Thursday, October 10, 2024

ತಂದೆಯ ಟ್ರ್ಯಾಕ್‌ನಲ್ಲೇ ಸಾಗಿದ ಚಿರಂತ್‌ ವಿಶ್ವನಾಥ್‌!

ಸೋಮಶೇಖರ್‌ ಪಡುಕರೆ, ಬೆಂಗಳೂರು

ಕೊರೋನಾ ಸಾಂಕ್ರಮಿಕ ಪಿಡುಗಿನ ಕಾಲದಲ್ಲಿ ಅನೇಕರು ಜೀವನ್ನೇ ಕಳೆದುಕೊಂಡು, ಇನ್ನು ಅನೇಕರು ಉದ್ಯೋಗ ಕಳೆದುಕೊಂಡರು, ಕ್ರೀಡಾ ಕೂಟಗಳು ನಿಂತೇ ಹೋದವು ಆದರೆ ಬೆಂಗಳೂರಿನ ಯುವಕ ಚಿರಂತ್‌ ಪಾಲಿಗೆ ಕೊರೋನಾ ಲಾಕ್‌ಡೌನ್‌ ಒಂದು ರೀತಿಯಲ್ಲಿ ವರವಾಗಿ ಪರಿಣಮಿಸಿತು. ಸೈಕ್ಲಿಂಗ್‌, ಫುಟ್ಬಾಲ್‌ ಆಡುತ್ತಿದ್ದ ಹುಡುಗ ಬೈಕ್‌ನಲ್ಲಿ ಕಸರತ್ತು ಮಾಡತೊಡಗಿದ, ತನ್ನ ತಂದೆಯಂತೆ ಚಾಂಪಿಯನ್‌ ಆಗಬೇಕೆಂಬ ಕನಸು ಕಂಡ, ಅದಕ್ಕೆ ಪ್ರೋತ್ಸಾಹವೂ ಸಿಕ್ಕಿತು. ಈಗ ಟಿವಿಎಸ್‌ ರೇಸಿಂಗ್‌ ತಂಡದಲ್ಲಿ ರೂಕಿ, ಅಂದರೆ ಹೊಸಬರ ವಿಭಾಗದಲ್ಲಿ ಅಗ್ರ ಸ್ಥಾನದ ರೈಡರ್‌ ಎನಿಸಿದ್ದಾರೆ.

PC: Anand Philar

ಸೈಕ್ಲಿಂಗ್‌ನಲ್ಲಿ ರಾಜ್ಯ ಮಟ್ಟದಲ್ಲಿ ಪದಕ ಗೆದ್ದು, ಫುಟ್ಬಾಲ್‌ನಲ್ಲಿ ಲೀಗ್‌ ಹಂತದಲ್ಲಿ ಆಡಿರುವ ಚಿರಂತ್‌ ವಿಶ್ವನಾಥ್‌ ಪಾಲಿಗೆ ಕೊರೋನಾ ಆ ಎರಡೂ ಕ್ರೀಡೆಯಿಂದ ದೂರ ಉಳಿಯುವಂತೆ ಮಾಡಿತು. ಆದರೆ ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ. ಚಿರಂತ್‌ ಅವರ ತಂದೆ ಈ ದೇಶ ಕಂಡ ಉತ್ತಮ ಬೈಕ್‌ ರೇಸರ್‌ಗಳಲ್ಲಿ ಒಬ್ಬರು. ಚಿರಂತ್‌ ಬೈಕ್‌ ರೈಡಿಂಗ್‌ನಲ್ಲಿ ತೊಡಗಿಕೊಳ್ಳುತ್ತೇನೆ ಎಂದು ಕೇಳಿಕೊಂಡಾಗ ಖುಷಿಯಿಂದಲೇ ಅವಕಾಶ ನೀಡಿದರು. ಒಂದು ವರ್ಷ ತಂದೆ ಹಾಕಿಕೊಟ್ಟ ಅನುಭವದ ಟ್ರ್ಯಾಕ್‌ನಲ್ಲಿ ಅಭ್ಯಾಸ ಮಾಡಿದ. ಈ ವರ್ಷ ರೂಕಿ ವಿಭಾಗದಲ್ಲಿ ಪೆಟ್ರೊನಾಸ್‌ ಒನ್‌-ಮೇಕ್‌ ಚಾಂಪಿಯನ್‌ಷಿಪ್‌ನಲ್ಲಿ ಎಲ್ಲ ಮೂರು ರೇಸ್‌ಗಳನ್ನು ಗೆದ್ದು ಭವಿಷ್ಯದ ಉತ್ತಮ ರೇಸರ್‌ ಆಗುವ ಆತ್ಮವಿಶ್ವಾಸ ತೋರಿಸಿದ್ದಾರೆ.

ಅಲ್ಪ ಅವಧಿಯಲ್ಲೇ ಮಿನುಗಿದ ಪ್ರತಿಭೆ: ಸೈಕ್ಲಿಂಗ್‌ ಹಾಗೂ ಫುಟ್ಬಾಲ್‌ ಕ್ರೀಡೆಯನ್ನು ತೊರೆದ ಚಿರಂತ್‌ ಬೈಕ್‌ ರೈಡಿಂಗ್‌ನಲ್ಲಿ ತೊಡಗಿಕೊಂಡರು. ಇದಕ್ಕೂ ಮುನ್ನ ತಂದೆ ಪಾಲ್ಗೊಳ್ಳುತ್ತಿದ್ದ ಮೋಟಾರ್‌ ರೇಸ್‌ಗಳಲ್ಲಿ ಪ್ರೇಕ್ಷಕನಾಗಿ ಪಾಲ್ಗೊಳ್ಳುತ್ತಿದ್ದ ಚಿರಂತ್‌ಗೆ ಬೈಕ್‌ರೈಡಿಂಗ್‌ ಬಗ್ಗೆ ಹೆಚ್ಚಿನ ಆಸಕ್ತಿ ಸಹಜವಾಗಿಯೇ ಬಂದಿತ್ತು. ಟಿವಿಎಸ್‌ ರೇಸಿಂಗ್‌ ಸಂಸ್ಥೆಯು ಒನ್‌ ಮ್ಯಾನ್‌ ಚಾಂಪಿಯನ್‌ಷಿಪ್‌ ಆಯೋಜಿಸಿತ್ತು. ಅದರಲ್ಲಿ ಪಾಲ್ಗೊಂಡ ಚಿರಂತ್‌ 9ನೇ ಸ್ಥಾನ ಪಡೆದರು. ಇದು ಪುಟ್ಟ ಬಾಲಕನಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿತು. ನಂತರ ನಡೆದ ಸ್ಪರ್ಧಾತ್ಮಕ ರೇಸ್‌ನಲ್ಲಿ 4ನೇ ಸ್ಥಾನ ಗಳಿಸಿದ. ಎರಡನೇ ರೇಸ್‌ನಲ್ಲಿ ಎರಡನೇ ಸ್ಥಾನ ಗಳಿಸಿ ಅಚ್ಚರಿ ಮೂಡಿಸಿದ. ಆ ನಂತರ ನಾಲ್ಕು ರೇಸ್‌ಗಳಲ್ಲಿ ಅಗ್ರ ಸ್ಥಾನ ಗಳಿಸಿದ. ಈಗ ಚೆನ್ನೈನಲ್ಲಿ ನಡೆಯುತ್ತಿರುವ ಎಫ್‌ಎಂಎಸ್‌ಸಿಐ ಚಾಂಪಿಯನ್‌ಷಿಪ್‌ ರೂಕಿ ವಿಭಾಗದಲ್ಲಿ ಚಾಂಪಿಯನ್‌ ಲೀಡರ್‌ ಆಗಿ ಮುನ್ನಡೆದಿದ್ದಾನೆ. 15 ರ ಹರೆಯದ ಈ ಶಾಲಾ ಬಾಲಕ ಅಚಾಚೆ ಆರ್‌ಟಿಆರ್‌ 200 ಬೈಕ್‌ನಲ್ಲಿ ಮೂರರಲ್ಲಿ ಮೂರೂ ರೇಸ್‌ಗಳನ್ನು ಗೆದ್ದು ಅಗ್ರ ಸ್ಥಾನ ಕಾಯ್ದುಕೊಂಡಿದ್ದಾನೆ. ಬೆಂಗಳೂರಿನ ವಿದ್ಯಾರಣ್ಯಪುರದ ರೀಜೆನ್ಸಿ ಪಬ್ಲಿಕ್‌ ಸ್ಕೂಲ್‌ನ ವಿದ್ಯಾರ್ಥಿಯಾಗಿರುವ ಚಿರಂತ್‌ ವಿಶ್ವನಾಥ್‌ ತಂದೆಯ ಹಾದಿಯಲ್ಲಿಯೇ ಚಾಂಪಿಯನ್‌ ಆಫ್‌ ಚಾಂಪಿಯನ್ಸ್‌ ಆಗುವ ಲಕ್ಷಣ ತೋರಿದ್ದಾನೆ.

 

ಚಾಂಪಿಯನ್‌ ಆಫ್‌ ಚಾಂಪಿಯನ್ಸ್‌ ಟಿ.ಕೆ. ವಿಶ್ವನಾಥ್‌: ಮನೆಯಲ್ಲಿಯೇ ಚಾಂಪಿಯನ್‌ ಅಫ್‌ ಚಾಂಪಿಯನ್ಸ್‌ ಇರುವಾಗ ಇನ್ನು ಆ ಮನೆಯಲ್ಲಿ ಚಾಂಪಿಯನ್ಸ್‌ ಉದಯಿಸದೇ ಇರುತ್ತಾರೆಯೇ? ಖಂಡಿತ ಉದಯಿಸುತ್ತಾರೆ. ಚಿರಂತ್‌ ಅವರ ತಂದೆ ವಿಶ್ವನಾಥ್‌ ಈ ದೇಶ ಕಂಡ ಉತ್ತಮ ರೇಸರ್‌ಗಳಲ್ಲಿ ಒಬ್ಬರು. ರಾಷ್ಟ್ರೀಯ ಮಟ್ಟದಲ್ಲಿ ಚಾಂಪಿಯನ್‌ ಆಫ್‌ ಚಾಂಪಿಯನ್ಸ್‌ ಗೌರವಕ್ಕೆ ಪಾತ್ರರಾದವರು. ವಿಶ್ವನಾಥ್‌ ಅವರು 2001 ರಿಂದ 2010ರ ಅವಧಿಯಲ್ಲಿ ಮಿಂಚಿದ ರ‍್ಯಾಲಿಪಟು. ರೋಡ್‌ ರೇಸಿಂಗ್‌ನಲ್ಲಿ ಪ್ರಭುತ್ವ ಸಾಧಿಸಿದವರು. ಮೋಟೋಕ್ರಾಸ್‌ ಚಾಂಪಿಯನ್‌ಪಟ್ಟ ಗೆದ್ದವರು. ಹಿಲ್‌ಕ್ಲೈಂಬ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಭುತ್ವ ಸಾಧಿಸಿದವರು. ಇವರ ಈ ಸಾಧನೆಯಿಂದಾಗಿ ಅವರ ಇಬ್ಬರೂ ಮಕ್ಕಳು ಬೈಕ್‌ ರ‍್ಯಾಲಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಿರಿಯ ಮಗ ಪ್ರಜ್ವಲ್‌ ವಿಶ್ವನಾಥ್‌ ಕೂಡ ಮೋಟೋಕ್ರಾಸ್‌ನಲ್ಲಿ ಚಾಂಪಿಯನ್‌ಷಿನ್‌ನಲ್ಲಿ ಗ್ರೂಪ್‌ ಎ ಕ್ಲಾಸ್‌ನಲ್ಲಿ ಮೂರನೇ ಸ್ಥಾನದಲ್ಲಿದ್ದಾನೆ. ವಿಶ್ವನಾಥ್‌ ಅವರ ಪತ್ನಿ ಸುಚಿತ್ರ ಕೂಡ ಮಕ್ಕಳ ಯಶಸ್ಸಿಗಾಗಿ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದ್ದಾರೆ.

ಕ್ರೀಡೆಯಿಂದ ಆತ್ಮವಿಶ್ವಾಸ ಹೆಚ್ಚಿದೆ: ಚಾಂಪಿಯನ್‌ ವಿಶ್ವನಾಥ್‌ ಅವರು ತಮ್ಮ ಇಬ್ಬರೂ ಮಕ್ಕಳನ್ನು ಬೈಕ್‌ ರ‍್ಯಾಲಿಯಲ್ಲಿ ತೊಡಗಿಸಿದ್ದಾರೆ. ಅವರ ಸಾಧನೆಯೇ ಮಕ್ಕಳಿಗೆ ರ‍್ಯಾಲಿಯಲ್ಲಿ ಪಾಲ್ಗೊಳ್ಳುವಂತೆ ಮಾಡಿದೆ. “ಇದು ದುಬಾರಿ ಕ್ರೀಡೆ ನಿಜ, ಆದರೆ ಇಲ್ಲಿ ಸಿಗುವ ಆತ್ಮವಿಶ್ವಾಸ, ಸವಾಲುಗಳನ್ನು ಎದುರಿಸುವ ಪರಿ ಬೇರೆ ಕ್ರೀಡೆಗಳಲ್ಲಿ ಸಿಗುವುದು ಕಡಿಮೆ. ಸಾಹಸ ಕ್ರೀಡೆಗಳಲ್ಲಿ ಮಕ್ಕಳು ತೊಡಗಿಸಿಕೊಳ್ಳುವುದರಿಂದ ಅವರು ನೈಜ ಬದುಕಿನಲ್ಲಿ ಎದುರಾಗು ಸಮಸ್ಯೆಗಳನ್ನು ಸುಲಭವಾಗಿ ಎದುರಿಸುತ್ತಾರೆ. ಇದನ್ನು ನಾನು ನನ್ನ ಬದುಕಿನಲ್ಲಿ ಅನುಭವಿಸಿದ್ದೇನೆ. ಆದ್ದರಿಂದ ಇಬ್ಬರೂ ಮಕ್ಕಳನ್ನು ಮೋಟಾರ್‌ ಸ್ಪೋರ್ಟ್ಸ್‌ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ನೆರವು ಮಾಡಿದ್ದೇನೆ, ಇಬ್ಬರೂ ಉತ್ತಮ ರೀತಿಯಲ್ಲಿ ಪ್ರದರ್ಶನ ತೋರುತ್ತಿದ್ದಾರೆ, ಅದೇ ಖುಷಿಯ ವಿಚಾರ,” ಎಂದು ಮಾಜಿ ಚಾಂಪಿಯನ್‌ ರೇಸರ್‌ ವಿಶ್ವನಾಥ್‌ ಅಭಿಪ್ರಾಯಪಟ್ಟರು.

Related Articles