Friday, February 23, 2024

ಕ್ರೀಡೆಯಲ್ಲಿ ಕರ್ನಾಟಕ ಗೇಮ್‌ ಚೇಂಜರ್‌: ಅನುರಾಗ್‌ ಠಾಕೂರ್‌

ಬೆಂಗಳೂರು sportsmail:  

ಕೀಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌-2021 ಆಯೋಜಿಸುವ ಮೂಲಕ  ಕರ್ನಾಟಕ ಭಾರತದ ಕ್ರೀಡಾ ಇತಿಹಾಸಲ್ಲಿ ‘ಗೇಮ್‌ ಚೇಂಜರ್‌’ ಆಗಿ ಮೂಡಿ ಬರಲಿದೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಪಾಲ್ಗೊಳ್ಳುತ್ತಿರುವುದು ಖುಷಿಯ ವಿಚಾರ ಎಂದು ಕೇಂದ್ರ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡೆ, ಮಾಹಿತಿ ಹಾಗೂ ಪ್ರಸಾರ ಸಚಿವ ಅನುರಾಗ್‌ ಠಾಕೂರ್‌  ಹೇಳಿದರು.

ಅವರು ಶುಕ್ರವಾರ ಬೆಂಗಳೂರಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಎರಡನೇ ಆವೃತ್ತಿಯ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ -2021 ಇದರ ಲೋಗೋ ಬಿಡುಗಡೆ ಕಾರ್ಯಕ್ರಮಲ್ಲಿ ಮಾತನಾಡಿದರು.

ಕಳೆದ ಬಾರಿ ಒಡಿಶಾದಲ್ಲಿ ಮೊದಲ ಬಾರಿ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ ನಡೆದಾಗ ಅಲ್ಲಿ ಜೋಶ್‌ ಇದ್ದಿತ್ತು. ಕರ್ನಾಟಕ ಸರಕಾರ ಮತ್ತು ಜೈನ್‌ ಕಾಲೇಜು ಆತಿಥ್ಯದಲ್ಲಿ ನಡೆಯಲಿರುವ ಕ್ರೀಡಾಕೂಟಲ್ಲಿ ದೇಶದ ಯುವ ಕ್ರೀಡಾಪಟುಗಳಿಗೆ ಅದೇ ರೀತಿಯ ಸ್ವಾಗತ ಸಿಗುತ್ತದೆ ಎಂಬ ನಂಬಿಕೆ ನನಗಿದೆ ಎಂದರು.

ಭಾಗವಹಿಸುವವರ ಸಂಖ್ಯೆಯಲ್ಲಿ ಏರಿಕೆ:

ಪ್ರಧಾನಿ ನರೇಂದ್ರ ಮೋದಿ ಅವರು ಫಿಟ್‌ ಇಂಡಿಯಾ, ಖೇಲೋ ಇಂಡಿಯಾ ಸೇರಿದಂತೆ ಹಲವಾರು ಕ್ರೀಡಾ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದ ಪರಿಣಾಮ ಇಂದು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಗುಜರಾತಿನಲ್ಲಿ ಮೋದಿಯವರು ಜಾರಿಗೆ ತಂದ ಖೇಲ್‌ ಮಹಾಕುಂಭ ಇಂದು ದೇಶಕ್ಕೆ ಮಾದರಿಯಾಗಿದೆ. ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ ಮೊದಲ ಅವೃತ್ತಿಯಲ್ಲಿ 3,500 ಕ್ರೀಡಾಪಟುಗಳು ಪಾಲ್ಗೊಂಡಿದ್ದರು, ಬೆಂಗಳೂರಿನಲ್ಲಿ 4,500 ಕ್ರೀಡಾಪಟುಗಳು ಪಾಲ್ಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ. ನಮ್ಮಲ್ಲಿ ವಿಶ್ವವಿದ್ಯಾನಿಲಯಗಳು ಕ್ರೀಡೆಗೆ ಹೆಚ್ಚು ಒತ್ತು ನೀಡುತ್ತಿಲ್ಲ, ಈ ಕಾರಣಕ್ಕಾಗಿ ಒಲಿಂಪಿಕ್ಸ್‌ನಲ್ಲಿ ಪದಕ ಗಳಿಕೆಯಲ್ಲಿ ನಾವು ಹಿಂದೆ ಇದ್ದೇವೆ. ಅದೇ ಅಮೆರಿಕದಲ್ಲಿ ವಿಶ್ವವಿದ್ಯಾನಿಲಯಗಳಲ್ಲಿ ಕ್ರೀಡೆಗೆ ಹೆಚ್ಚಿನ ಮಹತ್ನ ನೀಡುತ್ತಾರೆ. ಈ ಕಾರಣ ಅದು ಒಲಂಪಿಕ್ಸ್‌ 128  ಪದಕಗಳನ್ನು ಗೆದ್ದಿರುವುದು ಗಮನಾರ್ಹ ಎಂದು ಸಚಿವರು ವಿಶ್ವವಿದ್ಯಾನಿಲಯಗಳಲ್ಲಿ ಕ್ರೀಡೆಯ ಮಹತ್ವವನ್ನು ವಿವರಿಸಿದರು.

ಜೈನ್‌ ವಿಶ್ವವಿದ್ಯಾನಿಲಯಕ್ಕೆ ಅಭಿನಂದನೆ:

ಕರ್ನಾಟಕ ರಾಜ್ಯ ಸರಕಾರದ ಜೊತೆಯಲ್ಲಿ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ ಆತಿಥ್ಯವಹಿಸಿರುವ ಜೈನ್‌ ವಿಶ್ವವಿದ್ಯಾನಿಲಯದ ಬಗ್ಗೆ ಮಾತನಾಡಿದ ಅನುರಾಗ್‌ ಠಾಕೂರ್‌,

“ಶಿಕ್ಷಣದ ಜೊತೆಯಲ್ಲೇ ಕ್ರೀಡೆಗೆ ಹೆಚ್ಚಿನ ಮಹತ್ವವನ್ನು ನೀಡುತ್ತಿರುವ ಜೈನ್‌ ವಿಶ್ವವಿದ್ಯಾನಿಲಯ ಇಂದು ದೇಶದಲ್ಲೇ ಕ್ರೀಡಾ ಬೆಳವಣಿಯಲ್ಲಿ ಅಗ್ರ ಸ್ಥಾನದಲ್ಲಿದ್ದು, ಇಂಥ ಕ್ರೀಡಾಕೂಟಗಳನ್ನು ಆಯೋಜಿಸಲು ಮುಂದೆ ಬಂದಿದೆ. ವಿವಿಧ ಕ್ರೀಡೆಗಳಲ್ಲಿ ಪ್ರತಿಭಾವಂತ ಆಟಗಾರರನ್ನು ದೇಶಕ್ಕೆ ನೀಡಿದ ಕೀರ್ತಿ ಜೈನ್‌ ವಿಶ್ವವಿದ್ಯಾನಿಲಯಕ್ಕೆ ಸಲ್ಲುತ್ತದೆ ಎಂದು ಹೇಳಿದರು.

ಗ್ರೀನ್‌ ಗೇಮ್ಸ್‌: ಓದಿನ ಜೊತೆಯಲ್ಲಿ ಪರಿಸರವನ್ನು ಕಾಪಾಡಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ, ಅದರಲ್ಲಿ ಯುವಕರ ಪಾತ್ರ ಪ್ರಮುಖವಾಗಿರುತ್ತದೆ. ಈ ಕ್ರೀಡಾಕೂಟವನ್ನು  ಗ್ರೀನ್‌ ಗೇಮ್ಸ್‌ ಎಂದು ಘೋಷಿಸಿ, ಅದಕ್ಕೇ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಕರ್ನಾಟಕ ಸರಕಾರ ಮತ್ತು ಜೈನ್‌ ವಿಶ್ವವಿದ್ಯಾನಿಲಯಗಳ ಕಾರ್ಯ ಎಂದು ಸಚಿವರು ಮುಕ್ತಕಂಠದಿಂದ ಶ್ಲಾಘಿಸಿದರು.

“ಪ್ರತಿಭಾವಂತ  ಕ್ರೀಡಾಪಟುಗಳಿಗೆ ತರಬೇತಿ ನೀಡಲು ಅವರ ಎಲ್ಲ ವೆಚ್ಚವನ್ನು ಭರಿಸಲು ಕೇಂದ್ರ ಸರಕಾರ ನೂರಾರು ಕೋಟಿ ರೂ,ಗಳನ್ನು ವ್ಯಯ ಮಾಡುತ್ತಿದೆ. ಯೋಗಕ್ಕೆ ಅಂತಾರಾಷ್ಟ್ರೀಯ ಮನ್ನಣೆ ನೀಡಿ, ಅದಕ್ಕೂ ಫೆಡರೇಷನ್‌ ಸ್ಥಾಪಿಸಿ ಹಣ ಬಿಡುಗಡೆ ಮಾಡಲಾಗಿದೆ. ಮಲ್ಲಕಂಬ ಕ್ರೀಡೆಗೂ ಫೆಡರೇಷನ್‌ ಸ್ಥಾಪಿಸಲಾಗಿದೆ. ಯುವಕರು ಇಂಥ ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಯೂನಿವರ್ಸಿಟಿ ಗೇಮ್ಸ್‌ನಲ್ಲಿ ಪಾಲ್ಗೊಂಡು ಅಲ್ಲಿಂದ ಏಷ್ಯನ್‌ ಮತ್ತು ಕಾಮನ್‌ವೆಲ್ತ್‌ ಕ್ರೀಡಾಕೂಟಗಳಲ್ಲಿ ಪದಕ ಗೆಲ್ಲುವಂತಾಗಬೇಕು,” ಎಂದು ಹೇಳಿದರು.

ಕಲಾವಿದ ರಾಘವೇಂದ್ರ ಹೆಗಡೆ ಅವರ ಸ್ಯಾಂಡ್‌ ಆರ್ಟ್‌ ಪ್ರದರ್ಶನದ ಮೂಲಕ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನ ಜೆರ್ಸಿಯನ್ನು ಅನಾವರಣ ಮಾಡಲಾಯಿತು.

ಯಲಹಂಕದಲ್ಲಿ ಕ್ರೀಡಾ ಯೂನಿವರ್ಸಿಟಿ:

ಕರ್ನಾಟಕದಲ್ಲಿ ಕ್ರೀಡೆಗೆ ಮತ್ತಷ್ಟು ಉತ್ತೇಜನ ನೀಡುವ ಉದ್ದೇಶದಿಂದ ರಾಜ್ಯ ಸರಕಾರವು ಬೆಂಗಳೂರಿನ ಯಲಹಂಕದಲ್ಲಿ ಕ್ರೀಡಾ ಯೂನಿವರ್ಸಿಟಿಯನ್ನು ಸ್ಥಾಪಿಸಲು ಈಗಾಗಲೇ 100 ಎಕರೆ ಭೂಮಿಯನ್ನು ಗುರುತಿಸಲಾಗಿದೆ. ಇದು ರಾಜ್ಯದ ಕ್ರೀಡಾಪಟುಗಳಿಗೆ ನೆರವಾಗಲಿದೆ ಎಂದು ರಾಜ್ಯ ರೇಷ್ಮೆ, ಯುವಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ಕೆ.ಸಿ. ನಾರಾಯಣ ಗೌಡ ಅವರು ಹೇಳಿದರು.

ಕರ್ನಾಟಕ ರಾಜ್ಯಪಾಲರಾದ ಥಾವರ್‌ ಚಂದ್‌ ಗೆಹ್ಲೋಟ್‌ ಲೋಗೋ ಮತ್ತು ಮಾಸ್ಕಟ್‌ ಅನಾವರಣಗೊಳಿಸಿದರು. ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌. ಅಶ್ವಥ್‌ ನಾರಾಯಣ್‌ ಮೊಬೈಲ್‌ ಆಪ್‌ಗೆ ಚಾಲನೆ ನೀಡಿದರು. ಕರ್ನಾಟಕ ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಡಾ. ಶಾಲಿನಿ ರಜನೀಶ್‌ ಸ್ವಾಗತಿಸಿದರು.

Related Articles