Saturday, October 12, 2024

ಕಾಲೇಜಿನಿಂದ ಡಿಬಾರ್‌ ಆಗಿ ಹೊರನಡೆದ ಸರ್ವೇಶ್‌ ಚಾಂಪಿಯನ್‌ ಆದ ಕತೆ!

ಸೋಮಶೇಖರ್‌ ಪಡುಕರೆ, ಬೆಂಗಳೂರು

ಬದುಕಿನಲ್ಲಿ ನಡೆಯುವ ಕೆಲವೊಂದು ನೋವಿನ ಘಟನೆಗಳು ಆ ಕ್ಷಣಕ್ಕೆ ನೋವನ್ನು ತರಬಹುದು, ಆದರೆ ಬಹಳ ಸಮಯದ ನಂತರ ಆ ಕಹಿ ಘಟನೆ ನಡೆದುದ್ದೇ ಒಳ್ಳೆದಾಯಿತು ಎನಿಸುತ್ತದೆ. ಕಾಲೇಜಿನಿಂದ ಡಿಬಾರ್‌ ಆದ ವಿದ್ಯಾರ್ಥಿಯೊಬ್ಬ ಬೇಸರದಿಂದ ಹೊರನಡೆಯುತ್ತಾನೆ, ಆದರೆ ಅದೇ ವಿದ್ಯಾರ್ಥಿ ರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಸಾಧನೆಯೊಂದಿಗೆ ಅದೇ ಕಾಲೇಜಿಗೆ ಕೀರ್ತಿ ತರುತ್ತಾನೆ, ಅದೇ ಕಾಲೇಜಿನವರು ಆತನನ್ನು ಪ್ರೀತಿಯಿಂದ ಸ್ವಾಗತಿಸುತ್ತಾರೆ….ಇದು ಹುಬ್ಬಳ್ಳಿಯ ರಾಷ್ಟ್ರೀಯ ಬೈಕ್‌ ರೈಡರ್‌ ಸರ್ವೇಶ್‌ ಬಾಲಪ್ಪ ಅವರ ಬದುಕಿನ ಸ್ಫೂರ್ತಿಯ ಕತೆ.

ಧಾರವಾಡದ ವಿದ್ಯಾಗಿರಿಯ ಜೆಎಸ್‌ಎಸ್‌ ಕ್ಯಾಂಪಸ್‌ನಲ್ಲಿರುವ ಕೆ.ಎಚ್‌. ಕಬ್ಬೂರ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ನಲ್ಲಿ ಡಿಪ್ಲೋಮಾ ವ್ಯಾಸಂಗ ಮಾಡುತ್ತಿದ್ದ ಸರ್ವೇಶ್‌ ಬಾಲಪ್ಪ ಅವರಿಗೆ ಎಲ್ಲ ವಿಷಯಗಳಲ್ಲೂ ಆಸಕ್ತಿ ಇದ್ದರೂ ಡ್ರಾಯಿಂಗ್‌ನಲ್ಲಿ ಮಾತ್ರ ನಿರಾಸಕ್ತಿ. ಇದರಿಂದಾಗಿ ಆ ಕ್ಲಾಸಿಗೆ ಹಾಜರಾಗುತ್ತಿರಲಿಲ್ಲ. ಪರಿಣಾಮ ಹಾಜರಾತಿಯ ಕೊರತೆ. ಈ ಕಾರಣಕ್ಕಾಗಿ ಕಾಲೇಜಿನಿಂದ ಡಿಬಾರ್‌ ಮಾಡುತ್ತಾರೆ.

ಎಷ್ಟೇ ವಿನಂತಿ ಮಾಡಿಕೊಂಡರೂ ಉಪನ್ಯಾಸಕರ ಮನ ಕರಗಲಿಲ್ಲ. ಕಾಲೇಜಿನಿಂದ ಡಿಬಾರ್‌ ಮಾಡಿದರು. “ಎಲ್ಲ ಸಬ್ಜಕ್ಟ್‌ಗಳಲ್ಲಿ ಉನ್ನತ ಸ್ಥಾನದಲ್ಲಿದ್ದರೂ, ಕೇವಲ ಒಂದೇ ವಿಷಯದಲ್ಲಿ ಹಾಜರಾತಿ ಕೊರತೆ ಇದ್ದುದಕ್ಕೆ ಡಿಬಾರ್‌ ಮಾಡಿದರಲ್ಲ,” ಎಂದು ಸರ್ವೇಶ್‌ ಕಾಲೇಜಿನ ಪಕ್ಕದಲ್ಲಿದ್ದ ಚೈನೀಸ್‌ ಹೊಟೇಲ್‌ನಲ್ಲಿ ಯೋಚಿಸುತ್ತ ಕುಳಿತು ಫೇಸ್‌ಬುಕ್‌ ಪೇಜನ್ನು ನೋಡುತ್ತಿರುವಾಗ ಕಣ್ಣಿಗೆ ಬಿದ್ದಿದ್ದು ಕೊಯಮತ್ತೂರು ರೇಸಿಂಗ್‌ ಅಕಾಡೆಮಿ (ಸಿಆರ್‌ಎ)ಯ ಪೇಜ್‌. ಆ ಬಗ್ಗೆ ಗಮನ ಹರಿಸದೆ ಪೇಜ್‌ ಮರೆಯಾಯಿತು. ಪಕ್ಕದಲ್ಲೇ ಕುಳಿತು ಆ ಪೇಜನ್ನು ಗಮನಿಸಿದ ಗೆಳತಿ, “ಇದನ್ನು ಟ್ರೈ ಮಾಡು, ಇದರಲ್ಲಿ ನೀನು ಯಶಸ್ಸು ಕಂಡೇ ಕಾಣುತ್ತಿ,” ಎಂದು ಹೇಳಿದಳು. ಸರ್ವೇಶ್‌ ಅವರಿಗೆ ಗೆಳತಿ ಸಲಹೆ ನೀಡಲು ಕಾರಣವೂ ಇದೆ.  ಸರ್ವೇಶ್‌ ಒಮ್ಮೆ ಹುಬ್ಬಳ್ಳಿಯಲ್ಲಿ 100ಸಿಸಿ ಬೈಕ್‌ನಲ್ಲಿ 7 ನಿಮಿಷದಲ್ಲಿ 18 ಕಿಮೀ ದೂರವನ್ನು ಕ್ರಮಿಸಿ ದಾಖಲೆ ಮಾಡಿದ್ದರು. 300ಸಿಸಿ ಬೈಕ್‌ನಲ್ಲಿ 5 ನಿಮಿಷದಲ್ಲಿ 18 ಕಿಮೀ ದೂರವನ್ನು ನಗರದ ಒಳಗಡೆ ಇರುವ ರಸ್ತೆಯಲ್ಲಿ ಈ ದಾಖಲೆ ಮಾಡಿದ್ದರು. ಈ ಕಾರಣಕ್ಕಾಗಿಯೇ ಸರ್ವೇಶ್‌ ಅವರ ಗೆಳತಿ ಕೊಯಮತ್ತೂರು ರೇಸಿಂಗ್‌ ಅಕಾಡೆಮಿ ಸೇರಲು ಸಲಹೆ ನೀಡಿದರು. ಗೆಳತಿಯ ಮಾತಿನಂತೆ ಸರ್ವೇಶ್‌ ಕಾಲೇಜು ತೊರೆದು ಕೊಯಮತ್ತೂರಿನಲ್ಲಿರುವ ರೇಸಿಂಗ್‌ ಅಕಾಡೆಮಿಯಲ್ಲಿ ತರಬೇತಿ ಪಡೆಯಲು ಮನಸ್ಸು ಮಾಡಿದರು.

ರೇಸಿಂಗ್‌ ಹೆಲ್ಮೆಟ್‌ನ ಅರಿವಿರಲಿಲ್ಲ:

ಕೊಯಮತ್ತೂರು ರೇಸಿಂಗ್‌ ಅಕಾಡೆಮಿಯ ನಂಬರ್‌ಗೆ ಕಾಲ್‌ ಮಾಡಿ ಮಾಹಿತಿ ಕೇಳಿದಾಗ, ತರಬೇತಿಗೆ ಬೈಕ್‌ ಆಕಾಡೆಮಿಯವರೇ ನೀಡುತ್ತಾರೆ. ಆದರೆ ಹೆಲ್ಮೆಟ್‌ ಮಾತ್ರ ರೈಡರ್‌ಗಳೇ ತರಬೇಕಾಗಿತ್ತು. ಆಗ ಗೆಳೆಯ ಸತೀಶ್‌ ಅವರೊಂದಿಗೆ ಬೆಂಗಳೂರಿಗೆ ಬಂದು, 25,000 ರೂ ಬೆಲೆಯ ಹೆಲ್ಮೆಟ್‌ ಖರೀದಿಸಿದರು. ಅಕಾಡೆಮಿಯವರು ಡಿರಿಂಗ್‌ ಹೆಲ್ಮೆಟ್‌ ಖರೀದಿಸುವಂತೆ ಸೂಚಿಸಿದ್ದರು. ಆದರೆ ಸರ್ವೇಶ್‌ ಉತ್ತಮ ಹೆಲ್ಮೆಟ್‌ ಖರೀದಿಸಿದ್ದರೂ, ಕೊಯಮತ್ತೂರಿಗೆ ಹೋಗಿ ನೋಡಿದಾಗ ಅದು ಡಿರಿಂಗ್‌ ಹೆಲ್ಮೆಟ್‌ ಆಗಿರಲಿಲ್ಲ. ಕೊನೆಗೂ ಸರಿಹೊಂದುವ ಹೆಲ್ಮೆಟ್‌ ಖರೀದಿಸಿದ ಸರ್ವೇಶ್‌ ಬಾಲಪ್ಪ ಅಕಾಡೆಮಿ ಸೇರಿಕೊಂಡರು.

ಮಲೇಷ್ಯಾದಲ್ಲಿ ಮಿಂಚಿದ ಸರ್ವೇಶ್‌: ಮಲೇಷ್ಯಾದಲ್ಲಿ ಕೊಯಮತ್ತೂರು ರೇಸಿಂಗ್‌ ಅಕಾಡೆಮಿ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಆದರೆ ಅದನ್ನು ರೇಸಿಂಗ್‌ ರೀತಿಯಲ್ಲಿ ಆಯೋಜಿಸಲಾಗಿತ್ತು. ನಡೆದ ಎರಡು ರೇಸ್‌ಗಳಲ್ಲಿ ಸರ್ವೇಶ್‌ ಒಂದರಲ್ಲಿ ಪ್ರಥಮ ಮತ್ತು ಇನ್ನೊಂದರಲ್ಲಿ ದ್ವಿತೀಯ ಸ್ಥಾನ ಗಳಿಸಿದರು. ಪವರ್‌ಟ್ರಾನಿಕ್‌ ಮತ್ತು 25,000ರೂ. ನಗದು ಬಹುಮಾನವೂ ಸಿಕ್ಕಿತು. ಇದು ಸರ್ವೇಶ್‌ ಅವರಿಗೆ ಹೊಸ ಉತ್ತೇಜನ ನೀಡುವಂತೆ ಮಾಡಿತು. ಕಳೆದ ವರ್ಷ ನಡೆದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಸರ್ವೇಶ್‌ 10 ರೇಸ್‌ಗಳಲ್ಲಿ 2 ರೇಸ್‌ಗಳಲ್ಲಿ ದ್ವಿತೀಯ ಹಾಗೂ 2 ರೇಸ್‌ಗಳಲ್ಲಿ ತೃತೀಯ ಸ್ಥಾನ ಗಳಿಸಿದರು. ಮುಂದಿನ ಹಂತದಲ್ಲಿ ಜಯ ಗಳಿಸಿದರೆ ಸರ್ವೇಶ್‌ ರನ್ನರ್‌ ಅಪ್‌ ಸ್ಥಾನ ಗಳಿಸುತ್ತಿದ್ದರು. ಆದರೆ ಅವರ ತಂಡ ಅಕ್ಸರ್‌ ಸ್ಪಾರ್ಕ್‌ ರೇಸಿಂಗ್‌ಗೆ ಸರ್ವೇಶ್‌ ಚಾಂಪಿಯನ್‌ ಪಟ್ಟ ಗೆಲ್ಲಬೇಕೆಂಬ ಹಂಬಲ. ರನ್ನರ್‌ ಅಪ್‌ ಅಥವಾ ಸೆಕೆಂಡ್‌ ರನ್ನರ್‌ ಅಪ್‌ ಸರ್ವೇಶ್‌ ಸಾಮರ್ಥ್ಯಕ್ಕೆ ತಕ್ಕುದಾದುದಲ್ಲ ಎಂದು ತಂಡದ ಸದಸ್ಯರು ತೀರ್ಮಾನಿಸಿದರು.

 

ಇದರಿಂದಾಗಿ ಉಳಿದಿರು ಪೋಡಿಯಂಗಳಲ್ಲಿ ಸರ್ವೇಶ್‌ಗೆ ಅವಕಾಶ ಸಿಗಲಿಲ್ಲ. ಹತ್ತು ರೇಸ್‌ಗಳಲ್ಲಿ ಒಂದು ರೇಸ್‌ನಲ್ಲಿ ಪ್ರಥಮ ಸ್ಥಾನ ಗಳಿಸಿದರೂ ಮುಂದಿನ ವರ್ಷ ಆ ವಿಭಾಗದಲ್ಲಿ ಸ್ಪರ್ಧಿಸುವಂತಿಲ್ಲ. ಮತ್ತು ಚಾಂಪಿಯನ್‌ಷಿಪ್‌ನಲ್ಲೂ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಬಂದರೂ ಮುಂದಿನ ವರ್ಷ ಸ್ಪರ್ಧಿಸುವಂತಿಲ್ಲ ಎಂಬ ನಿಯಮ ಇದೆ. “ನಿನ್ನನ್ನು ಚಾಂಪಿಯನ್‌ ಆಗಿಯೇ ನೋಡಬೇಕು”  ಎಂಬ ತಂಡದ ಆಶಯಕ್ಕೆ ಸರ್ವೇಶ್‌ ಒಪ್ಪಿಕೊಂಡರು. ಇದರಿಂದಾಗಿ ಕಳೆದ ವರ್ಷ ಸರ್ವೇಶ್‌ ಕಾಯಬೇಕಾಯಿತು. ಎರಡು ಸುತ್ತುಗಳಲ್ಲಿ ಸರ್ವೇಶ್‌ ಹತ್ತಿರ ಪಾಯಿಂಟ್‌ ಇರಲೇ ಇಲ್ಲ. ಚಾಂಪಿಯನ್‌ಷಿಪ್‌ನಲ್ಲೂ ಅವರು ಟಾಪ್‌10ರಲ್ಲಿ ಕಾಣಿಸಿಕೊಳ್ಳಲಿಲ್ಲ. ಇದರಿಂದಾಗಿ ಚಾಂಪಿಯನ್‌ಷಿಪ್‌ನ ನಾಲ್ಕನೇ ಸುತ್ತಿನಲ್ಲಿ ಪೂರ್ಣಗೊಳಸಿದರು. ಇಲ್ಲದೇ ಇರುತ್ತಿದ್ದರೆ ದ್ವಿತೀಯ ಅಥವಾ ತೃತೀಯ ಸುತ್ತಿನಲ್ಲಿ ಮುಗಿಸುವ ಅವಕಾಶ ಇದ್ದಿತ್ತು.

ಕೊಯಮತ್ತೂರಿನಲ್ಲಿ ಅಗ್ರ ಸ್ಥಾನ: ಈ ವರ್ಷದ ಮೊದಲ ರೇಸ್‌ನಲ್ಲಿ ಸರ್ವೇಶ್‌ ಎರಡೂ ರೇಸ್‌ಗಳಲ್ಲಿ ಅಗ್ರ ಸ್ಥಾನ ಗಳಿಸಿದರು. ಸದ್ಯ ಚೆನ್ನೈನಲ್ಲಿ ನಡೆಯುತ್ತಿರುವ ಎರಡನೇ ಸುತ್ತಿನ ರೇಸ್‌ನಲ್ಲಿ ಪೋಡಿಯಂ ಸ್ಥಾನ ಗಳಿಸಿದ್ದು, ಅಗ್ರ ಸ್ಥಾನ ಗಳಿಸಿಸುವ ಆತ್ಮವಿಶ್ವಾಸ ಹೊಂದಿದ್ದಾರೆ.

ಬದುಕಿನ ನೈಜ ಪ್ರಾಯೋಜಕರು ಹೆತ್ತವರು: 2020ರಿಂದ ವೃತ್ತಿಪರ ರೇಸಿಂಗ್‌ನಲ್ಲಿ ಸ್ಪರ್ಧಿಸುತ್ತಿದ್ದ ಸರ್ವೇಶ್‌ಗೆ ಚಿಕ್ಕಂದಿನಿಂದಲೂ ಬೈಕ್‌ ಹುಚ್ಚು. ಸರ್ವೇಶ್‌ ಅವರ ತಂದೆ ಬಾಲಪ್ಪ ಹಾಗೂ ತಾಯಿ ಸಲೋಚನ ಇಬ್ಬರೂ ಶಿಕ್ಷಕರಾಗಿದ್ದು, ಮಗನ ಕ್ರೀಡಾ ಉತ್ಸಾಹಕ್ಕೆ ಪ್ರೋತ್ಸಾಹ ನೀಡುತ್ತಿದ್ದರು. ಸುತ್ತಮುತ್ತಲಿನವರು ಬೈಕ್‌ ರೈಡ್‌ ಮಾಡಿದ್ದಕ್ಕೆ ದೂರು ನೀಡುತ್ತಿದ್ದರೂ ಸರ್ವೇಶ್‌ ಅವರ ತಂದೆಗೆ ಮಗನ ಬಗ್ಗೆ ನಂಬಿಕೆ ಇದ್ದುದರಿಂದ ಚರ್ಚೆಗೆ ಆಸ್ಪದ ಕೊಡುತ್ತಿರಲಿಲ್ಲ. ಮತ್ತು ದೂರುಗಳನ್ನು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ಸ್ವತಃ ತಾಯಿಯೇ ಮಗನಿಗೆ ಬೈಕ್‌ ನೀಡಿ ಪ್ರೋತ್ಸಾಹಿಸಿದ್ದಾರೆ. “ರೇಸ್‌ನಲ್ಲಿ ಯಶಸ್ಸು ಕಂಡಂತೆ ಹಲವಾರು ಬೈಕ್‌ ಉತ್ಪನ್ನಗಳು ಪ್ರಾಯೋಜಕತ್ವ ನೀಡುತ್ತವೆ. ಆದರೆ ನನ್ನ ಬದುಕಿನ ಪ್ರಾಯೋಜಕರು ನನ್ನ ಹೆತ್ತವರು. ಅವರ ನಿರಂತರ ಪ್ರೋತ್ಸಾಹ ಮತ್ತು ಪ್ರೀತಿಯಿಂದ ಯಶಸ್ಸಿನ ಹಾದಿಕಂಡುಕೊಳ್ಳಲು ಸಾಧ್ಯವಾಗಿದೆ. ರೇಸ್‌ನಲ್ಲಿ ಸಾಗಬೇಕಾದ ಹಾದಿ ಇನ್ನೂ ಇದೆ, ಗುರಿ ತಲಪುತ್ತೇನೆಂಬ ಆತ್ಮವಿಶ್ವಾಸವಿದೆ,” ಎಂದು ಸರ್ವೇಶ್‌ ನುಡಿದರು.

ಡಿಬಾರ್‌ ಮಾಡಿದವರೇ ಈಗ ಹಾಜರಿ ಕೊಡುತ್ತಿದ್ದಾರೆ:

ಒಂದು ಕ್ರೀಡಾ ಯಶಸ್ಸು ಒಬ್ಬ ವ್ಯಕ್ತಿಯ ಬದುಕುನ್ನು ಯಾವ ರೀತಿಯಲ್ಲಿ ಬದಲಾಯಿಸುತ್ತದೆ ಎಂಬುದಕ್ಕೆ ಸರ್ವೇಶ್‌ ಬಾಲಪ್ಪ ಅವರು ಉತ್ತಮ ಉದಾಹರಣೆ. ಬೈಕ್‌ ರೇಸ್‌ನಲ್ಲಿ ತರಬೇತಿ ಪಡೆದು ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ, ಈಗ ಯೂರೋಪಿಯನ್‌ ಸೂಪರ್‌ ಬೈಕ್‌ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಲು ಅವಕಾಶ ಬಂದಿದೆ. ಅವತ್ತು ಕ್ಲಾಸಿನಿಂದ ಹೊರದಬ್ಬಿದ ಶಿಕ್ಷಕರೇ ಇಂದು ಹಾಜರಿ ನೀಡಿ ಚಾಂಪಿಯನ್‌ಷಿಪ್‌ಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುತ್ತಿದ್ದಾರೆ. “ಅಂದು ಕಾಲೇಜಿನಿಂದ ಡಿಬಾರ್‌ ಆಗದೇ ಇರುತ್ತಿದ್ದರೆ ನಾನಿಂದು ಸಾಮಾನ್ಯ ವಿದ್ಯಾರ್ಥಿಯಾಗಿ ಇರುತ್ತಿದ್ದೆ. ಆದರೆ ಡಿಬಾರ್‌ ನನ್ನ ಬದುಕಿಗೆ ಹೊಸ ತಿರುವು ನೀಡಿತು. ಕ್ರೀಡೆಗೆ ಇರುವ ಶಕ್ತಿ ಬೇರೆ ಯಾವುದಕ್ಕೂ ಇಲ್ಲ. ಈಗ ನನಗೆ ಡಿಪ್ಲೋಮಾ, ರಜೆ, ಹಾಜರಾತಿ ಇವುಗಳ ಚಿಂತೆ ಇಲ್ಲ. ಮುಂಬರುವ ರೇಸ್‌ಗಳಲ್ಲಿ ಯಶಸ್ಸು ಕಂಡು ನಮ್ಮೂರಿಗೆ, ದೇಶಕ್ಕೆ ಕೀರ್ತಿ ತರಬೇಕು. ಯುವಕರಿಗೆ ತರಬೇತಿ ನೀಡಬೇಕೆಂಬುದೇ ಗುರಿ,” ಎಂದು ಸರ್ವೇಶ್‌ ಬಾಲಪ್ಪ ಅವರ ಮನದಾಳದ ಮಾತು.‌ ನನ್ನ ಯಶಸ್ಸಿಗೆ ಪ್ರೋತ್ಸಾಹ ನೀಡಿದ ಪ್ರತಿಯೊಬ್ಬ ಗುರುಗಳಿಗೂ  ಸರ್ವೇಶ್‌ ಧನ್ಯವಾದ ಸಲ್ಲಿಸಿದ್ದಾರೆ.

ಪ್ರೋತ್ಸಾಹ ನೀಡಿದವರು:

ಆಕ್ಸರ್‌ ಸ್ಪಾರ್ಕ್ಸ್ ರೇಸಿಂಗ್‌ ತಂಡದ ಪರ ರೈಡ್‌ ಮಾಡುತ್ತಿರುವ ಸರ್ವೇಶ್‌ ಅವರನ್ನು ಆ ತಂಡವು ಇದುವರೆಗೂ ಉತ್ತಮ ರೀತಿಯಲ್ಲಿ ನೋಡಿಕೊಂಡಿದೆ. ಪ್ರಾಯೋಜಕರಾದ ಯಮಹಾ ಮೋಟಾರ್ಸ್‌ ಇಂಡಿಯಾವನ್ನು ಸರ್ವೇಶ್‌ ಯಾವಾಗಲೂ ಸ್ಮರಿಸುತ್ತಾರೆ. ಜೊತೆಯಲ್ಲಿ ಆಕ್ಸರ್‌, ಮೊತುಲ್‌ ಇಂಡಿಯಾ, ಡೈಮಂಡ್‌ ಚೈನ್‌ ಮತ್ತು ಕಿಟ್ಟ್‌ ಇವರೆಲ್ಲರೂ ಸರ್ವೇಶ್‌ ಅವರ ಯಶಸ್ಸಿನ ಭಾಗ. ಕಲಿಸಿದ ಕೊಯಮತ್ತೂರು ರೇಸಿಂಗ್‌ ಅಕಾಡೆಮಿಯ ಎಲ್ಲ ಗುರುಗಳಿಗೂ ಹಾಗೂ ಕೊಯಮತ್ತೂರು ರೇಸಿಂಗ್‌ ಆಕಾಡೆಮಿಯ ಸ್ಥಾಪಕರು ಮತ್ತು ಗುರುಗಳಾದ ತರುಣ್‌ ಕುಮಾರ್‌,  ಸ್ಪಾರ್ಕ್ಸ್‌  ತಂಡದ ಪ್ರಧಾನ ಮೆಕ್ಯಾನಿಕ್‌ ಹಾಗೂ ಮಾಲೀಕರಾದ ರವಿ, , ಚಿಕ್ಕಂದಿನಲ್ಲಿ ರೇಸ್‌ಗೆ ಸ್ಫೂರ್ತಿ ನೀಡಿದ ಅನೀಶ್‌ ಶೆಟ್ಟಿ ಹಾಗೂ ಸದಾ ಪ್ರೋತ್ಸಾಹ ನೀಡುವ ಸಚಿವರಾದ ವಿನಯ್‌ ಕುಲಕರ್ಣಿ ಹೀಗೆ ಎಲ್ಲರನ್ನೂ ಸರ್ವೇಶ್‌ ಇಲ್ಲಿ ಸ್ಮರಿಸಿದ್ದಾರೆ.

Related Articles