Friday, October 4, 2024

ಸಂತೋಷ್‌ ಟ್ರೋಫಿ: ಕರ್ನಾಟಕಕ್ಕೆ ಜಯ

Sportsmail

ಸುಧೀರ್‌ ಕೊಟಿಕೆಲಾ ಗಳಿಸಿದ ಹ್ಯಾಟ್ರಿಕ್‌ ಗೋಲುಗಳ ನೆರವಿನಿಂದ ಕರ್ನಾಟಕ ತಂಡ ಸಂತೋಷ್‌ ಟ್ರೋಫಿ ರಾಷ್ಟ್ರೀಯ ಫುಟ್ಬಾಲ್‌ ಚಾಂಪಿಯನ್ಷಿಪ್‌ನ ದಕ್ಷಿಣ ವಲಯ ಎ ಗುಂಪಿನ ಅರ್ಹತಾ ಪಂದ್ಯದಲ್ಲಿ ತಮಿಳುನಾಡು ವಿರುದ್ಧ 4-0 ಗೋಲುಗಳ ಅಂತರದಲ್ಲಿ ಜಯ ಗಳಿಸಿ ಶುಭಾರಂಭ ಕಂಡಿದೆ.

ಬೆಂಗಳೂರು ಫುಟ್ಬಾಲ್‌ ಅಂಗಣದಲ್ಲಿ ನಡೆದ ಪಂದ್ಯದಲ್ಲಿ ಸುಧೀರ್‌ 42, 53 ಮತ್ತು 75ನೇ ನಿಮಿಷಗಳಲ್ಲಿ ಗೋಲು ಗಳಿಸಿ ಜಯದ ರೂವಾರಿ ಎನಿಸಿದರು. ಕಮಲೇಶ್‌ 11ನೇ ನಿಮಿಷದಲ್ಲಿ ಗೋಲು ಗಳಿಸಿ ತಂಡಕ್ಕೆ ಮುನ್ನಡೆ ಕಲ್ಪಿಸಿದರು. ಕಳೆದ ಎರಡು ಋತುಗಳಲ್ಲಿ ಸೆಮಿಫೈನಲ್‌ ತಲುಪಿದ್ದ ಕರ್ನಾಟಕ ತಂಡ ಮನೆಯಂಗಣದಲ್ಲಿ ಗೆಲ್ಲುವ ಫೇವರಿಟ್‌ ಎನಿಸಿತ್ತು. ಅದೇ ರೀತಿ ಅದ್ಭುತ ಆಟ ಪ್ರದರ್ಶಿಸಿ ಜಯ ತನ್ನದಾಗಿಸಿಕೊಂಡಿತು.

ಕಮಲೇಶ್‌ ಹಾಗೂ ಸುಧೀರ್‌ ಗಳಿಸಿದ ಗೋಲಿನಿಂದ ಕರ್ನಾಟಕ ಪ್ರಥಮಾರ್ಧದಲ್ಲಿ 2-0 ಗೋಲುಗಳ ಅಂತರದಲ್ಲಿ ಮುನ್ನಡೆ ಕಂಡಿತ್ತು. ಅತ್ಯಂತ ಆತ್ಮವಿಶ್ವಾಸದಲ್ಲಿ ದ್ವಿತಿಯಾರ್ಧವನ್ನು ಆರಂಭಿಸಿದ ರಾಜ್ಯ ತಂಡದ ಪರ ಸುಧೀರ್‌ ಎರಡು ಗೋಲುಗಳನ್ನು ಗಳಿಸಿ ಹ್ಯಾಟ್ರಿಕ್‌ ಸಾಧನೆ ಮಾಡಿದರು. ತಮಿಳುನಾಡು ಉತ್ತಮ ಪೈಪೋಟಿ ನೀಡಿದರೂ ರಾಜ್ಯದ ಡಿಫೆಂಡರ್‌ಗಳು ಎದುರಾಳಿ ತಂಡಕ್ಕೆ ಗೋಲು ಗಳಿಸುವ ಅವಕಾಶ ಕಲ್ಪಿಸಲಿಲ್ಲ.

 

ದಿನದ ಎರಡನೇ ಪಂದ್ಯದಲ್ಲಿ ತೆಲಂಗಾಣ ತಂಡ ಆಂಧ್ರಪ್ರದೇಶದ ವಿರುದ್ಧ 4-0 ಗೋಲುಗಳ ಅಂತರದಲ್ಲಿ ಜಯ ಗಳಿಸಿದೆ. ವಿಜೇತ ತಂಡದ ಪರ ಯೂಸುಫ್‌ ಆಲಿ (16ನೇ ನಿಮಿಷ), ಮೊಹಮ್ಮದ್‌ ಇಮಾಮುದ್ದೀನ್‌ 71 ಮತ್ತು 90+3ನೇ ನಿಮಿಷ) ಮತ್ತು ಪಿ. ಜೋಷುವಾ (87ನೇ ನಿಮಿಷ) ಗೋಲು ಗಳಿಸಿದರು.

ನಾಳೆಯ ಪಂದ್ಯದಲ್ಲಿ ಕರ್ನಾಟಕ ತಂಡ ಆಂಧ್ರಪ್ರದೇಶದ ವಿರುದ್ಧ ಹಾಗೂ ತಮಿಳುನಾಡು ತಂಡ ತೆಲಂಗಾಣ  ವಿರುದ್ಧ ಸೆಣಸಲಿವೆ.

Related Articles