Thursday, October 10, 2024

ರಾಷ್ಟ್ರೀಯ ಕಬಡ್ಡಿ: ಡಬಲ್‌ ಜಯದೊಂದಿಗೆ ಕರ್ನಾಟಕ ಶುಭಾರಂಭ

ಚಾರ್ಖಿ ದಾದ್ರಿ, ಹರಿಯಾಣ: ಇಲ್ಲಿ ನಡೆಯುತ್ತಿರುವ 69ನೇ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್‌ಷಿಪ್‌ನ ಎಫ್‌ ಗುಂಪಿನ ಪಂದ್ಯದಲ್ಲಿ ಕರ್ನಾಟಕ ತಂಡ ದಿನ ಎರಡೂ ಪಂದ್ಯಗಳಲ್ಲಿ ಅದ್ಭುತ ಜಯ ಗಳಿಸಿ ಶುಭಾರಂಭ ಕಂಡಿದೆ. ದಿನದ ಮೊದಲ ಪಂದ್ಯದಲ್ಲಿ ಬಿಎಸ್‌ಎನ್‌ಎಲ್‌ ವಿರುದ್ಧ ರಾಜ್ಯ ತಂಡ 43-5 ಅಂತರದಲ್ಲಿ ಜಯ ಗಳಿಸಿತು. ಎರಡನೇ ಪಂದ್ಯದಲ್ಲಿ ಪಶ್ಚಿಮ ಬಂಗಾಳ ಉತ್ತಮ ಪೈಪೋಟಿ ನೀಡಿದರೂ ಕರ್ನಾಟಕ 42-37 ಅಂತರದಲ್ಲಿ ಪ್ರಭುತ್ವ ಸಾಧಿಸಿತು.

ಪಶ್ಚಿಮ ಬಂಗಾಳ ವಿರುದ್ಧದ ಪಂದ್ಯದಲ್ಲಿ ಸಚಿನ್‌ ವಿಠ್ಠಲ್‌ ರೈಡಿಂಗ್‌ನಲ್ಲಿ 5 ಮತ್ತು 1 ಬೋನಸ್‌ ಪಾಯಿಂಟ್‌ ಮೂಲಕ 6 ಅಂಕಗಳ ಸಾಧನೆ ಮಾಡಿ ಜಯದ ರೂವಾರಿ ಎನಿಸಿದರು. ನಾಯಕ ಪ್ರಶಾಂತ್‌ ರೈ (7), ಸುಖೇಶ್‌ ಹೆಗ್ಡೆ (9) ಮತ್ತು ರತನ್‌ ಕೆ. (8) ಉತ್ತಮ ಪ್ರದರ್ಶನ ನೀಡಿದರು.

ಕರ್ನಾಟಕ ತಂಡ ರೈಡಿಂಗ್‌ನಲ್ಲಿ 26 ಅಂಕಗಳನ್ನು ಗಳಿಸಿ ಪ್ರಭುತ್ವ ಸಾಧಿಸಿತು. ಟ್ಯಾಕಲ್‌ನಲ್ಲಿ 9 ಅಂಕಗಳನ್ನು ಕರ್ನಾಟಕ ತನ್ನದಾಗಿಸಿಕೊಂಡಿತು. ಎರಡು ಬಾರಿ ಪಶ್ಚಿಮ ಬಂಗಾಳವನ್ನು ಆಲೌಟ್‌ ಮಾಡುವ ಮೂಲಕ ಜಯಕ್ಕೆ ಅಗತ್ಯವಿರುವ ವೇದಿಕೆ ನಿರ್ಮಿಕೊಂಡಿತು. 5 ಹೆಚ್ಚುವರಿ ಅಂಕಗಳನ್ನು ಗಳಿಸಿದ ರಾಜ್ಯ ತಂಡ 43 ಅಂಕಗಳನ್ನು ಗಳಿಸಿ ಜಯ ದಾಖಲಿಸಿತು. ಪಶ್ಚಿಮ ಬಂಗಾಳದ ಪರ ಅಂಕುಶ್‌ 13 ಅಂಕಗಳನ್ನು ಗಳಿಸಿದರೂ ಉಳಿದ ಆಟಗಾರರ ವೈಫಲ್ಯ ತಂಡವನ್ನು ಸೋಲಿನ ಅಂಚಿಗೆ ನೂಕಿತು.

ಬಿಎಸ್‌ಎನ್‌ಎಲ್‌ ವಿರುದ್ಧದ ಪಂದ್ಯದಲ್ಲಿ ಸುಖೇಶ್‌ ಹೆಗ್ಡೆ ಮತ್ತು ರತನ್‌ ಕೆ. ತಲಾ 5 ಅಂಕಗಳ ಸಾಧನೆ ಮಾಡುವುದರೊಂದಿಗೆ ಕರ್ನಾಟಕ ಸುಲಭ ಜಯ ಗಳಿಸಿತು.

ದಿನದ ಇತರ ಪಂದ್ಯಗಳಲ್ಲಿ ಕೇರಳ ತಂಡ ಜಾರ್ಖಂಡ್‌ ವಿರುದ್ಧ 57-38 ಅಂತರದಲ್ಲಿ ಜಯ ಗಳಿಸಿ ಶುಭಾರಂಭ ಕಂಡಿತು. ತಮಿಳುನಾಡು ತಂಡ ಗುಜರಾತ್‌ ವಿರುದ್ಧ 50-27, ಛತ್ತೀಸ್‌ಗಢ ತಂಡ ತೆಲಂಗಾಣ ವಿರುದ್ಧ 54-48 ಅಂತರದಲ್ಲಿ, ಬಿಹಾರ್‌ ತಂಡ ಒಡಿಶಾ ವಿರುದ್ಧ 51-25 ಅಂತರದಲ್ಲಿ, ಪಂಜಾಬ್‌ ತಂಡ ಉತ್ತರಾಖಂಡ್‌ ವಿರುದ್ಧ 43-31 ಅಂತರದಲ್ಲಿ, ಸರ್ವಿಸಸ್‌ ತಂಡ ಪಾಂಡಿಚೇರಿ ವಿರುದ್ಧ 54-20 ಅಂತರದಲ್ಲಿ, ರಾಜಸ್ಥಾನ ತಂಡ ಮಣಿಪುರ ವಿರುದ್ಧ 59-18 ಅಂತರದಲ್ಲಿ, ಮಹಾರಾಷ್ಟ್ರ ತಂಡ ಗುಜರಾತ್‌ ವಿರುದ್ಧ 54-22 ಅಂತರದಲ್ಲಿ, ಹಿಮಾಚಲ ಪ್ರದೇಶ ಜಾರ್ಖಂಡ್‌ ವಿರುದ್ಧ 64-29 ಅಂತರದಲ್ಲಿ ಜಯ ಗಳಿಸಿದವು.

ಸಂಜೆ ನಡೆದ ಪಂದ್ಯಗಳಲ್ಲಿ ಉತ್ತರ ಪ್ರದೇಶ ತಂಡ ತೆಲಂಗಾಣ ವಿರುದ್ಧ (52-18) 34 ಅಂಕಗಳ ಭರ್ಜರಿ ಜಯ ಗಳಿಸಿತು. ಕೇಂದ್ರಾಡಳಿತ ಪ್ರದೇಶಗಳ ನಡುವಿನ ಹೋರಾಟದಲ್ಲಿ ಡೆಲ್ಲಿ ತಂಡ ಪಾಂಡಿಚೇರಿ ವಿರುದ್ಧ 39-37 ಅಂತರದಲ್ಲಿ ರೋಚಕ ಜಯ ಗಳಿಸಿತು. ಮಣಿಪುರವನ್ನು 40-10 ಅಂತರದಲ್ಲಿ ಸೋಲಿಸಿದ ಗೋವಾ ತಂಡ ಮೊದಲ ಜಯ ಗಳಿಸಿತು.

Related Articles