Friday, October 4, 2024

ಕಾಮನ್‌ವೆಲ್ತ್‌ ಗೇಮ್ಸ್‌: ತಾಂತ್ರಿಕ ಅಧಿಕಾರಿಯಾಗಿ ಶ್ಯಾಮಲಾ ಶೆಟ್ಟಿ

Sportsmail ವರದಿ, ಬೆಂಗಳೂರು: ಭಾರತದ ಶ್ರೇಷ್ಠ ವೇಟ್‌ಲಿಫ್ಟಿಂಗ್‌ ಕೋಚ್‌, ಮಾಜಿ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ ಶ್ಯಾಮಲಾ ಶೆಟ್ಟಿ ಅವರು ಜುಲೈ 28ರಿಂದ ಆಗಸ್ಟ್‌ 8ರವರೆಗೆ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ವೇಟ್‌ಲಿಫ್ಟಿಂಗ್‌ನಲ್ಲಿ ತಾಂತ್ರಿಕ ಅಧಿಕಾರಿಯಾಗಿ ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ಹಲವಾರು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ರೆಫರಿ ಹಾಗೂ ತಾಂತ್ರಿಕ ಅಧಿಕಾರಿಯಾಗಿರುವ ಶ್ಯಾಮಲಾ ಶೆಟ್ಟಿ ಅವರಿಗೆ ಭಾರತೀಯ ವೇಟ್‌ಲಿಫ್ಟಿಂಗ್‌ ಸಂಸ್ಥೆ ಮತ್ತೊಮ್ಮೆ ಗೌರವ ನೀಡಿದೆ.

ಭಾರತೀಯ ವೇಟ್‌ಲಿಫ್ಟಿಂಗ್‌ ಫೆಡರೇಷನ್‌ನ ಜಂಟಿ ಕಾರ್ಯದರ್ಶಿ ಹಾಗೂ ಕರ್ನಾಟಕ ವೇಟ್‌ಲಿಫ್ಟಿಂಗ್‌ ಖಜಾಂಚಿಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ಯಾಮಲಾ ಶೆಟ್ಟಿಯವರು ಜುಲೈ 27ರಂದು ಬರ್ಮಿಂಗ್‌ಹ್ಯಾಮ್‌ಗೆ ಪ್ರಯಾಣಿಸಲಿದ್ದಾರೆ.

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಾಂತಾವರದ ಬೇಲಾಡಿ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿ, ವೇಟ್ ಲೀಫ್ಟಿಂಗ್ ನಲ್ಲಿ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ, 31 ಬಾರಿ ರಾಷ್ಟ್ರೀಯ ದಾಖಲೆ ಬರೆದು, ಬದುಕಿನ 40 ವರ್ಷಗಳನ್ನು ಕ್ರೀಡಾ ಕ್ಷೇತ್ರಕ್ಕಾಗಿಯೇ ಮುಡುಪಾಗಿಟ್ಟು, ಗುರುವಾಗಿ ನೂರಾರು ಪ್ರತಿಭೆಗಳಿಗೆ ಬದುಕು ನೀಡಿದ,  ಏಷ್ಯಾದ ಶ್ರೇಷ್ಠ ವೇಟ್ ಲಿಫ್ಟಿಂಗ್ ಗುರು ಎನಿಸಿದ,  ಉಕ್ಕಿನ ಮಹಿಳೆ ಶ್ಯಾಮಲಾ ಶೆಟ್ಟಿಯವರು ಭಾರತದ ಕ್ರೀಡಾ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ವೇಟ್‌ಲಿಫ್ಟಿಂಗ್‌ ಫೆಡಸರೇಷನ್‌ನಲ್ಲಿ ಉಪಾಧ್ಯಕ್ಷ ಹುದ್ದೆ ಪಡೆದ ಮೊದಲ ಮಹಿಳಾ ವೇಟ್‌ಲಿಫ್ಟರ್‌ ಎನಿಸಿದ್ದಾರೆ.

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಡಿಸ್ಕಸ್ ಎಸೆತದಲ್ಲಿ ಪದಕ ಗೆದ್ದು, ನಂತರ ವೇಟ್ ಲಿಫ್ಟಿಂಗ್ ನಲ್ಲಿ 31 ಬಾರಿ ನೂತನ ದಾಖಲೆಗಳನ್ನು ಬರೆದು, ಹಲವು ಬಾರಿ ದೇಶದ ಶ್ರೇಷ್ಠ ಭಾರ ಎತ್ತುವ ಮಹಿಳೆ ಎಂದೆನಿಸಿ, ಆರು ಬಾರಿ ರಾಷ್ಟ್ರೀಯ ಚಾಂಪಿಯನ್ ಪಟ್ಟ ಗೆದ್ದು, ನ್ಯಾಷನಲ್ ಗೇಮ್ಸ್ ನಲ್ಲಿ ಎರಡು ಬಾರಿ ಚಾಂಪಿಯನ್ ಪಟ್ಟ ಗೆದ್ದು, ವಿಶ್ವ ಚಾಂಪಿಯನ್ಷಿನ್ ನಲ್ಲಿ ಬೆಳ್ಳಿ ಪದ, ಏಷ್ಯನ್ ಚಾಂಪಿಯನ್ಷಿಪ್ ನಲ್ಲಿ ಬೆಳ್ಳಿ ಪದಕ, 25 ವರ್ಷಗಳ ಕಾಲ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಕೋಚ್, ಹಲವಾರು ಅಂತಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ರೆಫರಿ ಹಾಗೂ ವಿವಿಧ ತಾಂತ್ರಿಕ ಸಮಿತಿಗಳಲ್ಲಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಶ್ಯಾಮಲಾ ಶೆಟ್ಟಿಯವರದ್ದು.

ಏಷ್ಯನ್ ವೇಟ್ ಲಿಫ್ಟಿಂಗ್ ಫೆಡರೇಷನ್ ನೀಡುವ ಏಷ್ಯಾದ ಬೆಸ್ಟ್ ವೇಟ್ ಲಿಫ್ಟಿಂಗ್ ಕೋಚ್ ಎಂಬ ಗೌರವಕ್ಕೆ ಪಾತ್ರರಾಗಿರುವ ಶ್ಯಾಮಲಾ ಶೆಟ್ಟಿ ಅವರು ತರಬೇತಿ ನೀಡಿದ ನೂರಾರು ವೇಟ್ ಲಿಫ್ಟರ್‌ಗಳು ವಿವಿಧ ವಿಭಾಗಗಳಲ್ಲಿ ನೂರಾರು ಪದಕಗಳನ್ನು ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. ಕಳೆದ ವರ್ಷ ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್ ವೇಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಮೀರಾ ಬಾಯಿ ಚಾನು ಅವರಿಗೂ ತರಬೇತಿ ನೀಡಿ, ಅಂತಾರಾಷ್ಟ್ರೀಯ ಸ್ಪರ್ಧೆಗಳಿಗೆ ಅವರನ್ನು ಸಜ್ಜುಗೊಳಿಸಿದ ಕೀರ್ತಿ ಶ್ಯಾಮಲಾ ಶೆಟ್ಟಿ ಅವರಿಗೆ ಸಲ್ಲುತ್ತದೆ. ಮೂರು ದಶಕಗಳ ಕಾಲ ವೇಟ್ ಲಿಫ್ಟಿಂಗ್ ನಲ್ಲಿ ಅಪಾರ ಸಾಧನೆಯನ್ನು ಮಾಡಿರುವುದನ್ನು ಗಮನಿಸಿರುವ ಕರ್ನಾಟಕ ಸರಕಾರ ಕ್ರೀಡಾ ಇಲಾಖೆ, 2011ರಲ್ಲಿ ಜೀವನಶ್ರೇಷ್ಠ ಸಾಧನೆ ನೀಡಿ ಗೌರವಿಸಿದೆ.

ಬಂಟರ ಸಂಘಕ್ಕೆ ಸ್ಪರ್ಧೆ: ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಶ್ಯಾಮಲಾ ಶೆಟ್ಟಿಯವರು ಹಲವು ಬಡ ಕ್ರೀಡಾಪಟುಗಳ ಕಷ್ಟಕ್ಕೆ ಸ್ಪಂದಿಸಿರುತ್ತಾರೆ. ಜುಲೈ 31ರಂದು ನಡೆಯುವ ಪ್ರತಿಷ್ಠಿತ ಬಂಟರ ಸಂಘದ ಚುನಾವಣೆಯಲ್ಲಿ ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ. ಎಂ. ಮುರಳೀಧರ ಹೆಗ್ಡೆ ಅವರ ತಂಡದಲ್ಲಿರುವ ಶ್ಯಾಮಲಾ ಶೆಟ್ಟಿ ಬೆಂಗಳೂರು ಬಂಟರ ಸಂಘದ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾದರೆ ಸಂಘದ ಘನತೆ ಇನ್ನಷ್ಟು ಹೆಚ್ಚುವುದು ಸ್ಪಷ್ಟ.

Related Articles