Saturday, July 27, 2024

ಸಚಿನ್‌ ನಿಲ್ದಾಣದಲ್ಲಿ ಸುನಿಲ್‌ ಗವಾಸ್ಕರ್‌!

ಈ ಚಿತ್ರವನ್ನು ಕಂಡಾಗ ಯಾವುದಾದರೂ ರೈಲ್ವೆ ನಿಲ್ದಾಣಕ್ಕೆ ಸಚಿನ್‌ ತೆಂಡೂಲ್ಕರ್‌ ಹೆಸರನ್ನಿಟ್ಟರೇ? ಎಂಬ ಸಂಶಯ ಮೂಡುವುದು ಸಹಜ. ಅದರಲ್ಲೂ ಮಾಜಿ ಕ್ರಿಕೆಟಿಗ ಸುನಿಲ್‌ ಗವಾಸ್ಕರ್‌ ಇನ್‌ಸ್ಟಾಗ್ರಾಮ್‌ನಲ್ಲಿ ಈ ಚಿತ್ರವನ್ನು ಹಂಚಿಕೊಂಡಿರುವುದು ಮತ್ತಷ್ಟು ಕುತೂಹಲಕ್ಕೆ ಅವಕಾಶ ಮಾಡಿಕೊಟ್ಟಿದೆ. Sachin Railway Station in Gujarat.

ಸಚಿನ್‌ ಹೆಸರನ್ನು ಕ್ರೀಡಾಂಗಣಕ್ಕೆ, ಪೆವಿಲಿಯನ್‌ಗೆ ಯಾವುದಾದರೂ ಒಂದು ಪ್ರೇಕ್ಷಕರ ಸ್ಟ್ಯಾಂಡ್‌ಗೆ ಸೂಚಿಸುವುದು ಸಹಜ. ಆದರೆ ರೈಲ್ವೆ ನಿಲ್ದಾಣಕ್ಕೆ ಸೂಚಿದುವುದು ಎಷ್ಟು ಸೂಕ್ತ ಎಂದು ಸಚಿನ್‌ ಅಭಿಮಾನಿಗಳಿಗೂ ಅನಿಸದಿರದು. ಹೆಸರಿಡುವುದಾದರೆ ಮುಂಬಯಿಯ ಬಾಂದ್ರಾ ನಿಲ್ದಾಣವೇ ಸೂಕ್ತ ಏಕೆಂದರೆ ಸಚಿನ್‌ ಮನೆಗೆ ಹತ್ತಿರವಾಗಿ ಈ ನಿಲ್ದಾಣವಿದೆ.

ಆದರೆ ಇದು ಸಚಿನ್‌ ತೆಂಡೂಲ್ಕರ್‌ ಹೆಸರಿನ ರೈಲ್ವೆ ನಿಲ್ದಾಣವಲ್ಲ. ಇದು ಗುಜರಾತ್‌ ರಾಜ್ಯದ ಸೂರತ್‌ ಜಿಲ್ಲೆಯಲ್ಲಿರುವ ಅತಿ ಚಿಕ್ಕ ರೈಲ್ವೆ ನಿಲ್ದಾಣ.  ಮುಂಬೈ-ಅಹಮದಾಬಾದ್‌-ಜೈಪುರ-ದೆಹಲಿ ಮಾರ್ಗದಲ್ಲಿದೆ. ವಿಶ್ವಕಪ್‌ ಸಂದರ್ಭದಲ್ಲಿ ಇಲ್ಲಿಗೆ ಭೇಟಿ ನೀಡಿದ ಸುನಿಲ್‌‌ ಗವಾಸ್ಕರ್‌ ಹಂಚಿಕೊಂಡ ಫೋಟೋ ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಈ ನಿಲ್ದಾಣದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದೆ. ಇನ್ನು ರೈಲ್ವೆ ಇಲಾಖೆ ಹೆಚ್ಚಿನ ಗಮನ ಹರಿಸಬಹುದೇನೋ.

ಸುನಿಲ್‌ ಗವಾಸ್ಕರ್‌ ಬಂದು ನಿಂತಿದ್ದಾರೆ. ಪಾಪ ಅಲ್ಲೊಬ್ಬ ಪ್ರಯಾಣಿಕ ಮಲಗಿದ್ದಾರೆ. ದಣಿದ ಜೀವಕ್ಕೆ ಸುನಿಲ್‌ ಗವಾಸ್ಕರ್‌ ಬಂದರೇನು? ಸಚಿನ್‌ ತೆಂಡೂಲ್ಕರ್‌ ಬಂದರೇನು? ಆತನ ಪಾಲಿಗೆ ಸಚಿನ್‌ ಒಂದು ನಿಲ್ದಾಣವಷ್ಟೆ.

Related Articles