ಕ್ರೀಡಾ ಸಾಧನೆಗಾಗಿ ಶಿಕ್ಷಕ ವೃತ್ತಿಯನ್ನೇ ತೊರೆದ ಪ್ಯಾರಾ ಅಥ್ಲೀಟ್ ಶಿಲ್ಪಾ
ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಮಿಂಚಿ, ಉತ್ತಮ ಉದ್ಯೋಗವನ್ನು ಪಡೆಯಲು ಕ್ರೀಡೆಯಲ್ಲಿ ಸಾಧನೆ ಮಾಡುತಾರೆ. ಆದರೆ ಮೈಸೂರು ಜಿಲ್ಲೆಯ ಕೆ ಆರ್ ನಗರ ತಾಲೂಕಿನ ಕಂಚುಗಾರಕೊಪ್ಪಲುವಿನ ಶಿಲ್ಪಾ ಕೆ ಎಸ್ ಶಿಕ್ಷಕಿ ವೃತ್ತಿಯನ್ನು ತೊರೆದು, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ಈಗ ಇದೇ ತಿಂಗಳು ಗ್ಲಾಸ್ಗೋದಲ್ಲಿ ನಡೆಯಲಿರುವ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. Shilpa K. S. from Kanchugarakoppalu in Mysore resigned from her teaching job to pursue excellence in sports and has now earned selection to the Commonwealth Para Games Glasgow
ಕಂಚುಗಾರಕೊಪ್ಪಲುವಿನ ರೈತ ದಂಪತಿ ಶೈಲ ಕೆ ಜಿ ಹಾಗೂ ಶಾಂತ ಅವರ ಮಗಳು ಶಿಲ್ಪಾ ಚಿಕ್ಕಂದಿನಲ್ಲಿ ರಸ್ತೆ ಅಪಘಾತದಲ್ಲಿ ಒಂದು ಕಾಲನ್ನು ಕಳೆದುಕೊಂಡು ದಿವ್ಯಾಂಗರಾದರು. ಆದರೆ ಬದುಕಿನಲ್ಲಿ ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ. ಬದುಕಿನಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಹಂಬಲ ಭದ್ರವಾಗಿತ್ತು. ಆದರೆ ಅವಕಾಶ ಸಿಕ್ಕಿರಲಿಲ್ಲ. ಈ ನಡುವೆ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಬಿಎಡ್ ಪದವಿ ಮುಗಿಸಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಆದರೂ ಬದುಕಿನಲ್ಲಿ ಏನೂ ಸಾಧನೆ ಮಾಡಲಿಲ್ಲವೆಂಬ ಕೊರಗು.


2019ರಲ್ಲಿ ಮೈಸೂರಿನಲ್ಲಿ ಸಿಟ್ಟಿಂಗ್ ವಾಲಿಬಾಲ್ ಆಯ್ಕೆ ಟ್ರಯಲ್ಸ್ ನಡೆಯುತ್ತಿತ್ತು. ಈ ಕ್ರೀಡೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳಬೇಕು ಎಂದು ಶಿಲ್ಪಾ ಸಿಟ್ಟಿಂಗ್ ವಾಲಿಬಾಲ್ ಸೇರಿಕೊಂಡರು. ಆದರೆ ಗುಂಪು ಕ್ರೀಡೆಯಾದ ಕಾರಣ ಆಸಕ್ತಿ ಕಡಿಮೆಯಾಯಿತು. ಇದೇ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಪ್ಯಾರಾ ಕ್ರೀಡಾಪಟು ರಾಘವೇಂದ್ರ ಎಸ್ ಜಿ ಅವರ ಪರಿಚಯವಾಯಿತು. ರಾಘವೇಂದ್ರ ಅವರು ಶಿಲ್ಪಾಗೆ ಸಿಟ್ಟಿಂಗ್ ವಾಲಿಬಾಲ್ ಬದಲು ಶಾಟ್ಪಟ್ನಲ್ಲಿ ತೊಡಗಿಸಿಕೊಂಡರೆ ಯಶಸ್ಸು ಸಿಗಬಹುದು ಎಂದು ಸಲಹೆ ನೀಡಿದರು. ಈ ಸಲಹೆ ಶಿಲ್ಪಾ ಅವರ ಬದುಕನ್ನೇ ಬದಲಾಯಿಸಿತು. ಶಾಟ್ಪಟ್ನಲ್ಲಿ ರಾಷ್ಟ್ರ ಮಟ್ಟದಲ್ಲಿ ಯಶಸ್ಸು ಕಂಡ ಶಿಲ್ಪಾ 2023 ಡಿಸೆಂಬರ್ನಲ್ಲಿ ಬ್ಯಾಂಕಾಕ್ನಲ್ಲಿ ನಡೆದ ಮೊದಲ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದು ರಾಷ್ಟ್ರಕ್ಕೆ ಕೀರ್ತಿ ತಂದರು. ನಂತರ 2024ರ ರಾಷ್ಟ್ರೀಯ ಪ್ಯಾರಾ ಕ್ರೀಡಾಕೂಟಲ್ಲಿ ಶಾಟ್ಪಟ್ನಲ್ಲಿ ಚಿನ್ನ ಗೆದ್ದರು. ಇದರಿಂದ ಆತ್ಮವಿಶ್ವಾಸ ಹೆಚ್ಚಿತು. ಕ್ರೀಡೆಯಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವ ಉದ್ದೇಶದಿಂದ ಖಾಸಗಿ ಶಾಲೆಯಲ್ಲಿ ಮಾಡುತ್ತಿದ್ದ ಶಿಕ್ಷಕ ಹುದ್ದೆಯನ್ನು ತೊರೆದು ಹೆಚ್ಚಿನ ಸಮಯವನ್ನು ಕ್ರೀಡಾಭ್ಯಾಸಕ್ಕೆ ಮೀಸಲಿಡಲು ತೀರ್ಮಾನಿಸಿದರು. ಮೈಸೂರು ತೊರೆದು ಬೆಂಗಳೂರಿಗೆ ಆಗಮಿಸಿದರು.


ಮಾಜಿ ಅಂತಾರಾಷ್ಟ್ರೀಯ ಅಥ್ಲೀಟ್ ಎಸ್.ಡಿ. ಇಶಾನ್ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಉತ್ತಮ ತರಬೇತಿ ನೀಡಿದರು. ಪ್ಯಾರಾ ಅಥ್ಲೆಟಿಕ್ಸ್ ಕೋಚ್ ಸತ್ಯನಾರಾಯಣ ಅವರು ಕ್ಲಾಸಿಫಿಕೇಷನ್ನಲ್ಲಿ ನೆರವಾದರು. ಇವರ ನೆರವಿನಿಂದಾಗಿ ದುಬೈಯಲ್ಲಿ ನಡೆದ ಅಂತಾರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನಲ್ಲಿ ಶಿಲ್ಪಾ ಪದಕ ಗೆದ್ದು ಗ್ಲಾಸ್ಗೋ ಕಾಮನ್ವೆಲ್ತ್ ಕ್ರೀಡಾಕೂಟ 2026ಕ್ಕೆ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ 3 ಚಿನ್ನ, 3 ಬೆಳ್ಳಿ ಹಾಗೂ 4 ಕಂಚಿನ ಪದಕ ಗೆದ್ದಿರುವ ಶಿಲ್ಪಾ ರಾಷ್ಟ್ರ ಮಟ್ಟದಲ್ಲಿ 2 ಚಿನ್ನ ಹಾಗೂ 2 ಬೆಳ್ಳಿಯ ಸಾಧನೆ ಮಾಡಿರುತ್ತಾರೆ.
ಸರಕಾರಿ ಉದ್ಯೋಗದ ನಿರೀಕ್ಷೆಯಲ್ಲಿ: ಕಂಚುಗಾರಕೊಪ್ಪಲುವಿನಂಥ ಚಿಕ್ಕ ಗ್ರಾಮದಿಂದ ಬಂದಿರುವ ಕ್ರೀಡೆಯನ್ನೇ ನಂಬಿ ಬಂದಿರುವ ಶಿಲ್ಪಾ ಅವರಿಗೆ ಈಗ ಕ್ರೀಡೆಯ ಮೂಲಕ ಬದುಕನ್ನು ಕಟ್ಟಿಕೊಂಡು, ಹೆತ್ತವರನ್ನು ಸಲಹುವ ಜವಾಬ್ದಾರಿ ಇದೆ. ರಾಜ್ಯ ಸರಕಾರ ಈ ಬಾರಿ ಕಾಮನ್ವೆಲ್ತ್ ಹಾಗೂ ಏಷ್ಯನ್ ಗೇಮ್ಸ್ಗೆ ಆಯ್ಕೆಯಾದವರಿಗೆ 5 ಲಕ್ಷ ರೂ.ಗಳ ಪ್ರೋತ್ಸಾಹ ಧನವನ್ನು ಪ್ರಕಟಿಸಿರುವುದು ಶಿಲ್ಪಾ ಅವರಿಗೆ ನೆರವಾಗಲಿದೆ. “ರಾಜ್ಯ ಸರಕಾರ ಉತ್ತಮ ರೀತಿಯಲ್ಲಿ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿದೆ. ಕ್ರೀಡೆಯಲ್ಲಿ ಯಶಸ್ಸು ಕಾಣುವುದಕ್ಕಾಗಿ ಖಾಸಗಿ ಶಾಲೆಯಲ್ಲಿ ಮಾಡುತ್ತಿದ್ದ ಶಿಕ್ಷಕಿ ಹುದ್ದೆಯನ್ನು ತ್ಯಜಿಸಿ ಬಂದಿರುವೆ. ಹಾಗೆಯೇ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನು ಗೆದ್ದಿರುವೆ, ಕಾಮನ್ವೆಲ್ತ್ನಲ್ಲಿ ಪದಕ ಗೆಲ್ಲುತ್ತೇನೆಂಬ ಭರವಸೆ ಇದೆ. ಈ ಯಶಸ್ಸಿಗೆ ಸರಕಾರದಲ್ಲಿ ಉದ್ಯೋಗ ಸಿಗುತ್ತದೆ ಎಂಬ ನಂಬಿಕೆ ಇದೆ,” ಎಂದರು.

