Saturday, October 5, 2024

ವಾಂಖೆಡೆ ಕ್ರೀಡಾಂಗಣವನ್ನು ಸಚಿನ್‌ ತೆಂಡೂಲ್ಕರ್‌ ಕ್ರೀಡಾಂಗಣವೆಂದು ಯಾಕೆ ಬದಲಾಯಿಸಬಾರದು?

ದೇಶದಲ್ಲಿ ಹೆಸರು ಬದಲಾವಣೆಯ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಕರ್ನಾಟಕದಲ್ಲಿ ಈಗ ಮೆಟ್ರೋ ರೈಲಿಗೆ ಬಸವಣ್ಣನವರ ಹೆಸರು ಇಡಬೇಕೆಂಬ ಧ್ವನಿ ಎದ್ದಿದೆ. ಭಾರತದ ಉಕ್ಕಿನ ಮನುಷ್ಯ ಸರದಾರ್‌ ವಲ್ಲಭ ಭಾಯಿ ಪಟೇಲ್‌ ಅವರ ಹೆಸರಿನ ಕ್ರೀಡಾಂಗಣವನ್ನು ಪ್ರಧಾನಿ ನರೇಂದ್ರ ಮೋದಿ ಕ್ರೀಡಾಂಗಣವೆಂದೂ, ಎಕನಾ ಕ್ರೀಡಾಂಗಣಕ್ಕೆ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಕ್ರೀಡಾಂಗಣವೆಂದೂ, ಫಿರೋಜ್‌ ಶಾ ಕೋಟ್ಲಾ ಕ್ರೀಡಾಂಗಣವನ್ನು ಅರುಣ್‌ ಜೇಟ್ಲಿ ಕ್ರೀಡಾಂಗಣವೆಂದೂ ಬದಲಾಯಿಸಿದಂತೆ ಮುಂಬಯಿಯ ವಾಂಖೆಡೆ ಕ್ರೀಡಾಂಗಣವನ್ನು ಸಚಿನ್‌ ತೆಂಡೂಲ್ಕರ್‌ ಕ್ರೀಡಾಂಗಣವೆಂದು ಯಾಕೆ ಬದಲಾಯಿಸಬಾರದು? Why can’t we rename the Wankhede Stadium as Sachin Tendulkar Stadium?

ರಾಜಕೀಯದಲ್ಲಿರುವವರಿಗೆ ತಮ್ಮ ಹೆಸರನ್ನು ಅಜರಾಮರಗೊಳಿಸಲು ಕ್ರೀಡಾಂಗಣಗಳ ಹೊರತಾಗಿ ಬೇರೆ ವ್ಯವಸ್ಥೆಯೂ ಇರುತ್ತದೆ. ಆದರೆ ಕ್ರೀಡಾಪಟುಗಳ ಹೆಸರನ್ನು ಕ್ರೀಡಾಂಗಣಗಳಿಗೆ ಮಾತ್ರ ಇಡಬೇಕಾಗುತ್ತದೆ. ಕ್ರೀಡಾಂಗಣದ ಸ್ಟ್ಯಾಂಡ್‌ಗೆ ಸಚಿನ್‌ ತೆಂಡೂಲ್ಕರ್‌ ಸ್ಟ್ಯಾಂಡ್‌ ಎಂದು ಹೆಸರಿಟ್ಟು ಬಳಿಕ ಅಲ್ಲಿಯೇ ಸಚಿನ್‌ ತೆಂಡೂಲ್ಕರ್‌ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದ್ದು ಸ್ವಾಗತಾರ್ಹ. ಆದರೆ ಇಡೀ ಕ್ರಿಕೆಟ್‌ ಜಗತ್ತೇ  ಕ್ರಿಕೆಟ್‌ ದೇವರೆಂದು ಆರಾದಿಸುವ, ಈಗಲೂ ಅದೇ ರೀತಿಯ ಗೌರವವನ್ನು ನೀಡುತ್ತಿರುವ ಸಚಿನ್‌ ತೆಂಡೂಲ್ಕರ್‌ ಅವರ ಹೆಸರನ್ನು ವಾಂಖೆಡೆಗೆ ಯಾಕೆ ಇಡಬಾರದು ಎಂಬ ಪ್ರಶ್ನೆ ಉದ್ಭವಿಸದಿರದು.

ಶೇಷರಾವ್‌ ಕೃಷ್ಣರಾವ್‌ ವಾಂಖೆಡೆ ಓರ್ವ ಸ್ವಾತಂತ್ರ್ಯ ಹೋರಾಟಗಾರ, ರಾಜಕಾರಣಿ. ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ಅಧ್ಯಕ್ಷ, ಬಾಂಬೆ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷರಾಗಿ ಸುಮಾರು 25 ವರ್ಷಗಳ ಕಾಲ ಸೇವೆ ಸಲ್ಲಿಸಿದವರು. ಆದರೆ ಅವರು ಕ್ರಿಕೆಟ್‌ ಆಟಗಾರರಲ್ಲ ಎಂಬುದು ಸ್ಪಷ್ಟ. ಅವರಿಗೆ ಸಲ್ಲಬೇಕಾದ ಗೌರವವನ್ನು ಸರಕಾರ ಎಲ್ಲ ರೀತಿಯಲ್ಲೂ ನೀಡಿದೆ. ವಾಂಖೆಡೆ ಅವರಿಗೆ ಗೌರವವನ್ನು ಸಲ್ಲಿಸುವುದು ಕರ್ತವ್ಯ. ಆದರೆ ಸಚಿನ್‌ ತೆಂಡೂಲ್ಕರ್‌ ಅವರು ಕ್ರಿಕೆಟ್‌ಗೆ ನೀಡಿದ  ಕೊಡುಗೆ ಅಪಾರವಾದುದು. ಕ್ರಿಕೆಟ್‌ ಜಗತ್ತು ಇಂದು ಭಾರತವನ್ನು ಅತ್ಯಂತ ಗೌರವದಿಂದ ನೋಡುತ್ತಿದೆ ಎಂದರೆ ಅದಕ್ಕೆ ಇತರ ಕ್ರಿಕೆಟಿಗರ ಸಾಧನೆಯ ಜೊತೆಯಲ್ಲಿ ಸಚಿನ್‌‌ ತೆಂಡೂಲ್ಕರ್‌ ಅವರ ಸಾಧನೆಯೂ ಒಂದು ಕಾರಣ. ಶಾರ್ಜಾ ಹಾಗೂ ಆಸ್ಟ್ರೇಲಿಯಾದ ಸಿಡ್ನಿ ಕ್ರೀಡಾಂಗಣಗಳಲ್ಲಿ ಸ್ಟ್ಯಾಂಡ್‌ಗೆ ಸಚಿನ್‌ ತೆಂಡೂಲ್ಕರ್‌ ಹೆಸರಿಡಲಾಗಿದೆ. ಆದರೆ ಸಚಿನ್‌ ತೆಂಡೂಲ್ಕರ್‌ ಹೆಸರಿನ ಕ್ರೀಡಾಂಗಣ ಎಲ್ಲೂ ಕಾಣುತ್ತಿಲ್ಲ. ವಿದೇಶಗಳಲ್ಲಿ ಇದನ್ನು ನಿರೀಕ್ಷಿಸುವುದ ಕಷ್ಟ. ಭಾರತದಲ್ಲೇ ಅದೂ ಮುಂಬೈಯಲ್ಲೇ ಅವರ ಹೆಸರಿರುವ ಕ್ರೀಡಾಂಗಣ ಅದರಲ್ಲೂ ವಾಂಖೆಡೆ ಕ್ರೀಡಾಂಗಣಕ್ಕೆ ಸಚಿನ್‌ ಹೆಸರಿಟ್ಟರೆ ಅರ್ಥಪೂರ್ಣ.

ಭಾರತದಲ್ಲಿ ಕ್ರೀಡಾ ಸಾಧನೆ ಮಾಡಿದವರು ಅಪಾರ ಸಂಖ್ಯೆಯಲ್ಲಿದ್ದಾರೆ. ಒಂದೆರಡು ಕ್ರೀಡಾಂಗಣಗಳಿಗೆ ರಾಜಕೀಯವಾಗಿ ಸಾಧನೆ ಮಾಡಿದವರ ಹೆಸರನ್ನಿಟ್ಟು, ಉಳಿದ ಕ್ರೀಡಾಂಗಣಗಳಿಗೆ ಬೇರೆ ಬೇರೆ ಕ್ರೀಡೆಯಲ್ಲಿ ಸಾಧನೆ ಮಾಡಿದವರ ಹೆಸರನ್ನಿಟ್ಟರೆ ಹೆಚ್ಚು ಅರ್ಥಪೂರ್ಣ. ಹಲವು ಕ್ರೀಡಾಂಗಣಗಳಿಗೆ ಮಾಜಿ ಪ್ರಧಾನಿಗಳಾದ ಜವಹರಲಾಲ್‌ ನೆಹರು ಮತ್ತು ರಾಜೀವ್‌ ಗಾಂಧಿ ಅವರ ಹೆಸರಿಡಲಾಗಿದೆ. ಇವರ ಹೆಸರುಗಳನ್ನು ಇತರ ಕಟ್ಟಡಗಳಿಗೂ ಸೂಚಿಸಬಹುದು. ಈಗಾಗಲೇ ಹಲವು ಕ್ರೀಡಾಂಗಣಗಳಲ್ಲಿ ಇವರ ಹೆಸರಿದೆ. ಒಂದೆರಡು ಕ್ರೀಡಾಂಗಣಕ್ಕೆ ಅವರ ಹೆಸರನ್ನು ಉಳಿಸಿಕೊಂಡು ಉಳಿದ ಕ್ರೀಡಾಂಗಣಗಳಿಗೆ ಕ್ರೀಡಾಪಟುಗಳ ಹೆಸರಿಡುವುದು ಸೂಕ್ತ ಎಂದೆನಿಸುತ್ತದೆ.

Related Articles