Saturday, February 24, 2024

ಚೆಸ್‌ ಜಗತ್ತಿನ ಮಾದರಿ ಮಂಡ್ಯದ ಮಾಧುರಿ

ಸೋಮಶೇಖರ್‌ ಪಡುಕರೆ, ಬೆಂಗಳೂರು

“ಹೆಣ್ಣೊಬ್ಬಳಿಗೆ ಶಿಕ್ಷಣ ನೀಡಿದರೆ ಇಡೀ ಕುಟುಂಬ, ಸಮಾಜ ಮತ್ತು ದೇಶಕ್ಕೇ ನೀಡಿದಂತೆ,” ಈ ಮಾತನ್ನು ಮಹಿಳಾ ಶಿಕ್ಷಣದ ಪ್ರಾಮುಖ್ಯತೆ ಬಗ್ಗೆ ಹೇಳುವಾಗ ಬಳಸುವುದು ಸಹಜ. ಶಿಕ್ಷಣವೆಂದರೆ ಕೇವಲ ಪಠ್ಯಕ್ಕೆ ಸಂಬಂಧಿಸಿರುವುದು ಮಾತ್ರವಲ್ಲ. ಪಠ್ಯೇತರ  ಮೂಲಕವೂ ಬದುಕನ್ನು ರೂಪಿಸಿಕೊಳ್ಳಬಹುದು ಎಂಬುದನ್ನು ತೋರಿಸಿದ್ದಾರೆ ಮಂಡ್ಯ ಜಿಲ್ಲೆಯ ಕಲ್ಲಹಳ್ಳಿ ಗ್ರಾಮದ ಚೆಸ್‌ ಕ್ವೀನ್‌ ಮಾಧುರಿ ಚೌಧರಿ.

ಕರ್ನಾಟದಕಲ್ಲಿ ಮಂಡ್ಯ ಜಿಲ್ಲೆಯನ್ನು ಕಬಡ್ಡಿಯ ಆಟಗಾರರ ತಾಣ ಎಂದು ಕರೆಯುತ್ತಾರೆ, ಆದರೆ 58 ಅಂತಾರಾಷ್ಟ್ರೀಯ ಚೆಸ್‌ ಆಟಗಾರರನ್ನು ಸಿದ್ಧಗೊಳಿಸಿದ ಮಾಧುರಿ ಈಗ ಮಂಡ್ಯವನ್ನು ಚೆಸ್‌ ಜಿಲ್ಲೆಯನ್ನಾಗಿ ಮಾಡಿದ್ದಾರೆ. ಕ್ರೀಡೆ, ಸಿನೆಮಾ, ರಾಜಕೀಯ ಯಾವುದೇ ಇರಲಿ ಅಲ್ಲಿ “ಮಂಡ್ಯದ ಗಂಡು” ಧ್ವನಿ ಮೊಳಗುವುದಿದೆ, ಆದರೆ ಚೆಸ್‌ನಲ್ಲಿ ಮಾತ್ರ ಈ “ಮಂಡ್ಯದ ಹೆಣ್ಣಿ”ಗೆ ಸಾಟಿಯೇ ಇಲ್ಲ.

ಇವರ ಯಶಸ್ಸಿನ ಹಿಂದೆ ಪತಿ ಮಂಜುನಾಥ್‌ ಜೈನ್‌ ಮತ್ತು ತಾಯಿ ಪುಣ್ಯವತಿಯ ಪಾತ್ರ ಪ್ರಮುಖವಾದುದು. ಚೆಸ್‌ ಮೂಲಕ ತಾಯಿಗೆ ಇಡೀ ಭಾರತ ಪರ್ಯಟನ ಮಾಡಿಸಿದ ಖುಷಿ ಮಾಧುರಿ ಅವರದ್ದು. ಮಂಜುನಾಥ್‌ ಮತ್ತು ಮಾಧುರಿ ಇದುವರೆಗೂ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ 300ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದಾರೆ, ವಿಶೇಷ ಚೇತನರಿಗೆ ಚೆಸ್‌ ತರಬೇತಿ ನೀಡಿ ಸಾಮಾಜಿಕ ಕಾಳಜಿಯನ್ನು ಮೆರೆದಿದ್ದಾರೆ. 17ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಆನ್‌ಲೈನ್‌ ಮೂಲಕ ತರಬೇತಿ ನೀಡುತ್ತಿದ್ದಾರೆ.

ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಅವರ ಮಗ ಉದಯ್‌ ವೀರ್‌ ಸಿಂಗ್‌ ಮಾಧುರಿ ಅವರಲ್ಲಿ ಚೆಸ್‌ ತರಬೇತಿ ಪಡೆಯುತ್ತಿದ್ದಾನೆ. ಚೀನಾದಿಂದ ತಿಂಗಳಿಗೆ 4 ಲಕ್ಷ ರೂ. ವೇತನದ ತರಬೇತಿಯ ಕೆಲಸ ಬಂದರೂ ಅದನ್ನು ತಿರಸ್ಕರಿಸಿ ಭಾರತದಲ್ಲೇ ಭಾರತೀಯರಿಗೆ ತರಬೇತಿ ನೀಡುತ್ತಿರುವುದು ಮಾಧುರಿಯವರ ವಿಶೇಷ. ಮಂಡ್ಯದ ಕಲ್ಲಹಳ್ಳಿಯಲ್ಲಿ ಮಂಡ್ಯ ಚೆಸ್‌ ಅಕಾಡೆಮಿಯನ್ನು ಸ್ಥಾಪಿಸಿ ಕಳೆದ 11 ವರ್ಷಗಳಿಂದ ತರಬೇತಿ ನೀಡುತ್ತಿದ್ದಾರೆ. ಇವರಲ್ಲಿ ತರಬೇತಿ ಪಡೆದ ಅನೇಕ ವಿದ್ಯಾರ್ಥಿಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯ ಮತ್ತು ದೇಶಕ್ಕೆ ಕೀರ್ತಿ ತಂದಿದ್ದಾರೆ. ಶಾಲಾ ಕಾಲೇಜುಗಳಲ್ಲಿ ಚೆಸ್‌ ಬಗ್ಗೆ ಅರಿವು ಮೂಡಿಸುತ್ತ, ಮಕ್ಕಳನ್ನು ಕ್ರೀಡೆಯಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸುತ್ತ, ಮನೆಯನ್ನೇ ಚೆಸ್‌ ಮನೆಯನ್ನಾಗಿ ಪರಿವರ್ತಿಸಿದ ಈ ಹಳ್ಳಿಯ ಯುವತಿ ತಮಿಳುನಾಡಿನ ಮಹಾಬಲಿಪುರಂನಲ್ಲಿ ಜುಲೈ 27ರಿಂದ ಆಗಸ್ಟ್‌ 10ರವರೆಗೆ ನಡೆಯಲಿರುವ 44ನೇ ಐತಿಹಾಸಿಕ ಚೆಸ್‌ ಒಲಂಪಿಯಾಡ್‌ನಲ್ಲಿ “ಟೀಮ್‌ ಲೀಡರ್‌” ಆಗಿ ಕಾರ್ಯನಿರ್ವಹಿಸಲಿದ್ದಾರೆ.

ಪ್ರತಿಭೆಯನ್ನೇ ಬದುಕನ್ನಾಗಿಸಿಕೊಂಡು, ಪ್ರಚಾರಕ್ಕಾಗಿ ಹಾತೊರೆಯದೆ, ಪ್ರಪಂಚದ ಗಮನಸೆಳೆಯುತ್ತಿರುವ ಚೆಸ್‌ ಪ್ರತಿಭೆ ಮಾಧುರಿ sportsmail ಜತೆ ತಮ್ಮ ಯಶೋಗಾತೆಯನ್ನು ಹೇಳಿಕೊಂಡಿದ್ದಾರೆ.

ಹತ್ತನೇ ತರಗತಿಯಲ್ಲಿ ಒಂದು ವಿಷಯದಲ್ಲಿ ಅನುತ್ತೀರ್ಣರಾದದ್ದು ಮಾಧುರಿಯ ಬದುಕನ್ನೇ ಬದಲಾಯಿಸಿತು, “ನಾನು ಓದಿನಲ್ಲಿ ಬಹಳ ಹಿಂದೆ, ಆದರೆ ಕ್ರಿಡೆಯಲ್ಲಿ ಅಪಾರ ಆಸಕ್ತಿ. ಒಂದು ವಿಷಯದಲ್ಲಿ ಅನುತ್ತೀರ್ಣಳಾದಾಗ ಕಲಿಸಿದ ಗುರುಗಳು ಸೇರಿದಂತೆ ಅನೇಕರು ಬದುಕೇ ಮುಗಿಯಿತೆಂಬಂತೆ ಮಾತನಾಡಿದ್ದರು, ಆದರೆ ಕ್ರೀಡೆಯಲ್ಲಿ ಬದುಕನ್ನು ರೂಪಿಸಿಕೊಳ್ಳಬೇಕೆಂದಿದ್ದ ನನಗೆ ಚೆಸ್‌ ಹೊಸ ಹಾದಿ ನೀಡಿತು. ಬಹಳ ತಡವಾಗಿ ವೃತ್ತಿಪರ ಚೆಸ್‌ಗೆ ಬಂದೆ. ನಮ್ಮ ತಾಯಿ ಪುಣ್ಯವತಿ, ಪತಿ ಮಂಜುನಾಥ್‌, ಅಕಾಡೆಮಿ ಸ್ಥಾಪಿಸುವಲ್ಲಿ ಬೆಂಬಲ ನೀಡಿದ ಮಧುಕರ್‌, ಗೋಪಿ ಸರ್‌, ಗುರು ಸರ್‌ ಎಲ್ಲರನ್ನೂ ನಾನು ಸದಾ ಸ್ಮರಿಸುತ್ತೇನೆ,” ಎಂದು ಮಾಧುರಿ ಹೇಳಿದರು.

ವೃತ್ತಿಪರತೆ ಮತ್ತು ವೃತ್ತಿ: ಕ್ರೀಡೆಯಲ್ಲಿ ವೃತ್ತಿಪರತೆ ಅಗತ್ಯ. ಹಾಗಿದ್ದಲ್ಲಿ ಮಾತ್ರ ಅದನ್ನು ನಮ್ಮ ಬದುಕಿಗೆ ನೆರವಾಗಿಸಿಕೊಳ್ಳಬಹುದು ಎನ್ನುತ್ತಾರೆ ಮಾಧರಿ, “ಪ್ರತಿಯೊಂದು ಕ್ರೀಡೆಯಲ್ಲಿಯೂ ವೃತ್ತಿಪರತೆಯನ್ನು ಕಂಡುಕೊಳ್ಳಬೇಕು, ಕ್ರೀಡೆಮೂಲಕ ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕು. ಒಂದು ಕ್ರೀಡಾಕೂಟ ನಡೆಸುವುದರಿಂದ ಅಲ್ಲಿ ಉದ್ಯೋಗಾವಕಾಶಗಳು ಹುಟ್ಟಿಕೊಳ್ಳುತ್ತವೆ, ಆ ಕ್ರೀಡೆಗೂ ಹೆಚ್ಚು ಪ್ರಚಾರ ಸಿಗುತ್ತದೆ,. ಉದಾಹರಣೆಗೆ ಚೆನ್ನೈನಲ್ಲಿ ನಡೆಯಲಿರುವ ಚೆಸ್‌ ಒಲಂಪಿಯಾಡ್‌ನಲ್ಲಿ 192 ರಾಷ್ಟ್ರಗಳು ಪಾಲ್ಗೊಳ್ಳುತ್ತಿವೆ. ಸರಕಾರ 220ಕೋಟಿ ರೂ. ವ್ಯಯಮಾಡುತ್ತಿದೆ. ಇದರಿಂದ ಪ್ರವಾಸೋದ್ಯಮ, ಸಾರಿಗೆ, ಹೊಟೇಲ್‌ ಮೊದಲಾದ ಕ್ಷೇತ್ರಗಳಿಗೆ ಆದಾಯವಾಗುತ್ತದೆ. ಆ ಕ್ರೀಡೆಯನ್ನು ಆಯ್ಕೆ ಮಾಡಿಕೊಂಡವರಿಗೂ ನೆಮ್ಮದಿ ಇರುತ್ತದೆ,” ಎಂದು ಮಾಧುರಿ ಕ್ರೀಡೆಯಿಂದಾಗು ಇತರ ಅಭಿವೃದ್ಧಿಯ ಬಗ್ಗೆ ತಿಳಿಸಿದರು.

ಕೋವಿಡ್‌ ಕಾಲದಲ್ಲಿ ಚಿಗುರಿದ ಆನ್‌ಲೈನ್‌ ಚೆಸ್‌: ಜಗತ್ತನ್ನು ಕೊರೋನಾ ಆವರಿಸಿದಾಗ ಅಪಾರ ಸಂಖ್ಯೆಯಲ್ಲಿ ಜನ ಉದ್ಯೋಗ ಕಳೆದುಕೊಂಡರು. ಅನೇಕರು ಮಾಧುರಿಗೆ ಚೆಸ್‌ ಬಿಟ್ಟು ಬೇರೇನಾದರೂ ಉದ್ಯೋಗ ಕಂಡುಕೊಳ್ಳುವಂತೆ ಸಲಹೆ ನೀಡಿದರು. ಆದರೆ ಚೆಸ್ಸನ್ನೇ ಬದುಕಾಗಿಸಿಕೊಂಡಿರುವ ಮಾಧುರಿಗೆ ವೃತ್ತಿಯನ್ನು ಬದಲಾಯಿಸುವ ಆಸಕ್ತಿ ಬರಲಿಲ್ಲ. ಚೆಸ್‌ ಹೇಳಿಕೊಟ್ಟಿರುವಂತೆ ಮೌನವಾಗಿ ಪರಿಸ್ಥಿತಿಯನ್ನು ನಿಭಾಯಿಸತೊಡಗಿದರು, (CHESS: Carefully Handle Every Situation Silently) ಕೊನೆಗೂ ಯಶಸ್ಸು ಸಿಕ್ಕಿತು. ಆನ್‌ಲೈನ್‌ನಲ್ಲಿ ಚೆಸ್‌ ತರಬೇತಿ ಆರಂಭಿಸಿದರು, ಈಗ 15 ರಾಷ್ಟ್ರಗಳಿಗೆ ಮಂಡ್ಯದ ಪುಟ್ಟ ಹಳ್ಳಿಯಿಂದ ಖಾಲಿಯಾಗದ ಚೆಸ್‌ ಜ್ಞಾನ ರಫ್ತಾಗುತ್ತಿದೆ. “ದೃಷ್ಠಿ ದಿವ್ಯಾಂಗರಿಗೆ ಉಚಿತ ತರಬೇತಿ ನೀಡಲು, ಶಿಬಿರಗಳನ್ನು ನಡೆಸಲು, ಕೋಚ್‌ಗಳ ವೇತನ ನೀಡಲು ಈ ಆನ್‌ಲೈನ್‌ ತರಗತಿಯ ಆದಾಯ ಸಹಾಯವಾಗುತ್ತಿದೆ,” ಎನ್ನುತ್ತಾರೆ ಮಾಧುರಿ.

ನಿದ್ದೆಗೆ ಸಮಯವಿಲ್ಲ: ಮಾಧುರಿಗೆ ಈಗ ನಿದ್ದೆಗೂ ಸಮಯವಿಲ್ಲವಂತೆ ಏಕೆಂದರೆ ಬೇರೆ ಬೇರೆ ದೇಶಗಳ ಕಾಲಮಾನಕ್ಕೆ ತಕ್ಕಂತೆ ಕೆಲಸ ಮಾಡಬೇಕಾಗುತ್ತದೆ. ಅಮೇರಿಕ ಮತ್ತು ಇಂಗ್ಲೆಂಡ್‌ನಲ್ಲಿ ಚೆಸ್‌ಗೆ ಹೆಚ್ಚಿನ ಬೇಡಿಕೆ ಇದೆ ಎನ್ನುತ್ತಾರೆ ಮಾಧುರಿ, “ಚೆಸ್‌ ಭಾರತದ ಕ್ರೀಡೆ. ಈ ಆಟವನ್ನು ಆಡುವುದರಿಂದ ಯೋಚನಾ ಶಕ್ತಿ ಹೆಚ್ಚುತ್ತದೆ. ಹೆಚ್ಚಿನ ಹಣ ಹೂಡಿಕೆ ಇಲ್ಲ. ಸಮಸ್ಯೆಗಳನ್ನು  ಪರಿಹರಿಸಲು, ತಾಳ್ಮೆ ಬೆಳೆಸಿಕೊಳ್ಳಲು ಚೆಸ್‌ ಕ್ರೀಡೆ ನೆರವಾಗುತ್ತದೆ. ಇದಕ್ಕಾಗಿ ಅಮೆರಿಕ ಮತ್ತು ಇಂಗ್ಲೆಂಡ್‌ನವರು ಹೆಚ್ಚಿನ ಸಂಖ್ಯೆಯಲ್ಲಿ ಆನ್‌ಲೈನ್‌ನಲ್ಲಿ ಕಲಿಯುತ್ತಿದ್ದಾರೆ. ನಿದ್ದೆಗೆ ಸಮಬ ಕಡಿಮೆ. ಆದರೆ ನಮ್ಮ ದೇಶದ ಕ್ರೀಡೆಯನ್ನು ಬೇರೆ ದೇಶದ ಪ್ರಜೆಗಳಿಗೆ, ಬೇರೆ ದೇಶದಲ್ಲಿರುವ ನಮ್ಮವರಿಗೂ ಕಲಿಸುವ ಭಾಗ್ಯ ಸಿಕ್ಕಿದ್ದು ನನ್ನ ಅದೃಷ್ಟ,” ಎನ್ನುತ್ತಾರೆ ಮಾಧುರಿ.

ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಅವರು ಮನಸ್ಸು ಮಾಡಿದರೆ ವಿಶ್ವನಾಥನ್‌ ಆನಂದ್‌ ಅವರ ಮೂಲಕ ತಮ್ಮ ಮಗನಿಗೆ ತರಬೇತಿ ನೀಡಬಹುದು. ಆದರೆ ಸಚಿವರು ಹಿಂದೊಮ್ಮೆ ಕುಟುಂಬ ಸಮೇತರಾಗಿ ಮಾಧುರಿ ಅವರ ಮನೆಗೆ ಬಂದು ಚೆಸ್‌ ಸಾಧನೆಯನ್ನು ಗಮನಿಸಿ ಪ್ರಭಾವಿತರಾಗಿ, ತಮ್ಮ ಮಗ ಉದಯ್‌ ವೀರ್‌ ಸಿಂಗ್‌ಗೆ ಮಾಧುರಿಯವರಲ್ಲಿ ತರಬೇತಿ ನೀಡುತ್ತಿದ್ದಾರೆ, “ಕ್ರೀಡಾ ಸಚಿವರು ನನ್ನ ಮೇಲಿಟ್ಟ ನಂಬಿಕೆಗೆ ಆಭಾರಿಯಾಗಿದ್ದೇನೆ,” ಎನ್ನುತ್ತಾರೆ ಮಾಧುರಿ.

ಮಂಜುಳಾ ಹುಲ್ಲಹಳ್ಳಿ ಸ್ಫೂರ್ತಿ: ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿರುವ ಮಂಜುಳಾ ಹುಲ್ಲಹಳ್ಳಿ ಅವರನ್ನು ಮಾಧುರಿ ಅವರು ಈ ಸಂದರ್ಭದಲ್ಲಿ ಸ್ಮರಿಸಿದ್ದಾರೆ. “ಚೆಸ್‌ ಆಟದಲ್ಲಿ ಚಾಂಪಿಯನ್‌ ಆಗುವುದು, ಪ್ರಶಸ್ತಿ ಗೆಲ್ಲುವುದು ಒಂದು ಸಾಧನೆಯಾದರೆ, ನಾವು ಕಲಿತದ್ದನ್ನು ಬೇರೆಯವರಿಗೆ ಕಲಿಸುವುದು ಕೂಡ ಒಂದು ದೊಡ್ಡ ಸಾಧನೆ. ಆದ್ದರಿಂದ ಇಬ್ಬರೂ ಅಕಾಡೆಮಿ ಸ್ಥಾಪಿಸಿ ಬಡ ಮಕ್ಕಳಿಗೆ ತರಬೇತಿ ನೀಡಿ. ಇತರರೂ ಚೆಸ್‌ ಕಲಿಯುವಂತಾಗಲಿ. ಆ ಮೂಲಕ ಚೆಸ್‌ ಜನಪ್ರಿಯಗೊಳ್ಳಲಿ,” ಎಂದು ಮಂಜುಳಾ ಹುಲ್ಲಹಳ್ಳಿ ಅವರು ಸಲಹೆ ನೀಡಿದ್ದನ್ನು ಮಾಧರಿ ಮರೆತಿಲ್ಲ.

ಚೆಸ್‌ ಕುಟುಂಬ!

ತುಮಕೂರಿನಲ್ಲಿ ಯಶಸ್ವಿಯಾಗಿ ರಾಷ್ಟ್ರೀ ಚೆಸ್‌ ಆಯೋಜಿಸಿದ ಕೀರ್ತಿ ಮಂಡ್ಯ ಚೆಸ್‌ ಅಕಾಡೆಮಿಗೆ ಸಲ್ಲುತ್ತದೆ. ಮಾಧುರಿ ಅವರ ಪತಿ ಮಂಜುನಾಥ್‌ ಜೈನ್‌ ಉತ್ತಮ ಚೆಸ್‌ ಆಟಗಾರ. ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಚೆಸ್‌ ಪ್ರವೀಣ. ತಂದೆ ಹಾಗೂ ತಾಯಿಯ ಚೆಸ್‌ ನೋಡಿ ಮಕ್ಕಳಾದ ವಿಮಲ್‌ ಜೈನ ಮತ್ತು ತನಿಷ್ಕಾ ಜೈನ್‌ ಕೂಡ ಚೆಸ್‌ ಕ್ರೀಡೆಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ.

ಮಂಡ್ಯ ಜಿಲ್ಲೆಯ ಕಲ್ಲಹಳ್ಳಿ ಎಂಬ ಪುಟ್ಟ ಗ್ರಾಮದ ಪ್ರತಿಭೆ ಮಾಧುರಿ ಅವರ ಚೆಸ್‌ ಪಾಠವನ್ನು ಇಂಗ್ಲೆಂಡ್‌, ಅಮೆರಿಕ, ಕತಾರ್‌, ಶ್ರೀಲಂಕಾ, ಮಲೇಷ್ಯಾ, ಸಿಂಗಾಪುರ ಸೇರಿದಂತೆ 15 ದೇಶಗಳ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆಂದರೆ ಚೆಸ್ ಕ್ರೀಡೆಯ ಪ್ರಾಮುಖ್ಯತೆ ಎಷ್ಟೆಂಬುದು ಸ್ಪಷ್ಟವಾಗುತ್ತದೆ. ಭಾರತದಲ್ಲಿ ಹುಟ್ಟಿದ ಕ್ರೀಡೆಗೆ ಜಾಗತಿಕ ಮಟ್ಟದಲ್ಲಿ ಸಿಕ್ಕ ಸ್ಥಾನಮಾನಕ್ಕೆ ಹೆಮ್ಮೆ ಪಡುವುದರ ಜೊತೆಯಲ್ಲಿ ಕಲ್ಲಹಳ್ಳಿಯ ಕೀರ್ತಿಯನ್ನು ಬೆಳಗಿದ ಚೆಸ್‌ ಕ್ವೀನ್‌ ಮಾಧುರಿಯ ಬದುಕು ಕೂಡ ಮಾದರಿ.

Related Articles