Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಲೆಕ್ಕಕ್ಕುಂಟು ಆಟಕ್ಕಿಲ್ಲದ ಕುಂದಾಪ್ರದ ನೆಹರು ಸ್ಪೋರ್ಟ್ಸ್‌ ಪೆವಿಲಿಯನ್‌

ಕುಂದಾಪುರ: 1982ರಲ್ಲಿ ಮೊದಲ ಬಾರಿಗೆ ನಾನು ಕುಂದಾಪುರಕ್ಕೆ ಬಂದಾಗ ಬಸ್ಸಿನ ಕಿಟಕಿಯಿಂದ ಈ ನೆಹರು ಸ್ಪೋರ್ಟ್ಸ್‌ ಪೆವಿಲಿಯನ್‌ ನೋಡಿದ್ದೆ. ಈಗಲೂ ನೋಡುತ್ತಿರುವೆ. ಈಗ ಅದಕ್ಕೆ ಕುಂದಾಪುರ ಸ್ಪೋರ್ಟ್ಸ್‌ ಕ್ಲಬ್‌ ಎಂಬ ಹೆಸರೂ ಇದೆ. ಅದು ಪ್ರಾಚ್ಯವಸ್ತು ಸಂಶೋಧನಾಲಯಕ್ಕೆ ಸೇರಿದ ಕಟ್ಟಡದಂತೆ ಗತ ಇತಿಹಾಸವನ್ನು ಹೇಳುತ್ತ ಹಾಗೆಯೇ ಇದೆ. ಇದು ಯಾರಿಗೆ ಸೇರಿದ್ದು, ಏತಕ್ಕೆ ಸೇರಿದ್ದು ಎಂದು ಇತಿಹಾಸ ಕೆದಕಿ ಅಚ್ಚರಿ ಮೂಡಿಸುವುದಕ್ಕಿಂತ ಇದಕ್ಕೆ ಒಂದು ಹೊಸ ರೂಪ ನೀಡಬೇಕಾದ ಅಗತ್ಯವಿದೆ. The historic Nehru Sports Pavilion in Kundapura, which was once the hub of sporting activities, needs to be revived and restored to its former glory.

ಇದಕ್ಕೆ ಸುಮಾರು 60-70ಕ್ಕೂ ಹೆಚ್ಚು ವರ್ಷ ಆಗಿರಬಹುದು ಎನಿಸುತ್ತಿದೆ. ಖ್ಯಾತ ಉದ್ಯಮಿ ಸೊಲೊಮನ್‌ ಸೋನ್ಸ್‌ ಅವರ ಮುತುವರ್ಜಿಯಿಂದ ಸ್ಪೋರ್ಟ್ಸ್‌ ಪೆವಿಲಿಯನ್‌ ನಿರ್ಮಿಸಲಾಗಿದೆ.  2013ರಲ್ಲಿ ಮಂಗಳೂರು ಟುಡೆ ಪ್ರಕಟಿಸಿದ ಲೇಖನಲ್ಲಿ ಕುಂದಾಪುರದ ಖ್ಯಾತ ಉದ್ಯಮಿ ಸೊಲೊಮನ್‌ ಸೋನ್ಸ್‌ ಅವರ ಬಗ್ಗೆ ಅಭಿಪ್ರಾಯ ಮಂಡಿಸುತ್ತ, ಅವರ ಆತ್ಮೀಯರಾದ ರಾಧಾಕೃಷ್ಣ ಅಡಿಗ ಅವರು ನೆಹರು ಸ್ಪೋರ್ಟ್ಸ್‌ ಪೆವಿಲಿಯನ್‌ ಬಗ್ಗೆ ಹೇಳಿದ್ದಾರೆ, “1960ರ ದಶಕದ ಆರಂಭದಲ್ಲಿ ಕುಂದಾಪುರದಲ್ಲಿ ‘ನೆಹರು ಸ್ಪೋರ್ಟ್ಸ್ ಪೆವಿಲಿಯನ್’ ನಿರ್ಮಾಣದ ಕನಸು ಸಾಕಾರಗೊಂಡಿತು. ಈ ಮಹತ್ವಾಕಾಂಕ್ಷೆಯ ಯೋಜನೆಗೆ KSC ಹಾಗೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ತೊಡಗಿದ್ದ, ನಿಯಮಿತವಾಗಿ ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದ ಇಂಜಿನಿಯರ್‌ಗಳ ತಂಡದ ಬೆಂಬಲ ಮಹತ್ವದ ಪಾತ್ರ ವಹಿಸಿತು.

ಆದರೆ, ಪೆವಿಲಿಯನ್ ನಿರ್ಮಾಣಕ್ಕಾಗಿ ಭೂಮಿಯ ಬಳಕೆಗೆ ಅಗತ್ಯವಾದ ಅನುಮತಿ ಆರಂಭದಲ್ಲಿ ದೊರೆಯಲಿಲ್ಲ. ಈ ಸಂದರ್ಭದಲ್ಲಿ ಅಂದಿನ ಶಾಸಕ ಕೆ. ಎಸ್. ಶೆಟ್ಟಿ ಅವರ ಸಲಹೆಯಂತೆ ಪೆವಿಲಿಯನ್‌ಗೆ ‘ಪಂಡಿತ ಜವಾಹರಲಾಲ್ ನೆಹರು’ ಅವರ ಹೆಸರನ್ನು ಇಡಲಾಯಿತು. ಈ ನಿರ್ಧಾರದಿಂದ ಯೋಜನೆಗೆ ಅಗತ್ಯವಾದ ಆಡಳಿತಾತ್ಮಕ ಬೆಂಬಲ ದೊರೆತು, ನಿರ್ಮಾಣ ಕಾರ್ಯ ಮುಂದುವರಿಯಲು ಸಾಧ್ಯವಾಯಿತು.

ಪೆವಿಲಿಯನ್ ನಿರ್ಮಾಣಕ್ಕಾಗಿ ಸಾರ್ವಜನಿಕರಿಂದ ಉದಾರ ದೇಣಿಗೆಗಳು ಹರಿದುಬಂದವು. ಆದರೆ ಈ ಯೋಜನೆಗೆ ನಿಜವಾದ ನಾಯಕತ್ವ ಮತ್ತು ದಿಕ್ಕು ನೀಡಿದ ವ್ಯಕ್ತಿ ಸೊಲೊಮನ್ ಸೋನ್ಸ್. ಕಟ್ಟಡ ಕಾಮಗಾರಿಯ ಮೇಲ್ವಿಚಾರಣೆಯಲ್ಲಿ ಅಪಾರ ಪರಿಣತಿ ಹೊಂದಿದ್ದ ಅವರು ನಿರ್ಮಾಣ ಕಾರ್ಯವನ್ನು ಸ್ವತಃ ಮುನ್ನಡೆಸಿದರು. ಅಗತ್ಯವಾದ ಕಟ್ಟಡ ಸಾಮಗ್ರಿಗಳನ್ನು ಒದಗಿಸುವುದರ ಜೊತೆಗೆ, ಹಣದ ಕೊರತೆ ಎದುರಾದಾಗ ತಮ್ಮ ಸ್ವಂತ ಖರ್ಚಿನಿಂದಲೂ ಗಣನೀಯ ಮೊತ್ತವನ್ನು ನೀಡಿದರು. ಅವರು ನೀಡಿದ ಮೊತ್ತದ ಅಧಿಕೃತ ದಾಖಲೆ ಲಭ್ಯವಿಲ್ಲದಿದ್ದರೂ, ಅದು ಆ ಕಾಲದಲ್ಲಿ ಬಹಳ ದೊಡ್ಡ ಮೊತ್ತವಾಗಿತ್ತು ಎಂದು ಹೇಳಲಾಗುತ್ತದೆ.

ಪೆವಿಲಿಯನ್ ಸ್ಥಾಪನೆಯಾದ ದಿನದಿಂದ 2007ರವರೆಗೆ ಸೊಲೊಮನ್ ಸೋನ್ಸ್ ಅಧ್ಯಕ್ಷರಾಗಿ ನಿರಂತರವಾಗಿ ಸೇವೆ ಸಲ್ಲಿಸಿದರು. ಅವರ ದೂರದೃಷ್ಟಿ, ಸಮರ್ಪಣೆ ಮತ್ತು ತ್ಯಾಗದಿಂದಲೇ ಈ ಕ್ರೀಡಾ ಸಂಕೀರ್ಣ ಬೆಳವಣಿಗೆ ಕಂಡಿತು.

ಕುಂದಾಪುರದಲ್ಲಿ ‘ನೆಹರು ಸ್ಪೋರ್ಟ್ಸ್ ಪೆವಿಲಿಯನ್’ ಇಂದು ಅಸ್ತಿತ್ವದಲ್ಲಿರಲು ಪ್ರಮುಖ ಕಾರಣರಾದ ಇಬ್ಬರು ವ್ಯಕ್ತಿಗಳು ಸೊಲೊಮನ್ ಸೋನ್ಸ್ ಮತ್ತು ಶಾಸಕ ಕೆ. ಸಂಜೀವ ಶೆಟ್ಟಿ ಎಂದು ಗೌರವದಿಂದ ಸ್ಮರಿಸಲಾಗುತ್ತದೆ.

ಕುಂದಾಪುರದಲ್ಲಿ ಗಾಂಧೀ ಮೈದಾನ ಬಿಟ್ಟರೆ ಒಳಾಂಗಣ ಆಟಕ್ಕೆ ಎರಡು ಖಾಸಗಿ ಬ್ಯಾಡ್ಮಿಂಟನ್‌ ಕೋರ್ಟ್‌ ಬಿಟ್ಟರೆ ಮತ್ತೆಲ್ಲೂ ಅವಕಾಶವಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಇಲ್ಲಿ ಯಾವುದಕ್ಕೂ ಜಾಗವೇ ಇಲ್ಲ. ಮೊದಲು ಇಲ್ಲಿ ಹಿರಿಯರು ಆಡುತ್ತಿದ್ದರಂತೆ. ಈಗ ನೆಹರು ಈ ಸ್ಪೋರ್ಟ್ಸ್‌ ಪೆವಿಲಿಯನ್‌ ಅವನತಿಯ ಅಂಚಿನಲ್ಲಿದೆ.

ಯಾವುದಾದರೂ ಕ್ರೀಡಾಕೂಟಕ್ಕೆ ರಾಜಕಾರಣಿಗಳನ್ನು ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಿ ನೋಡಿ, ಅವರು ಆಡುವ ಮಾತು ಕೇಳಿದರೆ ಕುಂದಾಪುರ ತಾಲೂಕಿನಲ್ಲಿ ಎಷ್ಟು ಕ್ರೀಡಾ ಸೌಲಭ್ಯಗಳಿವೆ ಎಂದೆನಿಸುತ್ತದೆ.

ಬರೇ ಯೋಜನೆಗಳನ್ನು ರೂಪಿಸಿ ಅದನ್ನು ಕಡತಕ್ಕೆ ಸೇರಿಸಿದರೆ ಸಾಲದು, ಕಾರ್ಯರೂಪಕ್ಕೆ ತರಬೇಕಾದ ಅಗತ್ಯವಿದೆ. ಕ್ರೀಡಾ ಸೌಲಭ್ಯಗಳು ಜನರಿಗೆ ಉಪಯೋಗಕ್ಕೆ ಸಿಗಬೇಕು, ಆಡುವ ಆಸಕ್ತಿಯನ್ನು ಕಳೆದುಕೊಂಡವರಿಗೆ ಇದರ ಬಗ್ಗೆ ಆಸಕ್ತಿ ಇಲ್ಲದಿರಬಬಹದು, ಆದರೆ ಆಸಕ್ತಿ ಇರುವ ಯಾರಾದರೂ ಈ ಕ್ರೀಡಾ ಸೌಲಭ್ಯಕ್ಕೆ ಹೊಸ ರೂಪವನ್ನು ಕೊಟ್ಟಲ್ಲಿ ಪಕ್ಕದಲ್ಲೇ ಇರುವ ಸರಕಾರಿ ಶಾಲೆಯ ವಿದ್ಯಾರ್ಥಿಗಳು, ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಬಹುದು. ಜನಪ್ರತಿನಿಧಿಗಳು, ಸಂಬಂಧಪಟ್ಟ ಅಧಿಕಾರಿಗಳು, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಈ ಬಗ್ಗೆ ಯೋಚಿಸಬೇಕಾದ ಅಗತ್ಯವಿದೆ.


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.