ನು ಸೂಚಿಸುವುದು ಅಗತ್ಯವೆನಿಸಿದೆ. ಪಾಠ ಮತ್ತು ಆಟದ ಮೂಲಕ ಕಾಲೇಜಿಗೆ ಕೀರ್ತಿ ತಂದ ರಾಜ್ ಬೆಂಗ್ರೆ, ಆಲ್ಫ್ರೆಡ್ ಕ್ರಾಸ್ತಾ, ವಿಲ್ಸನ್ ಡಿʼಸೋಜ, ಸ್ಟೀವನ್ ಕರ್ನಾಲಿಯೋ, ರೊನಾಲ್ಡ್ ರಾಜೇಶ್ ಲೂಯೀಸ್ ಹಾಗೂ ಅಲೆನ್ ಲೂಯೀಸ್ ಅವರ ಕೊಡುಗೆ ಅಪಾರ.
“ನಮಗೆ ಈ ಉಡುಗೊರೆ ನೀಡಿದ್ದಕ್ಕೆ ಯಾವುದೇ ಪ್ರತಿಫಲ ಬೇಡ ಆದರೆ ಕ್ರೀಡೆಯಲ್ಲಿ ಸಾಧನೆ ಮಾಡಿ ಕಾಲೇಜಿಗೆ ಕೀರ್ತಿ ತಂದು, ರಾಜ್ಯ ಮತ್ತು ದೇಶಕ್ಕೆ ಕೀರ್ತಿ ತಂದು, ಕ್ರೀಡೆಯ ಮೂಲಕ ಅವರ ಬದುಕನ್ನು ಕಟ್ಟಿಕೊಂಡರೆ ಅದೇ ಪ್ರತಿಫಲ. ಅವರು ಇತರರಿಗೆ ಮಾದರಿಯಾಗಲಿ ಎಂಬುದೇ ನಮ್ಮ ಉದ್ದೇಶ” ಎಂದು ರಾಜ್ ಬೆಂಗ್ರೆ ಅವರು ಹೇಳಿರುವ ಹೃದಯವಂತಿಕೆಯ ಮಾತನ್ನು ಪ್ರಾಂಶುಪಾಲರಾದ ಡಾ. ವಿನ್ಸೆಂಟ್ ಆಳ್ವಾ ಸ್ಮರಿಸುತ್ತಾರೆ.
ಅಕಾಡೆಮಿಯಲ್ಲಿ ಒಂದು ಪುಟ್ಟ ಜಿಮ್ ಇದ್ದು, ಅದು ಕೂಡ ದಾನಿಗಳ ಕೊಡುಗೆಯಾಗಿದೆ, ಜಿಮ್‌ನ ಗೋಡೆಯ ಮೇಲೆ ಮಿಸ್ಟರ್ ವರ್ಲ್ಡ್‌ನಲ್ಲಿ ನಾಲ್ಕನೇ ಸ್ಥಾನ ಪಡೆದ ಅನಿಲ್ ಅವರ ಪೋಸ್ಟರ್ ಕ್ರೀಡಾಪಟುಗಳಿಗೆ ಸ್ಫೂರ್ತಿ ತುಂಬುವಂತಿದೆ. ಅನಿಲ್ ದೇಹದಾರ್ಢ್ಯ ಪಟುವಾಗಿದ್ದು, ಕಾಲೇಜಿನಲ್ಲಿ ಚಾಂಪಿಯನ್ ಆಗಿದ್ದು, ನಂತರ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಚಾಂಪಿಯನ್ ಪಟ್ಟ ಗೆದ್ದರು, ಬಳಿಕ ಆಲ್ ಇಂಡಿಯಾ ಚಾಂಪಿಯನ್ ಆದರು, ರಾಜ್ಯ ಮಟ್ಟದಲ್ಲೂ ಅಗ್ರ ಸ್ಥಾನ ಗಳಿಸಿ ಮಿಸ್ಟರ್ ಇಂಡಿಯಾ ಕೀರ್ತಿ ತಂದರು. ಬಳಿಕ ಮಿಸ್ಟರ್ ವರ್ಲ್ಡ್‌ನಲ್ಲಿ ನಾಲ್ಕನೇ ಸ್ಥಾನ ಗಳಿಸಿ ಈಗ ರೈಲ್ವೆಯಲ್ಲಿ ಉದ್ಯೋಗಿಯಾಗಿದ್ದಾರೆ.
ಅಕಾಡೆಮಿಯ ಧ್ಯೇಯ, ಕ್ರೀಡೆಯ ಮೂಲಕ ಶಿಕ್ಷಣ:
1988ನೇ ವರ್ಷದಲ್ಲಿ ವಿದ್ಯಾರ್ಥಿಯಾಗಿದ್ದ, ಸದ್ಯ ದುಬೈನಲ್ಲಿ ನೆಲೆಸಿರುವ ರಾಜ್ ಬಂಗೇರ ಅವರು ಅಕಾಡೆಮಿಯ ಪ್ರಮುಖ ಪ್ರಾಯೋಜಕರಾಗಿದ್ದಾರೆ. ಮಿಲಾಗ್ರಿಸ್ ಶಿಕ್ಷಣ ಸಂಸ್ಥೆಯ ಕರೆಸ್ಪಾಂಡೆಂಟ್ ರೆ, ಫಾದರ್ ವಲೇರಿಯನ್ ಮೆಂಡೊಂಕಾ ಅವರು ಘನ ಮಹಾ ಪೋಷಕರಾಗಿದ್ದಾರೆ. ನಿರ್ದೇಶಕರಾಗಿ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ನಿಖಿಲ್ ಡಿʼಸೋಜಾ ಕಾರ್ಯನಿರ್ವಹಿಸುತ್ತಿದ್ದಾರೆ. ಸಿಪ್ರಿಯನ್ ಕ್ರಾಸ್ತಾ, ವಾಣಿ, ವಿನ್ಸೆಂಟ್, ಸ್ಟೀವನ್ ಪೊಂಟೋ, ವಿನಯ್ ಶೇಟ್, ಅಣ್ಣಮ್ಮ, ರೇಶ್ಮಾ, ನಿತ್ಯಾನಂದ ಶೆಟ್ಟಿ, ಚಂದ್ರಿಕಾ, ಕಾರ್ತಿಕ್ ನಾಯಕ್ ಹಾಗೂ ಗಣೇಶ್ ನಾಯಕ್ ಅಕಾಡೆಮಿಯ ಸದಸ್ಯರಾಗಿದ್ದಾರೆ.
ಅಕಾಡೆಮಿಯಲ್ಲಿ ಸಾಧಕರು:
ಅಕಾಡೆಮಿಯಲ್ಲಿ ಪಳಗಿ ಕಾಲೇಜಿಗೆ ಕೀರ್ತಿ ತಂದವರ ಪಟ್ಟಿ ನೋಡಿದರೆ ಅಚ್ಚರಿಯಾಗುತ್ತದೆ. ವಾಲಿಬಾಲ್‌ನಲ್ಲಿ ಮನೋಜ್, ಮೊಹಮ್ಮದ್ ದನೀಶ್, ಸುಜಿತ್, ಗೌತಮ್ ಹಾಗೂ ವರ್ಷಾ ಈಗಾಗಲೇ ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದಾರೆ. ತುಷಾರ್, ಸುದರ್ಶನ್ ಮತ್ತು ಆಕಾಶ್ ರಾಜ್ಯಮಟ್ಟದಲ್ಲಿ ಮಿಂಚಿದ್ದಾರೆ.
ಅಥ್ಲೆಟಿಕ್ಸ್‌ನಲ್ಲಿ ಕೀರ್ತನಾ, ನಿಖಿಲ್ ಮತ್ತು ರಕ್ಷಿತಾ ರಾಷ್ಟ್ರಮಟ್ಟದಲ್ಲಿ ಮತ್ತು ಅಲ್ವಿನ್ ರಾಜ್ಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ.
ಟೇಬಲ್ ಟೆನಿಸ್‌ನಲ್ಲಿ ನಿತೇಶ್, ಕ್ರಿಸ್ಟನ್ ಮತ್ತು ವೆಲೋನಿಯಾ ರಾಷ್ಟ್ರಮಟ್ಟದಲ್ಲಿ ಮಿಂಚಿದ್ದಾರೆ.
ಬೆಳ್ಳಿಪ್ಪಾಡಿ ಆಳ್ವಾಸ್ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆದ ಮಿತುನ್ ಸತೀಶ್ ಮತ್ತು ಸುಶಾಂತ್ ಮೆಂಡನ್ ಇಲ್ಲಿ ಕ್ರಿಕೆಟ್ ತರಬೇತಿ ನೀಡುತ್ತಿದ್ದಾರೆ. ಅಥ್ಲೆಟಿಕ್ಸ್‌ನಲ್ಲಿ ಅನುಭವಿ ಕೋಚ್ ಕಿಶೋರ್, ಕಬಡ್ಡಿಯಲ್ಲಿ ಸುಮನ್, ವಾಲಿಬಾಲ್‌ನಲ್ಲಿ ಮನೋಜ್ ಕುಮಾರ್ ಮತ್ತು ಟೇಬಲ್ ಟೆನಿಸ್‌ನಲ್ಲಿ ಅಶ್ವಿನ್ ಕುಮಾರ್ ಪಡುಕೋಣೆ ತರಬೇತಿ ನೀಡುತ್ತಿದ್ದಾರೆ.